ಬೆಂಗಳೂರು, ಜುಲೈ 20: ಅಭಿವೃದ್ಧಿ ನಿಗಮ ಮಂಡಳಿಗಳಲ್ಲಿ ಪಾರದರ್ಶಕತೆ ತರುವ ವಿಚಾರವಾಗಿ ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದು, ನಮ್ಮ ಅಧಿಕಾರಿಗಳು ಬಹಳ ಖದೀಮರಿದ್ದಾರೆ ಎಂದಿದ್ದಾರೆ. ಪಾರದರ್ಶಕತೆ ತರುವ ಬಗ್ಗೆ ನಿಗಮ ಮಂಡಳಿಯ ಅಧ್ಯಕ್ಷರಿಗೆ ನಾವು ಈಗಾಗಲೇ ಹೇಳಿದ್ದೇವೆ. ಆದರೆ, ಅವರು ಬಹಳ ಖದೀಮರಿದ್ದಾರೆ. ಅಲ್ಲಿದ್ದ ಖದೀಮರು ಈಗ ಇಲ್ಲಿಗೂ ಬಂದು ಸೇರಿಕೊಂಡಿದ್ದಾರೆ. ಅಲ್ಲಿ 300-400 ಕೋಟಿ ತಿಂದ ಅದೇ ಅಧಿಕಾರಿಗಳು ಇಲ್ಲಿದ್ದಾರೆ ಎಂದಿದ್ದಾರೆ.
ಡಿ ಗ್ರೇಡ್ ಕ್ಲರ್ಕ್ಗಳನ್ನು ಸೂಪರಿಂಟೆಂಡೆಂಟ್, ಎಂಡಿ ಆಗಿ ಮಾಡಿದ್ದಾರೆ. ಇವರ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಖಜಾನೆಯಲ್ಲಿ ನಿಯಂತ್ರಣ ಇಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಸಿಎಂ, ಡಿಸಿಎಂ ಹೆಸರು ಹೇಳುವಂತೆ ತನಿಖಾಧಿಕಾರಿಗಳು ಒತ್ತಡ ಹೇರುತ್ತಿದ್ದಾರೆಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಹೆಸರು ಹೇಳಲಿ ಬಿಡಿ, ಬೇಡ ಎಂದವರು ಯಾರು ಎಂದರು.
ದೇವರ ಕೃಪೆಯಿಂದ ಮಳೆ ಚೆನ್ನಾಗಿ ಆಗುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಇನ್ನು 2-3 ದಿನಗಳಲ್ಲಿ ಕೆಆರ್ಎಸ್ ಜಲಾಶಯ ಭರ್ತಿ ಆಗುತ್ತದೆ. ತಮಿಳುನಾಡಿಗೆ ನೀರು ಬಿಡುವಂತೆ ಕೋರ್ಟ್ ಆದೇಶ ಕೊಟ್ಟಿತ್ತು. ಅದನ್ನು ಪಾಲನೆ ಮಾಡುವ ಸೂಚನೆಗಳು ತಮಗೆಲ್ಲ ಕಾಣುತ್ತಿದೆ. ಮುಂಜಾಗ್ರತೆಯಿಂದ ಕೆಲವು ಕಡೆ ನೀರು ಬಿಡಬೇಕಾಗುತ್ತದೆ. ನಮ್ಮ ರೈತರ ಹಿತಕ್ಕೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಮುಡಾ ಹಗರಣ ಬಯಲಿಗೆಳೆದ RTI ಕಾರ್ಯಕರ್ತರ ವಿರುದ್ಧ ದೂರು, ಸಿಎಂ ರಕ್ಷಣೆಗೆ ಎಂದ ಕುಮಾರಣ್ಣ
ನದಿ ಪಕ್ಕದಲ್ಲಿರುವ ಮನೆಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದೇವೆ. ಕಾರವಾರದಲ್ಲಿ ವಿಪರೀತ ಮಳೆಯಿಂದ ಬಹಳ ತೊಂದರೆ ಆಗುತ್ತಿದೆ. ಕೇರಳ ಮೂಲದ ಚಾಲಕ ವಾಹನ ಸಮೇತ ಸಿಲುಕಿಕೊಂಡಿದ್ದಾನೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳದಲ್ಲಿದ್ದಾರೆ ಎಂದು ಅವರು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ