ಹುಬ್ಬಳ್ಳಿ: ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ, ಭುಗಿಲೆದ್ದ ಆಕ್ರೋಶ
ಹುಬ್ಬಳ್ಳಿಯ ಮಂಟೂರ ರಸ್ತೆಯ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನಲೆ ಇಂದು ಸತ್ಯಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ ಹಿತರಕ್ಷಣಾ ಸಮಿತಿಯವರು ಮಂಟೂರ ರಸ್ತೆಯಿಂದ ಮಹಾನಗರ ಪಾಲಿಕೆ ಕಚೇರಿವರೆಗೆ ಮೆರವಣಿಗೆ ಮಾಡಿದರು.
ಹುಬ್ಬಳ್ಳಿ, ಸೆ.19: ಹುಬ್ಬಳ್ಳಿ(Hubli)ಯ ಮಂಟೂರ ರಸ್ತೆಯ ಸ್ಮಶಾನದಲ್ಲಿ ಇಂದಿರಾ ಕ್ಯಾಂಟೀನ್(Indira Canteen) ನಿರ್ಮಾಣ ಮಾಡಲಾಗಿದ್ದು, ಇದೀಗ ತೀವ್ರ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಹಿನ್ನಲೆ ಇಂದು(ಗುರುವಾರ) ಸತ್ಯಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ ಹಿತರಕ್ಷಣಾ ಸಮಿತಿಯವರು ಮಂಟೂರ ರಸ್ತೆಯಿಂದ ಮಹಾನಗರ ಪಾಲಿಕೆ ಕಚೇರಿವರೆಗೆ ಮೆರವಣಿಗೆ ಮಾಡಿದರು.
ಈ ವೇಳೆ ಸ್ಥಳೀಯ ಶಾಸಕ ಅಬ್ಬಯ್ಯ ಪ್ರಸಾದ್ ವಿರುದ್ಧ ಹೋರಾಟ ನಿರತ ಮಹಿಳೆಯೊಬ್ಬರ ತೀವ್ರ ಆಕ್ರೋಶ ಹೊರಹಾಕಿದ್ದು, ಶಾಸಕರ ವಿರುದ್ದ ಕಿಡಿಕಾರಿದರು, ‘ಸ್ಮಶಾನಕ್ಕೆ ನಾವು ಅಳುತ್ತಾ ಬಂದಿರುತ್ತೇವೆ. ಅಬ್ಬಯ್ಯಗೆ ಬುದ್ಧಿ ಇದೆಯೋ ಇಲ್ಲವೋ. ಎಲ್ಲಿಯೂ ಆತನಿಗೆ ಜಾಗ ಸಿಕ್ಕಿಲ್ಲವಾ?. ಶಾಸಕ ಪ್ರಸಾದ್ ಅಬ್ಬಯ್ಯ ಪತ್ನಿ, ಅಪ್ಪ ಸತ್ತರೆ ಅಲ್ಲಿ ಊಟ ಮಾಡ್ತಾರಾ ಅವರು? ಎಂದು ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ಮಹಿಳೆ ಪ್ರಮೀಳಾ ಕೋಟಾರಿ ಎಂಬುವವರು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಹಿಂದೂಗಳ ಸ್ಮಶಾನದ ಕಾಂಪೌಂಡ್ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ; ಪ್ರಮೋದ್ ಮುತಾಲಿಕ್ ಆರೋಪ
ಇನ್ನು ಇದೇ ಸೆ.16 ರಂದು ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್, ‘ಹಿಂದೂ ಸ್ಮಶಾನದ ಕಾಂಪೌಂಡ್ ಒಡೆದು ಎರಡೇ ದಿನದಲ್ಲಿ ರಾತ್ರೋರಾತ್ರಿ ಇಂದಿರಾ ಕ್ಯಾಂಟೀನ್ ಕಟ್ಟಿದ್ದಾರೆ. ತಕ್ಷಣ ಕ್ಯಾಂಟೀನ್ನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿದ್ದರು. ಒಂದು ವೇಳೆ ಇದು ಆಗದಿದ್ದರೆ, ನಾವೇ ಇಂದಿರಾ ಕ್ಯಾಂಟೀನ್ ತೆರವು ಮಾಡುತ್ತೇವೆ ಎಂದಿದ್ದರು. ಜೊತೆಗೆ ನಿಮಗೆ ತಾಕತ್ ಇದ್ದರೆ ಮುಸ್ಲಿಂ ಕಬರಸ್ತಾನದಲ್ಲಿ ಇಂದಿರಾ ಕ್ಯಾಂಟಿನ್ ಕಟ್ಟಿ ಎಂದು ಮುತಾಲಿಕ್ ಸವಾಲು ಹಾಕಿದ್ದರು. ಇದೀಗ ರುದ್ರಭೂಮಿ ಅಭಿವೃದ್ಧಿ ಹಿತರಕ್ಷಣಾ ಸಮಿತಿಯವರು ಹೋರಾಟಕ್ಕೆ ಇಳಿದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ