ಶಿಕ್ಷಣ ಇಲಾಖೆಯಲ್ಲಿ ಸರ್ಜರಿ: 5 ವರ್ಷ ಮೇಲ್ಪಟ್ಟ ನೌಕರರಿಗೆ ಕಡ್ಡಾಯ ವರ್ಗಾವಣೆ; ಡೆಡ್‌ಲೈನ್ ಸಹ ಫಿಕ್ಸ್!

ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯಲ್ಲಿ 5 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ಸಿಬ್ಬಂದಿಗೆ ಕಡ್ಡಾಯ ವರ್ಗಾವಣೆಗೆ ಆದೇಶ ಹೊರಡಿಸಿದೆ. ಭ್ರಷ್ಟಾಚಾರ ನಿಯಂತ್ರಣ, ಪಾರದರ್ಶಕ ಆಡಳಿತ ನೀಡುವ ಉದ್ದೇಶದಿಂದ ಈ ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಇದು ಧಾರವಾಡ ಆಯುಕ್ತಾಲಯ ವ್ಯಾಪ್ತಿಯ ಸಾವಿರಾರು ಬೋಧಕೇತರ ನೌಕರರಲ್ಲಿ ಢವಢವ ಶುರುವಾಗಿದೆ.

ಶಿಕ್ಷಣ ಇಲಾಖೆಯಲ್ಲಿ ಸರ್ಜರಿ: 5 ವರ್ಷ ಮೇಲ್ಪಟ್ಟ ನೌಕರರಿಗೆ ಕಡ್ಡಾಯ ವರ್ಗಾವಣೆ; ಡೆಡ್‌ಲೈನ್ ಸಹ ಫಿಕ್ಸ್!
ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)
Image Credit source: tv9 kannada
Edited By:

Updated on: May 18, 2026 | 8:15 PM

ಧಾರವಾಡ, ಮೇ 18: ರಾಜ್ಯದಲ್ಲಿನ (Karnataka) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಖ್ಯಸ್ಥರುಗಳ ಕಚೇರಿಯಲ್ಲಿ ಬೀಡುಬಿಟ್ಟಿರುವ ನೌಕರರನ್ನು ಬದಲಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. 5 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದವರ ಪಟ್ಟಿ ಸಿದ್ಧಪಡಿಸಿ ಮೇ 28ರೊಳಗಾಗಿ ಕಡ್ಡಾಯ ವರ್ಗಾವಣೆಗೆ (transfer) ಸೂಚಿಸುವ ಮೂಲಕ ಶಿಕ್ಷಣ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದೆ. ಹೀಗಾಗಿ ಧಾರವಾಡ ಆಯುಕ್ತಾಲಯ ವ್ಯಾಪ್ತಿಯ ಬರೋಬ್ಬರಿ 1,026 ಬೋಧಕೇತರ ನೌಕರರಿಗೆ ಈಗ ದೊಡ್ಡ ಶಾಕ್ ಎದುರಾಗಿದೆ.

ಮುಖ್ಯಾಂಶಗಳು

  • ಶಿಕ್ಷಣ ಇಲಾಖೆಯ ಇತಿಹಾಸದಲ್ಲೇ ದಿಟ್ಟ ಹೆಜ್ಜೆ
  • ಧಾರವಾಡ ಆಯುಕ್ತಾಲಯವೊಂದರಲ್ಲೇ 1,026 ನೌಕರರ ವರ್ಗಾವಣೆ ಫಿಕ್ಸ್​​
  • ಸರಕಾರದ ನಿರ್ಧಾರಕ್ಕೆ ವ್ಯಾಪಕ ಪ್ರಶಂಸೆ

ಡಿಡಿಪಿಐ, ಅಪರ ಆಯುಕ್ತರ ಕಚೇರಿ ಸೇರಿದಂತೆ ಇಲಾಖೆ ಮುಖ್ಯಸ್ಥರುಗಳ ಕಚೇರಿಯಲ್ಲಿ 15ಕ್ಕೂ ಹೆಚ್ಚು ವರ್ಷಗಳಿಂದ ಸೂಪರಡೆಂಟ್, ಎಫ್‌ಡಿಎ, ಎಸ್‌ಡಿಎ, ಪ್ಯೂನ್ ಸೇರಿದಂತೆ ಎ,ಬಿ,ಸಿ,ಡಿ ವರ್ಗದ ನೌಕರರು ಸೇವೆ ಸಲ್ಲಿಸುತ್ತಿದ್ದರು. ಇದರಿಂದ ಪಾರದರ್ಶಕ ಆಡಳಿತ, ತ್ವರಿತ ಕೆಲಸಗಳಿಗೆ ಅಡ್ಡಿ ಆಗಿತ್ತು. ಕೆಲವೆಡೆ ಭ್ರಷ್ಟಾಚಾರದ ಆರೋಪಗಳೂ ಕೇಳಿ ಬಂದಿದ್ದವು. ಹೀಗಾಗಿ ಸರಕಾರ ಅಂಥವರನ್ನು ಗುರುತಿಸಿ ಕಡ್ಡಾಯ ವರ್ಗಾವಣೆಗೆ ಅಸ್ತು ಎಂದಿದೆ. ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಈ ಕುರಿತಂತೆ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರ 2026-27ನೇ ಸಾಲಿನ ವರ್ಗಾವಣೆ ಮಾರ್ಗಸೂಚಿ ಪ್ರಕಟ

ಮುಖ್ಯಸ್ಥರ ಕಚೇರಿಗಳಲ್ಲಿ 5 ವರ್ಷ ಪೂರ್ಣಗೊಳಿಸಿದ ಸಿ.ಡಿ ವೃಂದದ ನೌಕರರನ್ನು 2026-27ರ ಶೈಕ್ಷಣಿಕ ವರ್ಷದ ಆರಂಭದೊಳಗಡೆ ಕೌನ್ಸಿಲಿಂಗ್ ಮೂಲಕ ವರ್ಗಾಯಿಸಬೇಕು. ಈ ಪ್ರಕ್ರಿಯೆ ಇಲಾಖಾ ಮುಖ್ಯಸ್ಥರ ಹಂತದಲ್ಲಿಯೇ ಮಾಡಿ ವರ್ಗಾವಣೆ ಆದೇಶಗಳನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಇನ್ನು 5 ವರ್ಷ ಸೇವೆ ಪೂರ್ಣಗೊಂಡು, ವರ್ಗಾವಣೆಗೊಳಿಸಿದ್ದರೂ ಪುನಃ ಕೇಂದ್ರ ಕಚೇರಿಗೆ ಹಿಂದಿರುಗಿರುವ ಮತ್ತು ಪ್ರಸ್ತುತ 5 ವರ್ಷಗಳ ಸೇವೆ ಪೂರ್ಣಗೊಳಿಸಿದವರ ಕಡ್ಡಾಯ ವರ್ಗಾವಣೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಿದ್ದಾರೆ. ಅದರಂತೆ ಎಲ್ಲ ಮುಖ್ಯಸ್ಥರ ಕಚೇರಿಯಲ್ಲಿ ವರ್ಗಾವಣೆ ಪಟ್ಟಿ ಸಜ್ಜುಗೊಳ್ಳುತ್ತಿದೆ. ರಾಜ್ಯಾದ್ಯಂತ ಸಾವಿರಾರು ನೌಕರರು ಈ ರೀತಿ ದಶಕಗಳಿಂದ ಒಂದೇ ಕಡೆ ಸೇವೆ ಸಲ್ಲಿಸುತ್ತಿರುವ ಅಂದಾಜಿದೆ.

ಧಾರವಾಡ ವಿಭಾಗದಲ್ಲೇ 1,026 ನೌಕರರ ಪತ್ತೆ

ಶಾಲಾ ಶಿಕ್ಷಣ ಇಲಾಖೆ ಧಾರವಾಡ ಅಪರ ಆಯುಕ್ತರ ಕಚೇರಿಯಲ್ಲಿ 1,026 ಬೋಧಕೇತರ ನೌಕರರು 7-15 ವರ್ಷಗಳಿಂದ ಒಂದೆ ಕಡೆ ಕರ್ತವ್ಯ ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಆಯುಕ್ತಾಲಯ ಪಟ್ಟಿ ಸಿದ್ಧಪಡಿಸಿತ್ತಾದರೂ ಹಲವರು ಅದೇ ಸ್ಥಳದಲ್ಲಿ ಮುಂದುವರಿಯಲು ಪ್ರಭಾವ ಬಳಸುತ್ತಿದ್ದರು. ಆದರೆ ಈ ನೌಕರರು ಸಾರ್ವಜನಿಕರು ಮತ್ತು ಶಿಕ್ಷಕರಿಗೆ ಸ್ಪಂದಿಸುತ್ತಿಲ್ಲ. ಕಡತ ವಿಲೇವಾರಿ ವಿಳಂಬ ಆಗುತ್ತಿದೆ. ಭ್ರಷ್ಟಾಚಾರಗಳೂ ನಡೆಯುತ್ತಿವೆ ಎಂಬ ದೂರುಗಳು ಬಂದಿದ್ದರಿಂದ 2025 ಜುಲೈನಲ್ಲಿ ಸ್ವತಃ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಪರ ಆಯುಕ್ತರಿಗೆ ಪತ್ರ ಬರೆದಿದ್ದರು. ಇಷ್ಟಾದರೂ ಕೆಲವರು ಅಲ್ಲಿಯೇ ಉಳಿದುಕೊಂಡಿದ್ದರು.

ಜನಸಾಮಾನ್ಯರಿಂದ ವ್ಯಾಪಕ ಪ್ರಶಂಸೆ

ಇದೀಗ ಸರಕಾರವೇ ರಾಜ್ಯದ ಎಲ್ಲ ಮುಖ್ಯಸ್ಥರ ಕಚೇರಿಗಳಲ್ಲಿ 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರ ವರ್ಗಾವಣೆಯನ್ನು ಕಡ್ಡಾಯಗೊಳಿಸಿದೆ. ಸರಕಾರದ ಈ ನಿರ್ಧಾರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಒಂದೇ ಕಡೆ ಹಲವಾರು ವರ್ಷಗಳ ಕಾಲ ಕೆಲಸ ಮಾಡುವ ಸಿಬ್ಬಂದಿ, ಸಾಕಷ್ಟು ಭ್ರಷ್ಟಾಚಾರ ಮಾಡುತ್ತಾರೆ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಹೀಗಾಗಿ ಸರಕಾರದ ನಿರ್ಧಾರವನ್ನು ನಾಗರಿಕರು ಸ್ವಾಗತಿಸಿದ್ಧಾರೆ.

ಇದನ್ನೂ ಓದಿ: ಖಾಲಿ ಹುದ್ದೆಗಳ ಭರ್ತಿಗೆ ಹೋರಾಟಕ್ಕಿಳಿದವರ ಬಂಧನ: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಬಿತ್ತು ಬ್ರೇಕ್

ಇಲಾಖೆ ಮುಖ್ಯಸ್ಥರ ಕಚೇರಿಗಳಲ್ಲಿ 5 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ ನೌಕರರನ್ನು ಕಡ್ಡಾಯವಾಗಿ ವರ್ಗಾವಣೆಗೊಳಿಸಲು ಸರಕಾರ ಸೂಚನೆ ನೀಡಿದೆ. ಧಾರವಾಡ ಆಯುಕ್ತಾಲಯ ವ್ಯಾಪ್ತಿಯಲ್ಲಿ ಅಂಥವರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಈಗ ಸರಕಾರದ ನಿರ್ದೇಶನದ ಅನ್ವಯ 20 ದಿನಗಳ ಒಳಗಾಗಿ ವರ್ಗಾವಣೆಗೆ ಕ್ರಮ ಜರುಗಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಒಟ್ಟಿನಲ್ಲಿ ಹಲವಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕೂತಿದ್ದ ಅನೇಕ ನೌಕರರು ಇದೀಗ ಬೇರೆ ಬೇರೆ ಕಡೆಗೆ ವರ್ಗಾವಣೆಯಾಗುವುದು ಪಕ್ಕಾ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 8:11 pm, Mon, 18 May 26

Follow Us