AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾದ ಧಾರವಾಡ ಹಿಂದಿ ಪ್ರಚಾರ ಸಭಾ

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಗೆ 2020 ಜನವರಿಯಲ್ಲಿ ಚುನಾವಣೆ ನಡೆದಿತ್ತು. ಇದಾದ ನಂತರ 78 ಜನ ಸದಸ್ಯರಿರುವ ಪ್ರಚಾರ ಸಭೆಯನ್ನು ಕೇಂದ್ರ ಸರಕಾರ ಸೂಪರ್ ಸೀಡ್ ಮಾಡಿತ್ತು. ಕಳೆದ 2020 ರ ಮೇ ತಿಂಗಳಲ್ಲಿ ಹೊಸ ಆಡಳಿತ ಮಂಡಳಿಯನ್ನು ನೇಮಿಸಲಾಗಿತ್ತು.

ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾದ ಧಾರವಾಡ ಹಿಂದಿ ಪ್ರಚಾರ ಸಭಾ
ಧಾರವಾಡ ಹಿಂದಿ ಪ್ರಚಾರ ಸಭಾ
TV9 Web
| Edited By: |

Updated on: Oct 09, 2021 | 8:43 AM

Share

ಧಾರವಾಡ: ಮಹಾತ್ಮಾ ಗಾಂಧಿ ಹಾಗೂ ಆ್ಯನಿಬೆಸಂಟ್ ಅವರಿಂದ 1918 ರಲ್ಲಿ ಆರಂಭವಾದದ್ದು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ. ಸಂಸ್ಥೆಯಡಿ ಅನೇಕ ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಅಂಥ ಸಂಸ್ಥೆಯೊಂದು ಇದೀಗ ಕಾಂಗ್ರೆಸ್-ಬಿಜೆಪಿ ನಾಯಕರ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿದೆ. ಇದೀಗ ಎರಡು ಬಣಗಳ ನಡುವಿನ ಜಟಾಪಟಿ ತಾರಕಕ್ಕೇರಿದ್ದು, ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಿಕ್ಕಾಟ ಆರಂಭವಾಗಿದೆ. ಅಧಿಕಾರ ಬಿಡುವಂತೆ ಈಗಿನ ಆಡಳಿತ ಮಂಡಳಿಗೆ ಸದಸ್ಯರು ಬೆನ್ನು ಬಿದ್ದಿದ್ದು, ಧಾರವಾಡ ಹೈಕೋರ್ಟ್​ನಿಂದ ಬಂದಿರುವ ತಡೆಯಾಜ್ಞೆಯನ್ನು ನೀಡಿದ್ದಾರೆ. ಆದರೆ ಅದಕ್ಕೆ ಜಗ್ಗದ ಆಡಳಿತ ಮಂಡಳಿ, ಆದೇಶದ ಪ್ರತಿಯನ್ನು ಇನ್ವರ್ಡ್ ಮೂಲಕವೇ ನೀಡುವಂತೆ ಪಟ್ಟು ಹಿಡಿದಿದೆ.

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಗೆ 2020 ಜನವರಿಯಲ್ಲಿ ಚುನಾವಣೆ ನಡೆದಿತ್ತು. ಇದಾದ ನಂತರ 78 ಜನ ಸದಸ್ಯರಿರುವ ಪ್ರಚಾರ ಸಭೆಯನ್ನು ಕೇಂದ್ರ ಸರಕಾರ ಸೂಪರ್ ಸೀಡ್ ಮಾಡಿತ್ತು. ಕಳೆದ 2020 ರ ಮೇ ತಿಂಗಳಲ್ಲಿ ಹೊಸ ಆಡಳಿತ ಮಂಡಳಿಯನ್ನು ನೇಮಿಸಲಾಗಿತ್ತು. ಈರೇಶ ಅಂಚಟಗೇರಿ ಅಧ್ಯಕ್ಷರಾಗಿ ಮತ್ತು ಅರುಣ ಜೋಶಿ, ಎಂ.ಆರ್. ಪಾಟೀಲ ಸಲಹಾ ಸಮಿತಿ ಸದಸ್ಯರಾಗಿ ಅಧಿಕಾರ ವಹಿಸಿಕೊಂಡಿದ್ದರು. ಸರಕಾರದ ಇವರ ನೇಮಕವನ್ನು ವಿರೋಧಿಸಿ ಪಿ.ವಿ.ಕತ್ತಿಶೆಟ್ಟರ್, ಮಲ್ಲಪ್ಪ ಪುಡಕಲಕಟ್ಟಿ, ರಾಯಪ್ಪ ಪುಡಕಲಕಟ್ಟಿ, ಲಿಂಗರಾಜ ಸರದೇಸಾಯಿ ಸೇರಿದಂತೆ 13 ಸದಸ್ಯರು ಧಾರವಾಡ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಸಧ್ಯ ಸಭೆಯ ಆಡಳಿತದಲ್ಲಿರುವ ಅನೇಕರು ಪ್ರಚಾರ ಸಭೆಯ ಸದಸ್ಯರೇ ಅಲ್ಲ. ಹೀಗಾಗಿ ಹಿಂದಿನ ಆಡಳಿತ ಮಂಡಳಿಗೆ ಅಧಿಕಾರ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್, ಹಾಲಿ ಆಡಳಿತ ಮಂಡಳಿಯ ಅಧಿಕಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಚೆನ್ನೈನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಕಾರ್ಯದರ್ಶಿ, ಅಧ್ಯಕ್ಷರು, ಧಾರವಾಡ ಪ್ರಾಂತೀಯ ಸಭಾ ಕಾರ್ಯದರ್ಶಿ ಮತ್ತು ವಿಶೇಷ ಕಾರ್ಯದರ್ಶಿಗೆ ತುರ್ತು ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.

ಎರಡು ಬಣಗಳ ಮಧ್ಯೆ ಶುರುವಾದ ತಿಕ್ಕಾಟ ನ್ಯಾಯಾಲಯದ ಆದೇಶದಂತೆ ಅಧಿಕಾರ ಬಿಡುವಂತೆ ಒಂದು ಬಣದವರು ಪ್ರತಿಪಾದಿಸಿದರು. ಆದರೆ ಇದಕ್ಕೆ ಒಪ್ಪದ ಹಾಲಿ ಆಡಳಿತ ಮಂಡಳಿ ಸದಸ್ಯರು ಕಚೇರಿಯಲ್ಲಿ ಆದೇಶದ ಪ್ರತಿ ನೀಡುವಂತೆ ಹೇಳಿದರು. ಅಲ್ಲದೇ ಚೆನ್ನೈನಿಂದ ಆದೇಶ ಬಂದ ಬಳಿಕ ಮುಂದಿನ ನಿರ್ಧಾರ ಅಲ್ಲಿಯವರೆಗೆ ನಾವೇನೂ ಹೇಳುವುದಿಲ್ಲ. ಆದ್ದರಿಂದ ಕಚೇರಿ ನಿಯಮದಂತೆ ಕಚೇರಿಯ ಟಪಾಲು ಕೌಂಟರ್‌ನಲ್ಲಿ ಆದೇಶದ ಪ್ರತಿ ನೀಡುವಂತೆ ಸೂಚಿಸಿದರು. ಆದರೆ ಇದಕ್ಕೆ ಪಟ್ಟು ಸಡಿಲಿಸದ ಒಂದು ಗುಂಪು ನೀವೇ ಪ್ರತಿ ಪಡೆಯಬೇಕು ಎಂದು ಪಟ್ಟು ಹಿಡಿದ ಪರಿಣಾಮ ಪರಸ್ಪರ ವಾಗ್ವಾದ ಆರಂಭವಾಯಿತು. ಈ ಹಿನ್ನೆಲೆಯಲ್ಲಿ ಎಸಿಪಿ ಅನುಷಾ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಗುಂಪುಗಳನ್ನು ಸಮಾಧಾನಪಡಿಸಲು ಯತ್ನಿಸಿದರು.

ಎರಡು ಪ್ರಮುಖ ಪಕ್ಷಗಳಿಗೆ ಪ್ರತಿಷ್ಠೆ ವಿಚಾರವಾದ ಪ್ರಚಾರ ಸಭೆ ಈ ಹಿಂದೆ ಮಾಜಿ ಸಚಿವ ವಿನಯ ಕುಲಕರ್ಣಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಧಾರವಾಡ ಕಚೇರಿಯ ಅಧ್ಯಕ್ಷರಾಗಿದ್ದರು. ನಂತರದ ದಿನಗಳಲ್ಲಿ ಇದಕ್ಕೆ ಕೇಂದ್ರ ಸರಕಾರ ಆಡಳಿತಾಧಿಕಾರಿ ನೇಮಿಸಿತು. ಕೆಲವೇ ದಿನಗಳ ಬಳಿಕ ಕೇಂದ್ರ ವಿದೇಶಾಂಗ ಇಲಾಖೆಯ ಹಾಲಿ ರಾಜ್ಯ ಸಚಿವ ವಿ.ಮುರಳೀಧರನ್ ಅಧ್ಯಕ್ಷರಾಗಿ ನೇಮಕವಾಗಿದ್ದರು. ಅವರ ಅಣತಿಯಂತೆ ಧಾರವಾಡ ಕಚೇರಿಗೆ ಬಿಜೆಪಿಯ ಈರೇಶ ಅಂಚಟಗೇರಿ ಅಧ್ಯಕ್ಷರಾಗಿ ಮತ್ತು ಸದಸ್ಯರಾಗಿ ಅರುಣ ಜೋಶಿ ಮತ್ತು ಎಂ.ಆರ್. ಪಾಟೀಲರನ್ನು ನೇಮಿಸಲಾಗಿತ್ತು. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಅಧಿಕಾರ ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿರೋದು ವಿಪರ್ಯಾಸವೇ ಸರಿ.

ನ್ಯಾಯಾಲಯದ ಆದೇಶವನ್ನು ಪಾಲಿಸಲೇಬೇಕು: ಶರಣಬಸವರಾಜ ಚೆಲುವಾದಿ ಈ ವೇಳೆ 13 ಜನ ಕಕ್ಷಿದಾರರೊಂದಿಗೆ ಹಿಂದಿ ಪ್ರಚಾರ ಸಭೆಯ ಕಚೇರಿಗೆ ಆಗಮಿಸಿದ ನ್ಯಾಯವಾದ ಶರಣಬಸವರಾ ಚೆಲುವಾದಿ, ನ್ಯಾಯಾಲಯದ ಆದೇಶದ ಪ್ರತಿಯನ್ನು ಸ್ವೀಕರಿಸುವಂತೆ ಪ್ರಚಾರ ಸಭೆ ಕಚೇರಿ ಸಿಬ್ಬಂದಿಗೆ ಹೇಳಿದರು. ಆದರೆ ಆದೇಶದ ಪ್ರತಿಯನ್ನು ಇನ್ವರ್ಡ್​ನಲ್ಲಿ ನೀಡುವಂತೆ ಪ್ರಚಾರ ಸಭೆಯ ನ್ಯಾಯವಾದಿಗಳು ಹೇಳಿದರು. ಇದರಿಂದಾಗಿ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ಉಂಟಾಯಿತು. ನೀವು ನ್ಯಾಯಾಲಯದ ಆದೇಶವನ್ನು ಪಡೆಯುತ್ತಿಲ್ಲವೆಂದರೆ ಹೇಗೆ? ಇದನ್ನು ನೀವು ಈಗಲೇ ಪಡೆದುಕೊಳ್ಳಬೇಕು ಅಂತಾ ಪಟ್ಟು ಹಿಡಿದರು. ಇದಕ್ಕೆ ಪ್ರಚಾರ ಸಭೆಯ ವಿಶೇಷ ಕಾರ್ಯದರ್ಶಿ ವಿರೋಧ ವ್ಯಕ್ತಪಡಿಸಿದರು. ನಮ್ಮ ಕಚೇರಿಯ ವ್ಯವಸ್ಥೆಯಂತೆಯೇ ನೀವು ಇನ್ವರ್ಡ್ನಲ್ಲಿ ಪ್ರತಿಯನ್ನು ನೀಡಬೇಕು ಎಂದು ಹೇಳಿದರು.

ಚೆನ್ನೈನಿಂದ ನಮಗೆ ಸೂಚನೆ ಬಂದ ಬಳಿಕ ಮುಂದಿನ ನಡೆ: ರಾಧಾಕೃಷ್ಣನ್ ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಚಾರ ಸಭೆಯ ಕಾರ್ಯದರ್ಶಿ ರಾಧಾಕೃಷ್ಣನ್, ನಮಗೆ ನಮ್ಮ ಕೇಂದ್ರ ಕಚೇರಿ ಚೆನ್ನೈನಿಂದ ಮಾಹಿತಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಈಗಂತೂ ಹೈಕೋರ್ಟ್ ಆದೇಶದ ಪ್ರತಿಯನ್ನು ಅಲ್ಲಿಗೆ ಕಳಿಸಲಾಗಿದೆ. ಮುಂದೆ ಏನು ಮಾಡಬೇಕು ಅನ್ನುವುದು ಅಲ್ಲಿಂದ ಬರುವ ಆದೇಶದ ಮೇಲೆ ನಿಂತಿದೆ ಎಂದು ತಿಳಿಸಿದರು.

ನರಸಿಂಹಮೂರ್ತಿ ಪ್ಯಾಟಿ ಟಿವಿ9, ಧಾರವಾಡ ಇದನ್ನೂ ಓದಿ: 

ಬೆಕ್ಕಿನ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಧಾರವಾಡದ ಪ್ರಾಣಿಪ್ರೇಮಿ ಸೋಮಶೇಖರ ಚೆನ್ನಶೆಟ್ಟಿ

17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದು