AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯ ಅನಾಥ ಮಕ್ಕಳಿಗೆ ವಿದೇಶಕ್ಕೆ ಹೋಗುವ ಭಾಗ್ಯ: ಇಟಲಿ ದಂಪತಿ ಮಡಿಲು ಸೇರಿದ 1 ವರ್ಷದ ಕಂದಮ್ಮ; ಕಣ್ಣೀರಿಟ್ಟ ವಿದೇಶಿ ದಂಪತಿ

ದಾವಣಗೆರೆಯ ಅನಾಥ ಮಕ್ಕಳಿಗೆ ಅಂತರಾಷ್ಟ್ರೀಯ ದತ್ತು ಪ್ರಕ್ರಿಯೆ ಮೂಲಕ ಹೊಸ ಬದುಕು ಲಭಿಸಿದೆ. ಇಟಲಿಯ ದಂಪತಿಗಳು ಒಂದು ವರ್ಷದ ಅನಾಥ ಮಗುವನ್ನು ದತ್ತು ಪಡೆದಿದ್ದು, ಮುಂದಿನ ದಿನಗಳಲ್ಲಿ ಅಮೆರಿಕಾ, ಇಂಗ್ಲೆಂಡ್ ಸೇರಿದಂತೆ ವಿವಿಧ ದೇಶಗಳಿಗೆ ಇನ್ನೂ ಮೂವರು ಮಕ್ಕಳು ತೆರಳಲಿದ್ದಾರೆ. CARA ಸಂಸ್ಥೆಯ ನಿಯಮಗಳಡಿ ನಡೆದ ಈ ಪ್ರಕ್ರಿಯೆಯು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಂಪನ್ನವಾಗಿದ್ದು, ಹಲವು ಪೋಷಕರ ಕನಸು ನನಸಾಗಿದೆ.

ದಾವಣಗೆರೆಯ ಅನಾಥ ಮಕ್ಕಳಿಗೆ ವಿದೇಶಕ್ಕೆ ಹೋಗುವ ಭಾಗ್ಯ: ಇಟಲಿ ದಂಪತಿ ಮಡಿಲು ಸೇರಿದ 1 ವರ್ಷದ ಕಂದಮ್ಮ; ಕಣ್ಣೀರಿಟ್ಟ ವಿದೇಶಿ ದಂಪತಿ
ಅನಾಥ ಮಕ್ಕಳನ್ನು ದತ್ತು ಪಡೆದ ವಿದೇಶಿ ದಂಪತಿ Image Credit source: Tv9 kannada
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Jun 08, 2026 | 4:57 PM

Share

ದಾವಣಗೆರೆ, ಜೂ.8: ಜಿಲ್ಲೆಯ ಅನಾಥ ಹಾಗೂ ಆಶ್ರಯ ರಹಿತ ಮಕ್ಕಳಿಗೆ ಈಗ ಜಾಗತಿಕ ಮಟ್ಟದಲ್ಲಿ ಹೊಸ ಬದುಕು ಸಿಗುವ ‘ವಿದೇಶ ಭಾಗ್ಯ’ ಒದಗಿಬಂದಿದೆ. ಕೇವಲ ಒಂದೇ ತಿಂಗಳ ಅವಧಿಯಲ್ಲಿ ಜಿಲ್ಲೆಯ ನಾಲ್ವರು ಅನಾಥ ಮಕ್ಕಳು ಅಮೆರಿಕಾ, ಇಂಗ್ಲೆಂಡ್ ಹಾಗೂ ಇಟಲಿ ಸೇರಿದಂತೆ ವಿವಿಧ ಪ್ರಮುಖ ದೇಶಗಳ ದಂಪತಿಗಳ ಮಡಿಲು ಸೇರಲು ಸಜ್ಜಾಗಿದ್ದಾರೆ. ಇದರ ಭಾಗವಾಗಿ, ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕೃತ ಪ್ರಕ್ರಿಯೆಯಲ್ಲಿ ಒಂದು ವರ್ಷದ ಅನಾಥ ಗಂಡು ಮಗುವನ್ನು ಇಟಲಿಯ ದಂಪತಿಗಳು ಕಾನೂನುಬದ್ಧವಾಗಿ ದತ್ತು (Adoption) ಪಡೆದುಕೊಂಡಿದ್ದಾರೆ.

ಇಟಲಿ ದೇಶದ ವೈರಿ ಹಾಗೂ ಪ್ರಿಯಾ ದಂಪತಿಗಳು ಈ ಮಗುವನ್ನು ದತ್ತು ಪಡೆದ ಅದೃಷ್ಟವಂತರಾಗಿದ್ದಾರೆ. ಪ್ರಿಯಾ ಅವರು ಮೂಲತಃ ಚೆನ್ನೈ ಮೂಲದವರಾಗಿದ್ದರೂ, ಇಟಲಿಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಈ ದಂಪತಿಗಳು ಮಗುವಿಗಾಗಿ ಕಳೆದ ಮೂರು ವರ್ಷಗಳಿಂದ ಹಂಬಲಿಸುತ್ತಿದ್ದರು. ಕೇಂದ್ರ ಸರ್ಕಾರದ ಕಾರಾ (CARA) ಸಂಸ್ಥೆಯ ನಿಯಮಾವಳಿಗಳ ಪ್ರಕಾರ, ಕಳೆದ 2023 ರಲ್ಲೇ ಮಗು ದತ್ತು ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಸುಮಾರು ವರ್ಷಗಳ ಕಾಯುವಿಕೆಯ ನಂತರ ಇಂದು ಅವರ ಕನಸು ನನಸಾಗಿದೆ.

ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಯುವಕರು ಕ್ರಿಕೆಟ್ ಆಡುತ್ತಿದ್ದ ಗ್ರೌಂಡ್​ಗೆ ಬಂದು ಸಹಾಯ ಬೇಡಿದ ಯುವತಿ

ದಾವಣಗೆರೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲಮಂದಿರದಲ್ಲಿದ್ದ ಈ ಗಂಡು ಮಗುವನ್ನು, ದಾವಣಗೆರೆ ಜಿಲ್ಲಾಧಿಕಾರಿ (DC) ಜಿ.ಎಂ. ಗಂಗಾಧರಸ್ವಾಮಿ ಅವರ ಸಮ್ಮುಖದಲ್ಲಿ ದಂಪತಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಮಗುವನ್ನು ಪಡೆಯುತ್ತಿದ್ದಂತೆ ದತ್ತು ತಂದೆ ವೈರಿ ತೀವ್ರ ಭಾವುಕರಾಗಿ ಕಣ್ಣೀರು ಹಾಕಿದರು. “ಕಳೆದ ಮೂರು ವರ್ಷಗಳಿಂದ ನಾನು ಮತ್ತು ನನ್ನ ಪತ್ನಿ ಮಗುವಿಗಾಗಿ ಪ್ರಾರ್ಥಿಸುತ್ತಿದ್ದೆವು. ಇಂದು ನಮ್ಮ ಹಂಬಲ ಈಡೇರಿದೆ. ನನಗೆ ‘ಅಪ್ಪ’ ಎಂಬ ಕಿರೀಟ ಸಿಕ್ಕ ದಿನವಿದು” ಎಂದು ಗದ್ಗದಿತ ಕಂಠದಿಂದ ಸಂಭ್ರಮ ಹಂಚಿಕೊಂಡರು. ದಾವಣಗೆರೆಯ ಬಾಲಮಂದಿರದ ಮಕ್ಕಳು ವಿದೇಶಿ ನೆಲದಲ್ಲಿ ರಾಜವೈಭೋಗದ ಬದುಕು ಕಾಣುತ್ತಿರುವುದು ಇಲಾಖೆಯ ಅಧಿಕಾರಿಗಳ ಮುಖದಲ್ಲೂ ಮಂದಹಾಸ ಮೂಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Basavaraj Doddamani
Basavaraj Doddamani

ಬಸವರಾಜ ದೊಡ್ಡಮನಿ ಟಿವಿ9 ಕನ್ನಡ ವರದಿಗಾರರಾಗಿದ್ದು, ವಿಶೇಷವಾಗಿ ದಾವಣಗೆರೆ ಜಿಲ್ಲಾ ಪ್ರಾದೇಶಿಕ ಸುದ್ದಿಗಳ ಮೇಲೆ ಕೇಂದ್ರೀಕರಿಸುತ್ತಾರೆ.

Read More