ತೀವ್ರ ವಿರೋಧ; ಕೊನೆಗೂ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಕೈಬಿಟ್ಟ ಹು-ಧಾ ಮಹಾನಗರ ಪಾಲಿಕೆ
ಹುಬ್ಬಳ್ಳಿಯಲ್ಲಿ ಕಳೆದ ಕೆಲ ದಿನಗಳಿಂದ ಇಂದಿರಾ ಕ್ಯಾಂಟೀನ್ ಸಾಕಷ್ಟು ವಿವಾದ ಹುಟ್ಟುಹಾಕಿತ್ತು. ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿರುವ ಸತ್ಯ ಹರಿಶ್ಚಂದ್ರ ಸ್ಮಶಾನದಲ್ಲಿ ನಿರ್ಮಾಣವಾಗಿದ್ದ ಇಂದಿರಾ ಕ್ಯಾಂಟೀನ್ ವಿವಾದದ ಕೇಂದ್ರ ಬಿಂದುವಾಗಿತ್ತು.ಶಾಸಕರು ಮತ್ತು ಹಿಂದೂ ಸಂಘಟನೆಗಳ ನಡುವೆ ವಾಕ್ ಸಮರಕ್ಕೂ ಕ್ಯಾಂಟಿನ್ ಕಾರಣವಾಗಿತ್ತು. ಒಂದು ಹಂತಕ್ಕೆ ನಾವೇ ಗುದ್ದಲಿ ಸಲಿಕೆ ಹಿಡಿದು ತೆರವು ಮಾಡ್ತೀವಿ ಎಂದು ಹಿಂದೂ ಸಂಘಟನೆಗಳು ಡೆಡ್ ಲೈನ್ ನೀಡಿದ್ದರು. ಸ್ಥಳೀಯ ಶಾಸಕ ಪ್ರಸಾದ ಅಬ್ಬಯ್ಯ ದಲಿತರ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ದೊಡ್ಡ ಹೋರಾಟದ ಮುನ್ಸೂಚನೆ ಕಂಡ ಪಾಲಿಕೆ, ಇದೀಗ ಎಲ್ಲದಕ್ಕೂ ಫುಲ್ ಸ್ಟಾಪ್ ಹಾಕಿದೆ. ಹಾಗಾದರೆ ಏನಾಯ್ತು ಇಂದಿರಾ ಕ್ಯಾಂಟೀನ್ ಕಥೆ ಅಂತೀರಾ? ಈ ಸ್ಟೋರಿ ಓದಿ.
ಹುಬ್ಬಳ್ಳಿ, ಸೆ.25: ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್(indira canteen) ನಿರ್ಮಾಣ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಸ್ಮಶಾನದಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿರುವುದಕ್ಕೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಇದರಿಂದ ವಿರೋಧ-ಪ್ರತಿವಿರೋಧ ಉಂಟಾಗಿ, ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಕೊನೆಗೂ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ, ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣದಿಂದ ಹಿಂದೆ ಸರಿದಿದೆ. ಸ್ಥಳೀಯರು, ಹಿಂದೂ ಸಂಘಟನೆಗಳ ತೀವ್ರ ಸ್ವರೂಪದ ವಿರೋಧದ ಹಿನ್ನೆಲೆಯಲ್ಲಿ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ಆರಂಭ ಕೈಬಿಟ್ಟಿದೆ.
ಕಳೆದ ಒಂದು ವಾರದಿಂದ ಹುಬ್ಬಳ್ಳಿಯಲ್ಲಿ ಇಂದಿರಾ ಕ್ಯಾಂಟೀನ ಚರ್ಚೆಗಿಡಾಗೀಡಾಗಿತ್ತು. ಇದರಿಂದ ಶಾಸಕ ಪ್ರಸಾದ್ ಅಬ್ಬಯ್ಯಗೆ ಭಾರಿ ಹಿನ್ನಡೆಯಾದಂತಾಗಿದೆ. ಒಟ್ಟು ಹೊಸ ಎರಡು ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗಿತ್ತು. ಆದ್ರೆ, ಮಂಟೂರ ರಸ್ತೆಯಲ್ಲಿ ಸ್ಮಶಾನದಲ್ಲಿ ನಿರ್ಮಾಣ ಮಾಡಿದ್ದ ಇಂದಿರಾ ಕ್ಯಾಂಟೀನ್ಗೆ ಆಕ್ಷೇಪಣೆ ಬಂದ ಹಿನ್ನಲೆ ಬೇರೆ ಶಿಫ್ಟ್ ಮಾಡಲು ನಿರ್ಧಾರ ಮಾಡಲಾಗಿದೆ. ಕೂಡಲೇ ಮತ್ತೊಂದು ಕಡೆ ಸರ್ಕಾರದ ಜಾಗ ನೋಡಿ ನಾವು ಇಂದಿರಾ ಕ್ಯಾಂಟೀನ್ ಶಿಫ್ಟ್ ಮಾಡುತ್ತೀವಿ ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದ್ದಾರೆ.
ಇದನ್ನೂ ಓದಿ:ಹಿಂದೂಗಳ ಸ್ಮಶಾನದ ಕಾಂಪೌಂಡ್ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ; ಪ್ರಮೋದ್ ಮುತಾಲಿಕ್ ಆರೋಪ
ಮಂಟೂರ ರಸ್ತೆಯಲ್ಲಿ ನಿರ್ಮಾಣವಾಗಿದ್ದ ಇಂದಿರಾ ಕ್ಯಾಂಟೀನ್ ವಿಚಾರ ಹುಬ್ಬಳ್ಳಿಯಲ್ಲಿ ಭಾರೀ ಸದ್ದು ಮಾಡಿತ್ತು. ಕೈ ಶಾಸಕ ಪ್ರಸಾದ್ ಅಬ್ಬಯ್ಯ ಹಾಗೂ ಹಿಂದೂ ಸಂಘಟನೆಗಳ ನಡುವೆ ಬಾರೀ ವಾಕ್ಸಮರಕ್ಕೂ ಕ್ಯಾಂಟೀನ್ ಕಾರಣವಾಗಿತ್ತು. ಇಬ್ಬರ ಮದ್ಯೆ ಏಕವಚನದ ಪದ ಪ್ರಯೋಗವೂ ಆಗಿತ್ತು. ನಾಳೆ ನಾವೇ ಇಂದಿರಾ ಕ್ಯಾಂಟೀನ್ ತೆರವು ಮಾಡುತ್ತೇವೆ ಎಂದು ಸಂಘಟನೆ ಡೆಡ್ ಲೈನ್ ನೀಡಿತ್ತು. ನಿನ್ನೆ ರಾತ್ರಿ ಪಾಲಿಕೆ ಅಧಿಕಾರಿಗಳು ಮಹತ್ವದ ಆದೇಶ ಪ್ರಕಟಣೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚನೆ ಹಿನ್ನೆಲೆಯಲ್ಲಿ ಬೇರೆ ಕಡೆಗೆ ಶಿಪ್ಟ್ ಮಾಡುವುದಾಗಿ ಮಹಾನಗರ ಪಾಲಿಕೆಯ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
ಮಹಾನಗರ ಪಾಲಿಕೆ ನಿರ್ಧಾರವನ್ನು ಶ್ರೀರಾಮ ಸೇನೆ ಸಂಘಟನೆಯ ಸ್ವಾಗತ ಮಾಡಿದೆ. ಪಾಲಿಕೆ ಕಮೀಷನರ್, ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಭಿನಂದನೆಯನ್ನು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯೇ ನೀಡಿದ ಅವರು, ದಲಿತ ಶಾಸಕನಾಗಿ, ದಲಿತರ ಸ್ಮಶಾನ ಕಬಳಿಕೆ ಮುಂದಾಗಿದ್ದರು. ನಾವು ದ್ವನಿ ಎತ್ತಿದ್ರೆ, ಅಧಿಕಾರದ ದರ್ಪದಿಂದ ಶಾಸಕ ಮಾತಾಡಿದ್ದರು. ಮುತಾಲಿಕ್ ಅವರಿಗೆ ಏಕವಚನದಲ್ಲಿ ಮಾತಾಡಿದ್ದರು. ಇನ್ನಾದರೂ ಅಬ್ಬಯ್ಯ, ಮುತಾಲಿಕ್ ಅವರ ಬಳಿ ಕ್ಷಮೆ ಕೇಳಬೇಕೆಂದು ಗಂಗಾಧರ ಕುಲಕರ್ಣಿ ಒತ್ತಾಯಿಸಿದ್ದಾರೆ. ಒಟ್ಟಾರೆ ವಿವಾದಿತ ಕೇಂದ್ರವಾಗಿದ್ದ ಇಂದಿರಾ ಕ್ಯಾಂಟೀನ್ಗೆ ಸದ್ಯ ತೆರೆ ಬಿದ್ದಂತಾಗಿದೆ. ದೊಡ್ಡ ಹೋರಾಟದ ಮುನ್ಸೂಚನೆ ಕಂಡ ಪಾಲಿಕೆ ಶಿಫ್ಟ್ ಮಾಡಿದ್ದು, ಬಡವರಿಗೆ ಅನುಕೂಲವಾಗಬೇಕಿದ್ದ ಕ್ಯಾಂಟೀನ್ ವಿವಾದದ ಕೇಂದ್ರ ಬಿಂದುವಾಗಿದ್ದು ಮಾತ್ರ ದುರದೃಷ್ಟ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ