ಶಾಮನೂರು ಶಿವಶಂಕರಪ್ಪ ನಿಧನ: ಡಿ 15ರಂದು ಶಾಲಾ-ಕಾಲೇಜುಗಳಿಗೆ ರಜೆ, ಅಂತ್ಯಕ್ರಿಯೆ ಎಲ್ಲಿ ಗೊತ್ತಾ?
ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದಾರೆ. ಅವರ ಅಗಲಿಕೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ನಿಧನ ಹಿನ್ನಲೆ ಗೌರವಾರ್ಥವಾಗಿ ಡಿಸೆಂಬರ್ 15ರಂದು ದಾವಣಗೆರೆ ನಗರ ವ್ಯಾಪ್ತಿಯ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಾಳೆಯೇ ಅಂತ್ಯಕ್ರಿಯೆ ಕೂಡ ನಡೆಯಲಿದೆ.

ದಾವಣಗೆರೆ, ಡಿಸೆಂಬರ್ 14: ಪ್ರಭಾವಿ ವೀರಶೈವ ಲಿಂಗಾಯತ ಸಮಾಜದ ಮುಖಂಡ, ಹಿರಿಯ ರಾಜಕಾರಣಿ, ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ನಿಧನರಾಗಿದ್ದಾರೆ. 94 ವರ್ಷದ ಶಾಮನೂರು ಶಿವಶಂಕರಪ್ಪ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಒಂದು ತಿಂಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ. ಶಾಮನೂರು ಅವರ ಅಗಲಿಕೆ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ನಾಳೆ ದಾವಣಗೆರೆ ನಗರ ವ್ಯಾಪ್ತಿಯ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ (Holidays) ಘೋಷಣೆ ಮಾಡಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ಅಭಿಮಾನಿಗಳು ಬೆಂಬಲಿಗರು ಪೂಜೆ ಸಲ್ಲಿಸಿದ್ದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿದ್ದರು. ಆರಂಭದಲ್ಲಿ ಶಾಮನೂರು ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ, ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ. ರಾಜಕೀಯ ಧುರೀಣ ಇನ್ನಿಲ್ಲ.
ನಾಳೆ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ
ಸನ್ಮಾನ್ಯ ಶಾಮನೂರು ಶಿವಶಂಕರಪ್ಪ ಅವರ ನಿಧನ ಪ್ರಯುಕ್ತ ಗೌರವಾರ್ಥವಾಗಿ ಡಿ. 15 ರಂದು ದಾವಣಗೆರೆ ನಗರದ ವ್ಯಾಪ್ತಿಯ ಎಲ್ಲಾ ಸರ್ಕಾರಿ ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ. ಈ ರಜೆಯನ್ನು ಮುಂದಿನ ಶನಿವಾರ ಅಂದರೆ ಡಿ. 27ರಂದು ಪೂರ್ಣ ದಿನ ಶಾಲೆಯನ್ನು ನಡೆಸಿ ಸರಿದೂಗಿಸಲು ತಿಳಿಸಲಾಗಿದೆ.
ನಾಳೆ ಸಂಜೆ ಅಂತ್ಯಕ್ರಿಯೆ
ಸದ್ಯ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರ ಬೆಂಗಳೂರಿನಲ್ಲಿದ್ದು, ಇಂದು ರಾತ್ರಿಯೇ ಹೊರಟು ಬೆಳಗ್ಗೆ 6 ಗಂಟೆಗೆ ದಾವಣಗೆರೆ ತಲುಪಲಿದೆ. ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆವರೆಗೆ ಎಸ್ಎಸ್ ಮಲ್ಲಿಕಾರ್ಜುನ ಅವರ ಮನೆಯಲ್ಲಿ ಇಡಲಾಗುತ್ತೆ. ನಂತರ ಹೈಸ್ಕೂಲ್ ಮೈದಾನದಲ್ಲಿ ಸಂಜೆ 4ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇನ್ನು ಅಂತ್ಯಕ್ರಿಯೆ ಬಗ್ಗೆ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಹಣಬೇರು ರಾಜಣ್ಣ ಎಂಬುವವರು ಮಾತನಾಡಿದ್ದು, ಬೆಳಿಗ್ಗೆ 10:30ರ ನಂತರ ವೀರಶೈವ ಮಹಾಸಭಾದಲ್ಲಿ ಅಂತಿಮ ಗೌರವ ಸಲ್ಲಿಸಿ, ಅರ್ಧ ಗಂಟೆ ಅಲ್ಲಿಯೇ ಇಡಲಾಗುತ್ತೆ. ನಾಳೆ ಸಂಜೆಯೊಳಗೆ ಕಲ್ಲೇಶ್ವರ ರೈಸ್ ಮಿಲ್ ಜಾಗದಲ್ಲಿ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ ನಡೆಸಲಾಗುತ್ತೆ ಎಂದಿದ್ದಾರೆ.
ಇದನ್ನೂ ಓದಿ: Shamanur Shivashankarappa Death: ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ
ದಾವಣಗೆರೆಯ ಕಲ್ಲೇಶ್ವರ ಮಿಲ್ನ ಆವರಣದಲ್ಲಿರುವ ಅವರ ಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಗೆ ಸದ್ಯ ಆಪ್ತರು ಸಿದ್ದತೆ ನಡೆಸಿದ್ದಾರೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:48 pm, Sun, 14 December 25



