ಬಿಡದಿಗಿಂತ ದೇವನಹಳ್ಳಿ ರೈತರಿಗೆ ಜಾಕ್​​​ ಪಾಟ್: ಪ್ರತಿ ಎಕರೆಗೆ 2.70 ಕೋಟಿ ರೂ. ಪರಿಹಾರ ಫಿಕ್ಸ್!

Devanahalli News: ಬಿಡಿದಿ ಬೆನ್ನಲ್ಲೇ ಇದಿಗ ದೇವನಹಳ್ಳಿಯಲ್ಲಿ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕೆ ಪೂರಕವೆಂಬಂತೆ ಒಟ್ಟು 120 ಎಕರೆ ಜಮೀನಿಗೆ ಪ್ರತಿ ಎಕರೆಗೆ 2.70 ಕೋಟಿ ರೂ. ಪರಿಹಾರ ನೀಡುವಂತೆ ಭೂದರ ನಿರ್ಧಾರಣಾ ಸಲಹಾ ಸಮಿತಿ ಕೆಐಎಡಿಬಿಗೆ (KIADB) ಶಿಫಾರಸು ಮಾಡಿದೆ. ಇನ್ನು ರೈತರಿಗೆ ನಗದು ಪರಿಹಾರ ಅಥವಾ ಅಭಿವೃದ್ಧಿಪಡಿಸಿದ ಕೈಗಾರಿಕಾ ಜಾಗವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸಹ ಕೆಐಎಡಿಬಿ (KIADB) ನೀಡಿದೆ.

ಬಿಡದಿಗಿಂತ ದೇವನಹಳ್ಳಿ ರೈತರಿಗೆ ಜಾಕ್​​​ ಪಾಟ್: ಪ್ರತಿ ಎಕರೆಗೆ 2.70 ಕೋಟಿ ರೂ. ಪರಿಹಾರ ಫಿಕ್ಸ್!
Devanahalli Land

Updated on: Jun 24, 2026 | 10:32 PM

ಮುಖ್ಯಾಂಶಗಳು

  • ದೇವನಹಳ್ಳಿಯಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ 120 ಎಕರೆ ಭೂಸ್ವಾಧೀನ
  • ರೈತರು ಸ್ವಯಂಪ್ರೇರಿತವಾಗಿ ಬಿಟ್ಟುಕೊಡುತ್ತಿರುವ ಪ್ರತಿ ಎಕರೆಗೆ 2.70 ಕೋಟಿ ರೂ. ಪರಿಹಾರ
  • ವಿಶೇಷ ಜಿಲ್ಲಾಧಿಕಾರಿ ಎ.ಎನ್.ರಘುನಂದನ್ ನೇತೃತ್ವದ ಸಭೆಯಲ್ಲಿ ಪರಿಹಾರ ನಿರ್ಧಾರ

ಬೆಂಗಳೂರು, ಜೂನ್ 24): ಬೆಂಗಳೂರು ಹೊರವಲಯದ ದೇವನಹಳ್ಳಿಯಲ್ಲಿ (Devanahalli) ಕೈಗಾರಿಕೆಗೆ ಸ್ವಾಧೀನಪಡಿಸಿಕೊಳ್ಳುತ್ತಿರುವ ಜಮೀನಿಗೆ ಎಕರೆಗೆ 2.70 ಕೋಟಿ ಪರಿಹಾರ ನಿಗದಿಪಡಿಸಲಾಗಿದೆ. ದೇವನಹಳ್ಳಿಯಲ್ಲಿ ಭೂಸ್ವಾಧೀನಪಡಿಸಿಕೊಂಡ 120 ಎಕರೆ ಜಮೀನಿಗೆ ಪ್ರತಿ ಎಕರೆಗೆ 2.70 ಕೋಟಿ ರೂ. ಪರಿಹಾರ ನೀಡುವಂತೆ ಭೂದರ ನಿರ್ಧಾರಣಾ ಸಲಹಾ ಸಮಿತಿ ಕೆಐಎಡಿಬಿಗೆ (KIADB) ಶಿಫಾರಸು ಮಾಡಿದೆ. ಇದು ದೇವನಹಳ್ಳಿ ಭಾಗದಲ್ಲೇ ಈವರೆಗೆ ನಿಗದಿಪಡಿಸಲಾದ ಅತ್ಯಂತ ಹೆಚ್ಚಿನ ಪರಿಹಾರ ದರವಾಗಿದೆ.

ರೈತರಿಗೆ ಎರಡು ಆಯ್ಕೆಗಳು

ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ಎ.ಎನ್. ರಘುನಂದನ್ ಅಧ್ಯಕ್ಷತೆಯಲ್ಲಿ ನಡೆದ ಭೂಮಾಲೀಕರ ಜಂಟಿ ಸಭೆಯಲ್ಲಿ ಪರಿಹಾರದ ಬಗ್ಗೆ ಮಹತ್ವದ ಚರ್ಚೆ ನಡೆಸಲಾಯಿತು. ರೈತರಿಗೆ ಇಲ್ಲಿ ಎರಡು ರೀತಿಯ ಆಯ್ಕೆಗಳನ್ನು ನೀಡಲಾಗಿದೆ. ಪ್ರತಿ ಎಕರೆಗೆ 2.70 ಕೋಟಿ ರೂಪಾಯಿ ಹಣವನ್ನು ನೇರವಾಗಿ ಪಡೆಯಬಹುದು. ಅಥವಾ ಹಣದ ರೂಪದಲ್ಲಿ ಪರಿಹಾರ ಬೇಡವೆಂದಾದಲ್ಲಿ, ಪ್ರತಿ ಎಕರೆ ಕೃಷಿ ಜಮೀನಿಗೆ ಪ್ರತಿಯಾಗಿ ಅಭಿವೃದ್ಧಿಪಡಿಸಿದ ಕೈಗಾರಿಕಾ ಬಡಾವಣೆಯಲ್ಲಿ 10,781 ಚದರ ಅಡಿ ಜಾಗವನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಬಸ್ ಪಾಸ್ ಹಣ ಮರುಪಾವತಿಗೆ ಆದೇಶ, ಪ್ರಕ್ರಿಯೆ ಹೇಗೆ?

ಸಭೆ ಬಳಿಕ ಜಿಲ್ಲಾಧಿಕಾರಿ ರಘುನಂದನ್ ಪ್ರತಿಕ್ರಿಯಿಸಿದ್ದು,  ಸಂತ್ರಸ್ತ ರೈತರಿಗೆ ನ್ಯಾಯಯುತ ಮತ್ತು ಆಕರ್ಷಕ ಪರಿಹಾರ ನೀಡಬೇಕು ಎಂಬುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ದೇವನಹಳ್ಳಿಯ ಈ ಭಾಗದಲ್ಲಿ ಈ ದರವು ಐತಿಹಾಸಿಕವಾಗಿದ್ದು, ರೈತರ ಹಿತಾಸಕ್ತಿಯನ್ನು ಕಾಪಾಡಲಾಗಿದೆ. ಪ್ರಸ್ತುತ ಸಮಿತಿಯು ನೀಡಿರುವ ಈ ಶಿಫಾರಸನ್ನು ಕೆಐಎಡಿಬಿ ಮಂಡಳಿಯ ಅಂತಿಮ ಅನುಮೋದನೆಗೆ ಕಳುಹಿಸಿಕೊಡಲಾಗುವುದು. ಮಂಡಳಿಯ ಒಪ್ಪಿಗೆ ಸಿಕ್ಕ ತಕ್ಷಣ ಪರಿಹಾರ ವಿತರಣಾ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಯಾವ ಗ್ರಾಮಗಳಲ್ಲಿ ಜಮೀನು ಸ್ವಾಧೀನ?

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಗೋಕರೆಬಚ್ಚೇನಹಳ್ಳಿ ಮತ್ತು ಹ್ಯಾಡಾಳ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 120 ಎಕರೆ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ಗುರುತಿಸಲಾಗಿದೆ. ಈ ಜಮೀನನ್ನು ರೈತರು ತಾವಾಗಿಯೇ ಬಿಟ್ಟುಕೊಡಲು ಸಮ್ಮತಿಸಿದ್ದು, ಕೆಐಎಡಿಬಿ ಕಾಯ್ದೆಯನ್ವಯ ಜೂನ್ 16ರಂದೇ ಅಂತಿಮ ಅಧಿಸೂಚನೆ ಹೊರಡಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us