
ಧಾರವಾಡ, ಸೆಪ್ಟೆಂಬರ್ 18: ಆಹಾರ ಇಲಾಖೆಯ ಸರ್ವರ್ ಸಮಸ್ಯೆಯಿಂದಾಗಿ ರಾಜ್ಯದ ಪಡಿತರದಾರರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇ-ಕೆವೈಸಿ ಮಾಡಿಸಲು ಪರದಾಡಿದ್ದ ಜನರು, ಇದೀಗ ಅನ್ನಭಾಗ್ಯ ಯೋಜನೆಯಡಿ ಪಡಿತರ ಧಾನ್ಯ ಪಡೆಯಲು ಕೂಡ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳ ಪೈಕಿ ಅನ್ನಭಾಗ್ಯವೂ ಒಂದಾಗಿದ್ದು, ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಮಾಸಿಕ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಪಡಿತರ ಪಡೆಯಲು ಜನರು ತಮ್ಮ ದೈನಂದಿನ ಕೂಲಿ ಕೆಲಸವನ್ನೂ ಬಿಟ್ಟು ರೇಷನ್ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾಯುವಂತಾಗಿದೆ.
ಹುಬ್ಬಳ್ಳಿ ನಗರದ ಮಂಜುನಾಥನಗರದಲ್ಲಿರುವ ಪಡಿತರ ಅಂಗಡಿ ಮುಂದೆ ಬೆಳಗ್ಗೆ 6 ಗಂಟೆಯಿಂದಲೇ ಜನರು ಸರದಿ ಸಾಲಿನಲ್ಲಿ ನಿಂತಿದ್ದರು. ಕೆಲವರಿಗೆ ಒಂದು ಗಂಟೆಯೊಳಗೆ ಪಡಿತರ ಸಿಕ್ಕರೆ, ಇನ್ನು ಕೆಲವರು ಎರಡು-ಮೂರು ಗಂಟೆ ಕಾಯಬೇಕಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿರುವುದರಿಂದ ಕೆಲವರು ನಾಲ್ಕೈದು ಗಂಟೆಗಳವರೆಗೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಪಡಿತರ ವಿತರಿಸುವ ಮುನ್ನ ಫಲಾನುಭವಿಗಳ ಹೆಬ್ಬೆರಳಿನ ದೃಢೀಕರಣ ಪಡೆದು, ಸಿಸ್ಟಂನಲ್ಲಿ ಅನುಮೋದನೆ ನೀಡಬೇಕಿದೆ. ಆದರೆ ಸರ್ವರ್ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಒಬ್ಬೊಬ್ಬ ಫಲಾನುಭವಿಯ ನೋಂದಣಿ ಹಾಗೂ ದೃಢೀಕರಣಕ್ಕೆ 15ರಿಂದ 20 ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎನ್ನಲಾಗಿದೆ. ಹೀಗಾಗಿ ನಿನ್ನೆ ಪಡಿತರಕ್ಕಾಗಿ ಕಾದು ವಾಪಸ್ ತೆರಳಿದ್ದವರೂ ಇಂದು ಮತ್ತೆ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ.
ಇದು ಕೇವಲ ಒಂದು ಪಡಿತರ ಅಂಗಡಿಗೆ ಸೀಮಿತವಾಗಿಲ್ಲ. ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿದ್ದು, ಪಡಿತರ ಅಂಗಡಿಗಳ ಮುಂದೆ ಜನರು ಗಂಟೆಗಟ್ಟಲೆ ಕಾಯುವಂತಾಗಿದೆ ಎಂದು ವರದಿಯಾಗಿದೆ.
ಆಹಾರ ಇಲಾಖೆ ಪಡಿತರದಾರರಿಗೆ ಇ-ಕೆವೈಸಿಯನ್ನು ಕಡ್ಡಾಯಗೊಳಿಸಿದ ಸಂದರ್ಭದಲ್ಲಿ ಕೂಡ ಸರ್ವರ್ ಸಮಸ್ಯೆ ಜನರನ್ನು ಕಾಡಿತ್ತು. ಇ-ಕೆವೈಸಿ ಮಾಡಿಸಿಕೊಳ್ಳಲು ಹಲವು ದಿನಗಳ ಕಾಲ ರೇಷನ್ ಅಂಗಡಿಗಳ ಮುಂದೆ ಕಾದಿದ್ದ ಜನರು, ಇದೀಗ ಪಡಿತರ ಪಡೆಯುವಾಗಲೂ ಇದೇ ಸಮಸ್ಯೆ ಎದುರಿಸುವಂತಾಗಿದೆ.
ಈ ಹಿಂದೆ ಒಟಿಪಿ ಮೂಲಕ ನೋಂದಣಿ ಮಾಡಲಾಗುತ್ತಿತ್ತು. ಆದರೆ ಇದರಲ್ಲಿ ಅಕ್ರಮಗಳು ನಡೆದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಹೆಬ್ಬೆರಳಿನ ದೃಢೀಕರಣವನ್ನು ಕಡ್ಡಾಯಗೊಳಿಸಿದೆ. ಹೀಗಾಗಿ ಪಡಿತರ ಪಡೆಯುವವರು ಕಡ್ಡಾಯವಾಗಿ ಬಯೋಮೆಟ್ರಿಕ್ ದೃಢೀಕರಣ ನೀಡಬೇಕಾಗಿದೆ.
ಹೆಬ್ಬೆರಳಿನ ದೃಢೀಕರಣದ ಬಳಿಕ ಅನುಮೋದನೆ ದೊರೆಯಲು 15 ನಿಮಿಷದಿಂದ ಅರ್ಧ ಗಂಟೆಯವರೆಗೆ ಸಮಯ ತೆಗೆದುಕೊಳ್ಳುತ್ತಿದೆ ಎನ್ನಲಾಗಿದೆ. ಕಳೆದ ನಾಲ್ಕೈದು ತಿಂಗಳಿಂದ ಇದೇ ರೀತಿಯ ಸಮಸ್ಯೆ ಎದುರಾಗುತ್ತಿದೆ ಎಂದು ಪಡಿತರದಾರರು ತಿಳಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಎಂಬುದು ಅವರ ಆರೋಪ.
ಸ್ಥಳೀಯ ಆಹಾರ ಇಲಾಖೆ ಅಧಿಕಾರಿಗಳೂ ಈ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಆದರೂ ಸರ್ವರ್ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಕೂಲಿ ಕೆಲಸ ಬಿಟ್ಟು ಪಡಿತರ ಪಡೆಯಲು ಅಂಗಡಿಗಳ ಮುಂದೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ವರ್ ಸಮಸ್ಯೆಯಿಂದ ಪಡಿತರ ವಿತರಕರು ಹಾಗೂ ಫಲಾನುಭವಿಗಳಿಬ್ಬರೂ ತೊಂದರೆ ಅನುಭವಿಸುತ್ತಿದ್ದು, ಆಹಾರ ಇಲಾಖೆ ಕೂಡಲೇ ತಾಂತ್ರಿಕ ಸಮಸ್ಯೆ ಬಗೆಹರಿಸಿ ಪಡಿತರ ವಿತರಣೆ ಸುಗಮಗೊಳಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ