Narendra Modi Birthday: ಬಾಳೆ ಎಲೆ ಮೇಲೆ ಪ್ರಧಾನಿ ಮೋದಿ ಚಿತ್ರ ಬಿಡಿಸಿ ಬರ್ತ್ಡೆ ವಿಶ್ ಮಾಡಿದ ಧಾರವಾಡದ ಕಲಾವಿದ
PM Modi Birthday: ಕೆಲಗೇರಿ ಬಡಾವಣೆಯ ಕಲಾವಿದ ಮಂಜುನಾಥ ಹಿರೇಮಠ ಎಂಬುವವರು ಬಾಳೆ ಎಲೆಯಲ್ಲಿ ಮೋದಿ ಚಿತ್ರ ಕೆತ್ತಿ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.
ಧಾರವಾಡ: ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು 71ನೇ ಹುಟ್ಟುಹಬ್ಬದ ಸಂಭ್ರಮ. ಇಡೀ ದೇಶಾದ್ಯಂತ ಬಿಜೆಪಿ ಮಾತ್ರವಲ್ಲದೆ, ಜನಸಾಮಾನ್ಯರೂ ಕೂಡ ಮೋದಿ ಜನ್ಮ ದಿನವನ್ನು ಆಚರಣೆ ಮಾಡುತ್ತಿದ್ದಾರೆ. ಬಿಜೆಪಿಯಿಂದ ದೇಶಾದ್ಯಂತ ಏಳು ದಿನಗಳ ಕಾಲ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೋದಿ ಅಭಿಮಾನಿಗಳು ತಮಗೆ ಖುಷಿಯಾಗುವ ರೀತಿಯಲ್ಲಿ ಅವರ ಜನ್ಮದಿನವನ್ನು ಆಚರಿಸುತ್ತಾರೆ. ಇದೇ ವೇಳೆ ಧಾರವಾಡದ ಕಲಾವಿದರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಭಿನ್ನ ಬಗೆಯಲ್ಲಿ ಶುಭಾಶಯ ಹೇಳಿದ್ದಾರೆ.
ಬಾಳೆ ಎಲೆಯಲ್ಲಿ ಪ್ರಧಾನಿ ಮೋದಿ ಧಾರವಾಡದ ಕೆಲಗೇರಿ ಬಡಾವಣೆಯ ಮಂಜುನಾಥ ಹಿರೇಮಠ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ತಯಾರಿಸುವಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದವರು. ಧಾರವಾಡದಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವದ ಸೂತ್ರಧಾರರ ಪೈಕಿ ಇವರೂ ಒಬ್ಬರು. ದೇಶದಲ್ಲಿ ಯಾವುದೇ ಘಟನೆ ನಡೆದರೂ ಅದಕ್ಕೆ ತಮ್ಮದೇ ರೀತಿಯಲ್ಲಿ ಸ್ಪಂದಿಸುತ್ತಾ ಬಂದಿರುವವರು. ಇದೀಗ ಪ್ರಧಾನಿ ಮೋದಿ ಅವರ ಜನ್ಮ ದಿನದಂದು ಬಾಳೆ ಎಲೆಯಲ್ಲಿ ತಮ್ಮ ಕಲೆಯನ್ನು ಅನಾವರಣಗೊಳಿಸಿ ಅಚ್ಚರಿ ಮೂಡಿಸಿದ್ದಾರೆ. ಸುಮಾರು ಎರಡು ಅಡಿಯಷ್ಟು ಉದ್ದದ ಬಾಳೆ ಎಲೆಯ ಮಧ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಕೆತ್ತಿದ್ದಾರೆ. ಅರ್ಧ ಗಂಟೆಯಲ್ಲಿಯೇ ಮಂಜುನಾಥ ಹಿರೇಮಠ ಈ ಕಲೆಯನ್ನು ಮುಗಿಸಿ ಅಚ್ಚರಿ ಮೂಡಿಸಿದ್ದಾರೆ. ಸಾಮಾನ್ಯವಾಗಿ ಬಾಳೆ ಎಲೆಯಲ್ಲಿ ಇಂಥ ಕೆತ್ತನೆಯನ್ನು ಮಾಡುವುದು ಕಷ್ಟಕರ. ಏಕೆಂದರೆ ಬಾಳೆ ಎಲೆಯಲ್ಲಿ ಹೆಚ್ಚಿನ ನಾರಿನ ಎಳೆಗಳು ಇರುವುದರಿಂದ ಕಲಾವಿದರಿಗೆ ಕೆತ್ತನೆ ಕೆಲಸ ಕೊಂಚ ಕಷ್ಟವೇ. ಕೆತ್ತನೆ ವೇಳೆ ಕೊಂಚ ಹೆಚ್ಚು ಕಡಿಮೆಯಾದರೂ ಇಡೀ ಚಿತ್ರವೇ ಕೆಟ್ಟು ಹೋಗುತ್ತದೆ. ಆದರೆ ಅಂಥ ಬಾಳೆಯ ಎಲೆಯಲ್ಲಿಯೇ ಮಂಜುನಾಥ ಹಿರೇಮಠ, ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಭಾವಚಿತ್ರವನ್ನು ಕೆತ್ತಿ, ಅಚ್ಚರಿ ಮೂಡಿಸಿದ್ದಾರೆ. ಈ ಎಲೆಯನ್ನು ಸುಮ್ಮನೆ ನೋಡಿದರೆ ಚಿತ್ರದಲ್ಲಿರುವುದು ಅಷ್ಟು ಸರಿಯಾಗಿ ಕಂಡು ಬರುವುದಿಲ್ಲ. ಅದನ್ನು ಮೇಲಕ್ಕೆ ಆಕಾಶದ ಕಡೆಗೆ ಎತ್ತಿ ನೋಡಿದಾಗ ಮೋದಿಯವರ ಚಿತ್ರ ಸ್ಪಷ್ಟವಾಗಿ ಎದ್ದು ಕಾಣುತ್ತದೆ.
ಎಲ್ಲ ಬಗೆಯ ಕಲೆಗಳಲ್ಲಿ ನಿಸ್ಸೀಮ ಮಂಜುನಾಥ ಹಿರೇಮಠ ಮಂಜುನಾಥ ಹಿರೇಮಠ ಕೇವಲ ಪರಿಸರ ಸ್ನೇಹಿ ಗಣೇಶನ ವಿಗ್ರಹಗಳನ್ನು ತಯಾರಿಸುವಲ್ಲಷ್ಟೇ ಹೆಸರು ಗಳಿಸಿಲ್ಲ. ಬದಲಿಗೆ ಮರಳು ಕಲೆ ಸೇರಿದಂತೆ ಅನೇಕ ಬಗೆಯ ಕಲೆಗಳಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಸಮಾಜದಲ್ಲಿ ನಡೆಯುವ ಎಲ್ಲ ಘಟನೆಗಳಿಗೆ ತಮ್ಮ ಕಲೆಯ ಮೂಲಕ ಕೂಡಲೇ ಸ್ಪಂದಿಸುವ ಹಿರೇಮಠ, ನಿರಂತರವಾಗಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಇನ್ನು ದೇಶದಲ್ಲಿ ನಡೆಯುವ ಪ್ರತಿಯೊಂದು ಘಟನೆಗೆ ತಮ್ಮದೇ ರೀತಿಯಲ್ಲಿ ಸ್ಪಂದಿಸಿ, ಜನರಲ್ಲಿ ಜಾಗೃತಿ ಮೂಡಿಸುತ್ತಾರೆ. ಕೊರೊನಾ ಸಂದರ್ಭದಲ್ಲಂತೂ ಅನೇಕ ಬಗೆಯಲ್ಲಿ ಜಾಗೃತಿ ಮೂಡಿಸೋ ಮೂಲಕ ಜಿಲ್ಲಾಡಳಿತದ ಮೆಚ್ಚುಗೆ ಗಳಿಸಿದ್ದರು. ಮಹಿಳೆಯರ ಮೇಲಿನ ದೌರ್ಜನ್ಯ, ಕನ್ನಡಕ್ಕೆ ಕಂಟಕ ಎದುರಾದಾಗಲೆಲ್ಲ ಬಗೆ ಬಗೆಯ ಕಲೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಂಜುನಾಥ ಮಾಡುತ್ತಲೇ ಬಂದಿದ್ದಾರೆ. ಇಂಥ ಮಂಜುನಾಥ ಹಿರೇಮಠ ಇದೀಗ ತಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಬಾಳೆ ಎಲೆಯಲ್ಲಿ ಕೆತ್ತುವ ಮೂಲಕ ಅವರಿಗೆ ವಿಭಿನ್ನ ಬಗೆಯಲ್ಲಿ ಶುಭಾಶಯ ಕೋರಿದ್ದಾರೆ.
Published On - 10:02 am, Fri, 17 September 21