
ಹುಬ್ಬಳ್ಳಿ, ಜುಲೈ 02: ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮಹಿಳಾ ಗ್ರಾಹಕರ ಮೊಬೈಲ್ ನಂಬರ್ಗಳನ್ನು ಸೇವ್ ಮಾಡಿಕೊಂಡು, ಅವರಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದ ಡೆಲೇವರಿ ಬಾಯ್ನನ್ನು ಹುಬ್ಬಳ್ಳಿಯ (Hubballi) ಗೋಕುಲ್ ರೋಡ್ ಠಾಣೆ ಪೊಲೀಸರು (Gokul Road Police Station) ಬಂಧಿಸಿದ್ದಾರೆ. ರಮೇಶ್ ರೆಡ್ಡಿ ಬಂಧಿತ ಆರೋಪಿ. ರಮೇಶ್ ರೆಡ್ಡಿ ಆಗಾಗ ಕೆಲ ಕೋರಿಯರ್ ಕಂಪನಿಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದನು. ಕೋರಿಯರ್ ಕಂಪನಿಗಳು ಕೂಡಾ ತಮ್ಮ ಸಿಬ್ಬಂದಿ ರಜೆ ಇದ್ದಾಗ, ಈತನನ್ನು ಕೋರಿಯರ್ ಡೆಲೇವರಿ ಮಾಡಲು ಕಳುಹಿಸುತ್ತಿದ್ದರಂತೆ. ಆದರೆ, ಈತ ಕಂಪನಿಗಳು ಹೇಳಿದಷ್ಟು ಕೆಲಸ ಮಾಡದೆ ನೀಚ ಕೃತ್ಯ ಎಸಗಿದ್ದಾನೆ.
ಆರೋಪಿ ರಮೇಶ್ ರೆಡ್ಡಿ ಮಹಿಳಾ ಗ್ರಾಹಕರ ಮೊಬೈಲ್ ನಂಬರ್ಗಳನ್ನು ಸೇವ್ ಮಾಡಿಕೊಂಡು, ಬಳಿಕ ಅವರಿಗೆ ಹಾಯ್ ಬೇಬಿ, ಐ ವಾಂಟ್ ಟು ಮೀಟ್ ಯು, ಐ ಲವ್ ಯು ಸೇರಿದಂತೆ ಅನೇಕ ಅಶ್ಲೀಲ ಮೆಸೆಜ್ಗಳನ್ನು ಕಳುಹಿಸುತ್ತಿದ್ದನಂತೆ. ಆರೋಪಿ ರಮೇಶ್ ರೆಡ್ಡಿ ಕಾಟವನ್ನು ತಾಳಲಾರದೆ, ಅನೇಕರು ಈತನ ನಂಬರ್ ಬ್ಲಾಕ್ ಮಾಡಿದ್ದಾರೆ. ಇನ್ನೂ ಕೆಲವರು ಪ್ರತಿಕ್ರಿಯೆ ನೀಡದೆ ಸುಮ್ಮನಾಗಿದ್ದಾರೆ.
ಆದರೆ, ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬಡಾವಣೆಯೊಂದರಲ್ಲಿ ವಾಸವಾಗಿರುವ ಇಬ್ಬರು ಮಹಿಳೆಯರು ಈತನಿಗೆ ತಕ್ಕ ಪಾಠ ಕಲಿಸಿದ್ದಾರೆ. ಈತನ ಕಾಟ ವಿಪರೀತವಾದಾಗ ಈ ಇಬ್ಬರು ಮಹಿಳೆಯರು ಗೋಕುಲ್ ರೋಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ರಮೇಶ್ ರೆಡ್ಡಿಯನ್ನು ಪತ್ತೆ ಮಾಡಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಪ್ರಕರಣ ಸಂಬಂಧ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾತನಾಡಿ, ಅವಳಿ ನಗರದಲ್ಲಿ ಕೊರಿಯರ್ ಸರ್ವಿಸ್ಗೆ ಕೆಲಸಗಾರರನ್ನು ನೇಮಕ ಮಾಡಿಕೊಳ್ಳುವ ಮುನ್ನ ಅವರ ಪೂರ್ವಾಪರ ವಿಚಾರಣೆ ಮಾಡಿ, ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ಮಹಿಳೆಯರು ಕೂಡಾ ತಮ್ಮ ಮೊಬೈಲ್ ನಂಬರ್ ನೀಡುವಾಗ ಜಾಗೃತಿ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ನೊಂದ ಬಾಲಕಿಯರೇ ಈಕೆಯ ಟಾರ್ಗೆಟ್: ಕೆಲಸ ಕೊಡಿಸುವುದಾಗಿ ಕರೆತಂದು ಹಣಕ್ಕೆ ಮಾರಾಟ
ಪ್ರತಿನಿತ್ಯ ಸಾವಿರಾರು ಜನರು ಕೋರಿಯರ್ ಕಂಪನಿಗಳಲ್ಲಿ, ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಆದರೆ, ಯಾರೋ ಒಬ್ಬ ವ್ಯಕ್ತಿ ಮಾಡುವ ದುಷ್ಟ ಕೆಲಸದಿಂದ ಉಳಿದವರನ್ನು ಕೂಡ ಅನುಮಾನದಿಂದ ನೋಡುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ಕಂಪನಿಗಳು, ಮಾಲೀಕರು, ಕೆಲಸಕ್ಕೆ ನೇಮಿಸಿಕೊಳ್ಳುವಾಗ, ಅವರ ಪೂರ್ವಪರ ತಿಳಿದು ಕೆಲಸ ನೀಡುವುದರ ಜೊತೆಗೆ ಅನೇಕ ಕಟ್ಟುನಿಟ್ಟಿನ ಸೂಚನೆಗಳನ್ನು ಕೂಡ ಸಿಬ್ಬಂದಿಗೆ ನೀಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:31 pm, Wed, 2 July 25