ಬಾಗಲಕೋಟೆ, ಸೆಪ್ಟೆಂಬರ್ 01: ಕರ್ನಾಟಕದಾದ್ಯಂತ ಮುಡಾ ಹಗರಣ (muda scam) ಸದ್ದು ಮಾಡುತ್ತಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡುತ್ತಿದ್ದಂತೆ ಕಾಂಗ್ರೆಸ್ (congress) ಪ್ರತಿಭಟನೆ ಹಾದಿ ಹಿಡಿದಿದೆ. ಮುರುಗೇಶ್ ನಿರಾಣಿ, ಹೆಚ್ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿ ವಿರುದ್ದವೂ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿ ಎಂದು ಆಗ್ರಹ ಮಾಡಲಾಗುತ್ತಿದೆ. ತಮ್ಮ ಮೇಲಿನ ಕಾಂಗ್ರೆಸ್ ಆರೋಪಕ್ಕೆ ಮಾಜಿ ಸಚಿವ ಮುರುಗೇಶ್ ನಿರಾಣಿ ತಿರುಗೇಟು ನೀಡಿದ್ದಾರೆ.
ಮುಡಾ ಪ್ರಕರಣ ಸಿಎಂ ಗದ್ದುಗೆಗೆ ಕಂಟಕ ತಂದೊಡ್ಡುತ್ತಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡುತ್ತಿದ್ದಂತೆ ಕಾಂಗ್ರೆಸ್ ನಾಯಕರು ರಾಜ್ಯಪಾಲರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ರಾಜ್ಯಪಾಲರು ಸಿಎಂ ಬಗ್ಗೆ ಮಾತ್ರ ಇಷ್ಟು ಆಸಕ್ತಿ ತೋರಿದ್ದಾರೆ. ಆದರೆ ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧದ ಪ್ರಕರಣಗಳನ್ನು ಯಾಕೆ ಪ್ರಾಸಿಕ್ಯೂಷನ್ಗೆ ಕೊಡುತ್ತಿಲ್ಲ ಎಂದು ವಾದ ಮಾಡುತ್ತಿದ್ದಾರೆ.
ಇದನ್ನೂ ಓದಿ: ಪ್ರಾಸಿಕ್ಯೂಷನ್ ಭೀತಿ: ತಮ್ಮ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ
ಮಾಜಿ ಸಚಿವ ಮುರುಗೇಶ್ ನಿರಾಣಿ ಕೂಡ ಕಾಂಗ್ರೆಸ್ ಆರೋಪದಲ್ಲಿರುವವರಲ್ಲಿ ಒಬ್ಬರಾಗಿದ್ದಾರೆ. ಇಂದು ಬಾಗಲಕೋಟೆಯಲ್ಲಿ ನಿರಾಣಿ ಅವರು ಕಾಂಗ್ರೆಸ್ ಆರೋಪಕ್ಕೆ ಎಳೆಎಳೆಯಾಗಿ ಸ್ಪಷ್ಟೀಕರಣ ನೀಡಿದರು. 2022 ರಲ್ಲಿ ಇನ್ವೆಸ್ಟ್ ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆಗ ಕೈಗಾರಿಕೆ ಇಲಾಖೆ ಅಧಿಕಾರಿಗಳು ಐದು ನಿಮಿಷದ ತ್ರಿಡಿ ಪ್ರೊಮೊ ವಿಡಿಯೋ ಮಾಡೋದಕ್ಕೆ ಒಂದು ಕಂಪನಿಗೆ ಗುತ್ತಿಗೆ ನೀಡಿದ್ದರು. ಅದರ ಬಜೆಟ್ ನಾಲ್ಕುವರೆ ಕೋಟಿ ರೂ. ಆಗಿತ್ತು. ಇದು ನನ್ನ ಗಮನಕ್ಕೆ ಬಂದಿದ್ದೇ ತಡ ನಾನೆ ಅದನ್ನು ತಡೆದೆ. ಐದು ನಿಮಿಷದ ವಿಡಿಯೋ ಮಾಡೋದಕ್ಕಾಗಿ ನಾಲ್ಕುವರೆ ಕೋಟಿ ರೂ. ಇದು ಬಹಳ ಹೆಚ್ಚಾಯಿತು. ಕೂಡಲೆ ರದ್ದು ಮಾಡಿ ಎಂದು ಕೈಗಾರಿಕೆ ಇಲಾಖೆ ಮುಖ್ಯ ಕಾರ್ಯದರ್ಶಿ ಹಾಗೂ ಅಪರ ಕಾರ್ಯದರ್ಶಿಗೆ ಪತ್ರ ಬರೆದು ಸೂಚನೆ ನೀಡಿದ್ದೆ ಎಂದಿದ್ದಾರೆ.
ಅಲ್ಲಿಗೆ ಅದನ್ನು ಕೈ ಬಿಡಲಾಗಿದೆ. ಆದರೆ ಅದನ್ನೇ ಇಟ್ಕೊಂಡು ಕಾಂಗ್ರೆಸ್ನವರು ತಮ್ಮ ಮೇಲಿನ ಕೇಸ್ ವಿಷಯಾಂತರ ಮಾಡೋದಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ನನ್ನ ತೇಜೋವಧೆ ಮಾಡುತ್ತಿದ್ದಾರೆ. ಇವರು ನಾಲ್ವರ ವಿರುದ್ಧ ಪ್ರಾಸಿಕ್ಯೂಷನ್ಗೆ ಕೊಡಿ ಅಂತಿದ್ದಾರೆ ಹೊರತು, ಇವರು ಯಾವ ಆರೋಪ ಮಾಡಿರುವ ತಪ್ಪು ಏನು ಅಂತಾನೆ ಹೇಳ್ತಿಲ್ಲ. ಇವರ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ತವರು ಮೈಸೂರಲ್ಲೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಆರ್ವಿ ದೇಶಪಾಂಡೆ
ಅಂದು ನಾನು ಟೆಂಡರ್ ರದ್ದು ಮಾಡಿದ್ದಕ್ಕೆ ಜಾಹೀರಾತು ಕಂಪನಿಯವರು ಕೋರ್ಟ್ ಮೊರೆ ಹೋದರು. ಕೋರ್ಟ್ ಏಕ ಸದಸ್ಯ ಪೀಠ ಅವರು ಈಗಾಗಲೇ ನಿಮ್ಮ ಆದೇಶದ ಪ್ರಕಾರ ವಿಡಿಯೋ ತಯಾರಿಸಿದ್ದಾರೆ. ಅದಕ್ಕಾಗಿ ಹಣ ಪಾವಿತಿಸಿ ಅಂತ ಹೇಳಿತ್ತು. ನಾವು ಮತ್ತೆ ಕೋರ್ಟ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆವು. ಆಗ ದ್ವಿಸದಸ್ಯ ಪೀಠ ಸಚಿವರು ಹೇಳಿದ್ದು ಸರಿ ಇದೆ. ಐದು ನಿಮಿಷದ ವಿಡಿಯೋ ಚಿತ್ರೀಕರಣಕ್ಕೆ ನಾಲ್ಕುವರೆ ಕೋಟಿ ರೂ. ತೀರಾ ಹೆಚ್ಚಾಯಿತು ಎಂದು ನನ್ನ ಪತ್ರ ಉಲ್ಲೇಖ ಮಾಡಿ ಆದೇಶ ನೀಡಿದೆ.
ಹೀಗಿರುವಾಗ ಸಿಎಂ, ಡಿಸಿಎಂ, ಸಚಿವರು ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ನನಗೆ ಇದುವರೆಗೂ ರಾಜಭವನದಿಂದ ಆಗಲಿ, ಯಾವುದೇ ತನಿಖಾ ಸಂಸ್ಥೆಗಳಿಂದಾಗಲಿ ಒಂದೇ ಒಂದು ನೊಟೀಸ್ ಬಂದಿಲ್ಲ. ಯಾರು ವಿಚಾರಣೆಗೆ ಕರೆದಿಲ್ಲ. ನಾನು ಎಲ್ಲ ತನಿಖೆಗೂ ಸಿದ್ದನಿದ್ದೇನೆ. ಸಿಬಿಐ ತನಿಖೆಗೂ ಬೇಕಿದ್ದರೆ ಕೊಡಲಿ. ಯಾಕೆಂದರೆ ನಾನು ನಿರಪರಾಧಿ. ಸಿಎಂ, ಡಿಸಿಎಂ ಕೂಡ ಧೈರ್ಯದಿಂದ ತನಿಖೆ ಎದುರಿಸಲಿ ಎಂದು ಟಾಂಗ್ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.