ಬೆಂಗಳೂರು, (ಏಪ್ರಿಲ್ ಕ15): ಕರ್ನಾಟಕ ಲೋಕಸಭಾ ಚುನಾವಣೆ (Loksabha Elections 2024) ರಂಗೇರಿದ್ದು, ಇಂದು (ಏಪ್ರಿಲ್ 15) ಧಾರವಾಡ ಲೋಕಸಭಾ(Dharwad Loksabha) ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪ್ರಲ್ಹಾದ್ ಜೋಶಿ(pralhad joshi) ಮತ್ತು ಹಾವೇರಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಪ್ರಲ್ಹಾದ್ ಜೋಶಿ 21.9 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದಾರೆ. ಆದ್ರೆ ಕೇಂದ್ರದಲ್ಲಿ ಪ್ರಭಾವಿ ಸಚಿವರಾದರೂ ಜೋಶಿ ಬಳಿ ಸ್ವಂತ ವಾಹನವಿಲ್ಲ. ಪ್ರಲ್ಹಾದ್ ಜೋಶಿ ಕುಟುಂಬದವರ ಬಳಿಯೂ ಯಾವುದೇ ವಾಹನ ಇಲ್ಲ ಅಂತ ಘೋಷಣೆ ಮಾಡಿದ್ದಾರೆ. ಇನ್ನು ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ತಮ್ಮ ಬಳಿ 29.58 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಮಾಹಿತಿ ನೀಡಿದ್ದಾರೆ.
ಚುನಾವಣಾಧಿಕಾರಿಗಳಿಗ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಆಸ್ತಿ ಘೋಷಣೆ ಮಾಡಿರುವ ಜೋಶಿ ತಮ್ಮಲ್ಲಿ ರೂ. 2.72 ಕೋಟಿ ಚರಾಸ್ತಿ ಇದೆ. ರೂ. 11.24 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು ರೂ.13.96 ಕೋಟಿ ಆಸ್ತಿ ಹೊಂದಿದ್ದಾರೆ. ಚರಾಸ್ತಿ ಪೈಕಿ ಪ್ರಲ್ಹಾದ ಜೋಶಿ ರೂ. 1 ಲಕ್ಷ ನಗದು ಹೊಂದಿದ್ದು, ರೂ. 12.14 ಲಕ್ಷ ಮೌಲ್ಯದ 184 ಗ್ರಾಂ ಚಿನ್ನದ ಆಭರಣಗಳು, ರೂ. 3.65 ಲಕ್ಷ ಮೌಲ್ಯದ 5 ಕೆಜಿ ಬೆಳ್ಳಿ ಹೊಂದಿದ್ದಾರೆ. ಹಿಂದುಸ್ತಾನ ಕೆಮಿಕಲ್ ಲ್ಯಾಬರೋಟಿಸ್‌ನಲ್ಲಿ ರೂ. 10.78 ಲಕ್ಷ ಹೂಡಿಕೆ ಮಾಡಿದ್ದಾರೆ. ವಿವಿಧ ಬ್ಯಾಂಕ್‌ಗಳು, ಮ್ಯೂಚುವಲ್ ಫಂಡ್, ಎಲ್‌ಐಸಿಗಳಲ್ಲಿ ಹಣ ಹೂಡಿಕೆ ಹಾಗೂ ವಿವಿಧ ಕಂಪನಿಗಳಲ್ಲಿ ಷೇರು ಹೊಂದಿದ್ದಾರೆ.
ಹಾಗೆಯೇ, ಸ್ಥಿರಾಸ್ತಿ ಪೈಕಿ ಹುಬ್ಬಳ್ಳಿಯ ಕೇಶ್ವಾಪೂರ, ಬೆಂಗಳೂರಿನ ಸರ್ಜಾಪೂರ ರಸ್ತೆಯಲ್ಲಿ ರೂ. 2.64 ಕೋಟಿ ಮೌಲ್ಯದ ಕೃಷಿಯೇತರ ಭೂಮಿ ಹೊಂದಿದ್ದಾರೆ ಜೋಶಿ. ಹಾಗೆಯೇ ಹುಬ್ಬಳ್ಳಿಯಲ್ಲಿ ಮನೆ, ಬೆಂಗಳೂರಿನ ಅಪಾರ್ಟಮೆಂಟ್‌ನಲ್ಲಿ ಮನೆ, ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಅಪಾರ ಮೌಲ್ಯದ ಕಟ್ಟಡಗಳನ್ನು ಹೊಂದಿದ್ದಾರೆ. ಹಾಗೆಯೇ, ಜೋಶಿ ಅವರ ವಿವಿಧ ಬ್ಯಾಂಕ್‌ಗಳಲ್ಲಿ ರೂ. 6.63 ಲಕ್ಷ ಸಾಲವನ್ನೂ ಹೊಂದಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಇನ್ನು, ಪತ್ನಿ ಜ್ಯೋತಿ ಹೆಸರಿನಲ್ಲಿ ರೂ. 5.93 ಕೋಟಿ ಚರಾಸ್ತಿ ಹಾಗೂ ರೂ. 86.39 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. ಚರಾಸ್ತಿ ಪೈಕಿ ರೂ. 1.10 ಲಕ್ಷ ನಗದು ಹೊಂದಿದ್ದಾರೆ. ರೂ. 33 ಲಕ್ಷ ಮೌಲ್ಯದ 500 ಗ್ರಾಪಂ ಚಿನ್ನದ ಆಭರಣಗಳು, 1.46 ಲಕ್ಷ ಮೌಲ್ಯದ 2 ಕೆ.ಜಿ. ಬೆಳ್ಳಿ ವಸ್ತು ಹೊಂದಿದ್ದಾರೆ. ಹಾಗೆಯೇ, ರೂ.1.37 ಕೋಟಿ ಸಾಲವನ್ನೂ ಜ್ಯೋತಿ ಜೋಶಿ ಅವರು ಮಾಡಿಕೊಂಡಿದ್ದಾರೆ. ಪ್ರಹ್ಲಾದ ಜೋಶಿ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು ಈ ಪೈಕಿ ಪುತ್ರಿ ಅನನ್ಯ ಹೆಸರಿನಲ್ಲಿ ರೂ. 32 ಲಕ್ಷ (ಚರಾಸ್ತಿ) ಪಿಪಿಎಫ್ ಹಾಗೂ ಎಲ್‌ಐಸಿ ಮಾಡಿಸಲಾಗಿದೆ.
ಒಟ್ಟಾರೆ ಪ್ರಲ್ಹಾದ ಜೋಶಿ ಅವರ ಕುಟುಂಬದ ಹೆಸರಿನಲ್ಲಿ ರೂ. 21.07 ಕೋಟಿ ಆಸ್ತಿ ಇದೆ. ವಿಶೇಷ ಎಂದರೆ ಕುಟುಂಬದ ಯಾರ ಹೆಸರಿನಲ್ಲಿ ಒಂದೂ ಕಾರು ಇಲ್ಲ. 2019ರ ವೇಳೆ ಪ್ರಹ್ಲಾದ್ ಜೋಶಿ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ತಮ್ಮ ಬಳಿ ರೂ. 11.14 ಕೋಟಿ ಆಸ್ತಿ ಇರುವುದಾಗಿ ಘೋಷಿಸಿದ್ದರು. 2024ರ ಚುನಾವಣೆಯಲ್ಲಿ ರೂ. 13.96 ಕೋಟಿ ಎಂದು ಘೋಷಿಸಿದ್ದು, ಐದು ವರ್ಷಗಳಲ್ಲಿ ಜೋಶಿ ಅವರ ಆಸ್ತಿ ರೂ. 2.82 ಕೋಟಿ ಏರಿಕೆಯಾಗಿದೆ. ಹಾಗೆಯೇ, ಕುಟುಂಬದ ಆಸ್ತಿ 2019ರಲ್ಲಿ ರೂ.14.17 ಕೋಟಿ ಇತ್ತು. 2024ರ ಚುನಾವಣೆಯಲ್ಲಿ ರೂ. 21.07 ಕೋಟಿ ಆಗಿದ್ದು, ರೂ. 6.9 ಕೋಟಿ ಏರಿಕೆಯಾಗಿದೆ.
ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ತಮ್ಮ ಬಳಿ 29.58 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಮಾಹಿತಿ ನೀಡಿದ್ದಾರೆ.