ನೇಮಕಾತಿಗೆ ಆಗ್ರಹಿಸಿ ಮತ್ತೆ ಸಿಡಿದೆದ್ದ ವಿದ್ಯಾರ್ಥಿಗಳು: ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಧಾರವಾಡ ಪೊಲೀಸ್
ಸರ್ಕಾರಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳದ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ. ಇತ್ತೀಚೆಗೆ ಧಾರವಾಡಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಇದೀಗ ಬೆಳಗಾವಿ ಅಧಿವೇಶನದ ಹೊತ್ತಲ್ಲಿಯೇ ಮತ್ತೆ ಧಾರವಾಡದಲ್ಲಿ ನಾಳೆ ಅಂದರೆ ಡಿಸೆಂಬರ್ 8ರಂದು ಪ್ರತಿಭಟನೆಗೆ ಕರೆ ನೀಡಿದ್ದರು. ಆದರೆ ಈ ಭಾರಿಯೂ ಪೊಲೀಸರು ಪ್ರತಿಭಟನೆಗೆ ಪರವಾನಗಿ ನೀಡಲು ನೀರಾಕರಿಸಿದ್ದಾರೆ.

ಹುಬ್ಬಳ್ಳಿ, ಡಿಸೆಂಬರ್ 07: ಸರ್ಕಾರಿ ನೌಕರಿಗಳ (Government job) ನೇಮಕಾತಿಗಾಗಿ ಆಗ್ರಹಿಸಿ ಧಾರವಾಡದಲ್ಲಿ ಕಳೆದ ಕೆಲ ದಿನಗಳಿಂದ ವಿದ್ಯಾರ್ಥಿಗಳ ಹೋರಾಟ (Students Protest) ತೀರ್ವ ಸ್ವರೂಪ ಪಡೆಯುತ್ತಲೇ ಇದೆ. ಈ ಹಿಂದೆ ಧಾರವಾಡದಲ್ಲಿ ಬೃಹತ್ ಹೋರಾಟ ನಡೆಸಿದ್ದ ವಿದ್ಯಾರ್ಥಿಗಳು ನೇಮಕಾತಿಗಾಗಿ ಆಗ್ರಹಿಸಿದ್ದರು. ಬೆಳಗಾವಿ ಅಧಿವೇಶನದ ಹೊತ್ತಲ್ಲಿಯೇ ಮತ್ತೆ ಧಾರವಾಡದಲ್ಲಿ ನಾಳೆ ಪ್ರತಿಭಟನೆಗೆ ಕರೆ ನೀಡಿದ್ದರು. ಆದರೆ ಪೊಲೀಸರು ಪ್ರತಿಭಟನೆಗೆ ಪರವಾನಗಿ ನೀಡಲು ನೀರಾಕರಿಸಿದ್ದಾರೆ. ಇದು ಮತ್ತೆ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಜೀವನದಲ್ಲಿ ಚೆನ್ನಾಗಿ ಓದಬೇಕು ಅನ್ನೋದು ಮೊದಲ ಗುರಿಯಾದರೆ, ಓದಿದ ನಂತರ ಕೆಲಸ ಹಿಡಿಯಬೇಕು. ಅದರಲ್ಲೂ ಸರ್ಕಾರಿ ಕೆಲಸವೇ ಮಾಡಬೇಕು ಎನ್ನುವುದು ಬಹುತೇಕ ವಿದ್ಯಾರ್ಥಿಗಳ ಆಶಯ. ಸರ್ಕಾರಿ ನೌಕರಿಗಾಗಿಯೇ ಅನೇಕರು ವರ್ಷಗಳಿಂದ ನಿರತಂತರವಾಗಿ ಅಧ್ಯಯನ ಮಾಡುತ್ತಲೇ ಇದ್ದಾರೆ. ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಯಾವಾಗ ಬೇಕಾದರೂ ನೇಮಕಾತಿ ಮಾಡಿಕೊಳ್ಳಬಹುದು ಅಂತ ತಯಾರಿ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯ ಹೆಡ್ ಕ್ವಾರ್ಟಸ್ ಆಗಿದ್ದೇಕೆ ವಿದ್ಯಾಕಾಶಿ ಧಾರವಾಡ?
ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅನೇಕ ವರ್ಷಗಳಿಂದ ಬೇರೆ ಕೆಲಸವನ್ನು ಮಾಡದೇ ಪರೀಕ್ಷೆಗಾಗಿ ಸಿದ್ದತೆ ಮಾಡಿಕೊಂಡಿದ್ದಾರೆ. ಅದರಲ್ಲೂ ರಾಜ್ಯದ ವಿದ್ಯಾಕಾಶಿ ಅನಿಸಿಕೊಂಡಿರುವ ಧಾರವಾಡಕ್ಕೆ ವಿವಿಧಡೆಯಿಂದ ಪರೀಕ್ಷೆ ಸಿದ್ದತೆಗಾಗಿ ಸಾವಿರಾರು ವಿದ್ಯಾರ್ಥಿಗಳು ಆಗಮಿಸಿದ್ದಾರೆ. ರೂಮ್ ಮಾಡಿಕೊಂಡು, ಕೋಚಿಂಗ್ ಕ್ಲಾಸ್ ಗೆ ಹೋಗಿ ನಿರಂತರವಾಗಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ಮಾಡಿಕೊಂಡಿದ್ದಾರೆ. ಆದರೆ ಕಳೆದ ಕೆಲ ವರ್ಷಗಳಿಂದ ನಿರೀಕ್ಷಿತ ಮಟ್ಟದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ನಡೆಯುತ್ತಿಲ್ಲ. ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಕಳೆದ ತಿಂಗಳು ಧಾರವಾಡದಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೃಹತ್ ಹೋರಾಟ ನಡೆಸಿದ್ದರು. ಕೂಡಲೇ ಖಾಲಿಯಿರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಅಂತ ಆಗ್ರಹಿಸಿದ್ದರು.
ಸ್ಪಂದಿಸ ಸರ್ಕಾರ: ಮತ್ತೊಮ್ಮೆ ಹೋರಾಟಕ್ಕೆ ಮುಂದಾಗಿದ್ದ ಉದ್ಯೋಗಾಕಾಂಕ್ಷಿಗಳು
ಸರ್ಕಾರ ಸ್ಪಂದಿಸದೇ ಇದ್ದಾಗ, ಇದೇ ಡಿಸೆಂಬರ್ 1 ರಂದು ಧಾರವಾಡದಲ್ಲಿ ಮತ್ತೊಮ್ಮೆ ಹೋರಾಟಕ್ಕೆ ಮುಂದಾಗಿದ್ದರು. ಆದರೆ ಆಗ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರು ಪರವಾನಗಿ ನೀಡಲು ನಿರಾಕರಿಸಿದ್ದರು. ಆದರೂ ಕೂಡ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದಾಗ ಅನೇಕರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಗಿತ್ತು. ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಇನ್ನು ಬೆಳಗಾವಿಯಲ್ಲಿ ಡಿಸೆಂಬರ್ 8ರಿಂದ ಅಧಿವೇಶನ ಆರಂಭವಾಗುತ್ತಿದ್ದು, ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದ ವಿದ್ಯಾರ್ಥಿಗಳು ಡಿಸೆಂಬರ್ 8ರಂದೇ ಧಾರವಾಡದಲ್ಲಿ ಬೃಹತ್ ಹೋರಾಟಕ್ಕೆ ಮುಂದಾಗಿದ್ದರು. ಅದಕ್ಕಾಗಿ ಪರ್ಮಿಷನ್ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಆದರೆ ನಾಳಿನ ಹೋರಾಟಕ್ಕೂ ಕೂಡ ಪೊಲೀಸರು ಪರವಾನಗಿಯನ್ನು ನಿರಾಕರಿಸಿದ್ದಾರೆ.
ನಾಳಿನ ಹೋರಾಟಕ್ಕೆ ಅನುಮತಿ ನೀಡಿಲ್ಲ: ಪೊಲೀಸ್ ಆಯುಕ್ತ ಎನ್ ಶಶಿಕುಮಾರ್
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ನಾಳಿನ ಹೋರಾಟಕ್ಕೆ ಅನುಮತಿ ನೀಡಿಲ್ಲ ಎಂದು ಹೇಳಿದ್ದಾರೆ. ನಾಳಿನ ಹೋರಾಟಕ್ಕೆ ವಿದ್ಯಾರ್ಥಿ ಸಂಘಟನೆಗಳು ಪರವಾನಗಿ ಕೇಳಿದ್ದವು. ಆದರೆ ನಾವು ಕೆಲ ಮಾಹಿತಿ ನೀಡಲು ಅವರಿಗೆ ಹೇಳಿದ್ದೆವು. ಆದರೆ ಸಮರ್ಪಕವಾಗಿ ಮಾಹಿತಿ ನೀಡದಿರುವುದರಿಂದ ಪರವಾನಗಿ ನೀಡಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ನಡೆದ ಪ್ರತಿಭಟನೆ ವೇಳೆ ಹಿಂಸೆಗೆ ಪ್ರಚೋದನೆ ನೀಡುವ ಕೆಲ ಪೋಸ್ಟ್ಗಳನ್ನು ಹಾಕಲಾಗಿತ್ತು. ರಸ್ತೆ ತಡೆಯಿಂದ ಸಾರ್ವಜನಿಕರಿಗೆ ತೊಂದೆರೆಯಾಗಿತ್ತು. ಕಾನೂನು ಸುವ್ಯವಸ್ಥೆ ಹಾಳಾಗುವದನ್ನು ತಡೆಯಲು ಪರವಾನಗಿ ನೀಡಿಲ್ಲ ಎಂದಿದ್ದಾರೆ.
ವಿದ್ಯಾರ್ಥಿ ಮುಖಂಡ ಕಾಂತರಾಜು ಹೇಳಿದ್ದಿಷ್ಟು
ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಹೇಳಿದ ಎಲ್ಲಾ ಮಾಹಿತಿಯನ್ನು ನಾವು ನೀಡಿದ್ದೆವು. ಆದರೆ ಪರವಾನಗಿ ನೀಡಿಲ್ಲ. ರಾಜ್ಯ ಸರ್ಕಾರ ಪೊಲೀಸರ ಮೂಲಕ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ನೌಕರಿ ಆಸೆಯಲ್ಲಿರುವ ವಿದ್ಯಾರ್ಥಿಗಳ ನೋವು ಸರ್ಕಾರಕ್ಕೆ ಕಾಣುತ್ತಿಲ್ಲ ಅಂತ ವಿದ್ಯಾರ್ಥಿ ಮುಖಂಡ ಕಾಂತರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಪರವಾನಗಿ ನೀಡದೇ ಇದ್ದಿದ್ದರಿಂದ ನಾಳಿನ ಹೋರಾಟವನ್ನು ಮುಂದಕ್ಕೆ ಹಾಕಿದ್ದೇವೆ. ಪೊಲೀಸರು ಕೇಳಿದ ಎಲ್ಲಾ ಮಾಹಿತಿಯನ್ನು ನೀಡಿ, ಪರವಾನಗಿ ಪಡೆದೇ ಹೋರಾಟ ಮಾಡುವುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ. ಜೊತೆಗೆ ಡಿಸೆಂಬರ್ 11ರಂದು ಬೆಳಗಾವಿಯಲ್ಲಿ ಕೂಡ ಹೋರಾಟ ನಡೆಸಲು ಮುಂದಾಗಿದ್ದೇವೆ ಅಂತ ಅವರು ಹೇಳಿದ್ದಾರೆ.
ಇದನ್ನೂ ಓದಿ: ಧಾರವಾಡದಲ್ಲಿ ಮತ್ತೆ ಸಿಡಿದೆದ್ದ ವಿದ್ಯಾರ್ಥಿಗಳು: ಸ್ಟೂಡೆಂಟ್ಸ್ ಕಿಚ್ಚು ಹೇಗಿತ್ತು ನೋಡಿ
ಒಂದೆಡೆ ಸರ್ಕಾರ ಯಾವುದೇ ಸರ್ಕಾರಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಮತ್ತೊಂದೆಡೆ ಹೋರಾಟಕ್ಕೂ ಕೂಡ ಅವಕಾಶ ನೀಡುತ್ತಿಲ್ಲ. ಇದು ವಿದ್ಯಾರ್ಥಿಗಳ ಆಕ್ರೋಶವನ್ನು ಹೆಚ್ಚಿಸಿದೆ. ಈ ನಿಟ್ಟಿನಲ್ಲಿ ಸಿಎಂ ಸೇರಿದಂತೆ ಸಚಿವರು ವಿದ್ಯಾರ್ಥಿಗಳ ಜೊತೆ ಮಾತನಾಡಿ, ಅವರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



