ಆಟವಾಡುತ್ತಿದ್ದ 3 ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳ ಅಟ್ಯಾಕ್!

ಹುಬ್ಬಳ್ಳಿಯ ಅಲ್ತಾಫ್ ಪ್ಲಾಟ್‌ನಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ 3 ವರ್ಷದ ಪುಟ್ಟ ಬಾಲಕ ಅಜಾನ್ ಮೇಲೆ ನಾಲ್ಕೈದು ಬೀದಿ ನಾಯಿಗಳು ಭೀಕರವಾಗಿ ದಾಳಿ ನಡೆಸಿ ಎಳೆದಾಡಿವೆ. ತೀವ್ರವಾಗಿ ಗಾಯಗೊಂಡಿರುವ ಬಾಲಕನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ನಾಯಿಗಳ ನಿಯಂತ್ರಣಕ್ಕೆ ಲಕ್ಷ ಲಕ್ಷ ಹಣ ಖರ್ಚು ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಟವಾಡುತ್ತಿದ್ದ 3 ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳ ಅಟ್ಯಾಕ್!
ಸಾಂದರ್ಭಿಕ ಚಿತ್ರ
Image Credit source: gettyimages.com
Edited By:

Updated on: Aug 11, 2026 | 2:54 PM

ಮುಖ್ಯಾಂಶಗಳು

  • ಹುಬ್ಬಳ್ಳಿಯಲ್ಲಿ 3 ವರ್ಷದ ಬಾಲಕನ ಮೇಲೆ ನಾಲ್ಕೈದು ಬೀದಿ ನಾಯಿಗಳಿಂದ ಡೆಡ್ಲಿ ಅಟ್ಯಾಕ್.
  • ತೀವ್ರ ಗಾಯಗೊಂಡ ಬಾಲಕ ಹುಬ್ಬಳ್ಳಿ ಕಿಮ್ಸ್ ಐಸಿಯು ವಿಭಾಗದಲ್ಲಿ ದಾಖಲು.
  • ನಾಯಿ ನಿಯಂತ್ರಣಕ್ಕೆ ಲಕ್ಷ ಲಕ್ಷ ಖರ್ಚು ಮಾಡಿದ್ರೂ ಪಾಲಿಕೆ ವಿಫಲ.

ಹುಬ್ಬಳ್ಳಿ, ಆಗಸ್ಟ್ 11: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ (Hubballi) ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರು ಮತ್ತು ಪೋಷಕರು ತಮ್ಮ ಮಕ್ಕಳನ್ನು ಮನೆಯಿಂದ ಹೊರಗೆ ಬಿಡಲು ಭಯಪಡುವಂತಹ ಭೀಕರ ಸ್ಥಿತಿ ನಿರ್ಮಾಣವಾಗಿದೆ. ನಗರದ ಅಲ್ತಾಫ್ ಪ್ಲಾಟ್‌ನಲ್ಲಿ ನಿನ್ನೆ ಮುಂಜಾನೆ ನಾಲ್ಕೈದು ಬೀದಿ ನಾಯಿಗಳ ಹಿಂಡು 3 ವರ್ಷದ ಪುಟ್ಟ ಬಾಲಕನ ಮೇಲೆ ದಾಳಿ ನಡೆಸಿವೆ. ನಾಯಿಗಳ ಕಡಿತದಿಂದ ತೀವ್ರವಾಗಿ ಗಾಯಗೊಂಡಿರುವ ಮಗು ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದೆ.

ಮನೆಯ ಮುಂದೆ ಆಟವಾಡುತ್ತಿದ್ದಾಗ ನಾಯಿಗಳ ದಾಳಿ!

ಹುಬ್ಬಳ್ಳಿಯ ಅಲ್ತಾಫ್ ಪ್ಲಾಟ್ ನಿವಾಸಿ ಮಹ್ಮದ್ ಅಲಿ ಅವರ 3 ವರ್ಷದ ಪುಟ್ಟ ಮಗ ಅಜಾನ್ ಮಹ್ಮದ್ ಅಲಿ ಹುರಳಿಕೊಪ್ಪಿ ನಿನ್ನೆ ಮುಂಜಾನೆ ಎದ್ದು ಮನೆಯ ಹೊರಗಡೆ ಆಟವಾಡುತ್ತಿದ್ದ. ಈ ವೇಳೆ ಹೆತ್ತವರು ಮನೆಯ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಒಂಟಿಯಾಗಿದ್ದ ಮಗುವನ್ನು ಗಮನಿಸಿದ ನಾಲ್ಕೈದು ಬೀದಿ ನಾಯಿಗಳ ಹಿಂಡು ಏಕಾಏಕಿ ಅಜಾನ್ ಮೇಲೆ ಮುಗಿಬಿದ್ದಿವೆ.

ಪುಟ್ಟ ಮಗು ನಾಯಿಗಳಿಂದ ತಪ್ಪಿಸಿಕೊಳ್ಳಲಾಗದೆ, ಕಿರುಚಾಡುತ್ತಾ ಪ್ರಾಣಭಯದಿಂದ ಒದ್ದಾಡಿದೆ. ನಾಯಿಗಳು ಬಾಲಕನನ್ನು ರಸ್ತೆಯುದ್ದಕ್ಕೂ ಎಳೆದಾಡಿ, ದೇಹದ ತುಂಬೆಲ್ಲಾ ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ. ಮಗುವಿನ ಚೀರಾಟ ಕೇಳಿ ತಕ್ಷಣ ಸ್ಥಳೀಯರು ಓಡಿ ಬಂದು ನಾಯಿಗಳನ್ನು ಓಡಿಸಿದ್ದರಿಂದ ಬಾಲಕನ ಪ್ರಾಣ ಉಳಿದಿದೆ. ಸದ್ಯ ಗಾಯಾಳು ಬಾಲಕನನ್ನು ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಯ ತುರ್ತು ನಿಘಾ ಘಟಕದಲ್ಲಿ (ICU) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಗು ನರಳಾಡುತ್ತಿದೆ.

ಪಾಲಿಕೆ ವಿರುದ್ಧ ಸಾರ್ವಜನಿಕರ ಆಕ್ರೋಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (HDMC) ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣ ಮತ್ತು ಸಂತಾನಹರಣ ಚಿಕಿತ್ಸೆಗಾಗಿ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುತ್ತಿದ್ದಾರೆ. ಆದರೆ ಅವಳಿ ನಗರದಲ್ಲಿ ನಾಯಿಗಳ ಹಾವಳಿ ಮಾತ್ರ ಕಡಿಮೆಯಾಗುತ್ತಿಲ್ಲ. ಈ ಹಿಂದೆ ಸಿಮ್ಲಾ ನಗರದಲ್ಲೂ ಅಂಗಡಿಗೆ ತೆರಳುತ್ತಿದ್ದ ಬಾಲಕಿಯ ಮೇಲೆ ನಾಯಿಗಳು ದಾಳಿ ಮಾಡಿದ್ದವು. ಹಳೇ ಹುಬ್ಬಳ್ಳಿ ಭಾಗದಲ್ಲಂತೂ ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ನಾಯಿ ಕಡಿತದ ಪ್ರಕರಣಗಳು ವರದಿಯಾಗುತ್ತಲೇ ಇವೆ.

ಘಟನೆ ನಡೆದಾಗಲೆಲ್ಲಾ ‘ನಾಯಿಗಳನ್ನು ಹಿಡಿಯುತ್ತೇವೆ’ ಎಂದು ಹಾರಿಕೆ ಉತ್ತರ ನೀಡುವ ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯ ವಾರ್ಡ್ ಸದಸ್ಯರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಪಾಲಿಕೆ ಎಚ್ಚೆತ್ತುಕೊಂಡು ಬೀದಿ ನಾಯಿಗಳಿಗೆ ಶಾಶ್ವತ ಬ್ರೇಕ್ ಹಾಕಿ, ಮಕ್ಕಳ ಪ್ರಾಣ ರಕ್ಷಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us