ಧಾರವಾಡದಲ್ಲಿ ಸಿಕ್ಕ 18 ಕೋಟಿ ಹಣ ಐಟಿ ಖಾತೆಗೆ ಜಮೆ, ಇಷ್ಟೊಂದು ಹಣ ಬೆಳಗಾವಿ-ಧಾರವಾಡ ಚುನಾವಣೆಗೆ ಮೀಸಲಿಡಲಾಗಿತ್ತಾ?
ಸದ್ಯ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಮತದಾರರಿಗೆ ಆಮಿಷ ಒಡ್ಡಲೆಂದೇ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಹಣ, ಹೆಂಡ, ಗಿಫ್ಟ್ ಹಂಚಿಕೆಯನ್ನು ತಡೆಯಲೆಂದೇ ಚುನಾವಣಾ ಕ್ಷಿಪ್ರ ಕಾರ್ಯಪಡೆ ಮಾಡಲಾಗಿದೆ. ಧಾರವಾಡದಲ್ಲಿ ಇಂತಹದ್ದೇ ಒಂದು ಕಾರ್ಯಪಡೆಗೆ ಮನೆಯೊಂದರಲ್ಲಿ ಮದ್ಯ ಸಂಗ್ರಹಿಸಿಟ್ಟಿರೋ ಮಾಹಿತಿ ಬಂದಿತ್ತು. ಆ ಮಾಹಿತಿ ಆಧರಿಸಿ ಅಲ್ಲಿ ಹೋಗಿ ನೋಡಿದ್ರೆ, ಸಿಕ್ಕಿದ್ದು ಮದ್ಯದ ಬಾಟಲಿ ಅಲ್ಲ. ಬದಲಿಗೆ ಕಂತೆ ಕಂತೆ ನೋಟು. ಮದ್ಯ ಬಾಟಲಿ ಹುಡುಕುವಾಗ ಸಿಕ್ಕ ಬರೋಬ್ಬರಿ 18 ಕೋಟಿ ರೂಪಾಯಿ ಬೃಹತ್ ಹಣವನ್ನು ಇದೀಗ ಐಟಿ ಅಧಿಕಾರಿಗಳು ತೆಗೆದುಕೊಂಡು ಹೋಗಿ ಐಟಿ ಇಲಾಖೆ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ.
ಧಾರವಾಡ, (ಏಪ್ರಿಲ್ 17): ಧಾರವಾಡದ (Dharwad) ದಾಸನಕೊಪ್ಪ ರಸ್ತೆಯಲ್ಲಿರೋ ಆರ್ನಾ ರೆಸಿಡೆನ್ಸಿ ಅಪಾರ್ಟ್ಮೆಂಟ್ನ 3ನೇ ಮಹಡಿಯಲ್ಲಿರೋ ಯು.ಬಿ.ಶೆಟ್ಟಿ (UB Shetty) ಕಚೇರಿಯ ಅಕೌಂಟೆಂಟ್ ಬಸವರಾಜ ಎಂಬುವರ ಮನೆಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟಿದ್ದಾರೆ ಎಂದು ಮಾಹಿತಿ ಸಿಕ್ಕಿತ್ತು. ತಕ್ಷಣವೇ ಅಧಿಕಾರಿಗಳು ಬಸವರಾಜ ದುತ್ತನ್ನವರ್ ಎಂಬುವವರ ಮನೆ ಎಂಟ್ರಿಕೊಟ್ಟಾಗ ಶಾಕ್ ಕಾದಿತ್ತು. ಯಾಕಂದ್ರೆ ಒಳಹೊಕ್ಕ ಚುನಾವಣಾ ಕ್ಷಿಪ್ರ ಕಾರ್ಯಪಡೆ ಮನೆಯ ಮೂಲೆ ಮೂಲೆಯಲ್ಲಿ ಹುಡುಕಾಡಿದ್ದರು. ಆದ್ರೆ, ಎಲ್ಲೂ ಮದ್ಯದ ಬಾಟಲಿ ಸಿಕ್ಕಿಲ್ಲ. ಬದಲಾಗಿ ಕಂತೆ ಕಂತೆ 18 ಕೋಟಿ ರೂಪಾಯಿ ಹಣ ಸಿಕ್ಕಿದೆ. ಈ ಹಣದ ರಾಶಿ ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಬಳಿಕ ಅಧಿಕಾರಿಗಳು ಹಣದ ಮೂಲದ ಬಗ್ಗೆ ತೀವ್ರ ವಿಚಾರಣೆ ಮಾಡಿದ್ದು, ಇದೀಗ ಐಟಿ ಅಧಿಕಾರಿಗಳು ಸಿಕ್ಕ 18 ಕೋಟಿ ರೂಪಾಯಿ ಹಣವನ್ನು ಹುಬ್ಬಳ್ಳಿಯ ಕೇಶ್ವಾಪುರದ ಎಸ್‌ಬಿಐ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿ ಐಟಿ ಖಾತೆಗೆ ಜಮೆ ಮಾಡಿದ್ದಾರೆ.
ಉದ್ಯಮಿ ಯು.ಬಿ ಶೆಟ್ಟಿ ಸೇರಿರುವ ಈ ಹಣವನ್ನು ಅಕೌಂಟೆಂಟ್ ಬಸವರಾಜ ಮನೆಯಲ್ಲಿ ಇಡಲಾಗಿತ್ತು. ಉದ್ಯಮಿ ಯುಬಿ ಶೆಟ್ಟಿ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತ ಎನ್ನಲಾಗಿದೆ. ಇನ್ನು ಬೆಳಗಾವಿ ಹಾಗೂ ಧಾರವಾಡ ಲೋಕಸಭಾ ಚುನಾವಣೆಗೆ ಈ ಹಣವನ್ನು ಮೀಸಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಲಾಗಿತ್ತು ಎನ್ನುವ ಆರೋಪಗಳು ಕೇಳಿಬಂದಿವೆ. ಇನ್ನು ಈ ಹಣದ ಬಗ್ಗೆ ಐಟಿ ಅಧಿಕಾರಿಗಳು ಉದ್ಯಮಿ ಯು.ಬಿ ಶೆಟ್ಟಿ ಅವರ ಅಕೌಂಟೆಂಟ್ ಬಸವರಾಜ ಅವರನ್ನು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ನಿನ್ನೆ(ಏಪ್ರಿಲ್ 16) ರಾತ್ರಿಯಿಂದಲೂ ಹಣವನ್ನ ಎಣಿಕೆ ಮಾಡಿದ್ದು, ಇದೀಗ ಎಲ್ಲ ಪ್ರಕ್ರಿಯೆ ಮುಗಿದಿವೆ. ಹೀಗಾಗಿ ಅಧಿಕಾರಿಗಳು 18 ಕೋಟಿ ಹಣವನ್ನು 18 ಬ್ಯಾಗ್‌ಗಳಲ್ಲಿ ಎರಡು ಇನ್ನೋವಾ ಕಾರುಗಳಲ್ಲಿ ತುಂಬಿಕೊಂಡು ಪೊಲೀಸ್ ಭದ್ರತೆಯೊಂದಿಗೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ತೆರಳಿ, ಐಟಿ ಇಲಾಖೆ ಖಾತೆಗೆ ಜಮೆ ಮಾಡಿದ್ದಾರೆ.
ಇದನ್ನೂ ಓದಿ: ಧಾರವಾಡದಲ್ಲಿ ಸಿಕ್ಕ 18 ಕೋಟಿ ಹಣದ ಮೂಲ ಪತ್ತೆ: ಪ್ರಕರಣ ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆ!
ಯಾವಾಗ ಇಷ್ಟೊಂದು ಹಣ ಸಿಕ್ಕಿತೋ ಆಗ ಚುನಾವಣಾ ಕ್ಷಿಪ್ರ ಕಾರ್ಯಪಡೆ ಮತ್ತಷ್ಟು ಅಲರ್ಟ್ ಆಯ್ತು. ತಕ್ಷಣವೇ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದರು. ಇಷ್ಟೊಂದು ಹಣ ಸಿಗುತ್ತಿದ್ದಂತೆಯೇ ಈ ಕೇಸ್ಗೆ ಐಟಿ ಎಂಟ್ರಿ ನೀಡಿತ್ತು. ಹಣ ಎಣಿಸುವ ಮಷಿನ್ ಸಮೇತ ಬಂದ ಐಟಿ ಅಧಿಕಾರಿಗಳು ಅಷ್ಟೂ ಹಣವನ್ನು ಜಪ್ತಿ ಮಾಡಿಕೊಂಡು, ಬಸವರಾಜ ದತ್ತನವರ್ ಅವರನ್ನ ತಡರಾತ್ರಿವರೆಗೂ ವಿಚಾರಣೆ ನಡೆಸಿದ್ರು. ಈ ವೇಳೆ ಬಸವರಾಜ, ನಾನು ಧಾರವಾಡದ ಉದ್ಯಮಿ ಯು.ಬಿ.ಶೆಟ್ಟಿ ಅಕೌಂಟೆಂಟ್ ಎಂದು ಹೇಳಿಕೊಂಡಿದ್ದು, ಬೆಂಗಳೂರಿನ ರಾಮಲಿಂಗಂ ಕನಸ್ಟ್ರಕ್ಷನ್ಗೆ ಸಂಬಂಧಿಸಿದ ದಾಖಲೆಗಳನ್ನೂ ಸಹ ನೀಡಿದ್ದಾರೆ. ಈ ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿದ್ದರು.
ಇನ್ನು ಇಷ್ಟೊಂದು ಹಣವನ್ನು ಇಲ್ಲೇಕೆ ಸಂಗ್ರಹಿಸಿ ಇಡಲಾಗುತ್ತು ಎನ್ನುವುದ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಆದರೆ ಅಸಲಿ ಕಥೆ ಏನು ಎನ್ನುವುದನ್ನು ಐಟಿ ಅಧಿಕಾರಿಗಳೇ ಬಹಿರಂಗಪಡಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.