ಚಿಕ್ಕಬಳ್ಳಾಪುರ ಸರ್ಕಾರಿ ಬಾಲಕಿಯರ ಮಂದಿರದಲ್ಲಿ ರಾಕ್ಷಸೀಯ ಕೃತ್ಯಗಳು ಬಯಲು
ಚಿಕ್ಕಬಳ್ಳಾಪುರದ ಸರ್ಕಾರಿ ಬಾಲಕಿಯರ ಮಂದಿರದಲ್ಲಿ ಅಧೀಕ್ಷಕಿ ಮಮತಾ ಮತ್ತು ಸಹಾಯಕಿ ಸರಸ್ವತಿ ಅವರು ಬಾಲಕಿಯರ ಮೇಲೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಾಲಕಿಯರನ್ನು ಕಟ್ಟಿ ಹಾಕುವುದು, ಹಲ್ಲೆ ಮಾಡುವುದು ಹಾಗೂ ವೇಶ್ಯಾವಾಟಿಕೆಗೆ ಒತ್ತಾಯಿಸುವ ಆರೋಪಗಳಿವೆ. ಈ ಘಟನೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದೂರು ದಾಖಲಿಸಿದೆ.
ಚಿಕ್ಕಬಳ್ಳಾಪುರ, ಡಿಸೆಂಬರ್ 04: ನೊಂದ, ಸಂತ್ರಸ್ತ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯರಿಗೆ ಆತ್ಮಸ್ಥೈರ್ಯ ತುಂಬಿ ಅವರ ಬಾಳಿಗೆ ಬೆಳಕಾಗಬೇಕಾದ ಸರ್ಕಾರಿ ಬಾಲಕಿಯರ ಮಂದಿರವೊಂದು (Government Girls Bala Mandira) ಭೂ ಲೋಕದ ನರಕವಾಗಿದ್ದು, ಅಲ್ಲಿರುವ ಮಕ್ಕಳಿಗೆ ಅಲ್ಲಿಯ ಅಧೀಕ್ಷಕಿ ರಾಕ್ಷಸಿಯಂತೆ ನಡೆದುಕೊಳ್ಳುತ್ತಿರುವ ಪ್ರಕರಣ ಬಯಲಾಗಿದೆ.
ಬಾಲಮಂದಿರದಲ್ಲಿ ಅಮಾನವೀಯ ಕೃತ್ಯ ಬಯಲು
ನಗರದ ಬಿಬಿ ರಸ್ತೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದಲ್ಲಿ ಸರ್ಕಾರಿ ಬಾಲಕಿಯರ ಮಂದಿರವೊಂದಿದೆ. ಇದೆ ಬಾಲಕಿಯರ ಮಂದಿರ ಈಗ ಬಾಲಕಿಯರಿಗೆ ನರಕವಾಗಿದೆ. ಬಾಲಮಂದಿರಕ್ಕೆ ಬರುವ ನೊಂದ ಬಾಲಕಿಯರಿಗೆ ಧೈರ್ಯ ಹೇಳುವುದರ ಬದಲು ಬಾಲಕಿಯರಿಗೆ ಸಕಾಲಕ್ಕೆ ಅನ್ನ, ಆಹಾರ ನೀಡದೆ ದೈಹಿಕ, ಮಾನಸಿಕ ಕಿರುಕುಳ, ದೈಹಿಕ ಹಲ್ಲೆ, ವೆಶ್ಯವಾಟಿಕೆಗೆ ಸಹಕರಿಸದ ಕಾರಣ ಕಟ್ಟಿ ಹಾಕುವುದು, ಕೂಡಿ ಹಾಕುವುದು, ಬರೆ ಹಾಕಿರುವ ಪ್ರಕರಣಗಳು ಬಯಲಾಗಿವೆ.
ಬಾಲಕಿಯರ ಮಂದಿರದ ಕರ್ಮಕಾಂಡಗಳು ಬಯಲಾಗಿದ್ದು ಹೇಗೆ?
ಚಿಕ್ಕಬಳ್ಳಾಪುರ ಸರ್ಕಾರಿ ಬಾಲಕಿಯರ ಮಂದಿರದ ಅಧೀಕ್ಷಕಿ ಮಮತಾ, ಬಾಲಕಿಯರಿಗೆ ಸಾಂತ್ವಾನ ಹೇಳುವುದರ ಬದಲು ಕ್ಷುಲ್ಲಕ ಕಾರಣಕ್ಕೆ ಅವರನ್ನು ಕಿಟಕಿಗಳ ಸರಳುಗಳು, ಕಂಬಗಳಿಗೆ ಕಟ್ಟಿಹಾಕುವುದು, ರೂಂ.ಗಳಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿರುವ ಬಗ್ಗೆ ಸ್ವತಃ ನೊಂದ ಬಾಲಕಿಯರು ಅವಲತ್ತುಕೊಂಡಿದ್ದಾರೆ.
ಇದನ್ನೂ ಓದಿ: ಫೆಂಗಲ್ ಎಫೆಕ್ಟ್: 2-3 ದಿನಗಳಲ್ಲಿ ಕೆಎಂಎಫ್ ಹಾಲು ಉತ್ಪಾದನೆಯಲ್ಲಿ ಗಣನೀಯ ಇಳಿಕೆ
ಮಾಹಿತಿ ತಿಳಿದ ಚಿಕ್ಕಬಳ್ಳಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಬಾಲಕಿಯರ ಮಂದಿರಕ್ಕೆ ಭೇಟಿ ನೀಡಿ ದೂರು ಆಲಿಸಿ ತನಿಖೆಗೆ ಸೂಚಿಸಿದರು. ಆಗ ಚಿಕ್ಕಬಳ್ಳಾಪುರದ ಸರ್ಕಾರಿ ಬಾಲಕಿಯರ ಮಂದಿರ ಕರ್ಮಗಳು ಬಯಲಾಗಿವೆ.
ಬಾಲಮಂದಿರದ ಅಧೀಕ್ಷಕಿ ಮಮತಾ ವಿರುದ್ದ ಕ್ರಿಮಿನಲ್ ಮೊಕದ್ದಮೆ
ಚಿಕ್ಕಬಳ್ಳಾಪುರ ಸರ್ಕಾರಿ ಬಾಲಕಿಯರ ಮಂದಿರದ ಅಧೀಕ್ಷಕಿ ಮಮತಾ ಹಾಗೂ ಬಾಲಮಂದಿರದ ಸಹಾಯಕಿ ಸರಸ್ವತಮ್ಮ ಬಾಲಕಿಯರಿಗೆ ಚಿತ್ರಹಿಂಸೆ ನೀಡಿ, ದೈಹಿಕ ಹಲ್ಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಇದರಿಂದ ಸ್ವತಃ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಹಾಗೂ ಮಕ್ಕಳ ರಕ್ಷಣಾ ಘಟಕ ಸಂಘದ ಅಧ್ಯಕ್ಷ ಪಿ.ಎನ್.ರವೀಂದ್ರರವರ ಸೂಚನೆ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನವತಾಜ್‌ಬಿ, ಚಿಕ್ಕಬಳ್ಳಾಪುರದ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರಿಂದ ಮಹಿಳಾ ಠಾಣೆಯ ಪೊಲೀಸರು ಮಮತಾ ಹಾಗೂ ಸರಸ್ವತಿ ವಿರುದ್ದ ಮಕ್ಕಳ ಹಕ್ಕುಗಳ ಉಲ್ಲಂಘನೆ ಕಾಯ್ದೆ, ದೈಹಿಕ ಹಲ್ಲೆ, ಮಾನಸಿಕ ಹಿಂಸೆ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಧೀಕ್ಷಕಿ ಮಮತಾ ವೈಶ್ಯವಾಟಿಕೆಯಲ್ಲಿ ಭಾಗಿ ಆರೋಪ
ಚಿಕ್ಕಬಳ್ಳಾಪುರದ ಸರ್ಕಾರಿ ಬಾಲಕಿಯರ ಮಂದಿರದ ಅಧೀಕ್ಷಕಿ ಮಮತಾ.ಎಂ, ತಾನೊಬ್ಬ ಸರ್ಕಾರಿ ನೌಕರಳು ಎನ್ನುವುದು ಮರೆತು ದುರಾಸೆಗೆ ಬಿದ್ದು, ಬಾಲಕಿಯರಿಗೆ ಆತ್ಮಸ್ತೈರ್ಯ, ಹಾರೈಕೆ ನೀಡುವುದರ ಬದಲು ಪೋಕ್ಸೋ ಪ್ರಕರಣಗಳು ಹಾಗೂ ನೊಂದ ಬಾಲಕಿಯರನ್ನು ದುರುಪಯೋಗಪಡಿಸಿಕೊಂಡು ಅವರನ್ನು ಪುಸಲಾಯಿಸಿ ವೈಶ್ಯವಾಟಿಕೆ ತಳ್ಳಿದ್ದ ಆರೋಪಗಳು ಕೇಳಿಬಂದಿದ್ದವು. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶಿಸ್ತುಕ್ರಮ ಜರುಗಿಸಲಿಲ್ಲ. ಇದರಿಂದ ಮಮತಾ.ಎಂ ಈಗ ಮತ್ತೊಂದು ತನ್ನ ರಾಕ್ಷಸಿ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:16 pm, Wed, 4 December 24