AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ಸಂದರ್ಭದಲ್ಲಿ ಜನರಿಗೆ ಬೆಲೆ ಏರಿಕೆಯ ಬರೆ: ಕಾಂಗ್ರೆಸ್​ ವಿರುದ್ಧ ವಿಜಯೇಂದ್ರ ಕಿಡಿ; ನ.11ರಂದು ಪ್ರತಿಭಟನೆ

ದೀಪಾವಳಿ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಬೆಲೆ ಏರಿಕೆ ಮೂಲಕ ಜನರಿಗೆ ಆರ್ಥಿಕ ಸಂಕಷ್ಟ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್, ಹಾಲು, ಸಾರಿಗೆ ದರ ಏರಿಕೆ ಜನಸಾಮಾನ್ಯರು, ರೈತರು, ಬಡವರ ಬದುಕು ದುಸ್ತರಗೊಳಿಸಿದೆ. ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ ಅವರು, ಬೆಲೆ ಏರಿಕೆ ವಿರುದ್ಧ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಜನರಿಗೆ ಬೆಲೆ ಏರಿಕೆಯ ಬರೆ: ಕಾಂಗ್ರೆಸ್​ ವಿರುದ್ಧ ವಿಜಯೇಂದ್ರ ಕಿಡಿ; ನ.11ರಂದು ಪ್ರತಿಭಟನೆ
ಬಿವೈ ವಿಜಯೇಂದ್ರ
ಗಂಗಾಧರ​ ಬ. ಸಾಬೋಜಿ
|

Updated on: Nov 08, 2026 | 6:11 PM

Share

ಮುಖ್ಯಾಂಶಗಳು

  • ರೈತರಿಗೆ ನೀಡುವ ಪ್ರೋತ್ಸಾಹಧನದ ಹೊರೆ ಸರ್ಕಾರವೇ ಹೊರಬೇಕು
  • ಬೆಲೆ ಏರಿಕೆ ನಿರ್ಧಾರ ಕೂಡಲೇ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ
  • ನವೆಂಬರ್ 11ರಂದು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ

ಬೆಂಗಳೂರು, ನವೆಂಬರ್​​ 08: ‘ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಆದರೆ, ಇಂತಹ ಸಂಭ್ರಮದ ಸಂದರ್ಭದಲ್ಲಿ ರಾಜ್ಯದ ಜನತೆ ಸಂತೋಷದಿಂದ ಹಬ್ಬ ಆಚರಿಸುವ ವಾತಾವರಣವನ್ನು ಕಾಂಗ್ರೆಸ್ ಸರ್ಕಾರ ನಿರ್ಮಿಸಿಲ್ಲ. ಬಡವರು, ರೈತರು, ವೃದ್ಧರು, ಯುವಕರು ಸೇರಿದಂತೆ ಜನಸಾಮಾನ್ಯರು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಹಬ್ಬದ ಸಂದರ್ಭದಲ್ಲಿ ಜನರ ಮೇಲೆ ಬೆಲೆ ಏರಿಕೆಯ ಗದಾಪ್ರಹಾರ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ತೀವ್ರ ನೋವಿನಿಂದ ಮಾತನಾಡಬೇಕಾದ ಪರಿಸ್ಥಿತಿ ಎದುರಾಗಿದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದರ ಹೆಚ್ಚಳ ಮೂಲಕ ಜನರ ಬದುಕನ್ನ ಮತ್ತಷ್ಟು ದುಸ್ತರಗೊಳಿಸಿದೆ: ಬಿವೈ ವಿಜಯೇಂದ್ರ

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಮೂರು ವರ್ಷಗಳ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದರೆ ನಿರಂತರ ಬೆಲೆ ಏರಿಕೆ ಒಂದೇ. ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ, ಮದ್ಯದ ದರ ಏರಿಕೆ, ನೀರಿನ ದರ ಹೆಚ್ಚಳ, ವನ್ಯಜೀವಿ ಸಫಾರಿ ಟಿಕೆಟ್ ದರ ಹೆಚ್ಚಳ, ಸರ್ಕಾರಿ ಆಸ್ಪತ್ರೆಗಳ ಎಕ್ಸ್‌ರೇ ಮತ್ತು ಹೊರರೋಗಿಗಳ ಸಮಾಲೋಚನಾ ಶುಲ್ಕ ಹೆಚ್ಚಳ ಹೀಗೆ ಜನಸಾಮಾನ್ಯರ ಮೇಲೆ ಒಂದರ ಹಿಂದೆ ಒಂದರಂತೆ ಹೊರೆ ಹಾಕಲಾಗಿದೆ. ಇದೀಗ ಹಾಲು, ಮೊಸರು, ತುಪ್ಪ ಹಾಗೂ ಬಸ್ ಪ್ರಯಾಣ ದರ ಹೆಚ್ಚಳದ ಮೂಲಕ ಜನರ ಬದುಕನ್ನು ಮತ್ತಷ್ಟು ದುಸ್ತರಗೊಳಿಸಲಾಗಿದೆ’ ಎಂದು ಅವರು ಟೀಕಿಸಿದರು.

ಹಾಲು, ಮೊಸರು, ತುಪ್ಪದ ದರ ಏರಿಕೆ ಜನಸಾಮಾನ್ಯರಿಗೆ ಮರ್ಮಾಘಾತ

‘ಹಾಲಿನ ದರವನ್ನು ಲೀಟರ್‌ಗೆ 8 ರೂ. ಹೆಚ್ಚಿಸುವುದಾಗಿ ಘೋಷಿಸಿದ ಸರ್ಕಾರ, ವಾಸ್ತವದಲ್ಲಿ ವಿವಿಧ ಉತ್ಪನ್ನಗಳ ದರವನ್ನು 12ರಿಂದ 13 ರೂ.ವರೆಗೆ ಹೆಚ್ಚಿಸಿದೆ. ಒಂದು ಕೆ.ಜಿ. ತುಪ್ಪದ ದರದಲ್ಲಿ 180 ರೂ. ಹೆಚ್ಚಳವಾಗಿದೆ. ಮೊಸರಿನ ದರದಲ್ಲೂ 14 ರೂ. ಏರಿಕೆ ಮಾಡಲಾಗಿದೆ. ತುಪ್ಪವೇನೂ ಐಷಾರಾಮಿ ವಸ್ತುವಲ್ಲ. ಸಾಮಾನ್ಯ ಕುಟುಂಬಗಳೂ ಬಳಸುವ ಅಗತ್ಯ ಆಹಾರ ಪದಾರ್ಥವಾಗಿದೆ’. ಗ್ರಾಮೀಣ ಭಾಗದಲ್ಲಿ ಊಟಕ್ಕೆ ಅಡುಗೆ ಇಲ್ಲದಿದ್ದರೂ ಒಂದು ಲೋಟ ಹಾಲು ಕುಡಿದು ಮಲಗಬಹುದು ಎಂಬ ಮಾತಿದೆ. ಆದರೆ ಇಂದು ಬಡ ಕುಟುಂಬಗಳು ಒಂದು ಲೋಟ ಹಾಲು ಖರೀದಿಸುವ ಮುನ್ನವೂ ಯೋಚಿಸುವ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದೆ’ ಎಂದರು.

ಇದನ್ನೂ ಓದಿ: ‘ಪೇ ಸಿಎಂ ಎಂದವರ ಹಣೆಬರಹವೀಗ ಫೋನ್ ಪೇ ಕಮಿಷನ್​​ನಲ್ಲಿ ಬಯಲು’: ಆರ್​​. ಅಶೋಕ್​​ ವ್ಯಂಗ್ಯ

‘ಹಾಲಿನ ದರ ಹೆಚ್ಚಳದಿಂದ ರೈತರಿಗೆ ಲಾಭವಾಗುವುದಾದರೆ ಅದನ್ನು ನಾವು ಸ್ವಾಗತಿಸುತ್ತೇವೆ. ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ ನೀಡುವ 7 ರೂ. ಪ್ರೋತ್ಸಾಹಧನದ ಹೊರೆಯನ್ನು ಸರ್ಕಾರವೇ ಭರಿಸಬೇಕು. ರೈತರಿಗೆ ಅನುಕೂಲ ಮಾಡಿಕೊಡುವುದು ಸರ್ಕಾರದ ಕರ್ತವ್ಯ. ಅದಕ್ಕಾಗಿ ಗ್ರಾಹಕರ ಮೇಲೆ ಸಂಪೂರ್ಣ ಹೊರೆ ಹಾಕುವುದು ಎಷ್ಟು ಸರಿ? ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೈನುಗಾರರಿಗೆ ನೀಡುತ್ತಿದ್ದ ಪ್ರೋತ್ಸಾಹಧನದ ಹೊರೆಯನ್ನು ಸರ್ಕಾರವೇ ಭರಿಸುತ್ತಿತ್ತು. ಅದೇ ಮಾದರಿಯನ್ನು ಈಗಿನ ಸರ್ಕಾರವೂ ಅನುಸರಿಸಬೇಕು’ ಎಂದು ಅವರು ಆಗ್ರಹಿಸಿದರು.

ಸಾರಿಗೆ ವ್ಯವಸ್ಥೆಯ ದುಸ್ಥಿತಿಗೆ ಶಕ್ತಿ ಯೋಜನೆಯೇ ಕಾರಣ

‘ಕೆಎಸ್‌ಆರ್‌ಟಿಸಿ ಸೇರಿದಂತೆ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.40ರಿಂದ 50ರಷ್ಟು ಹೆಚ್ಚಿಸುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಹಲವು ಕಡೆಗಳಲ್ಲಿ ಪ್ರಯಾಣಿಕರ ಮೇಲೆ ಶೇ.70ರಿಂದ 80ರವರೆಗೆ ಹೆಚ್ಚುವರಿ ಹೊರೆ ಬೀಳುತ್ತಿದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿರುವ ಸರ್ಕಾರ, ಸಾರಿಗೆ ನಿಗಮಗಳಿಗೆ ಪಾವತಿಸಬೇಕಾದ ಸಾವಿರಾರು ಕೋಟಿ ರೂ ಬಾಕಿ ಉಳಿಸಿಕೊಂಡಿದೆ. ಇದರಿಂದ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಬಸ್ ಡಿಪೋಗಳಲ್ಲಿ ಡೀಸೆಲ್ ಖರೀದಿಸಲೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ.50ರಷ್ಟು ಬಸ್‌ಗಳು ಸಮರ್ಪಕವಾಗಿ ಸಂಚರಿಸದಿರುವುದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ದುಸ್ಥಿತಿಗೆ ಕಾಂಗ್ರೆಸ್ ಸರ್ಕಾರದ ಆರ್ಥಿಕ ನಿರ್ವಹಣೆಯ ವೈಫಲ್ಯವೇ ಕಾರಣ’ ಎಂದು ಅವರು ದೂರಿದರು.

ಖಾಸಗಿ ಕಂಪನಿಗಳ ಸಿಎಸ್‌ಆರ್ ನಿಧಿಯ ಮೇಲೆ ಸರ್ಕಾರದ ಅವಲಂಬನೆ

‘ರಾಜ್ಯದ ಕನಿಷ್ಟ 2,000 ಸರ್ಕಾರಿ ಶಾಲೆಗಳನ್ನು ಖಾಸಗಿ ಕಂಪನಿಗಳು ದತ್ತು ತೆಗೆದುಕೊಳ್ಳಬೇಕು ಎಂದು ಸಿಎಂ ಕರೆ ನೀಡಿದ್ದಾರೆ. ಕಂಪನಿಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿ ಶಿಕ್ಷಣ ಕ್ಷೇತ್ರಕ್ಕೆ ನೆರವು ನೀಡುವುದರಲ್ಲಿ ತಪ್ಪಿಲ್ಲ. ಆದರೆ ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಜವಾಬ್ದಾರಿಯನ್ನೇ ಖಾಸಗಿ ಕಂಪನಿಗಳ ಮೇಲೆ ಹಾಕುವುದು ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ’ ಎಂದರು.

LIVE TV

‘ಸಚಿವರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೂ ಖಾಸಗಿ ಕಂಪನಿಗಳ ಸಿಎಸ್‌ಆರ್ ನಿಧಿಯನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲು ಸರ್ಕಾರದ ಬಳಿ ಹಣವಿಲ್ಲ ಎಂಬುದನ್ನು ಮುಖ್ಯಮಂತ್ರಿಗಳ ಹೇಳಿಕೆಗಳು ಬಹಿರಂಗಪಡಿಸುತ್ತಿವೆ. ಕರ್ನಾಟಕ ರಾಜ್ಯ ಇಂತಹ ಆರ್ಥಿಕ ದುಸ್ಥಿತಿಯನ್ನು ಹಿಂದೆಂದೂ ಕಂಡಿರಲಿಲ್ಲ. ರಾಜ್ಯದಲ್ಲಿ ಒಂದು ರೀತಿಯ ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಕಿಡಿಕಾರಿದರು.

ನವೆಂಬರ್ 11ರಂದು ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಪ್ರತಿಭಟನೆ

‘ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ ನಾಡಿನ ಜನರ ಪರವಾಗಿ ಹೋರಾಟ ನಡೆಸಲಿದೆ. ನವೆಂಬರ್ 11ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಒಂದು ದಿನದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಬಿಜೆಪಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮಾಜಿ ಚುನಾಯಿತ ಪ್ರತಿನಿಧಿಗಳು, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಯಕರು ಹಾಗೂ ಪಕ್ಷದ ರಾಜ್ಯ ಪದಾಧಿಕಾರಿಗಳು ಸೇರಿದಂತೆ ಎಲ್ಲ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ಸರ್ಕಾರಕ್ಕೆ ಜನರ ನೋವನ್ನು ತಲುಪಿಸಿ, ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆಯುವಂತೆ ಎಚ್ಚರಿಕೆ ನೀಡಲಾಗುವುದು’ ಎಂದರು.

‘ಇದಾದ ಬಳಿಕ ಜಿಲ್ಲಾ ಕೇಂದ್ರಗಳಲ್ಲಿ ನಡೆಯುತ್ತಿರುವ ಪಾದಯಾತ್ರೆಗಳಲ್ಲೂ ಬೆಲೆ ಏರಿಕೆ ವಿರುದ್ಧದ ಹೋರಾಟವನ್ನು ಮುಂದುವರಿಸಲಾಗುವುದು. ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಪ್ರತಿಭಟನೆ ನಡೆಸಲಾಗುವುದು. ಜನಸಾಮಾನ್ಯರು, ಬಡವರು ಮತ್ತು ರೈತರ ಪರವಾಗಿ ಬಿಜೆಪಿ ಯಾವುದೇ ಕಾರಣಕ್ಕೂ ಸುಮ್ಮನೆ ಕೂರುವುದಿಲ್ಲ’ ಎಂದು ಎಚ್ಚರಿಸಿದರು.

ಎಥೆನಾಲ್ ಮಿಶ್ರಣ ವಿವಾದ: ಮರುಪರೀಕ್ಷೆಗೆ ಸಿದ್ಧ

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ಮಾಡುತ್ತಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ‘ತೈಲ ಕಂಪನಿಗಳಾದ ಐಒಸಿ, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಈಗಾಗಲೇ ತಮ್ಮ ಸ್ಪಷ್ಟನೆ ನೀಡಿವೆ. ಗುಣಮಟ್ಟ ಪರೀಕ್ಷೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅನುಸರಿಸಿದ ಮಾನದಂಡಗಳ ಬಗ್ಗೆ ಕಂಪನಿಗಳು ಪ್ರಶ್ನೆ ಎತ್ತಿವೆ’ ಎಂದರು.

ಇದನ್ನೂ ಓದಿ: ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ: ಸಿಎಂ, ಸಚಿವರ ಮುಖವಾಡ ಧರಿಸಿ ಭಿಕ್ಷಾಟನೆ

‘ದೇಶದ ಸುಮಾರು 700ರಿಂದ 800 ಕಡೆಗಳಲ್ಲಿ ಪರೀಕ್ಷೆ ನಡೆಸಲಾಗಿದ್ದು, ರಾಜ್ಯ ಸರ್ಕಾರ ಆರೋಪಿಸಿರುವ ರೀತಿಯ ಸಮಸ್ಯೆ ಕಂಡುಬಂದಿಲ್ಲ ಎಂದು ಕಂಪನಿಗಳು ತಿಳಿಸಿವೆ. ಮರುಪರೀಕ್ಷೆ ನಡೆಸಲು ತಾವು ಸಿದ್ಧವಿರುವುದಾಗಿ ಕಂಪನಿಗಳು ಹೇಳಿವೆ. ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ರಾಜ್ಯ ಸರ್ಕಾರವೂ ಪರೀಕ್ಷೆಗೆ ಸಹಕರಿಸಲಿ. ಯಾವ ಮಾನದಂಡದ ಆಧಾರದ ಮೇಲೆ ಪರೀಕ್ಷೆ ನಡೆಸಲಾಗಿದೆ ಎಂಬುದನ್ನು ಬಹಿರಂಗಪಡಿಸಲಿ. ಜಂಟಿ ಪರೀಕ್ಷೆ ನಡೆಸಿ ಸತ್ಯಾಸತ್ಯತೆಯನ್ನು ಜನರ ಮುಂದೆ ಇಡೋಣ’ ಎಂದರು.

ರೈತರ ಸಾಲ ವಸೂಲಾತಿ ತಡೆಯಲು ಸರ್ಕಾರ ಗಟ್ಟಿಯಾದ ಕ್ರಮ ಕೈಗೊಳ್ಳಲಿ

‘ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದ್ದರೂ ರೈತರಿಗೆ ಬ್ಯಾಂಕ್‌ಗಳಿಂದ ಸಾಲ ವಸೂಲಾತಿ ನೋಟಿಸ್‌ಗಳು ಬರುತ್ತಿವೆ. ಬರಗಾಲದ ಸಂದರ್ಭದಲ್ಲಿ ಸಾಲ ವಸೂಲಿ ಮಾಡಬಾರದು ಎಂಬ ಸೂಚನೆಗಳಿದ್ದರೂ ರೈತರಿಗೆ ಕಿರುಕುಳ ಮುಂದುವರೆದಿದೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರ ಗಂಭೀರವಾಗಿ ವರ್ತಿಸಬೇಕು. ರೈತರಿಗೆ ನೀಡುವುದಾಗಿ ಘೋಷಿಸಿದ ಪರಿಹಾರ ಮತ್ತು ನೆರವು ಸಮರ್ಪಕವಾಗಿ ತಲುಪುತ್ತಿಲ್ಲ. ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ನೀಡಿದ ಭರವಸೆಗಳು ಕೂಡ ಅನುಷ್ಠಾನಗೊಳ್ಳುತ್ತಿಲ್ಲ. ಅಧಿಕಾರಿಗಳು ಮುಖ್ಯಮಂತ್ರಿಗಳ ಮಾತಿಗೂ ಬೆಲೆ ನೀಡದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಸಾಲ ವಸೂಲಾತಿ ತಡೆಯಲು ಮುಖ್ಯಮಂತ್ರಿಗಳು ಗಟ್ಟಿಯಾದ ನಿಲುವು ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಗಂಗಾಧರ​ ಬ. ಸಾಬೋಜಿ
ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್​
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​
ಮಂಜನ ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಮಂಜನ ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಹಾಸನಾಂಬೆ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಮುಗಿಬಿದ್ದ ಭಕ್ತರು
ಹಾಸನಾಂಬೆ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಮುಗಿಬಿದ್ದ ಭಕ್ತರು
ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?
ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ