ಕೊನೆಗೂ ಪ್ರಜ್ಞೆ ಕಳೆದುಕೊಂಡು ಬಲೆಗೆ ಬಿದ್ದ ಹುಚ್ಚು ಮಂಗ!
ಧಾರವಾಡ: ನಗರದಲ್ಲಿ ಭಾರೀ ಆತಂಕ ಸೃಷ್ಟಿಸಿದ್ದ ಮಂಗವೊಂದು ಕೊನೆಗೂ ಬಲೆಗೆ ಬಿದ್ದಿದೆ. ನಿರಂತರವಾದ ಕಾರ್ಯಾಚರಣೆ ಬಳಿಕ ಮಂಗವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಯಶಸ್ವಿಯಾಗಿದ್ದಾರೆ. ಒಂದೆರಡು ವಾರಗಳಿಂದ ನಗರದ ವಿವಿಧ ಬಡಾವಣೆಗಳಲ್ಲಿ ಈ ಮಂಗ ಹಾವಳಿ ನಡೆಸಿತ್ತು. ಅನೇಕರಿಗೆ ಕಚ್ಚಿ ಗಾಯಗೊಳಿಸಿತ್ತು. ಇದರಿಂದ ಆತಂಕಗೊಂಡ ಜನರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಆರಂಭದಲ್ಲಿ ಇದನ್ನು ಇಲಾಖೆಯವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಒಂದೆರಡು ದಿನ ಇದ್ದು ಎಲ್ಲಿಗಾದರೂ ಹೋಗುತ್ತೆ ಅಂತಾ ನಿರ್ಲಕ್ಷಿಸಿದ್ದರು. ಆದರೆ ಯಾವಾಗ ಮಂಗ […]

ಧಾರವಾಡ: ನಗರದಲ್ಲಿ ಭಾರೀ ಆತಂಕ ಸೃಷ್ಟಿಸಿದ್ದ ಮಂಗವೊಂದು ಕೊನೆಗೂ ಬಲೆಗೆ ಬಿದ್ದಿದೆ. ನಿರಂತರವಾದ ಕಾರ್ಯಾಚರಣೆ ಬಳಿಕ ಮಂಗವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಯಶಸ್ವಿಯಾಗಿದ್ದಾರೆ. ಒಂದೆರಡು ವಾರಗಳಿಂದ ನಗರದ ವಿವಿಧ ಬಡಾವಣೆಗಳಲ್ಲಿ ಈ ಮಂಗ ಹಾವಳಿ ನಡೆಸಿತ್ತು. ಅನೇಕರಿಗೆ ಕಚ್ಚಿ ಗಾಯಗೊಳಿಸಿತ್ತು.
ಇದರಿಂದ ಆತಂಕಗೊಂಡ ಜನರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಆರಂಭದಲ್ಲಿ ಇದನ್ನು ಇಲಾಖೆಯವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಒಂದೆರಡು ದಿನ ಇದ್ದು ಎಲ್ಲಿಗಾದರೂ ಹೋಗುತ್ತೆ ಅಂತಾ ನಿರ್ಲಕ್ಷಿಸಿದ್ದರು. ಆದರೆ ಯಾವಾಗ ಮಂಗ ಹುಚ್ಚು ಬಂದಂತೆ ವರ್ತಿಸಲು ಶುರು ಮಾಡಿತೋ ಆಗ ಅರಣ್ಯ ಇಲಾಖೆಯವರು ಇದನ್ನು ಗಂಭೀರವಾಗಿ ಪರಿಗಣಿಸಿದರು. ಕೂಡಲೇ ಅನೇಕ ಸಿಬ್ಬಂದಿ ಮಂಗವನ್ನು ಹಿಡಿಯಲು ಬಲೆ ಸಮೇತ ಬಂದರು.
ಶುಕ್ರವಾರ ಹಲವಾರು ಗಂಟೆ ಕಾರ್ಯಾಚರಣೆ ಮಾಡಲಾಯಿತು. ಮಂಗಕ್ಕಾಗಿ ಬಲೆ ಹಾಕಿ, ಅದರಲ್ಲಿ ಬಾಳೆ ಹಣ್ಣನ್ನು ಕೂಡ ಇಟ್ಟಿದ್ದರು. ಆದರೆ ಅಂದುಕೊಂಡಂತೆ ಅದರಲ್ಲಿ ಅವರು ಯಶಸ್ವಿಯಾಗಲಿಲ್ಲ. ಏಕೆಂದರೆ ಚಾಲಾಕಿ ಮಂಗ ಅತ್ತ ಸುಳಿಯಲೇ ಇಲ್ಲ. ಆದರೆ ಅದರ ಹುಚ್ಚಾಟ ಮಾತ್ರ ಕಡಿಮೆಯಾಗಿರಲಿಲ್ಲ. ಅಷ್ಟೊತ್ತಿಗೆ ಮಂಗ 30 ಕ್ಕೂ ಹೆಚ್ಚು ಜನರಿಗೆ ಕಚ್ಚಿಯಾಗಿತ್ತು. ಇದೇ ವೇಳೆ ಮಂಗದ ವರ್ತನೆಯನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಇದ್ಯಾಕೋ ಕೊಂಚ ಅತಿಯಾಗಿ ವರ್ತಿಸುತ್ತಿದೆ ಅನ್ನೋದನ್ನು ಮನಗಂಡರು. 
ಇದೇ ಕಾರಣಕ್ಕೆ ಎಷ್ಟೊತ್ತಿದ್ದರೂ ಮಂಗವನ್ನು ಹಿಡಿಯಲೇಬೇಕು ಅಂತಾ ನಿರ್ಧರಿಸಿದರು. ಬಲೆಯನ್ನು ವಿವಿಧ ಕಡೆಗಳಲ್ಲಿ ಹಾಕಿ ಅದರಲ್ಲಿ ಬಾಳೆ ಹಣ್ಣು ಇಟ್ಟತು. ಅಂದುಕೊಂಡಂತೆ ಮಂಗ ಬಾಳೆ ಹಣ್ಣನ್ನು ತಿನ್ನಲು ಹೋಗಿ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿತು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ನಿಟ್ಟುಸಿರು ಬಿಟ್ಟರು. ಆದರೆ ಆ ನೆಮ್ಮದಿ ಬಹಳ ಹೊತ್ತು ಉಳಿಯಲಿಲ್ಲ. ಏಕೆಂದರೆ ಮಂಗ ಒಂದಷ್ಟು ಹೊತ್ತು ಬಲೆಯಲ್ಲಿಯೇ ಇರಲಿ ಅಂತಾ ಬಿಟ್ಟಿದ್ದೇ ದೊಡ್ಡ ತಪ್ಪಾಗಿ ಪರಿಣಮಿಸಿತು. ಏಕೆಂದರೆ ಬಲೆಯೊಳಗೆ ಕೂತುಕೊಂಡು ಬಲೆಯನ್ನು ಕಚ್ಚಿ ಹಾಕಿದ ಮಂಗ ಕ್ಷಣಾರ್ಧದಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಓಡಿತು.
ಇದರಿಂದಾಗಿ ಆತಂಕ ಮತ್ತಷ್ಟು ಹೆಚ್ಚಾಯಿತು. ಶುಕ್ರವಾರ ರಾತ್ರಿಯಿಡೀ ಮಂಗವನ್ನು ಹಿಡಿಯಲು ಸ್ಥಳೀಯರು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಲೇ ಇಲ್ಲ. ಬದಲಿಗೆ ರಾತ್ರಿ ಮಂಗ ಮತ್ತೆ ಅನೇಕರನ್ನು ಅಟ್ಟಾಡಿಸಿಕೊಂಡು ಕಚ್ಚಿತು. ಬೆಳಿಗ್ಗೆ ಏಳೋ ಹೊತ್ತಿಗೆ ಈ ಮಂಗನಿಂದ ಕಚ್ಚಿಸಿಕೊಂಡವರ ಸಂಖ್ಯೆ 50 ರ ಗಡಿಯನ್ನು ದಾಟಿತು. ಹೀಗಾಗಿ ಕೊನೆಗೆ ಮಂಗವನ್ನು ಹಿಡಿಯದಿದ್ದಲ್ಲಿ ಸ್ಥಳೀಯರು ಅದನ್ನು ಕೊಂದೇ ಹಾಕುತ್ತಾರೆ ಅನ್ನೋದು ಅರಣ್ಯ ಇಲಾಖೆ ಸಿಬ್ಬಂದಿಗೆ ಗೊತ್ತಾಗಿ ಹೋಗಿತ್ತು.
ಈ ಹಿನ್ನೆಲೆಯಲ್ಲಿ ಮತ್ತೆ ಕಾರ್ಯಾಚರಣೆ ಆರಂಭಿಸಲಾಯಿತು. ಈ ಬಾರಿ ಕಾರ್ಯಾಚರಣೆಯ ಶೈಲಿಯನ್ನು ಬದಲಾಯಿಸಿಕೊಳ್ಳಲಾಯಿತು. ಮಂಗಕ್ಕೆ ಅರವಳಿಗೆ ಮದ್ದನ್ನು ನೀಡಿ ಹಿಡಿಯೋದಕ್ಕೆ ಯೋಜನೆ ರೂಪಿಸಲಾಯಿತು. ಒಂದು ಪ್ರದೇಶದಿಂದ ಒಂದು ಪ್ರದೇಶಕ್ಕೆ ಕ್ಷಣಾರ್ಧದಲ್ಲಿ ಓಡಿ ಹೋಗುತ್ತಿದ್ದ ಮಂಗಕ್ಕೆ ಅರವಳಿಗೆ ಚುಚ್ಚು ಮದ್ದು ಹೊಡೆಯೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆದರೆ ಗದಗ್ ಜಿಲ್ಲೆಯ ಬಿಂಕದಕಟ್ಟೆ ಮೃಗಾಲಯದಿಂದ ಬಂದಿದ್ದ ಅರವಳಿಗೆ ತಜ್ಞರು ಅದಕ್ಕೆ ಚುಚ್ಚು ಮದ್ದು ಹೊಡೆಯೋದರಲ್ಲಿ ಯಶಸ್ವಿಯಾದರು.
ಚುಚ್ಚು ಮದ್ದಿನ ಬುಲೆಟ್ ಹೊಡೆಯುತ್ತಿದ್ದಂತೆಯೇ ಕೆಲವೇ ನಿಮಿಷಗಳಲ್ಲಿ ಮಂಗ ಮಂಪರಿನಿಂದ ಮಲಗಿತು. ಕೂಡಲೇ ಅದನ್ನು ಸೆರೆ ಹಿಡಿದ ಸಿಬ್ಬಂದಿ, ಅದಕ್ಕೆ ಆರೈಕೆ ಮಾಡಿದರು. ಬಳಿಕ ಅದನ್ನು ಅರಣ್ಯಕ್ಕೆ ಬಿಟ್ಟು ಬಂದರು. ಒಟ್ಟಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮಂಗವನ್ನು ಸೆರೆ ಹಿಡಿದಿದ್ದು ಜನರ ನೆಮ್ಮದಿಗೆ ಕಾರಣವಾಗಿದ್ದಂತೂ ಸತ್ಯ.
Published On - 6:10 pm, Sat, 30 May 20




