ಮುಖ್ಯಮಂತ್ರಿ ತವರು ಮೈಸೂರಲ್ಲೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಆರ್ವಿ ದೇಶಪಾಂಡೆ
ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಪದೇ ಪದೇ ಸಾಭೀತಾಗುತ್ತಿದೆ. ಒಂದೆಡೆ ಸಿಎಂ ಬದಲಾವಣೆ ವಿಚಾರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೆ ಕಾಂಗ್ರೆಸ್ ಹಿರಿಯ ಮುಖಂಡ ಆರ್.ವಿ ದೇಶಪಾಂಡೆ ಸಿಎಂ ತವರು ಮೈಸೂರಲ್ಲೆ ಮುಖ್ಯಮಂತ್ರಿ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲದೆ ಸಿಎಂ ರಾಜೀನಾಮೆ ಕೊಡಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಮೈಸೂರು, ಸೆ.01: ಮೈಸೂರಿನ ಮುಡಾದಲ್ಲಿ ಸಿಎಂ(CM) ಪತ್ನಿ ಬದಲಿ ನಿವೇಶನ ಪಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂಗೆ ಕಾನೂನು ಸಂಕಷ್ಟ ಎದುರಾಗಿದೆ. ಇದರಿಂದ ಸಿಎಂ ಕುರ್ಚಿಗೂ ಕಂಟಕ ಬಂದಿದ್ದು, ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೆ ಸಿಎಂ ಕುರ್ಚಿಗೆ ಈಗಾಗಲೇ ಹಲವರು ಟವೆಲ್ ಹಾಸಿದ್ದು, ಅದರಂತೆ ಸಿಎಂ ತವರು ಮೈಸೂರಲ್ಲೆ ನಿಂತು ಕಾಂಗ್ರೆಸ್ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ(RV Deshpande) ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲದೆ ಸಿಎಂ ರಾಜೀನಾಮೆ ಕೊಡಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಆರ್.ವಿ ದೇಶಪಾಂಡೆ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದಾಗಿನಿಂದಲೂ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೆ ಇದೆ. ಒಂದಿಲ್ಲೊಂದು ಕಾರಣಕ್ಕೆ ಪರೋಕ್ಷವಾಗಿ ಸಿಎಂ ಗೆ ಟಾಂಗ್ ಕೊಡುವ ಕೆಲಸವನ್ನ ಆರ್.ವಿ.ದೇಶಪಾಂಡೆ ಮಾಡುತ್ತಿದ್ದಾರೆ. ಇದೀಗ ಸಿಎಂ ತವರು ಮೈಸೂರಿನಲ್ಲೆ ನಿಂತು ತಾವು ಸಿಎಂ ಆಕಾಂಕ್ಷೆ ಎನ್ನುವ ಸಂದೇಶವನ್ನ ಸಾರಿದ್ದಾರೆ. ಅದರಲ್ಲೂ ಮತ್ತೆ ಸಚಿವ ಸ್ಥಾನ ಸಿಗುವ ವಿಚಾರವಾಗಿ ಮಾತನಾಡಿದ ದೇಶಪಾಂಡೆ, ‘ಸಚಿವ ಆಗಿ ಆಗಿ ದಣಿದಿದ್ದೇನೆ, ಇನ್ನು ಸಿಎಂ ಆಗಬೇಕಷ್ಟೆ ಎಂದು ಹೇಳುವ ಮೂಲಕ ತಾವು ಸಿಎಂ ಆಕಾಂಕ್ಷಿ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯ ಮೈಸೂರು ಪ್ರವಾಸದ ಸಮಯ ಬದಲಾವಣೆ: ಕಾರಣ ಮುಡಾ ಕೇಸ್..!
ಪರೋಕ್ಷವಾಗಿ ಸಿಎಂ ರಾಜೀನಾಮೆಗೆ ಆಗ್ರಹ
‘ನನಗೂ ಆಸೆ ಇದೆ, ನಿಮ್ಮಂತ ಜನರಿಗೂ ಆಸೆ ಇದೆ. ಜೀವನದಲ್ಲಿ ಗುರಿ ಇರಬೇಕು. ನಾನು ಸಿದ್ದರಾಮಯ್ಯರಿಗಿಂತ ಎರಡು ವರ್ಷ ವಯಸ್ಸಿನಲ್ಲಿ ದೊಡ್ಡವನು. ಹೈಕಮಾಂಡ್ ಅವಕಾಶ ಕೊಟ್ಟರೂ ಸಿಎಂ ಅನುಮತಿ ಕೊಡಬೇಕು ಎಂದು ಹೇಳುವ ಮೂಲಕ ಸಿದ್ದರಾಮಯ್ಯರಿಗೆ ಮಾರ್ಮಿಕವಾಗಿ ಹೇಳಿದ್ದಾರೆ. ಇನ್ನು ಇದಷ್ಟೆ ಅಲ್ಲ, ಸಿಎಂ ರಾಜೀನಾಮೆ ಕೊಡಬೇಕು ಎಂದು ಪರೋಕ್ಷವಾಗಿ ಹೇಳಿದರು.
ಪ್ರತಿ ಮಾತಿನಲ್ಲೂ ಸಿಎಂ ತಪ್ಪು ಮಾಡಿಲ್ಲ ಎಂದು ಹೇಳುತ್ತಲೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ‘ಈ ಹಿಂದೆ ರಾಮಕೃಷ್ಣ ಹೆಗಡೆಯವರು ಪೋನ್ ಕದ್ದಾಲಿಕೆ ವಿಚಾರವಾಗಿ ರಾಜೀನಾಮೆ ಕೊಟ್ಟರು, ಆದರೀಗಾ ಪ್ರತಿದಿನ ಪೋನ್ ಕದ್ದಾಲಿಕೆ ಆಗುತ್ತಿದೆ. ಈ ಹಿಂದೆ ಮೌಲ್ಯಾಧಾರಿತ ರಾಜಕಾರಣ ಮಾಡುತ್ತಿದ್ದರು, ಅದರಂತೆ ನಡೆದುಕೊಳ್ಳುತ್ತಿದ್ದರು. ಈಗ ಅಂತಹ ಮೌಲ್ಯ ಆಧಾರಿತ ರಾಜಕೀಯ ಇಲ್ಲ ಎಂದು ಹೇಳುವ ಮೂಲಕ ಸಿಎಂ ರಾಜೀನಾಮೆಗೆ ಪರೋಕ್ಷವಾಗಿ ಕುಟುಕಿದರು. ಒಟ್ಟಾರೆ, ಸಿಎಂರನ್ನ ಸಮರ್ಥನೆ ಮಾಡಿಕೊಳ್ಳುತ್ತಲೆ ಅವರ ವಿರುದ್ಧವೇ ತಮ್ಮ ಅಸಮಾಧಾನವನ್ನ ಆರ್.ವಿ.ದೇಶಪಾಂಡೆ ಹೊರಹಾಕಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ