AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ: ಬಂಗಾರದ ಬೆಳೆ ಬೆಳೆದರೂ ಬೆಲೆ ಇಲ್ಲದೇ ಕಂಗಾಲು, ಸರ್ಕಾರಕ್ಕೂ ಬೇಡವಾದವೇ ಎಂದು ರೈತರ ಅಳಲು

ಹತ್ತಿ ಬೆಳೆ ಬೆಳೆಯುವುದು ಎಷ್ಟು ಸೂಕ್ಷ್ಮವೋ ಅಷ್ಟೇ ಒಳ್ಳೆಯ ಬೆಲೆ ಕೊಡಬಲ್ಲ ಬೆಳೆ. ಹೀಗಾಗಿಯೇ ಅನೇಕ ರೈತರು ವಾಣಿಜ್ಯ ಬೆಳೆಯಾದ ಹತ್ತಿಯನ್ನು ಬೆಳೆಯಲು ಬಯಸುತ್ತಾರೆ. ಇದೇ ಕಾರಣಕ್ಕೆ ಈ ಬೆಳೆಗೆ ಬಿಳಿ ಬಂಗಾರ ಎಂದು ಕರೆಯುತ್ತಾರೆ. ಆದರೆ ಇತ್ತೀಚಿಗೆ ಉತ್ತಮ ದರ ಹೊಂದಿದ್ದ ಹತ್ತಿ, ಇದೀಗ ಒಮ್ಮಿಂದೊಮ್ಮಲೇ ದರ ಬಿದ್ದಿದೆ. ಇದರಿಂದಾಗಿ ಧಾರವಾಡ ಜಿಲ್ಲೆಯ ಹತ್ತಿ ಬೆಳೆಗಾರರು ಕಂಗಾಲಾಗಿದ್ದಾರೆ.

ಧಾರವಾಡ: ಬಂಗಾರದ ಬೆಳೆ ಬೆಳೆದರೂ ಬೆಲೆ ಇಲ್ಲದೇ ಕಂಗಾಲು, ಸರ್ಕಾರಕ್ಕೂ ಬೇಡವಾದವೇ ಎಂದು ರೈತರ ಅಳಲು
ಹತ್ತಿ ಬೆಳೆ ಬೆಳೆದು ಸಂಕಷ್ಟಕ್ಕೆ ಸಿಲುಕಿದ ರೈತರು
ಕಿರಣ್ ಹನುಮಂತ್​ ಮಾದಾರ್
|

Updated on: Mar 14, 2023 | 9:50 AM

Share

ಧಾರವಾಡ: ಜಿಲ್ಲೆಯಲ್ಲಿ ಹತ್ತಿ ಕೂಡ ಒಂದು ಪ್ರಮುಖ ಬೆಳೆ. ಧಾರವಾಡ, ನವಲಗುಂದ, ಅಣ್ಣಿಗೇರಿ ತಾಲೂಕಿನ ಭಾಗದಲ್ಲಿ ಹತ್ತಿಯನ್ನ ಹೆಚ್ಚಾಗಿ ಬೆಳೆಯುತ್ತಾರೆ. ಕಳೆದ ವರ್ಷ ಪ್ರತಿ ಕ್ವಿಂಟಾಲ್​ಗೆ 12 ಸಾವಿರ ರೂಪಾಯಿಯವರೆಗೂ ಬೆಲೆಯಿತ್ತು. ಈ ವರ್ಷ ಅದು 14 ಸಾವಿರಕ್ಕೆ ಏರುವ ಸಾಧ್ಯತೆ ಇತ್ತು. ಆದರೆ ಇತ್ತೀಚೆಗೆ ಹತ್ತು ಸಾವಿರದವರೆಗೂ ಬಂದಿದ್ದ ಬೆಲೆ ಏಕಾಏಕಿಯಾಗಿ ಈಗ ಏಳು ಸಾವಿರಕ್ಕೆ ಕುಸಿದಿದೆ. ಈ ಕಾರಣದಿಂದಾಗಿ ಈಗ ರೈತರು ಹತ್ತಿಯನ್ನು ಬಿಡಿಸದೇ ಹಾಗೆಯೇ ಗದ್ದೆಯಲ್ಲಿಯೇ ಬಿಟ್ಟಿದ್ದಾರೆ. ಗದ್ದೆಯಲ್ಲಿಯೇ ಹತ್ತಿ ಬೆಳೆ ಹಾಳಾಗಿ ಹೋಗುತ್ತಿದೆ. ಹತ್ತಿ ಬೆಳೆಗೆ ಖರ್ಚು ಮಾಡಿರುವ ಹಣಕ್ಕೂ ಮತ್ತು ಇದೀಗ ಇದರಿಂದ ಬರೋ ಆದಾಯಕ್ಕೂ ತಾಳೆ ಹಾಕಿದರೆ ರೈತರಿಗೆ ತೀವ್ರ ನಷ್ಟವಾಗುತ್ತದೆ. ಹೀಗಾಗಿ ಸಾಕಷ್ಟು ಹಣ ಮೈಮೇಲೆ ಬರೋ ಸಾಧ್ಯತೆ ಇದೆ. ಜೊತೆಗೆ ಈಗ ಕಟಾವು ಮಾಡುವ ಕೂಲಿಗಾರರಿಗೆ ಹಣ ಕೊಡಲು ಸಾಲ ಮಾಡಬೇಕಾಗಿದೆ. ಹೀಗಾಗಿ ಹಾಗೆಯೇ ಬಿಟ್ಟಿದ್ದೇವೆ ಅನ್ನುತ್ತಾರೆ ರೈತರು.

ರೈತರಿಗೆ ಈ ಸಲ ಮಳೆ ಸಾಕಷ್ಟು ಕಾಟ ಕೊಟ್ಟಿತ್ತು. ಹೀಗಾಗಿ ಪ್ರತಿ ಎಕರೆಗೆ ಏನಿಲ್ಲವೆಂದರೂ ಸುಮಾರು 50 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. ಆದರೆ ಇಳುವರಿ ಮಾತ್ರ ಈ ಸಲ ಕಡಿಮೆ ಬಂದಿದೆ. ಪ್ರತಿ ಸಲ ಎಕರೆಗೆ 12 ಕ್ವಿಂಟಾಲ್​ವರೆಗೂ ಬರುತ್ತಿದ್ದ ಇಳುವರಿ ಈ ಸಲ 8 ಕ್ವಿಂಟಾಲ್​ಗೆ ಇಳಿದಿದೆ. ಆದರೆ ಈ ಸಮಯದಲ್ಲಿಯೇ ಏಕಾಏಕಿಯಾಗಿ ಬೆಲೆ ಕುಸಿದಿದೆ. ಸರ್ಕಾರದ ಬೆಂಬಲ ಬೆಲೆಯ ಖರೀದಿ ಕೇಂದ್ರದಲ್ಲಿಯೂ 8 ಸಾವಿರಕ್ಕಿಂತ ಹೆಚ್ಚು ಬೆಲೆ ಇಲ್ಲ. ಹೀಗಾಗಿ ಸರ್ಕಾರದ ಖರೀದಿ ಕೇಂದ್ರವೂ ನಮಗೆ ಉಪಯೋಗ ಆಗಿಲ್ಲ. ಹೀಗಾಗಿ ಸರ್ಕಾರಕ್ಕೂ ನಾವು ಬೇಡವಾಗಿ ಹೋಗಿದ್ದೇವೆ ಎಂಬುದು ರೈತರ ಅಳಲು.

ಇದನ್ನೂ ಓದಿ:ಹಾವೇರಿ: ಲಂಚ ಕೇಳಿದ ಪುರಸಭೆ ಅಧಿಕಾರಿಗೆ ಎತ್ತು, ಚಕ್ಕಡಿ ನೀಡಿದ ರೈತ

ಪ್ರತಿ ಬಾರಿಯೂ ಒಂದಿಲ್ಲ ಒಂದು ಸಮಸ್ಯೆಯಿಂದ ರೈತರು ಬಳಲುತ್ತಲೇ ಇದ್ದಾರೆ. ಒಂದು ಬಾರಿ ಅತಿವೃಷ್ಟಿಯಾದರೆ ಮತ್ತೊಮ್ಮೆ ಅನಾವೃಷ್ಟಿ. ಬೆಲೆ ಚೆನ್ನಾಗಿ ಇಲ್ಲ ಅನ್ನೋ ಕಾರಣಕ್ಕೆ ರೈತರು ನಿಸ್ಸಾಹಯಕರಾಗಿ ಹತ್ತಿ ಕಿತ್ತದೇ ಬಿಟ್ಟಿದ್ದಾರೆ. ಇದರಿಂದಾಗಿ ಅದು ಅಲ್ಲಿಯೇ ಹಾಳಾಗಿ ಹೋಗುತ್ತಿದ್ದು, ಮತ್ತೆ ರೈತರಿಗೆ ಹೊರೆಯಾಗೋದಂತೂ ಸತ್ಯ.

ವರದಿ: ನರಸಿಂಹಮೂರ್ತಿ ಪ್ಯಾಟಿ ಟಿವಿ9 ಧಾರವಾಡ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ