ಹುಬ್ಬಳ್ಳಿ, ಜನವರಿ 3: ಕರ್ನಾಟಕದಲ್ಲಿ ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ ಈಗ ನಿತ್ಯದ ಜೀವನಕ್ಕೆ ಬೇಕಾದ ಎಲ್ಲ ದರಗಳು ಹೆಚ್ಚಾಗಿವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು. ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಖಂಡಿಸಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದೇಶದಲ್ಲಿ ಸುಳ್ಳು ಗ್ಯಾರಂಟಿ ಕೊಟ್ಟಿತ್ತು. ಅದು ಈಗ ಎಕ್ಸ್ಪೋಸ್ ಆಗುತ್ತಿದೆ. ಉಚಿತ ವಿದ್ಯುತ್ ಎಂದರು, ಈಗ ವಿದ್ಯುತ್ ದರ ಹೆಚ್ಚಳವಾಗಿದೆ. ಕಾಕಾಸಾಹೇಬ್ ಪಾಟೀಲ್, ಮಹದೇವಪ್ಪ ನಿನಗೂ ಫ್ರೀ ಅಂದರು. ಹಾಲು, ಪೆಟ್ರೋಲ್, ಡಿಸೇಲ್ಗೆ ಸೆಸ್ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಸ್ತಿ ನೋಂದಣಿ ದರ ಹೆಚ್ಚಳವಾಗಿದೆ. ಮದ್ಯದ ದರ ಹೆಚ್ಚಳವಾಗಿದೆ. ಈಗ ಸರ್ಕಾರ ಬಸ್ ಟಿಕೆಟ್ ದರ ಕೂಡ ಹೆಚ್ಚಳ ಮಾಡಿದೆ. ಹಿಮಾಚಲ ಪ್ರದೇಶದಲ್ಲಿ ಗ್ಯಾರಂಟಿಗಳನ್ನು ನಿಲ್ಲಿಸಲು ಹೊರಟಿದ್ದಾರೆ. ಅಧಿಕಾರಕ್ಕಾಗಿ ಯಾವ ಕೀಳುಮಟ್ಟಕ್ಕೂ ಇಳಿಯಲು ಕಾಂಗ್ರೆಸ್ನವರು ಹಿಂದೆ ಸರಿಯಲ್ಲ. ಕಾಂಗ್ರೆಸ್ನವರು ಬರೀ ಸುಳ್ಳು ಹೇಳುತ್ತಾರೆ, ನಿರ್ಲಜ್ಜರು ಎಂದು ವಾಗ್ದಾಳಿ ನಡೆಸಿದರು.
ಸಾರಿಗೆ ಸಂಸ್ಥೆ 2,000 ಕೋಟಿ ರೂಪಾಯಿ ಸಾಲ ಮಾಡುವ ಹಂತಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ನೌಕರರಿಗೆ ಸಂಬಳ ನೀಡಲು ಹಣ ಇಲ್ಲ. ಸಿದ್ದರಾಮಯ್ಯ ಸರ್ಕಾರ ದಿವಾಳಿ ಆಗಿದೆ ಎಂದು ಜೋಶಿ ವಾಗ್ದಾಳಿ ನಡೆಸಿದರು.
ಕೆಎಸ್ಆರ್ಟಿಸಿ ಬಸ್ ದರವನ್ನು ಶೇಕಡ 15ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಕರ್ನಾಟಕ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿತ್ತು. ಇದನ್ನು ಪ್ರತಿಪಕ್ಷ ಬಿಜೆಪಿ ಖಂಡಿಸಿದೆ. ಅಲ್ಲದೆ, ರಾಜ್ಯದಾದ್ಯಂತ ಇಂದು ಪ್ರತಿಭಟನೆ ನಡೆಸುತ್ತಿದೆ. ಬೆಂಗಳೂರಿನಲ್ಲಿ ಪ್ರತಿಭಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಯಿತು.
ಈ ಮಧ್ಯೆ, ಸರ್ಕಾರಿ ಬಸ್ ಟಿಕೆಟ್ ದರ ಏರಿಕೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹೆಣ್ಣು ಮಕ್ಕಳಿಗೆ ಉಚಿತ ಉಚಿತ ಎಂದುಕೊಂಡು, ಗಂಡಸರ ಜೇಬಿಗೆ ಸರ್ಕಾರ ಕತ್ತರಿ ಹಾಕುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಮತ್ತೊಬ್ಬ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಬೆಲೆ ಏರಿಕೆಗೆ ಸಿದ್ಧರಾಗಿ ಎಂಬ ಬಗ್ಗೆ ಸರ್ಕಾರ ಈಗಾಗಲೇ ಸೂಚನೆ ಕೊಟ್ಟಿದೆ. ಹಲವಾರು ಬಾರಿ ಬೆಲೆ ಏರಿಕೆ ಮಾಡಿದೆ. ಜನರು ಕೂಡ ಅಷ್ಟೇ, ಒಂದೆರಡು ದಿನ ವಿರೋಧ ವ್ಯಕ್ತಪಡಿಸಿ ಮರೆತುಬಿಡುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಜನರಿಗೆ ಬಿಗ್ ಶಾಕ್ ನೀಡಿದ ಸರ್ಕಾರ: ಬಸ್ ಪ್ರಯಾಣ ದರ ಶೇ 15ರಷ್ಟು ಏರಿಕೆ
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಇದೆ ಎಂಬುದೇ ಅನಿಸುತ್ತಿಲ್ಲ. ಸ್ವೇಚ್ಛಾಚಾರವಾಗಿ ಆಡಳಿತ ನಡೆಯುತ್ತಿದೆ. ಹೇಳೋರು ಕೇಳೋರು ಯಾರು ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ