ಹುಬ್ಬಳ್ಳಿಯಲ್ಲಿ ಸ್ಲಂ ಬೋರ್ಡ್ ಮನೆ ಹಂಚಿಕೆಗೆ ಮುಹೂರ್ತ ಫಿಕ್ಸ್; ಜನವರಿ 24ಕ್ಕೆ ಭರ್ಜರಿ ಕಾರ್ಯಕ್ರಮ
ಹುಬ್ಬಳ್ಳಿಯಲ್ಲಿ ಜನವರಿ 24ರಂದು ರಾಜ್ಯ ಸರ್ಕಾರದ ಮಹತ್ವದ ಮನೆ ಹಂಚಿಕೆ ಕಾರ್ಯಕ್ರಮ ನಡೆಯಲಿದೆ. ರಾಜ್ಯಾದ್ಯಂತ ನಿರ್ಮಿಸಿದ 42,000ಕ್ಕೂ ಹೆಚ್ಚು ಮನೆಗಳನ್ನು, ವಿಶೇಷವಾಗಿ ಹುಬ್ಬಳ್ಳಿಯ ಮಂಟೂರು ರಸ್ತೆಯ ಸಾವಿರಾರು ಸ್ಲಂ ಬೋರ್ಡ್ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಖರ್ಗೆ ಸೇರಿದಂತೆ ಗಣ್ಯರು ಭಾಗವಹಿಸಲಿದ್ದು, ಸಾವಿರಾರು ಕುಟುಂಬಗಳ ಸ್ವಂತ ಸೂರು ಕನಸು ನನಸಾಗಲಿದೆ.

ಹುಬ್ಬಳ್ಳಿ, ಜನವರಿ 21: ಸ್ವಂತದಾದ ಸೂರು ಹೊಂದಬೇಕು ಎನ್ನುವುದು ಬಡ ಮತ್ತು ಮಧ್ಯಮ ವರ್ಗದವರ ಕನಸು. ರಾಜ್ಯ ಸರ್ಕಾರ ಈ ಕನಸನ್ನು ಈಡೇರಿಸಲು ಮುಂದಾಗಿದ್ದು, ರಾಜ್ಯದಲ್ಲಿ ನಲವತ್ತೆರಡು ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣ ಮಾಡಿದೆ. ಈ ಮನೆಗಳ ಹಂಚಿಕೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಇದೇ ಜನವರಿ 24ರಂದು ಹುಬ್ಬಳ್ಳಿಯಲ್ಲಿ (Hubballi) ಅದ್ದೂರಿ ಕಾರ್ಯಕ್ರಮ ನಡೆಯಲಿದೆ.
ಒಂದು ವರ್ಷ ಕಾಯಿಸಿದ ಸರ್ಕಾರ!
ಹುಬ್ಬಳ್ಳಿ ನಗರದ ಮಂಟೂರು ರಸ್ತೆಯಲ್ಲಿ ಸ್ಲಂ ಬೋರ್ಡ್ ವತಿಯಿಂದ ಜಿ+3 ಮಾದರಿಯಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಮನೆಗಳಿಗೆ ಕಳೆದ ಒಂದು ವರ್ಷದಿಂದ ಉದ್ಘಾಟನೆ ಭಾಗ್ಯ ಸಿಕ್ಕಿರಲಿಲ್ಲ. ಮುಖ್ಯಮಂತ್ರಿ, ಎಐಸಿಸಿ ಅಧ್ಯಕ್ಷರು ಸೇರಿದಂತೆ ಹಿರಿಯ ನಾಯಕರ ಸಮಯಾವಕಾಶ ಲಭ್ಯವಾಗದೇ ಮನೆ ಹಂಚಿಕೆ ಕಾರ್ಯಕ್ರಮ ಪದೇಪದೇ ಮುಂದೂಡಲ್ಪಟ್ಟಿತ್ತು. 2013–18ರ ಅವಧಿಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ಕಾಲದಲ್ಲಿ ಈ ಮನೆಗಳಿಗೆ ಮಂಜೂರಾತಿ ದೊರೆತಿದ್ದರೂ, ಕಾಮಗಾರಿಯ ನಿಧಾನಗತಿಯ ಕಾರಣ ತಡವಾಗಿತ್ತು. ಕಳೆದ ವರ್ಷವೇ ಮನೆಗಳ ನಿರ್ಮಾಣ ಪೂರ್ಣಗೊಂಡರೂ ಫಲಾನುಭವಿಗಳಿಗೆ ಹಂಚಿಕೆ ಆಗಿರಲಿಲ್ಲ.
ಸಚಿವ ಜಮೀರ್ ನೇತೃತ್ವದಲ್ಲಿ ಮನೆ ಹಂಚಿಕೆ
ಈಗ ವಸತಿ ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರು ಭಾಗವಹಿಸಲಿದ್ದು, ಬೃಹತ್ ವೇದಿಕೆ, ಜನರಿಗಾಗಿ ಬಸ್ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಅನೇಕ ವರ್ಷಗಳಿಂದ ಸ್ವಂತ ಮನೆ ಕನಸು ಕಂಡಿದ್ದ ಸಾವಿರಾರು ಕುಟುಂಬಗಳಿಗೆ ಇದು ಹೊಸ ಜೀವನದ ಆರಂಭವಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.