ನೀರಿನ ಹೆಜ್ಜೆ ಕೃತಿ ಲೋಕಾರ್ಪಣೆ: ಡಿಕೆ ಶಿವಕುಮಾರ್ ರಚನೆಯ ಕೃತಿಯಲ್ಲಿ ಏನೇನಿದೆ ಗೊತ್ತಾ?
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಚಿಸಿರುವ 'ನೀರಿನ ಹೆಜ್ಜೆ' ಕೃತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು. ಈ ಪುಸ್ತಕವು ಕರ್ನಾಟಕದ ಜಲ ವಿವಾದಗಳು, ಅಂತಾರಾಜ್ಯ ಜಲ ಒಪ್ಪಂದಗಳು, ನೀರಾವರಿ ಯೋಜನೆಗಳು, ನ್ಯಾಯಾಲಯದ ತೀರ್ಪುಗಳು ಮತ್ತು ಅವುಗಳ ಪರಿಹಾರಗಳ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡಿದೆ.

ಬೆಂಗಳೂರು, ನವೆಂಬರ್ 14: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಬರೆದಿರುವ ‘ನೀರಿನ ಹೆಜ್ಜೆ’ ಕೃತಿ ಇಂದು ಲೋಕಾರ್ಪಣೆಗೊಂಡಿದೆ. ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕೃತಿಯನ್ನು ಬಿಡುಗಡೆ ಮಾಡಿದರು. ರಾಜ್ಯದ ಜಲ ವಿವಾದಗಳು, ನದಿಗಳ ಒಪ್ಪಂದಗಳು, ನ್ಯಾಯಾಲಯದ ತೀರ್ಪುಗಳು ಮತ್ತು ನೀರಾವರಿ ಯೋಜನೆಗಳ ಕುರಿತು ಆಳವಾದ ಮಾಹಿತಿಯನ್ನು ಪುಸ್ತಕ ಒಳಗೊಂಡಿದೆ.
ಕೃತಿಯ ವಿಶೇಷತೆಗಳ ಬಗ್ಗೆ ನೋಡುವುದಾದರೆ. ನೀರಿನ ಮೌಲ್ಯವನ್ನು ಸಾರುವ ಈ ಕೃತಿಯಲ್ಲಿ ಕರ್ನಾಟಕ ರಾಜ್ಯದ ನದಿ ವಿವಾದಗಳು, ಅಂತರರಾಜ್ಯ ಮತ್ತು ಅಂತಾರಾಷ್ಟ್ರೀಯ ಜಲ ಒಪ್ಪಂದಗಳು, ನ್ಯಾಯಾಲಯದ ತೀರ್ಪುಗಳು, ನೀರಾವರಿ ಯೋಜನೆಗಳು, ಸಮಸ್ಯೆಗಳು ಮತ್ತು ಪರಿಹಾರಗಳ ಸಮಗ್ರ ಮಾಹಿತಿ ಇದೆ. 1956ರ ಅಂತಾರಾಜ್ಯ ಜಲ ಕಾಯ್ದೆ, ವಿವಿಧ ದೇಶಗಳೊಂದಿಗೆ ಭಾರತದ ಜಲ ಒಪ್ಪಂದಗಳು, ನದಿ ಜೋಡಣೆಯ ಸವಾಲುಗಳು ಹಾಗೂ ಕೃಷ್ಣಾ, ಕಾವೇರಿ, ಮಹದಾಯಿ ಸೇರಿದಂತೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಕುರಿತು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ. ಯಾರನ್ನೂ ಟೀಕಿಸದೇ ವಾಸ್ತವಾಂಶಗಳನ್ನಷ್ಟೇ ದಾಖಲಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು
ಕೃತಿ ಬಿಡುಗಡೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಕೃತಿಯನ್ನು ಅತ್ಯಂತ ಸಂತೋಷದಿಂದ ಬಿಡುಗಡೆ ಮಾಡಿರುವುದಾಗಿ ಹೇಳಿದರು. ನಮ್ಮ ಉಪಮುಖ್ಯಮಂತ್ರಿಗಳು ರಚಿಸಿರುವ ಕೃತಿ ಇದು. ನೀರಿನ ವಿವಾದ, ಒಪ್ಪಂದ ಮತ್ತು ತೀರ್ಪುಗಳ ಆಧಾರವಾಗಿಟ್ಟುಕೊಂಡು, ತಮ್ಮ ಅನುಭವದಿಂದ ಈ ಪುಸ್ತಕ ರಚಿಸಿದ್ದಾರೆ ಎಂದರು.
ಇದನ್ನೂ ಓದಿ: ಕರ್ನಾಟಕದ ಮೇಲೆ ಪ್ರಭಾವ ಬೀರುತ್ತಾ ಬಿಹಾರ ಫಲಿತಾಂಶ? ಮತ್ತಷ್ಟು ಸ್ಟ್ರಾಂಗ್ ಆಗ್ತಾರಾ ಸಿದ್ದರಾಮಯ್ಯ?
ಸಮ್ಮಿಶ್ರ ಸರ್ಕಾರದಲ್ಲಿ ಅವರು ನೀರಾವರಿ ಸಚಿವರಾಗಿದ್ದ ಅನುಭವದ ಮೇಲೆ, ರಾಜ್ಯದಲ್ಲಿ ಎಷ್ಟು ನದಿ ಇದೆ, ಎಷ್ಟು ನೀರು ಲಭ್ಯವಿದೆ, ನೀರು ಹೇಗೆ ಬಳಸಿಕೊಳ್ಳಬೇಕು, ಇದರಿಂದಾದ ವಿವಾದಗಳನ್ನು ಪ್ರಸ್ತಾಪ ಮಾಡಿದ್ದಾರೆ. ಕಾವೇರಿ ಹೋರಾಟ ಬಹಳ ದಿನಗಳ ಕಾಲ ನಡೆದಿದೆ. ಮೇಕೆದಾಟು ಕಟ್ಟಲು ಹೊರಟಾಗ ತಮಿಳುನಾಡು ಹೋರಾಟ ಮಾಡಿತು. ಇದು ರಾಜಕೀಯ ಹೋರಾಟ. ಆದರೆ, ಸುಪ್ರೀಂ ಕೋರ್ಟ್ ನಮ್ಮ ಪಾದಯಾತ್ರೆಗೆ ವಿರುದ್ಧವಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಇದರಲ್ಲಿ ಡಿಕೆ ಶಿವಕುಮಾರ್ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಡಿಸಿಎಂ ಕೆಲಸವನ್ನು ಸಿಎಂ ಕೊಂಡಾಡಿದರು.
ಟೀಕೆ ಮಾಡೋದು ಬಿಜೆಪಿಯವರ ಕೆಲಸ ಎಂದ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ನೀರಾವರಿ ಯೋಜನೆಗಳ ಕುರಿತು ವಿರೋಧ ಪಕ್ಷದ ನಿಲುವಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಮಹದಾಯಿ ತೀರ್ಪು ಬಂದಿದೆ. ಕೃಷ್ಣೆಗೂ ಆಕ್ಷೇಪ, ಕಾವೇರಿಗೂ ಖ್ಯಾತೆ ಮಾಡುತ್ತಾರೆ. ಬಿಜೆಪಿ ಸಂಸದರು ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ಕೇಂದ್ರಕ್ಕೆ ಕೇಳಿಲ್ಲ. ರಾಜ್ಯದ ಜನರಿಗೆ ನಿಮ್ಮ ಬದ್ಧತೆ ಏನು? ಮಹಾರಾಜರನ್ನು ಬಿಟ್ಟರೆ ಡ್ಯಾಮ್ ಕಟ್ಟಿದ್ದೆನಾದರೂ ಇದ್ದರೆ ಅದು ಕಾಂಗ್ರೆಸ್. ಬರೀ ಟೀಕೆ ಮಾಡೋದು ಬಿಜೆಪಿಯವರ ಕೆಲಸ ಎಂದರು.
ಕೃಷ್ಣಾ ವಿಚಾರದಲ್ಲಿ 78 ಸಾವಿರ ಕೋಟಿ ರೂ. ರೈತರ ಜಮೀನಿಗೆ ಕೊಡಲು ತೀರ್ಮಾನ ಮಾಡಿದ್ದೇವೆ. ಎತ್ತಿನಹೊಳೆ ಯೋಜನೆಯಿಂದ ನೀರು ತರಲು ಆಗ್ತಿಲ್ಲ ಅಂತಿದ್ರು, ನೀರು ಮೇಲೆ ತಂದಿದ್ದೇವೆ. ಇಡಿ ಏಷ್ಯಾದಲ್ಲೇ ಇಲ್ಲದಂತೆ ಅಕ್ವಾಡಕ್ಟ್ ಮಾಡಿದ್ದೇವೆ. ರಾಜ್ಯದಲ್ಲಿ ನೀರಿನ ಆಯೋಗ ತರಬೇಕು ಅಂತಾ ಇದ್ದೇವೆ. ನಿನ್ನೆ ಮೇಕೆದಾಟು ವಿಚಾರದಲ್ಲಿ ಬಂದ ತೀರ್ಪಿನಿಂದ ತಮಿಳನಾಡಿಗೂ ಉಪಯೋಗವಿದೆ ಎಂದು ವಿರೋಧ ಪಕ್ಷಗಳಿಗೂ ಡಿಸಿಎಂ ತಿವಿದರು.
ನೀರಿನ ಹೆಜ್ಜೆ ಕೃತಿಯಲ್ಲಿರುವ ಪ್ರಮುಖ ಅಂಶಗಳು
- ನದಿ ವಿವಾದಗಳು ಮತ್ತು ನ್ಯಾಯಾಲಯದ ತೀರ್ಪುಗಳು
- ಅಂತರರಾಷ್ಟ್ರೀಯ ಜಲ ಕಾಯ್ದೆ ಮತ್ತು ಜಲ ಒಪ್ಪಂದಗಳು (1956 ಆಗಸ್ಟ್ 28)
- ಮಹಾನದಿ, ಶಾರದಾ ಜಲ ಒಪ್ಪಂದಗಳು
- ದೇಶದ ನದಿಗಳ ಜೋಡಣೆ ಬಿಕ್ಕಟ್ಟು, ಪರಿಹಾರ
- ಮಹದಾಯಿ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳು
ಇದನ್ನೂ ಓದಿ: ಬಿಹಾರದಲ್ಲಿ ಎನ್ಡಿಎ ಜಯಭೇರಿ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು ನೋಡಿ
ಒಟ್ಟಾರೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ತಮ್ಮ ರಾಜಕೀಯ ಮತ್ತು ನೀರಾವರಿ ಕ್ಷೇತ್ರದ ಅನುಭವವನ್ನು ಬಳಸಿಕೊಂಡು ರಚಿಸಿರುವ ಈ ನೀರಿನ ಹೆಜ್ಜೆ ಕೃತಿಯು ರಾಜ್ಯದ ನೀರಾವರಿ ಇತಿಹಾಸ ಮತ್ತು ವಿವಾದಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವಲ್ಲಿ ಯಶಸ್ವಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



