
ಹುಬ್ಬಳ್ಳಿ, ಆಗಸ್ಟ್ 20: ಉತ್ತರ ಕರ್ನಾಟಕದ ಮೂರು ಜಿಲ್ಲೆಯ ಜನರು ಕಳೆದ ಅನೇಕ ವರ್ಷಗಳಿಂದ ಮಹದಾಯಿ ಕುಡಿಯುವ ನೀರಿನ ಯೋಜನೆಗಾಗಿ (Mahadayi River Project) ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಯೋಜನೆ ಮಾತ್ರ ಇನ್ನು ಜಾರಿಯಾಗುತ್ತಿಲ್ಲ. ಯೋಜನೆಗೆ ಒಂದಾದ ಮೇಲೆ ಒಂದು ಅಡ್ಡಿಗಳು ಬರುತ್ತಲಿದೆ. ಮತ್ತೊಂದಡೆ ರೈತರು ಮೇಲಿಂದ ಮೇಲೆ ಪ್ರತಿಭಟನೆ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಲ್ಲಿದ್ದಾರೆ. ಆದರೆ ಇದೇ ನೀರಿನ ಯೋಜನೆಗಾಗಿ ಪ್ರತಿಭಟನೆ ಮಾಡಿದ ರೈತರ ಮೇಲೆ ಪೊಲೀಸರು ಕೇಸ್ ಹಾಕಿದ್ದಾರೆ. ಇದೀಗ ನ್ಯಾಯಾಲಯದಿಂದ ವಿಚಾರಣೆಗಾಗಿ ಸಮನ್ಸ್ ನೀಡಲಾಗಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಹುಬ್ಬಳ್ಳಿ-ಧಾರವಾಡ ಸೇರಿದಂತೆ ಕಿತ್ತೂರು ಕರ್ನಾಟಕ ಬಾಗದ ಹದಿಮೂರು ಪಟ್ಟಣಗಳು ಮತ್ತು ನೂರಾರು ಗ್ರಾಮಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಉದ್ದೇಶಕ್ಕಾಗಿ ಮಹದಾಯಿ ಯೋಜನೆ ಜಾರಿಗೊಳಿಸಬೇಕು ಅಂತ ದಶಕಗಳಿಂದ ಜನರು ಆಗ್ರಹಿಸುತ್ತಿದ್ದಾರೆ. ಆದರೆ ಈ ಯೋಜನೆ ಕರ್ನಾಟಕ ಮತ್ತು ಗೋವಾ ನಡುವಿನ ಬಿಕ್ಕಟ್ಟಿಗೆ ಕಾರಣವಾಗಿದೆ. 2010ರಲ್ಲಿ ಕೇಂದ್ರ ಸರ್ಕಾರ ಮಹದಾಯಿ ಜಲವಿವಾದ ನ್ಯಾಯಾಧೀಕರಣ ರಚನೆ ಮಾಡಿತ್ತು. ಈ ನ್ಯಾಯಾಧೀಕರಣ, 2018ರಲ್ಲಿ ಅಂತಿಮ ತೀರ್ಪು ನೀಡಿತ್ತು. ಅದರಲ್ಲಿ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಿ ಆದೇಶಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಗೋವಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನಡೆ: ಇತ್ಯರ್ಥವಾಗುವವರೆಗೂ ಮಹದಾಯಿಗೆ ಅನುಮತಿ ಇಲ್ಲ ಎಂದ ಕೇಂದ್ರ
ಮತ್ತೊಂದಡೆ ಮಹದಾಯಿ ಯೋಜನೆಯ ಡಿಪಿಆರ್ಗೆ ಅನುಮತಿ ಸಿಕ್ಕರು ಕೂಡ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ ಸಿಕ್ಕಿಲ್ಲ. ಮಹದಾಯಿ ಯೋಜನೆಗೆ ಅನುಮತಿ ನೀಡದಂತೆ ಗೋವಾ ಸರ್ಕಾರ ಮೇಲಿಂದ ಮೇಲೆ ಕೇಂದ್ರದ ಮೇಲೆ ಒತ್ತಡ ಹೇರುತ್ತಲಿದೆ. ಜೊತೆಗೆ ಕೋರ್ಟ್ನಲ್ಲಿ ಕೂಡ ಯೋಜನೆಗೆ ಅನುಮತಿ ನೀಡದಂತೆ ಅರ್ಜಿ ಹಾಕಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕೂಡ ಮೇಲ್ಮನವಿ ಸಲ್ಲಿಸಿದೆ. ಸದ್ಯ ಯೋಜನೆಗೆ ಅಡ್ಡಿಯಾಗಿರುವುದು ವನ್ಯಜೀವಿ ಮಂಡಳಿ ಪರವಾನಗಿ ಮಾತ್ರ. ಆದರೆ ನಿರಂತರವಾಗಿ ಗೋವಾ ಸರ್ಕಾರ ವನ್ಯಜೀವಿ ಮಂಡಳಿ ಮೇಲೆ ಪ್ರಭಾವ ಬೀರುತ್ತಿದೆ. ಹೀಗಾಗಿ ಯೋಜನೆ ಜಾರಿಯಾಗುತ್ತಿಲ್ಲ. ಹೀಗಾಗಿ ಮಹದಾಯಿ ಹೋರಾಟಗಾರರು ಕಳೆದ ಡಿಸೆಂಬರ್ 2 ರಂದು ಬೆಂಗಳೂರಿನ ಕೋರಮಂಗಲದಲ್ಲಿರುವ ಕೇಂದ್ರ ಸರ್ಕಾರದ ವನ್ಯಜೀವಿ ಮಂಡಳಿಯ ಪ್ರಾದೇಶಕ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಆದಷ್ಟು ಬೇಗ ವನ್ಯಜೀವಿ ಮಂಡಳಿ ಪರವಾನಗಿ ನೀಡಬೇಕು ಅಂತ ಆಗ್ರಹಿಸಿದ್ದರು.
ಮಂಡಳಿಯ ಅಧಿಕಾರಿಗಳು ನಿಮ್ಮ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಕೈಬಿಟ್ಟಿದ್ದರು. ಆದರೆ ಅಂದು ಪ್ರತಿಭಟನೆ ನಡೆಸಿದ್ದಕ್ಕೆ ಮಡಿವಾಳ ಪೊಲೀಸ್ ಠಾಣೆಯಲ್ಲಿ 28 ಮಹದಾಯಿ ಹೋರಾಟಗಾರರ ವಿರುದ್ದ ಪ್ರಕರಣ ದಾಖಲಾಗಿದೆ. ಇದೀಗ ನ್ಯಾಯಾಲಯದಿಂದ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ಗಳು ಬರುತ್ತಿದ್ದು, ರೈತರ ಆಕ್ರೋಶವನ್ನು ಹೆಚ್ಚಿಸಿದೆ.
ಪ್ರತಿಭಟನೆ ನಡೆಸುವ ಮುನ್ನವೇ ಧಾರವಾಡ ಮತ್ತು ಗದಗ ಜಿಲ್ಲೆಯ ಮಹದಾಯಿ ಹೋರಾಟಗಾರರು ಇಲಾಖೆಗೆ, ಸಂಬಂಧ ಪಟ್ಟ ಪೊಲೀಸರಿಗೆ, ಸಚಿವರಿಗೆ ತಮ್ಮ ಪ್ರತಿಭಟನೆ ವಿಚಾರವನ್ನು ತಿಳಿಸಿದ್ದರು. ಇನ್ನು ಪ್ರತಿಭಟನೆ ದಿನವು ಸರ್ಕಾರಿ ಆಸ್ತಿ ಪಾಸ್ತಿ ಹಾನಿ ಮಾಡದೆ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರಂತೆ. ಅಂದು ಪೊಲೀಸರ ಸಮ್ಮುಖದಲ್ಲಿಯೇ ಅಧಿಕಾರಿಗಳು ಭರವಸೆ ನೀಡಿದಾಗ ಪ್ರತಿಭಟನೆ ಕೈಬಿಟ್ಟಿದ್ದರಂತೆ. ಆದರು ಕೂಡ ಬೆಂಗಳೂರು ಮಡಿವಾಳ ಠಾಣೆಯ ಪೊಲೀಸರು 28 ಮಹದಾಯಿ ಹೋರಾಟಗಾರರ ಮೇಲೆ ಕೇಸ್ ಹಾಕಿದ್ದಾರೆ. ಪ್ರಕರಣ ಹಾಕಿದ್ದರ ಬಗ್ಗೆ ಕೂಡ ಇಲ್ಲಿವರಗೆ ಯಾವ ರೈತರಿಗೂ ಮಾಹಿತಿಯನ್ನು ಕೂಡ ನೀಡಿಲ್ಲವಂತೆ. ಆದರೆ ಇದೀಗ ನ್ಯಾಯಾಲಯದಿಂದ ಸಮನ್ಸ್ಗಳು ಬಂದಾಗ ತಮ್ಮ ಮೇಲೆ ಪೊಲೀಸರು ಕೇಸ್ ಹಾಕಿರುವುದು ರೈತರಿಗೆ ಗೊತ್ತಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ನಮ್ಮ ಭಾಗದ ಕುಡಿಯುವ ನೀರಿಗಾಗಿ ಹೋರಾಟ ಮಾಡಿದ್ದೇವೆ. ಶಾಂತಿಯುತವಾಗಿ, ಯಾರಿಗೂ ತೊಂದರೆ ನೀಡದಂತೆ ಹೋರಾಟ ಮಾಡಿದರು ಕೂಡಾ ನಮ್ಮ ಮೇಲೆ ಕೇಸ್ ಹಾಕಲಾಗಿದೆ. ಕೂಡಲೇ ರೈತರ ಮೇಲೆ ಹಾಕಿರುವ ಕೇಸ್ ಹಿಂಪಡೆಯಬೇಕು ಅಂತ ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಜೊತೆಗೆ ತಮ್ಮ ಮೇಲೆ ಕೇಸ್ ಹಾಕಿರುವ ಪೊಲೀಸರ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಗುಡ್ ನ್ಯೂಸ್: ಕೊನೆಗೂ ಮಹದಾಯಿ ಯೋಜನೆ ಜಾರಿಗೆಗೆ ದಿಟ್ಟ ಹೆಜ್ಜೆ ಇಟ್ಟ ಸರ್ಕಾರ
ದಶಕಗಳಿಂದ ಕುಡಿಯುವ ನೀರು ಮತ್ತು ಕೃಷಿಗೆ ನೀರು ಇಲ್ಲದೇ ಪರದಾಡುತ್ತಿರುವ ಧಾರವಾಡ, ಬೆಳಗಾವಿ, ಗದಗ ಬಾಗದ ಜನರು ಯೋಜನೆ ಜಾರಿಗೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸಮನ್ವಯತೆಯನ್ನು ಸಾಧಿಸಿ, ಯೋಜನೆ ಜಾರಿಗೊಳಿಸಲು ಮುಂದಾಗಬೇಕಿದೆ. ಮತ್ತೊಂದಡೆ ನೀರಿಗಾಗಿ ಪ್ರತಿಭಟನೆ ಮಾಡಿದ ರೈತರ ಮೇಲೆ ಹಾಕಿರುವ ಕೇಸ್ಗಳನ್ನ ಹಿಂಪಡೆಯುವ ಕೆಲಸವನ್ನು ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.