ಧಾರವಾಡ: ಪ್ರಿಯದರ್ಶಿನಿ ಆತ್ಮಹತ್ಯೆ ಕೇಸ್: ಆಸ್ಟ್ರೇಲಿಯಾ ಸುಪರ್ದಿಯಲ್ಲಿರುವ ಮಕ್ಕಳನ್ನು ಬಿಡಿಸಲು ಮುಂದಾದ ಕೇಂದ್ರ ಸರ್ಕಾರ
ಆಸ್ಟ್ರೇಲಿಯಾದಿಂದ ಬಂದು ಮಲಪ್ರಭಾ ನದಿಗೆ ಹಾರಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ತನ್ನ ಇಬ್ಬರು ಮಕ್ಕಳನ್ನು ಸುಪರ್ದಿಯಲ್ಲಿಟ್ಟುಕೊಂಡಿದ್ದ ಆಸ್ಟ್ರೇಲಿಯಾ ಸರಕಾರದ ವತಿಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೇ ಇರೋದಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೀಗ ಆಕೆಯ ಕುಟುಂಬಸ್ಥರ ಸಹಾಯಕ್ಕೆ ಕೇಂದ್ರ ಸರಕಾರ ಮುಂದಾಗಿದೆ.
ಧಾರವಾಡ, ಡಿಸೆಂಬರ್ 10: ಆಗಸ್ಟ್ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಧಾರವಾಡ ಮೂಲದ ಅನಿವಾಸಿ ಮಹಿಳೆ ಪ್ರಿಯದರ್ಶಿನಿ (Priyadarshini) ಪ್ರಕರಣದ ದೇಶಾದ್ಯಂತ ಸದ್ದು ಮಾಡಿತ್ತು. ಆಸ್ಟ್ರೇಲಿಯಾದಿಂದ ಬಂದು ಮಲಪ್ರಭಾ ನದಿಗೆ ಹಾರಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ತನ್ನ ಇಬ್ಬರು ಮಕ್ಕಳನ್ನು ಸುಪರ್ದಿಯಲ್ಲಿಟ್ಟುಕೊಂಡಿದ್ದ ಆಸ್ಟ್ರೇಲಿಯಾ ಸರಕಾರದ ವತಿಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೇ ಇರೋದಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೀಗ ಆಕೆಯ ಕುಟುಂಬಸ್ಥರ ಸಹಾಯಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಅದರಲ್ಲೂ ಧಾರವಾಡದ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಯತ್ನದಿಂದಾಗಿ ವಿದೇಶಾಂಗ ಸಚಿವ ಜೈಶಂಕರ್ ಇದೀಗ ಮಧ್ಯಸ್ಥಿಕೆ ವಹಿಸಿಕೊಂಡಿದ್ದಾರೆ.
ಧಾರವಾಡದ ಎಸ್.ಎಸ್. ದೇಸಾಯಿ ಹಾಗೂ ಶೋಭಾ ದೇಸಾಯಿ ದಂಪತಿಯ ಮಗಳಾಗಿದ್ದ ಪ್ರಿಯದರ್ಶಿನಿ ಅವರನ್ನು ಕಲ್ಯಾಣ ನಗರ ಬಡಾವಣೆಯ ಲಿಂಗರಾಜ್ ಪಾಟೀಲ್ ಅನ್ನೋರೊಂದಿಗೆ ಮದುವೆಯಾಗಿತ್ತು. ಬಳಿಕ ಇಬ್ಬರೂ ಇಂಜಿನೀಯರ್ ಆಗಿದ್ದರಿಂದ ಆಸ್ಟ್ರೇಲಿಯಾಕ್ಕೆ ಹೋಗಿ ನೆಲೆಸಿದ್ದರು. ಅಲ್ಲಿಯೇ ಈ ದಂಪತಿಗೆ ಎರಡು ಮಕ್ಕಳು ಜನಿಸಿದ್ದರು. ಮಕ್ಕಳು ಅಲ್ಲಿಯೇ ಜನಿಸಿದ್ದರಿಂದ ಅಲ್ಲಿನ ಪೌರತ್ವ ಸಿಕ್ಕಿತ್ತು. ಇದೀಗ ಮಗ ಅಮರ್ತ್ಯನಿಗೆ 17 ವರ್ಷ, ಮಗಳು ಅಪರಾಜಿತಾಳಿಗೆ 13 ವರ್ಷ ವಯಸ್ಸು. ಅಮರ್ತ್ಯನ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದರಿಂದ ಅಲ್ಲಿನ ವೈದ್ಯರಿಗೆ ತೋರಿಸಲಾಗಿತ್ತು. ಆಗ ವೈದ್ಯರು ನೀಡಿದ್ದ ಔಷಧಗಳಿಂದಾಗಿ ಅಡ್ಡಪರಿಣಾಮ ಬೀರಿತ್ತು.
ಇದನ್ನೂ ಓದಿ: ಧಾರವಾಡ: ಆಸ್ಟ್ರೇಲಿಯಾದಿಂದ ಬಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ; ಆಕೆ ಬರೆದ ಡೆತ್ನೋಟ್ನಲ್ಲಿ ಏನಿದೆ?
ಇದನ್ನು ಪ್ರಶ್ನಿಸಿ ಸಂಬಂಧಿಸಿದವರ ವಿರುದ್ಧ ಪ್ರಿಯದರ್ಶಿನಿ ದೂರು ನೀಡಿದ್ದರು. ಹೀಗೆ ದೂರು ನೀಡಿದ್ದೇ ಪ್ರಿಯದರ್ಶಿನಿ ಕುಟುಂಬಕ್ಕೆ ಮುಳುವಾಗಿ ಹೋಗಿತ್ತು. ತಮ್ಮ ವಿರುದ್ಧವೇ ದೂರು ನೀಡಿದ್ದರಿಂದ ನಿರಂತರವಾಗಿ ಇವರ ವಿರುದ್ಧವೇ ಷಡ್ಯಂತ್ರ ಶುರುವಾಗಿ, ನೀವೇ ಮಕ್ಕಳನ್ನು ಸರಿಯಾಗಿ ನೋಡಿಕೊಂಡಿಲ್ಲ ಅಂತಾ ಕಿರುಕುಳ ಮಾಡೋದು ಶುರುವಾಗಿತ್ತು. ಅಷ್ಟೇ ಅಲ್ಲ ಅಲ್ಲಿನ ಸರಕಾರ ಮಕ್ಕಳನ್ನು ತಮ್ಮ ಸುಪರ್ದಿಯಲ್ಲಿಯೇ ಇಟ್ಟುಕೊಂಡಿತ್ತು. ಮಕ್ಕಳನ್ನು ಬಿಡಿಸಿಕೊಳ್ಳಲಾಗದೇ ಮನನೊಂದಿದ್ದ ಆಗಸ್ಟ್ 19, 2023 ರಂದು ಪ್ರಿಯದರ್ಶಿನಿ ಭಾರತಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅವರ ಮಕ್ಕಳನ್ನು ಕರೆ ತರಲು ಕೇಂದ್ರ ಸರಕಾರ ಮುಂದಾಗಿದೆ.
ಘಟನೆ ನಡೆದ ಕೂಡಲೇ ಇಡೀ ದೇಶಾದ್ಯಂತ ಈ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಅಲ್ಲದೇ ಕೇಂದ್ರ ಸಚಿವ ಹಾಗೂ ಧಾರವಾಡದ ಸಂಸದ ಪ್ರಲ್ಹಾದ ಜೋಶಿ ಧಾರವಾಡದ ಸಪ್ತಾಪುರ ಬಡಾವಣೆಯ ಪ್ರಿಯದರ್ಶಿನಿ ಅವರ ತಂದೆ-ತಾಯಿಯ ಮನೆಗೆ ಭೇಟಿ ನೀಡಿ, ಸಹಾಯ ಮಾಡೋದಾಗಿ ಹೇಳಿದ್ದರು. ಅಲ್ಲದೇ ಅದೇ ದಿನ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಫೋನ್ ಮಾಡಿ, ಈ ಬಗ್ಗೆ ಮಾಹಿತಿ ನೀಡಿದ್ದರು.
ಈ ಮಧ್ಯೆ ಅಲ್ಲಿನ ಸರಕಾರ ಮಕ್ಕಳನ್ನು ತಂದೆ ಸುಪರ್ದಿಗೆ ವಹಿಸಿದೆಯಾದರೂ ಸಂಪೂರ್ಣ ನಿಗಾ ಕೂಡ ಇರಿಸಿದೆ. ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಸರಕಾರವೇ ನೋಡಿಕೊಳ್ಳುತ್ತಿದೆ. ಈ ಮಧ್ಯೆ ಕಳೆದ ವಾರ ಪ್ರಿಯದರ್ಶಿನಿ ಕುಟುಂಬದವರನ್ನು ಜೋಶಿಯವರು ದೆಹಲಿಯ ತಮ್ಮ ನಿವಾಸಕ್ಕೆ ಕರೆಯಿಸಿಕೊಂಡು, ಅಲ್ಲಿಯೇ ಜೈಶಂಕರ್ ಅವರೊಂದಿಗೆ ಭೇಟಿ ಮಾಡಿಸಿದ್ದಾರೆ. ಈ ವೇಳೆ ಆಸ್ಟ್ರೇಲಿಯಾ ಸರಕಾರದೊಂದಿಗೆ ಜೈಶಂಕರ್ ಮಾತುಕತೆ ನಡೆಸಿದ ಪರಿಣಾಮವಾಗಿ ಇದೀಗ ಇಬ್ಬರು ಮಕ್ಕಳನ್ನು ಅವರ ಅಜ್ಜ-ಅಜ್ಜಿ ಸುಪರ್ದಿಗೆ ನೀಡೋ ಕುರಿತು ಪ್ರಕ್ರಿಯೆಗಳು ಆರಂಭವಾಗಿದೆ.
ಆಸ್ಟ್ರೇಲಿಯಾ ಸರಕಾರ ಭಾರತ ಮೂಲದ ಸರಕಾರೇತರ ಸಂಸ್ಥೆಯೊಂದಕ್ಕೆ ಈ ಕುಟುಂಬದ ಸಂಪೂರ್ಣ ಮಾಹಿತಿ ಕಲೆ ಹಾಕಿ ವರದಿ ನೀಡುವಂತೆ ಜವಾಬ್ದಾರಿ ನೀಡಿದೆ. ಇದೇ ಡಿಸೆಂಬರ್ 16 ರಂದು ಆ ಸಂಸ್ಥೆಯ ಪ್ರತಿನಿಧಿಗಳು ಬಂದು ಮಾಹಿತಿ ಕಲೆ ಹಾಕಲಿದ್ದಾರೆ. ಇನ್ನು ಕೇಂದ್ರ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರೋದ್ರಿಂದ ಪ್ರಿಯದರ್ಶಿನಿ ಅವರ ಕುಟುಂಬದವರಲ್ಲಿ ಹೊಸ ಆಶಾಭಾವನೆ ಮೂಡಿದೆ.
ಸ್ವತಃ ವಿದೇಶಾಂಗ ಸಚಿವರೇ ಈ ಪ್ರಕರಣದಲ್ಲಿ ಮುತುವರ್ಜಿ ವಹಿಸಿರೋದ್ರಿಂದಾಗಿ ಪ್ರಿಯದರ್ಶಿನಿ ಅವರ ಕುಟುಂಬಕ್ಕೆ ಧೈರ್ಯ ಬಂದಿದೆ. ಆದರೆ ಆಸ್ಟ್ರೇಲಿಯಾದಿಂದ ಮಕ್ಕಳನ್ನು ಭಾರತಕ್ಕೆ ಮರಳಿ ಕರೆ ತರೋದು ಅಷ್ಟು ಸುಲಭದ ಮಾತಲ್ಲ. ಆದರೂ ಪ್ರಲ್ಹಾದ ಜೋಶಿ ಹಾಗೂ ಜೈಶಂಕರ್ ಅವರು ಈ ಪ್ರಕರಣದಲ್ಲಿ ಮುತುವರ್ಜಿ ವಹಿಸಿರೋದ್ರಿಂದ ಅದು ಕಷ್ಟಕರವಲ್ಲ ಅನ್ನೋ ಮಾತು ಕೂಡ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಮಗಳನ್ನು ಕಳೆದುಕೊಂಡ ದೇಸಾಯಿ ದಂಪತಿಗೆ ಇದೀಗ ಮೊಮ್ಮಕ್ಕಳು ಸಿಕ್ಕರೆ ಇಳಿವಯಸ್ಸಿನಲ್ಲಿ ಕೊಂಚ ನೆಮ್ಮದಿಯಿಂದ ಜೀವನ ಕಳೆಯಬಹುದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.