AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇದೆ ಎಂಬುದಕ್ಕೆ ಈ ಶಂಕುಸ್ಥಾಪನೆ ಸಾಕ್ಷಿ; ಬಿಜೆಪಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು

ಗ್ಯಾರಂಟಿ ಯೋಜನೆಗಳಿಗಾಗಿ ಹಣ ಮೀಸಲಿಟ್ಟ ನಂತರ ಅಭಿವೃದ್ಧಿಗೆ ಅನುದಾನ ನೀಡಲು, ಸರ್ಕಾರಿ ನೌಕರರಿಗೆ ವೇತನ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದು ವಿಪಕ್ಷ ಬಿಜೆಪಿ ಆರೋಪಿಸುತ್ತಿದೆ. ಈ ಆರೋಪಕ್ಕೆ ಧಾರವಾಡದಲ್ಲಿ ನಡೆದ ಗ್ಯಾರಂಟಿ ಸಮಾವೇಶದಲ್ಲಿ ತಿರುಗೇಟು ಕೊಟ್ಟ ಸಿದ್ದರಾಮಯ್ಯ, ಸರ್ಕಾರದ ಬಳಿ ಅಭಿವೃದ್ಧಿಗೆ ಹಣವಿದೆ ಎಂಬುದಕ್ಕೆ ಈ ಶಂಕುಸ್ಥಾಪನೆ ಸಾಕ್ಷಿ ಎಂದರು. ಅಲ್ಲದೆ, ಬಿಜೆಪಿ ಆರೋಪಗಳಲ್ಲಿ ಹುರುಳಿಲ್ಲ ಎಂದರು.

ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇದೆ ಎಂಬುದಕ್ಕೆ ಈ ಶಂಕುಸ್ಥಾಪನೆ ಸಾಕ್ಷಿ; ಬಿಜೆಪಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು
ಧಾರವಾಡದ ನವಲಗುಂದದ ಮಾಡಲ್ ಹೈಸ್ಕೂಲ್​ನಲ್ಲಿ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣ
TV9 Web
| Updated By: Rakesh Nayak Manchi|

Updated on: Feb 24, 2024 | 7:32 PM

Share

ಧಾರವಾಡ, ಫೆ.24: ಸರ್ಕಾರದ ಬಳಿ ಅಭಿವೃದ್ಧಿಗೆ ಹಣವಿದೆ ಎಂಬುದಕ್ಕೆ ಈ ಶಂಕುಸ್ಥಾಪನೆ ಸಾಕ್ಷಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಅಭಿವೃದ್ಧಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ಕೊಟ್ಟರು. ಧಾರವಾಡ (Dharwad) ಜಿಲ್ಲೆ ನವಲಗುಂದದ ಮಾಡಲ್ ಹೈಸ್ಕೂಲ್​ನಲ್ಲಿ ನಡೆದ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಗ್ಯಾರಂಟಿ ಸಮಾವೇಶ (Guarantee Convention) ಉದ್ಘಾಟಿಸಿದ ಸಿದ್ದರಾಮಯ್ಯ ಅವರು, ಫಲಾನುಭವಿಗಳಿಗೆ ಆಶ್ರಯ ಯೋಜನೆ ಮನೆಗಳ ಹಕ್ಕು ಪತ್ರ ವಿತರಣೆ ಮಾಡಿದರು.

ಭಾಷಣಕ್ಕೂ ಮುನ್ನ ಸಿದ್ದರಾಮಯ್ಯ ಅವರು ವೇದಿಕೆ ಮೇಲಿದ್ದವರನ್ನು ಕೆಳಗಿಳಿಯುವಂತೆ ದಬಾಯಿಸಿದರು. ಬಳಿಕ ಮಾತನಾಡಿದ ಅವರು, ನವಲಗುಂದ ವಿಧಾನಸಭಾ ಕ್ಷೇತ್ರದ ಅನೇಕ ಯೋಜನೆಗೆ ಚಾಲನೆ ಕೊಟ್ಟಿದ್ದೇವೆ. ಗ್ಯಾರಂಟಿ ಜಾರಿ ಮಾಡಿರುವ ಕಾರಣಕ್ಕೆ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಹಣ ಇರದ ಕಾರಣ ಅಭಿವೃದ್ಧಿ ಮಾಡುತ್ತಿಲ್ಲ ಎನ್ನುತ್ತಿದ್ದಾರೆ. ಇವತ್ತು ನಿಮ್ಮ ಕಣ್ಮುಂದೆ ಕೋಟ್ಯಾಂತರ ರೂಪಾಯಿ ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದೇವೆ. ಅಭಿವೃದ್ಧಿ ಕೆಲಸ ಆಗುತ್ತಿವೆ ಅನ್ನೋದಕ್ಕೆ ಈ ಕಲ್ಲುಗಳೇ ಸಾಕ್ಷಿ ಎಂದರು.

ಕೇವಲ ರಾಜಕೀಯಕ್ಕೆ ಬಿಜೆಪಿ ಆರೋಪ ಮಾಡುತ್ತಿದೆ. ಆರೋಪದಲ್ಲಿ ಸತ್ಯ ಇಲ್ಲ, ಹುರುಳಿಲ್ಲ ಎಂದು ನಾನು ಸ್ಪಷ್ಟ ಪಡಿಸುತ್ತಿದ್ದೇನೆ ಎಂದು ಹೇಳಿದ ಸಿದ್ದರಾಮಯ್ಯ, 1385 ಫಲಾನುಭವಿಗಳಿಗೆ ವಸತಿ ಹಕ್ಕು ಪತ್ರ ನೀಡಿದ್ದೇವೆ. ಇದು ಅಭಿವೃದ್ಧಿ ಹೌದೋ ಅಲ್ವೋ ನೀವೇ ತೀರ್ಮಾನ ಮಾಡಿ ಎಂದರು.

ಕೋನರೆಡ್ಡಿ ಕ್ರೀಯಾಶೀಲ ಶಾಸಕ. ಹಿಂದೆ ಕೋನರೆಡ್ಡಿ ಜೆಡಿಎಸ್​ನಲ್ಲಿದ್ದರೂ ನನ್ನಿಂದ ಅನೇಕ ಕೆಲಸ ಮಾಡಿಸಿದ್ದಾರೆ. 3000 ಕೋಟಿಯಷ್ಟು ನನ್ನಿಂದ ಕೋನರೆಡ್ಡಿ ಕೆಲಸ ಮಾಡಿಸಿದ್ದಾರೆ. ನಾವು ಬಡವರು, ದಲಿತರ ಪರ ಕಾರ್ಯಕ್ರಮ ‌ಕೊಟ್ಟಿದ್ದೇವೆ. ನಾನು ಹಿಂದೆ ಮುಖ್ಯಮಂತ್ರಿ ಇದ್ದಾಗಲೂ ಅನೇಕ ಕಾರ್ಯಕ್ರಮ‌ ಕೊಟ್ಟಿದ್ದೇನೆ. ನುಡದಂತೆ ನಡೆದಿದ್ದು ಕಾಂಗ್ರೆಸ್ ಸರ್ಕಾರ ಮಾತ್ರ. ಬಿಜೆಪಿ ಯಾವತ್ತೂ ಕೊಟ್ಟ ಮಾತಿನಂತೆ ನಡಕೊಂಡಿಲ್ಲ ಎಂದರು.

ಇದನ್ನೂ ಓದಿ: ಶಿವಮೊಗ್ಗ: ಗ್ಯಾರಂಟಿ ಫಲಾಮಿಭವಿಗಳ ಸಮಾವೇಶದಲ್ಲಿ ಜೆಡಿಎಸ್ ಶಾಸಕಿ ಕಾಂಗ್ರೆಸ್ ನಾಯಕರೊಂದಿಗೆ ಆತ್ಮೀಯವಾಗಿ ಹರಟಿದರು!

ಬಿಜೆಪಿ 600 ಭರವಸೆ ಕೊಟ್ಟಿದ್ದರು, ಅದರಲ್ಲಿ 60 ಭರವಸೆ ಈಡೇರಿಸಲಿಲ್ಲ. ಈ ಸಾರಿ ನಾವು ಐದು ಗ್ಯಾರಂಟಿ ಘೋಷಣೆ ಮಾಡಿದ್ದೆವು. ಅಧಿಕಾರಕ್ಕೆ ಬಂದರೆ ಜಾರಿ ಮಾಡುತ್ತೇವೆ ಎಂದಿದ್ದೆವು. ಅದರಂತೆ ನಾವು ಅಧಿಕಾರಕ್ಕೆ ಬಂದು 9 ತಿಂಗಳು ಆಗಿದೆ. 8 ತಿಂಗಳಲ್ಲಿ ಐದು ಗ್ಯಾರಂಟಿ ಕೊಟ್ಟಿದ್ದೇವೆ ಎಂದರು.

ಮಹಿಳೆಯರಿಗೆ ರಾಜ್ಯದಲ್ಲಿ ಟಿಕೆಟ್ ರಹಿತ ಪ್ರಯಾಣ ಘೋಷಣೆ ಮಾಡಿದ್ದೆವು. ಇವತ್ತಿನವರೆಗೂ 160 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಕರ್ನಾಟಕದಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಫ್ರೀಯಾಗಿ ಓಡಾಡುವಂತೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಬಿಜೆಪಿ ಗ್ಯಾರಂಟಿ ಕೊಟ್ಟರೆ ಆರ್ಥಿಕ ದಿವಾಳಿ ಅಂತಾರೆ. ದಿವಾಳಿಯಾಗಿದ್ದರೆ ನಾವು 150 ಕೋಟಿ ಯೋಜನೆಗೆ ಚಾಲನೆ ಕೊಡಲು ಸಾಧ್ಯ ಇತ್ತಾ ಎಂದು ಕೇಳಿದರು.

ನಮಗೆ ಪ್ರೇರಣೆ ಬಸವಾದಿ ಶರಣರು. ನಮಗೆ ಅದರಲ್ಲಿ ನಂಬಿಕೆ ಇದೆ. ನಾವು ಚಾಚೂ ತಪ್ಪದೆ ಬಸವಾದಿ ಶರಣರ ತತ್ವ ಪಾಲನೆ ಮಾಡುತ್ತಿದ್ದೇವೆ. ಇವತ್ತು ಐದು ಗ್ಯಾರಂಟಿ ಜಾರಿಯಾಗಿವೆ. ಒಂದು ಕೋಟಿ ಇಪ್ಪತ್ತು ಲಕ್ಷ ಕುಟುಂಬಗಳಿಗೆ ನಾಲ್ಕರಿಂದ ಐದು ಸಾವಿರ ಕೊಟ್ಟಿದ್ದು ನಮ್ಮ ಸರ್ಕಾರ. ಐದು ಕೆಜಿ ಅಕ್ಕಿ ಬದಲಿಗೆ 170 ರೂಪಾಯಿ ಕೊಡುತ್ತಿದ್ದೇವೆ. ಯುವನಿಧಿ ಯೋಜನೆಯಲ್ಲಿ ಹಣ ಕೊಡುತ್ತಿದ್ದೇವೆ. ಎಲ್ಲಕ್ಕಿಂತ ವಿಶೇಷ ಅಂದರೆ ಯಾವ ಕಾರ್ಯಕ್ರಮದಲ್ಲಿ ಮದ್ಯವರ್ತಿಗಳಿಲ್ಲ. ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಹಾಕುತ್ತಿದ್ದೇವೆ ಎಂದರು.

ಅಕ್ಕಿ ಕೊಡಲು ನಮಗೆ ಕೇಂದ್ರ ಸರ್ಕಾರ ಅಡ್ಡಿ ಬಂತು. ದುಡ್ಡು ಕೊಡುತ್ತೇವೆ ಅಂದರೂ ಅಕ್ಕಿ ಕೊಡಲಿಲ್ಲ. ನಾವೇನು ಫ್ರೀಯಾಗಿ ಕೇಳಿರಲಿಲ್ಲ. ಹಿಂದೆ ಯಾವಗಾದರೂ ಇಂತಹ ಕಾರ್ಯಕ್ರಮ‌ ಇದ್ದವಾ? 36 ಸಾವಿರ ಕೋಟಿ ಹಣ ಗ್ಯಾರಂಟಿಗೆ ಖರ್ಚು ಮಾಡಿದ್ದೇವೆ. ಮುಂದಿನ ವರ್ಷ 52 ಸಾವಿರ 9 ಕೋಟಿ ಇಟ್ಟಿದ್ದೇವೆ. ಕಳೆದ ಬಜೆಟ್​ಗೂ ಮುಂದಿನ ವರ್ಷದ ಬಜೆಟ್​ಗೂ 43 ಸಾವಿರ ಕೋಟಿ ವ್ಯತ್ಯಾಸ ಇದೆ ಎಂದರು.

ನಾವ ಜನರಿಗೆ ವರದಿ ಕೊಡಬೇಕು, ಜನರೇ ನಮಗೆ ಮಾಲೀಕರು. ವಿರೋಧ ಪಕ್ಷದವರು ಅಲ್ಲ, ನೀವು ನಮಗೆ ಆಶೀರ್ವಾದ ಮಾಡುವವರು. ಚುನಾವಣೆಗೆ ಮುನ್ನ ಕಾಂಗ್ರೆಸ್ ಆಶೀರ್ವಾದ ಮಾಡಿ ಎಂದು ಇದೇ ಮೈದಾನದಲ್ಲಿ ಭಾಷಣ ಮಾಡಿದ್ದೆ. ನೀವೆಲ್ಲ ಕೋನರೆಡ್ಡಿ ಗೆಲ್ಲಿಸಿದ್ದಕ್ಕೆ ಕೋಟಿ ಕೋಟಿ ನಮಸ್ಕಾರ ಎಂದರು.

ಕೋಲೆ ಬಸವನ ರೀತಿ ತಲೆ ಅಲ್ಲಾಡಿಸುವ ಬಿಜೆಪಿ

ಬಿಜೆಪಿಯವರು ಕೋಲೆ ಬಸವನ ತರಹ ಆಗಿದ್ದಾರೆ. ಸೀತೆ ಮದುವೆ ಆಗ್ತೀ ಅಂದ್ರೆ ಹು ಅಂತಾರೆ ಬೇಡ ಅಂದ್ರೆ ಬೇಡ ಎಂದು ತಲೆ ಅಲ್ಲಾಡಸ್ತಾರೆ. ಮೋದಿ, ಅಮಿತ್ ಶಾ ಹೇಳಿದಾಗ ಕೋಲೆ ಬಸವನ ರೀತಿ ತಲೆ ಅಲ್ಲಾಡಿಸುತ್ತಾರೆ ಎಂದರು.

ಸಮಾವೇಶದಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ತಂದೆಯ ಸಮಾನರು ಎಂದರು. ಶಕ್ತಿ ಯೋಜನೆಯಲ್ಲಿ ಈವರೆಗೆ ಜಿಲ್ಲೆಯ 7.39 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಬಸವಣ್ಣರನ್ನು ಸಾಂಸ್ಕೃತಿಕ ರಾಯಭಾರಿಯಾಗಿ ಮಾಡಿದ್ದಕ್ಕೆ ಅಭಿನಂದನೆ. ಬಡವರಿಗೆ 58 ಸಾವಿರ ಕೋಟಿ ಹಣ ಕೊಟ್ಟ ಯಾವ ಸಿಎಂ ಕೂಡ ಇಲ್ಲ. ಸರ್ಕಾರ ಬೀಳಿಸಲು‌ ಬಿಜೆಪಿ ಹುನ್ನಾರ ಮಾಡುತ್ತಿದೆ. ನಿಮ್ಮ ಆಶೀರ್ವಾದ ಇರುವವರೆಗೂ ನಮ್ಮ ಸರ್ಕಾರ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ