ಪತ್ನಿ, ಮಕ್ಕಳನ್ನು ನೋಡಲು ಹೊರಟಿದ್ದ ಸಿಪಿಐ ಸಜೀವ ದಹನ: ಕಾರು ಅಪಘಾತ ಸಂಭವಿಸಿದ್ದೇಗೆ?
ಕಳೆದ ರಾತ್ರಿ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಕಾರು ಅಪಘಾತವೊಂದು ಸಂಭವಿಸಿದ್ದು, ಅಪಘಾತದಲ್ಲಿ ಲೋಕಾಯುಕ್ತ ಸಿಪಿಐ ಸಜೀವವಾಗಿ ದಹನವಾಗಿರುವಂತಹ ಘಟನೆ ನಡೆದಿದೆ. ಪತ್ನಿ ಮತ್ತು ಮಕ್ಕಳನ್ನು ನೋಡಲು ಹೊರಟಿದ್ದವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಷ್ಟಕ್ಕೂ ಅಪಘಾತ ನಡೆದಿದ್ದು ಹೇಗೆ ಗೊತ್ತಾ?

ಹುಬ್ಬಳ್ಳಿ, ಡಿಸೆಂಬರ್ 06: ಸಿಪಿಐ ಪಿ.ವಿ ಸಾಲಿಮಠ (CPI P.V Salimath) ದಕ್ಷ ಮತ್ತು ಪ್ರಮಾಣಿಕ ಪೊಲೀಸ್ ಅಧಿಕಾರಿ ಅಂತ ಎಲ್ಲರಿಂದ ಮೆಚ್ಚುಗೆ ಪೆಡದಿದ್ದರು. ತಮ್ಮ ನಡೆ ನುಡಿಯಿಂದ ಇಲಾಖೆ ಮತ್ತು ಕೆಲಸ ಮಾಡಿದ ಸ್ಥಳದಲ್ಲಿ ಉತ್ತಮ ಹೆಸರು ಸಂಪಾದಿಸಿದ್ದರು. ನಿನ್ನೆ ಕರ್ತವ್ಯ ಮುಗಿಸಿಕೊಂಡು, ಪತ್ನಿ ಮತ್ತು ಮಕ್ಕಳ್ನು ನೋಡಲು ಹೊರಟಿದ್ದರು. ಆದರೆ ರಸ್ತೆಯಲ್ಲಿ ಕಾದು ಕುಳಿತ ಜವರಾಯ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದ. ಕಾರು ಅಪಘಾತದಲ್ಲಿ (car Accident) ಸಿಪಿಐ ಸಾಲಿಮಠ ಸಜೀವವಾಗಿ ದಹನವಾಗಿದ್ದು, ಗುರುತು ಸಿಗಲಾದಷ್ಟು ಸುಟ್ಟು ಕರಕಲಾಗಿದ್ದಾರೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಕಳೆದ ರಾತ್ರಿ ಕಾರು ಅಪಘಾತವೊಂದು ಸಂಭವಿಸಿದೆ. ಅಪಘಾತದಲ್ಲಿ 44 ವರ್ಷದ ಸಿಪಿಐ ಪಿ.ವಿ ಸಾಲಿಮಠ ಸಜೀವವಾಗಿ ದಹನವಾಗಿದ್ದಾರೆ. ಹಾವೇರಿಯಲ್ಲಿ ಲೋಕಾಯುಕ್ತ ಸಿಪಿಐ ಆಗಿ ಕಳೆದ ಮೂರು ತಿಂಗಳಿಂದ ಕೆಲಸ ನಿರ್ವಹಿಸುತ್ತಿದ್ದ ಸಾಲಿಮಠ, ಇಂದು ಬೆಳಗಾವಿಯಲ್ಲಿ ಕೋರ್ಟ್ ಎವಿಡೆನ್ಸ್ಗೆ ಹೊರಟಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಕೆಲಸ ಮುಗಿಸಿ, ಗದಗನಲ್ಲಿರುವ ಪತ್ನಿ ಮತ್ತು ಮಕ್ಕಳನ್ನು ನೋಡಿಕೊಂಡು ಬೆಳಗಾವಿಗೆ ಹೋಗ್ತೇನೆ ಅಂತ ಹೇಳಿ ತಮ್ಮ ಸ್ವಂತ ಐ 20 ಕಾರ್ನಲ್ಲಿ ಹೋಗಿದ್ದರಂತೆ. ಇನ್ನು ಅರ್ಧಗಂಟೆ ಪ್ರಯಾಣ ಮಾಡಿದ್ದರೆ ಗದಗ ತಲುಪುತ್ತಿದ್ದರು. ಆದರೆ ರಾತ್ರಿ 7-30 ಸಮಯದಲ್ಲಿ ನಡೆದ ಅಪಘಾತದಲ್ಲಿ ಬಾರದ ಲೋಕಕ್ಕೆ ಹೋಗಿದ್ದಾರೆ.
ಅಪಘಾತ ನಡೆದಿದ್ದು ಹೇಗೆ?
ಹುಬ್ಬಳ್ಳಿಯಿಂದ ಗದಗಿಗೆ ಹೋಗುವಾಗ ಡಿವೈಡರ್ಗೆ ಮೊದಲು ಕಾರು ಡಿಕ್ಕಿಯಾಗಿ, ಪಕ್ಕದಲ್ಲಿದ್ದ ರಸ್ತೆಗೆ ಕಾರ್ ಜಂಪ್ ಆಗಿದೆ. ತಾವು ಹೋಗುತ್ತಿದ್ದ ಮಾರ್ಗದ ಎದುರು ಬದಿಗಿನ ರಸ್ತೆಯನ್ನು ಇಳಿದು ಮತ್ತೆ ಮೇಲಕ್ಕೆ ಬಂದು ನಂತರ ಮತ್ತೆ ರಸ್ತೆ ಪಕ್ಕದಲ್ಲಿ ಹೋಗಿ ನಿಂತಿದೆ. ಈ ಸಮಯದಲ್ಲಿ ಪೆಟ್ರೋಲ್ ಸೋರಿಕೆಯಿಂದ ಹೊತ್ತಿಕೊಂಡ ಬೆಂಕಿಯಿಂದಾಗಿ ಸಜೀವವಾಗಿ ದಹನವಾಗಿದ್ದಾರೆ. ಕಾರಿನಿಂದ ಹೊರಗಡೆ ಬರುವುದಕ್ಕಾಗದೆ ಒಳಗಡೆಯೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.
ಕಂಬನಿ ಮಿಡಿದ ಸಿಬ್ಬಂದಿ ಮತ್ತು ಸಹಪಾಠಿಗಳು
ಇನ್ನು ಪಿವಿ ಸಾಲಿಮಠ, 2003ರಲ್ಲಿ ಪಿಎಸ್ಐ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದರು. ಮೂಲತ ಬೆಳಗಾವಿ ಜಿಲ್ಲೆಯ ಮುರಗೋಡ್ ನಿವಾಸಿಯಾಗಿದ್ದರು. ಆದರೆ ಅವರು ಹೆಚ್ಚು ಕೆಲಸ ನಿರ್ವಹಿಸಿದ್ದು ಕಲಬುರಗಿ ಜಿಲ್ಲೆಯಲ್ಲಿ. ಕಲಬುರಗಿ ಜಿಲ್ಲೆಯಲ್ಲಿ ಅಫಜಲಪುರ, ಸೇಡಂ ಇನ್ಸಪೆಕ್ಟರ್ ಆಗಿ, ನಂತರ ಗದಗ ಶಹರ ಠಾಣೆ ಇನ್ಸಪೆಕ್ಟರ್ ಆಗಿದ್ದರು. ಬೈಲಹೊಂಗಲ ಇನ್ಸಪೆಕ್ಟರ್ ಆಗಿದ್ದ ಅವರಿಗೆ ಮೂರು ತಿಂಗಳ ಹಿಂದಷ್ಟೇ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿತ್ತು.
ಇದನ್ನೂ ಓದಿ: ಡಿವೈಡರ್ಗೆ ಡಿಕ್ಕಿಯಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು: ಲೋಕಾಯುಕ್ತ ಇನ್ಸ್ಪೆಕ್ಟರ್ ಸಜೀವ ದಹನ
ತಾವು ಕೆಲಸ ನಿರ್ವಹಿಸಿದ ಸ್ಥಳದಲ್ಲಿ ತಮ್ಮ ಕೆಲಸ ಮತ್ತು ಗುಣಗಳಿಂದ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದರು. ಪಿ.ವಿ ಸಾಲಿಮಠ ಪತ್ನಿ ಮತ್ತು ಎರಡು ಮಕ್ಕಳು ಗದಗನಲ್ಲಿಯೇ ವಾಸವಾಗಿದ್ದರಿಂದ ಆಗಾಗ ಗದಗಿಗೆ ಹೋಗಿ ಬರ್ತಿದ್ದ ಸಾಲಿಮಠ, ನಿನ್ನೆ ಪತ್ನಿ ಮತ್ತು ಮಕ್ಕಳನ್ನು ನೋಡಲಿಕ್ಕೆ ಹೋಗುವಾಗಲೇ ಬಾರದ ಲೋಕಕ್ಕೆ ಹೋಗಿದ್ದಾರೆ.
ಸಾಲಿಮಠ ಸಾವಿನ ಸುದ್ದಿ ಕೇಳಿ, ಅನೇಕ ಕಡೆಗಳಿಂದ ಅವರ ಅಭಿಮಾನಿಗಳು ಸಹಪಾಠಿ ಸಿಬ್ಬಂದಿಗಳು ಆಗಮಿಸಿದ್ದರು. ಹುಬ್ಬಳ್ಳಿ ಕಿಮ್ಸ್ನಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ಕಿಮ್ಸ್ನಲ್ಲಿಯೇ ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬದವರು ಪ್ರಾರ್ಥಿವ ಶರೀರಿಕ್ಕೆ ಅಂತಿನ ನಮನ ಸಲ್ಲಿಸಿದರು. ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಧಾರವಾಡ ಎಸ್ಪಿ ಗುಂಜನ್ ಆರ್ಯ, ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಜೆಸಿಬಿ ಘರ್ಜನೆ: 47 ಮನೆಗಳು ನೆಲಸಮ, ಬೀದಿಗೆ ಬಂದ ಜನರ ಬದುಕು
ಹುಬ್ಬಳ್ಳಿಯಿಂದ ಆಂಬುಲೆನ್ಸ್ನಲ್ಲಿ ಪ್ರಾರ್ಥಿವ ಶರೀರವನ್ನು ತೆಗೆದುಕೊಂಡು ಧಾರವಾಡ ಮಾರ್ಗವಾಗಿ ಅವರ ಸ್ವಗ್ರಾಮ ಮುರಗೋಡ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಯಿತು. ಮಾರ್ಗಮಧ್ಯದಲ್ಲಿ ಅನೇಕ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿ ಪ್ರಾರ್ಥಿವ ಶರೀರದ ದರ್ಶನ ಪಡೆದರು. ಹುಟ್ಟುರಲ್ಲಿ ಇಂದು ಅಂತ್ಯಕ್ರಿಯೇ ನಡೆಯಿತು.
ಸದ್ಯ ಪಿ.ವಿ ಸಾಲಿಮಠ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆದರೆ ಘಟನೆ ನಡೆದ ಬಗ್ಗೆ ಪ್ರತ್ಯೇಕ್ಷ ಸಾಕ್ಷಿಗಳು ಇಲ್ಲದೇ ಇರುವುದರಿಂದ ಅಪಘಾತಕ್ಕೆ ನಿಖರವಾದ ಕಾರಣ ಇನ್ನುವರಗೆ ತಿಳಿದು ಬಂದಿಲ್ಲ. ಕಾರಣಗಳೇನೇ ಇದ್ದರೂ ತಮ್ಮ ಕೆಲಸ ಮತ್ತು ನಡೆನುಡಿಯಿಂದ ಇಲಾಖೆ ಮತ್ತು ಸಮಾಜದಲ್ಲಿ ಉತ್ತಮ ಹೆಸರು ಸಂಪಾದಿಸಿದ್ದ ಸಿಪಿಐ ಪಿ.ವಿ ಸಾಲಿಮಠ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:58 pm, Sat, 6 December 25



