ರಾಜ್ಯ ಸರ್ಕಾರ ಮತ್ತು ಹೆಸ್ಕಾಂ ಅಧಿಕಾರಿಗಳ ವಿರುದ್ಧ 25% ಕಮೀಷನ್ ಆರೋಪ; ಲೋಕಾಯುಕ್ತಕ್ಕೆ ದೂರು

TV9kannada Web Team

TV9kannada Web Team | Edited By: Kiran Hanumant Madar

Updated on: Nov 26, 2022 | 10:23 AM

ರಾಜ್ಯ ಸರ್ಕಾರ ಮತ್ತು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ‌ ಕೇಳಿ ಬಂದಿದೆ. ನೂರಾರು ಕೋಟಿ ರೂಪಾಯಿ ಗುತ್ತಿಗೆ ಕಾಮಗಾರಿಯಲ್ಲಿ 25% ಕಮೀಷನ್ ದಂಧೆ ನಡೆದಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.

ರಾಜ್ಯ ಸರ್ಕಾರ ಮತ್ತು ಹೆಸ್ಕಾಂ ಅಧಿಕಾರಿಗಳ ವಿರುದ್ಧ 25% ಕಮೀಷನ್ ಆರೋಪ; ಲೋಕಾಯುಕ್ತಕ್ಕೆ ದೂರು
ಹುಬ್ಬಳ್ಳಿ

ಹುಬ್ಬಳ್ಳಿ: ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ ವಿವಿಧ ಕಾಮಗಾರಿಗಳಿಗೆ 472 ಕೋಟಿ ರೂಪಾಯಿ ಟೆಂಡರ್ ಕರೆಯಲಾಗಿದೆ. ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಹೆಚ್‌ಟಿ ಲೈನ್ ಮತ್ತು ಎಲ್‌ಟಿ ಲೈನ್ ನಿರ್ಮಿಸುವುದು ಹಾಗೂ ಲಿಂಕ್‌ಲೈನ್ ಕಾಮಗಾರಿಗೆ 34 ಲಾಟ್‌ಗಳಲ್ಲಿ ಟೆಂಡರ್ ನೀಡಲಾಗಿದೆ. ಆದರೆ ಲಂಚ ನೀಡುವವರಿಗೆ ಅನುಕೂಲ ಮಾಡಲು ತರಾತುರಿಯಲ್ಲಿ ಅವೈಜ್ಞಾನಿಕವಾಗಿ ಟೆಂಡರ್ ರೂಪಿಸಿ ಭ್ರಷ್ಟಾಚಾರ ಮಾಡಲಾಗಿದೆ ಎಂದು ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರು ಆರೋಪಿಸಿದ್ದಾರೆ. ಹೆಸ್ಕಾಂ(HESCOM) ಎಮ್‌ಡಿ ಡಿ. ಭಾರತಿ ಮತ್ತು ತಾಂತ್ರಿಕ ನಿರ್ದೇಶಕ ಶ್ರೀಕಾಂತ ಸಸಾಲೊಟ್ಟಿ ವಿರುದ್ದ ಭ್ರಷ್ಟಾಚಾರದ ಆರೋಪದ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ದೂರಿನಲ್ಲಿ ಆಪ್ತ ಗುತ್ತಿಗೆದಾರರಿಂದ ಲಂಚ ಪಡೆದು ಕೋಟ್ಯಾಂತರ ರೂಪಾಯಿ ಕಾಮಗಾರಿ ಮಂಜೂರು ಮಾಡಲಾಗಿದೆ ಎಂದು ದೂರಲಾಗಿದೆ..

ಹೆಸ್ಕಾಂ ಅಧಿಕಾರಿಗಳು ಆಪ್ತ ಗುತ್ತಿಗೆದಾರರ ಸಲಹೆ ಪಡೆದು ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಟೆಂಡರ್‌ಗಳನ್ನು ವ್ಯವಸ್ಥಿತವಾಗಿ ಲಾಟುಗಳಾಗಿ ವಿಂಗಡಿಸಿದ್ದಾರೆ. ಪರ್ಸೆಂಟೇಜ್ ಆಸೆಗೆ ಹೊರ ರಾಜ್ಯದ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ಇದೇ ಟೆಂಡರ್‌ನ್ನು ರಾಜ್ಯದ ಗುತ್ತಿಗೆದಾರರಿಗೆ ನೀಡಿದ್ದರೆ ಸುಮಾರು 3000 ಗುತ್ತಿಗೆದಾರರಿಗೆ ಕೆಲಸ ಸಿಗುತ್ತಿತ್ತು. ರಾಜ್ಯ ಸರ್ಕಾರಕ್ಕೆ ಸುಮಾರು ಐವತ್ತು ಕೋಟಿ ರೂಪಾಯಿ ಲಾಭ ಆಗುತ್ತಿತ್ತು. ಆದರೆ ಕಮೀಷನ್ ಆಸೆಗೆ ಕೇವಲ 39 ಗುತ್ತಿಗೆದಾರರಿಗೆ ಮಾತ್ರ ಟೆಂಡರ್ ನೀಡಲಾಗಿದೆ. ಅವೈಜ್ಞಾನಿಕ ಡಿಪಿಆರ್ ಸಿದ್ಧಪಡಿಸಿ ಅವಸರದಲ್ಲಿ ಗುತ್ತಿಗೆ ನೀಡಿರುವುದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ. ಈ ಕುರಿತು ಇಂಧನ ಸಚಿವರು, ಮುಖ್ಯಮಂತ್ರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಸರ್ಕಾರ ಕೂಡಲೆ ಅನಧಿಕೃತ ಟೆಂಡರ್ ಹಿಂಪಡೆಯಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಪ್ರಧಾನಿಗಳ ಕಚೇರಿ ಕದ ತಟ್ಟುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇನ್ನು ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲಿ ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿರುವ ಹೋಟೆಲ್‌ವೊಂದರಲ್ಲಿ ಸಭೆ ಸೇರಿ ಗುತ್ತಿಗೆ ನಿರ್ಧಾರ ಮಾಡಲಾಗಿದೆ. ಯಾವ ಗುತ್ತಿಗೆದಾರ ಯಾವ ಲಾಟಿಗೆ ಎಲ್ -1 ಆಗಿ ಭಾಗವಹಿಸಬೇಕು ಯಾರು ಎಲ್‌-2 ಆಗಿ ಭಾಗವಹಿಸಬೇಕು ಯಾವ ಸಪೋರ್ಟಿಂಗ್ ಬಿಡ್ಡರ್ ಇರಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಎಲ್ಲಾ ಏಜನ್ಸಿಗಳ ಇ-ಪ್ರಾಕ್ಯೂರ್‌ಮೆಂಟ್ ಡಿಜಿಟಲ್‌ ಕೀಯನ್ನು ಸಂಗ್ರಹಿಸಿ ಒಂದೇ ಐಪಿ ಅಡ್ರೆಸ್‌ನಲ್ಲಿ ಲಾಗಿನ್ ಮಾಡಿ ಟೆಂಡರ್ ಸಲ್ಲಿಸಲಾಗಿದೆ. ತಮಗೆ ಬೇಕಾದವರಿಗೆ ಮೊದಲೇ ನಿರ್ಧರಿಸಿದಂತೆ ಪತ್ರ ಕೊಡಿಸಲಾಗಿದೆ ಅನ್ನುವ ವಿಷಯಗಳನ್ನು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ವೋಟರ್​ ಐಡಿ ಹಗರಣ: ಹುಬ್ಬಳ್ಳಿ, ದಾವಣಗೆರೆ, ಕನಕಗಿರಿಯಲ್ಲಿಯೂ ಅಕ್ರಮ ಪತ್ತೆ; ಚಿಲುಮೆ ಮೇಲೆ ದೂರು ಕೊಟ್ಟ ಸಮನ್ವಯ ಟ್ರಸ್ಟ್​ಗೆ ನೊಟೀಸ್

ಒಟ್ಟಾರೆ ಟೆಂಡರ್ ಪ್ರಕ್ರಿಯೆಯಲ್ಲಿ ಸರ್ಕಾರ ಹಾಗೂ ಹೆಸ್ಕಾಮ್ ಅಧಿಕಾರಿಗಳಿಗೆ ಲಂಚ ನೀಡುವ ಆಪ್ತರಿಗೆ ಅನುಕೂಲ ಮಾಡಿಕೊಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಹೆಸ್ಕಾಂ ಗುತ್ತಿಗೆ ಹಗರಣ ರಾಜ್ಯ ಸರ್ಕಾರವನ್ನು ಟೀಕಿಸಲು ಮತ್ತಷ್ಟು ಅವಕಾಶ ಕಲ್ಪಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ವರದಿ: ಶಿವಕುಮಾರ್​ ಪತ್ತಾರ ಟಿವಿ9 ಹುಬ್ಬಳ್ಳಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada