ಎಂಎಲ್ಸಿ ಸ್ಥಾನಕ್ಕೆ ಮರಿತಿಬ್ಬೇಗೌಡ ರಾಜೀನಾಮೆ; ಜೆಡಿಎಸ್ ಪಕ್ಷಕ್ಕೂ ಗುಡ್ಬೈ
ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರು ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿರುವ ಸಭಾಪತಿ ಹೊರಟ್ಟಿ ನಿವಾಸದಲ್ಲಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನೂ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದರು. ಅಲ್ಲದೆ, ಪಕ್ಷ ತೊರೆಯುವ ಸುಳಿವು ನೀಡಿದರು.
ಹುಬ್ಬಳ್ಳಿ, ಮಾ.21: ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ (Martitibbe Gowda) ಅವರು ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿರುವ (Hubli) ಸಭಾಪತಿ ಹೊರಟ್ಟಿ ನಿವಾಸದಲ್ಲಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ರಾಜೀನಾಮೆ ಅಂಗೀಕರಿಸಿದ ಹೊರಟ್ಟಿ, ನಾನು ಎಲ್ಲವನ್ನು ಪ್ರಶ್ನೆ ಮಾಡಿದ್ದೇನೆ. ತಿಬ್ಬೇಗೌಡರು ಸ್ವ ಇಚ್ಛೆಯಿಂದ ರಾಜೀನಾಮೆ ಕೊಡುತ್ತಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ರಾಜೀನಾಮೆ ಅಂಗೀಕಾರ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ರಾಜೀನಾಮೆ ಸಲ್ಲಿಕೆ ಬಳಿಕ ಮಾತನಾಡಿದ ಮರಿತಿಬ್ಬೇಗೌಡ, ಮುಂದಿನ ಅವಧಿಗೆ ನಾನು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ. ಸಭಾಪತಿಗಳು ರಾಜೀನಾಮೆ ಅಂಗೀಕಾರ ಮಾಡಿದ್ದಾರೆ. ಸಭಾಪತಿಗೆ ಧನ್ಯವಾದಗಳು ಎಂದರು. ಅಲ್ಲದೆ, ಹೆಚ್ಡಿ ದೇವೇಗೌಡ (HD Deve Gowda), ಹೆಚ್ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಅಸಮಾಧಾನ ಹೊರಹಾಕಿದ ಮರಿತಿಬ್ಬೇಗೌಡ ಅವರು ಪಕ್ಷಕ್ಕೂ ಗುಡ್ಬೈ ಹೇಳಿದ್ದಾರೆ.
ಕೆಲವು ವಯಕ್ತಿಕ ಕಾರಣದಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ. ನಾನು ಜನತಾ ದಳದಿಂದ ಎರಡು ಬಾರಿ ಟಿಕೆಟ್ ಪಡೆದಿದ್ದೆ. ಎರಡು ಬಾರಿ ಜನತಾದಳದಿಂದ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಗೆದ್ದಿದೆ. ಈ ಅವಧಿಯಲ್ಲಿ ವಿಧಾನ ಪರಿಷತ್ ಉಪ ಸಭಾಪತಿ ಆಗಿದ್ದೆ. ನನ್ನ ರಾಜಕೀಯ ಪ್ರಾರಂಭವಾಗಿದ್ದು ಜನತಾ ದಳದಿಂದ. ಕೆಲವು ಸಲ ವಿಧಾನ ಪರಿಷತ್ ಹಾಗೂ ವಿಧಾನಸಭೆ ಟಿಕೆಟ್ ನನಗೆ ಸಿಗಲಿಲ್ಲ ಎಂದರು.
ಇದನ್ನೂ ಓದಿ: ಬಿಜೆಪಿ ತೊರೆದ ಸಂಸದ ಬಿ.ಎನ್ ಬಚ್ಚೇಗೌಡ, ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ
2000 ಜೂನ್ನಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದೆ. ಎರಡನೇ ಬಾರಿ ಪಕ್ಷೇತರವಾಗಿ ಗೆದ್ದು ಬಂದಿದ್ದೆ. ಮೂರು ನಾಲ್ಕನೇ ಬಾರಿ ನಾನು ಜನತಾದಳದಿಂದ ಗೆದ್ದು ಬಂದಿದ್ದೇನೆ. ಪಕ್ಷದ ನಿಷ್ಠಾವಂತ ಸದಸ್ಯನಾಗಿ ಕೆಲಸ ಮಾಡಿದ್ದೇನೆ ಎಂದರು.
ಜೆಡಿಎಸ್ ವರಿಷ್ಠರ ವಿರುದ್ಧ ಮರಿತಿಬ್ಬೇಗೌಡ ಅಸಮಾಧಾನ
ಜನತಾದಳದ ವರಿಷ್ಠ ಹೆಚ್ಡಿ ದೇವೆಗೌಡ, ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಅವರು ನಮಗೆ ಸರಿಯಾಗಿ ಸ್ಪಂದಿಸಲಿಲ್ಲ. ನಿಷ್ಠಾವಂತರನ್ನು ಕಡೆಗಣನೆ ಮಾಡಿದ್ದಾರೆ. ನಾವು ಈ ವಿಷಯ ಅವರಿಗೆ ಹೇಳಿದರೆ, ಅದು ನಮ್ಮ ವರಿಷ್ಠರಿಗೆ ಹಿಡಸಲಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಅಲ್ಲದೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಮಂಡ್ಯದಿಂದ ಅಭ್ಯರ್ಥಿ ಗೆ ಘೋಷಣೆ ಮಾಡಿದರು. ಆದರೆ ನಾನು ನಿಖಿಲ್ ಸ್ಪರ್ಧೆಗೆ ವಿರೋಧ ಮಾಡಿದ್ದೆ. ಮಂಡ್ಯ ಜಿಲ್ಲೆಯವರಿಗೆ ಟಿಕೆಟ್ ಕೊಡಿ ಅಂದಿದ್ದೆ. ಹೀಗಾಗಿ ವರಿಷ್ಠರು ನನ್ನ ಮೇಲೆ ನಂಬಿಕೆ ಇಡಲಿಲ್ಲ ಎಂದರು.
ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ಮರಿತಿಬ್ಬೇಗೌಡ ರಾಜೀನಾಮೆ
ನಾನು ಶಿಕ್ಷಕ ಬಂಧುಗಳ ಜೊತೆ ಸಮಾಲೋಚನೆ ಮಾಡಿ ನಿರ್ಧಾರ ಮಾಡಿದ್ದೇನೆ. ಎಲ್ಲರೂ ಪಕ್ಷ ಬಿಡಿ ಎಂದು ಅಭಿಪ್ರಾಯ ಸೂಚಿಸಿದ್ದಾರೆ. ಹೀಗಾಗಿ ನಾನು ರಾಜೀನಾಮೆ ನೀಡಿದ್ದೇನೆ. ಶೀಘ್ರವೇ ನನ್ನ ಮುಂದಿನ ನಡೆ ತಿಳಿಸಲಾಗುವುದು ಎಂದು ಹೇಳುವ ಮೂಲಕ ಪರೋಕ್ಷವಾಗಿ ಮರಿತಿಬ್ಬೇಗೌಡ ಅವರು ಜೆಡಿಎಸ್ ತೊರೆಯುವ ಸುಳಿವು ನೀಡಿದರು.
ಬಸವರಾಜ್ ಹೊರಟ್ಟಿ ನನ್ನ ರಾಜಕೀಯ ಗುರುಗುಳು. ಇವತ್ತು ನಾನು ಅವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಮರಿತಿಬ್ಬೇಗೌಡ ಹೇಳಿದರು. ನಮ್ಮ ಪಕ್ಷದ ನಾಯಕರು ಮೊಸಳೆ ಮೇಲೆ ಸವಾರಿ ಮಾಡುತ್ತಿದ್ದಾರೆ. ಮೊಸುಳೆ ಅಂದರೆ ಬಿಜೆಪಿ. ಮೊಸುಳೆ ಸವಾರಿ ಅವರಿಗೆ ಒಳ್ಳೆದಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿ ಜೊತೆಗಿನ ಮೈತ್ರಿಗೆ ತನ್ನ ವಿರೋಧ ಇದೆ ಎಂಬ ಸಂದೇಶ ರವಾನಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ