ಹುಬ್ಬಳ್ಳಿ: ನೆನೆಗುದಿಗೆ ಬಿದ್ದ ಸ್ಮಾರ್ಟ್ ಸಿಟಿ ಯೋಜನೆಯ ಆಸ್ಪತ್ರೆ; ಉದ್ಘಾಟನೆ ಆದರೂ ರೋಗಿಗಳಿಗಿಲ್ಲ ಸೇವೆ
ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು ಸ್ಮಾರ್ಟ್ ಸಿಟಿ ಯೋಜನೆ. ಈ ಯೋಜನೆಯನ್ನ ಯಶಸ್ವಿಗೊಳಿಸಲು ಕೇಂದ್ರದಿಂದ ನೂರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗುತ್ತಿದೆ. ಆದ್ರೆ, ಈ ಹಣ ಯಾವ ರೀತಿ ಸದ್ಬಳಿಕೆ ಆಗುತ್ತಿದೆ ಎನ್ನುವುದೆ ಎಲ್ಲರ ಪ್ರಶ್ನೆಯಾಗಿದೆ. ಕೋಟಿ ಕೋಟಿ ಖರ್ಚು ಮಾಡಿ ಬಡವರ ಆರೋಗ್ಯದ ಹಿತಕ್ಕಾಗಿ ಬಹುಮಹಡಿ ಹೈಟೆಕ್ ಆಸ್ಪತ್ರೆ ನಿರ್ಮಿಸಿಲಾಗಿದೆ. ಸ್ವತಃ ಪ್ರಧಾನಿಗಳೇ ಆಸ್ಪತ್ರೆ ಉದ್ಘಾಟನೆ ಮಾಡಿದ್ದಾರೆ. ಇದಾಗಿ ಒಂದು ವರ್ಷವಾದ್ರೂ ಆಸ್ಪತ್ರೆ ಇನ್ನೂ ಆರಂಭವಾಗಿಲ್ಲ.
ಹುಬ್ಬಳ್ಳಿ, ಮಾ.03: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಒಡೆತನದ, ಹುಬ್ಬಳ್ಳಿಯ ಚಿಟಿಗುಪ್ಪಿ ಸ್ಮಾರ್ಟ್ ಸಿಟಿ ಯೋಜನೆಯ ಬಹುಕೋಟಿ ಆಸ್ಪತ್ರೆಯ ನವೀಕರಣ ಕಾಮಗಾರಿ ಪೂರ್ಣಗೊಂಡು, ಒಂದು ವರ್ಷದ ಹಿಂದೆ ಉದ್ಘಾಟನೆಯೂ ನೆರವೇರಿದೆ. ಆದ್ರೆ, ರೋಗಿಗಳ ಸೇವೆಗೆ ಇನ್ನು ತೆರೆದುಕೊಂಡಿಲ್ಲ. ಸ್ಮಾರ್ಟ್ ಸಿಟಿ ಅನುದಾನದಲ್ಲಿ ಬರೊಬ್ಬರಿ 20 ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡಲಾಗಿದೆ. ಜೊತೆಗೆ ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ನವೀಕರಣ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ 2023ರ ಮಾರ್ಚ್ 12 ರಂದು ತರಾತುರಿಯಲ್ಲಿ ಉದ್ಘಾಟಿಸಲಾಗಿತ್ತು.
ಬಳಿಕ ಬಾಕಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಆದ್ರೆ, ಉದ್ಘಾಟನೆಗೆ ತೋರಿದ ಅತೀವ ಇಚ್ಚಾಶಕ್ತಿಯನ್ನ ಅಧಿಕಾರಿಗಳು ರೋಗಿಗಳ ಸೇವೆ ನೀಡಲು ತೋರುತ್ತಿಲ್ಲ. ಇನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿ ಪಕ್ಕದಲ್ಲಿಯೇ ಈ ಆಸ್ಪತ್ರೆ ನಿರ್ಮಾಣಗೊಂಡಿದೆ. ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗಳನ್ನು ಹು-ಧಾ ಮಹಾನಗರ ಪಾಲಿಕೆಯು ಹಸ್ತಾಂತರಿಸಿಕೊಳ್ಳಬೇಕು. ಆದ್ರೆ, ಕಾಮಗಾರಿಯ ಗುಣಮಟ್ಟದ ಬಗ್ಗೆ ಶಂಕೆ ವ್ಯಕ್ತಪಡಿಸಿ ಲೋಕಾಯುಕ್ತ ತನಿಖೆಗೆ ಮಾಜಿ ಮೇಯರ್ ಈರೇಶ ಅಂಚಟಗೇರಿ, ಪ್ರಧಾನಿ ಕಚೇರಿಗೆ ಬರೆದಿರುವ ಪತ್ರದ ಹಿನ್ನೆಲೆಯಲ್ಲಿ ಹಸ್ತಾಂತರ ಕಗ್ಗಂಟಾಗಿದೆ. ಕಳೆದ ಒಂದು ವರ್ಷದಿಂದ ಪರಿಸ್ಥಿತಿ ಇದೇ ರೀತಿ ಇದ್ದು, ಜನಪ್ರತಿನಿಧಿಗಳು ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿಲ್ಲ. ಹೀಗಾಗಿ 20 ಕೋಟಿ ರೂಪಾಯಿ ಖರ್ಚು ಮಾಡಿದ ಆಸ್ಪತ್ರೆ ಹಳ್ಳ ಹಿಡಿದಿದೆ.
ಇದನ್ನೂ ಓದಿ:ಬೀದರ್; ಖಾಸಗಿ ಆಸ್ಪತ್ರೆಯ ವೈದ್ಯರ ಯಡವಟ್ಟಿನಿಂದ ಕಣ್ಣು ಕಳೆದುಕೊಂಡ ಮಹಿಳೆ
ಸ್ಮಾರ್ಟ್ ಸಿಟಿಯ 20 ಕೋಟಿ ರೂಪಾಯಿ ವೆಚ್ಚದಲ್ಲಿ ಚಿಟಗುಪ್ಪಿ ಆಸ್ಪತ್ರೆಯನ್ನು ನವೀಕರಿಸಿ ವೈದ್ಯಕೀಯ ಉಪಕರಣಗಳನ್ನು ಒದಗಿಸಲಾಗಿದೆ. 2 ಹೈಟೆಕ್ ಶಸ್ತ್ರಚಿಕಿತ್ಸೆ ಕೊಠಡಿ, 10 ಒಪಿಡಿ ಕೊಠಡಿ, ಮೆಟರ್ನಿಟಿ ಬಿಲ್ಡಿಂಗ್, ಆಡಳಿತ ಕಚೇರಿ ಸೇರಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಇದಾಗಿದೆ. ಸ್ತ್ರೀ ರೋಗ, ಚಿಕ್ಕ ಮಕ್ಕಳು, ಕಣ್ಣು, ಕಿವಿ ಮತ್ತು ಗಂಟಲು, ಜನರಲ್, ಮೆಡಿಸಿನ್, ಆರ್ಥೋಪೆಡಿಕ್ಸ್, ಚರ್ಮ ರೋಗ ಸೇರಿ 10 ಒಪಿಡಿಗಳು ಕಾರ್ಯಾರಂಭ ಮಾಡಲಿವೆ. ಮಂಗಳೂರಿನ ಎಂಎಎಸ್ ಕನ್ನಟಿಕನ್ಸ್ ಲಿಮಿಟೆಡ್‌ನವರು ಕಾಮಗಾರಿ ನಿರ್ವಹಿಸಿದ್ದಾರೆ. ಕೊನೆಯ ಹಂತದ ಕಾಮಗಾರಿಗಳಾದ ಅಗ್ನಿಶಾಮಕ ವ್ಯವಸ್ಥೆ, ಆಕ್ಸಿಜನ್ ಪೂರೈಕೆ, ಲಿಫ್ಟ್ ಸೌಲಭ್ಯಗಳನ್ನು ಪೂರ್ಣಗೊಳಿಸಲಾಗಿದೆ. ಕಾಮಗಾರಿ ಪೂರ್ಣಗೊಂಡರು ಸ್ಮಾರ್ಟ್ ಸಿಟಿ ಪಾಲಿಕೆಗೆ ಹಸ್ತಾಂತರ ಮಾಡಿಲ್ಲ. ಹಸ್ತಾಂತರ ಆಗದ ಕಾರಣ ಜನರ ಉಪಯೋಗಕ್ಕೆ ಸಿಕ್ಕಿಲ್ಲ.
ಹೈಟೆಕ್ ಆಸ್ಪತ್ರೆ ಉದ್ಘಾಟನೆಯಾದ್ರೂ ಸಾರ್ವಜನಿಕರಿಗೆ ಉಪಯುಕ್ತವಾಗದೇ ನೆನೆಗುದಿಗೆ ಬಿದ್ದಿದೆ. ಕೋಟಿ ಕೋಟಿ ವೆಚ್ಚ ಮಾಡಿ ಖರೀದಿ ಮಾಡಿರುವ ಹೈಟೆಕ್ ಉಪಕರಣಗಳು ಧೂಳು ತಿನ್ನುತ್ತಿವೆ. ಒಂದೆಡೆ ಸೂಕ್ತ ಆರೋಗ್ಯ ಸೌಲಭ್ಯಗಳಿಲ್ಲದೇ ದಿನೇದಿನೇ ಹುಬ್ಬಳ್ಳಿ ಜನತೆ ಪರದಾಡುತ್ತಿದ್ದಾರೆ. ಮತ್ತೊಂದೆಡೆ ಸುಸಜ್ಜಿತವಾಗಿ ನವೀಕರಣಗೊಂಡ ಆಸ್ಪತ್ರೆಗೆ ಇನ್ನು ಸೇವಾ ಭಾಗ್ಯ ಒದಗಿ ಬಂದಿಲ್ಲ. ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಧ್ಯಪ್ರವೇಶ ಮಾಡಿ ಈ ಆಸ್ಪತ್ರೆಯನ್ನ ಜನರ ಉಪಯೋಗ ಸಿಗುವಂತೆ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ