
ದಾವಣಗೆರೆ, ಮೇ 22: ಪೋಕ್ಸೊ (POCSO) ಪ್ರಕರಣದ ಆರೋಪ ಎದುರಿಸುತ್ತಿರುವ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ (Vachanananda Swamiji) ಸ್ವಾಮೀಜಿ ಅವರ ವಿರುದ್ಧದ ಕಾನೂನು ಹೋರಾಟ ಇದೀಗ ಮತ್ತಷ್ಟು ತೀವ್ರಗೊಂಡಿದೆ. ಪ್ರಕರಣ ದಾಖಲಾಗುವ ಮುನ್ನವೇ ಚಾಣಾಕ್ಷತನದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದ ಶ್ರೀಗಳ ಜಾಮೀನನ್ನು ರದ್ದುಗೊಳಿಸುವಂತೆ ತನಿಖಾಧಿಕಾರಿಗಳು ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆ ವಿಚಾರವಾಗಿ ಕಳೆದ ವಾರವಷ್ಟೇ ವಚನಾನಂದ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಾಗಿತ್ತು. ಆದರೆ, ಕೇಸ್ ದಾಖಲಾಗುವ ಮುನ್ನವೇ ಸ್ವಾಮೀಜಿ ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಪ್ರಕರಣದ ತನಿಖಾಧಿಕಾರಿ ಸುರೇಶ್ ಸಗರಿ ಅವರು ಶ್ರೀಗಳ ಜಾಮೀನನ್ನು ರದ್ದು ಮಾಡುವಂತೆ ಕೋರಿ ಕೋರ್ಟ್‌ಗೆ ಮಹತ್ವದ ಮನವಿ ಸಲ್ಲಿಸಿದ್ದಾರೆ.
ಹರಿಹರ ಪೊಲೀಸರು ಮಕ್ಕಳ ಮೇಲೆ ಸ್ವಾಮೀಜಿ ನಡೆಸಿದ್ದಾರೆ ಎನ್ನಲಾದ ದೌರ್ಜನ್ಯ ಮತ್ತು ಹಲ್ಲೆ ಕುರಿತು ಸಂಪೂರ್ಣ ಮಾಹಿತಿಯನ್ನೊಳಗೊಂಡ ಪ್ರಮುಖ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ (ಸೀಲ್ಡ್ ಕವರ್) ಬಾಗಲಕೋಟೆ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಪೊಲೀಸರು ಸಲ್ಲಿಸಿರುವ ಈ ಜಾಮೀನು ರದ್ದತಿ ಅರ್ಜಿಯ ಪ್ರಮುಖ ವಿಚಾರಣೆಯನ್ನು ದಾವಣಗೆರೆಯ ವಿಶೇಷ ಪೋಕ್ಸೊ ನ್ಯಾಯಾಲಯವು ಇದೇ ಮೇ 29 ರಂದು ಕೈಗೆತ್ತಿಕೊಳ್ಳಲಿದೆ. ಒಂದು ವೇಳೆ ನ್ಯಾಯಾಲಯವು ಪೊಲೀಸರ ವಾದವನ್ನು ಪುರಸ್ಕರಿಸಿ ಜಾಮೀನು ರದ್ದುಗೊಳಿಸಿದರೆ, ವಚನಾನಂದ ಸ್ವಾಮೀಜಿ ಅವರಿಗೆ ಬಂಧನವಾಗುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ ವಚನಾನಂದಶ್ರೀ ವಿರುದ್ಧದ ಪೋಕ್ಸೋ ಪ್ರಕರಣದ ತನಿಖಾಧಿಕಾರಿ ವರ್ಗಾವಣೆ, ಕಾರಣವೇನು?
ಹರಿಹರ ಪಂಚಮಸಾಲಿ ಪೀಠದ ಪದಚ್ಯುತ ಪೀಠಾಧಿಪತಿ ವಚನಾನಂದ ಸ್ವಾಮೀಜಿ ವಿರುದ್ಧ 16 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಹರಿಹರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಮಠದ ಟ್ರಸ್ಟಿಗಳೊಂದಿಗಿನ ಭಿನ್ನಾಭಿಪ್ರಾಯದಿಂದ ಸ್ವಾಮೀಜಿಯವರನ್ನು ಪೀಠದಿಂದ ಪದಚ್ಯುತಗೊಳಿಸಿದ ಬೆನ್ನಲ್ಲೇ ಈ ದೂರು ದಾಖಲಾಗಿತ್ತು. ಸಂತ್ರಸ್ತ ಬಾಲಕನ ತಾಯಿ ಮೇ 7ರಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಘಟನಾ ಸ್ಥಳ ಹರಿಹರ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಿ, ಮೇ 8ರಂದು ಅಧಿಕೃತವಾಗಿ ಎಫ್‌ಐಆರ್ ದಾಖಲಿಸಲಾಗಿತ್ತು.