ಹುದ್ದೆಗಳನ್ನು ಕಡಿತ ಮಾಡಿದ NWKRTC: ನೌಕರಿ ಆಸೆಯಲ್ಲಿದ್ದವರ ಕನಸಿಗೆ ತಣ್ಣೀರೆರಚಿದ ನಿಗಮ

ಸಾವಿರಾರು ಅಭ್ಯರ್ಥಿಗಳು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನೌಕರಿ ಸಿಗುವ ಆಸೆಯಲ್ಲಿದ್ದರು. ಅರ್ಜಿ ಹಾಕಿ, ನೌಕರಿಗಾಗಿ ಆರು ವರ್ಷದಿಂದ ಕಾದಿದ್ದರು. ನಿಗಮದ ಅಧಿಕಾರಿಗಳು ಕೂಡ ಇಂದು ನೇಮಕಾತಿ ಪತ್ರ ನೀಡುತ್ತೇವೆ, ನಾಳೆ ನೀಡುತ್ತೇವೆ ಅಂತ ಹೇಳುತ್ತಲೇ ಬಂದಿದ್ದರು. ಇಂದಲ್ಲ, ನಾಳೆ ನೌಕರಿ ಸಿಗುತ್ತದೆ ಅನ್ನೋ ವಿಶ್ವಾಸದಲ್ಲಿದ್ದವರಿಗೆ ಇದೀಗ ಬಿಗ್ ಶಾಕ್ ಉಂಟಾಗಿದೆ. ಆರ್ಥಿಕ ನೆಪವೊಡ್ಡಿ, ನಿಗಮ ಹುದ್ದೆಗಳನ್ನು ಕಡಿತ ಮಾಡಿದ್ದು, ಸಾವಿರಾರು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಹುದ್ದೆಗಳನ್ನು ಕಡಿತ ಮಾಡಿದ NWKRTC:  ನೌಕರಿ ಆಸೆಯಲ್ಲಿದ್ದವರ ಕನಸಿಗೆ ತಣ್ಣೀರೆರಚಿದ ನಿಗಮ
ಪ್ರತಿಭಟನಾಕಾರರು, ಎನ್​ಡಬ್ಲೂಕೆಆರ್​ಟಿಸಿ
Edited By:

Updated on: Jun 09, 2025 | 10:01 PM

ಹುಬ್ಬಳ್ಳಿ, ಜೂನ್​ 09: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (NWKRTC) ಚಾಲಕ, ನಿರ್ವಾಹಕ ಆಗಬೇಕು ಅಂತ ಕನಸು ಕಂಡವರು ಸೋಮವಾರ (ಜೂ.09) ಹುಬ್ಬಳ್ಳಿಯ ಸಿದ್ದಾರೂಢ ಮಠದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಧಾರವಾಡ, ಬೆಳಗಾವಿ, ಗದಗ, ಬೀದರ್, ಹಾಸನ ಸೇರಿದಂತೆ ರಾಜ್ಯದ ವಿವಿಧಡೆಯಿಂದ ಬಂದಿದ್ದ ನೂರಾರು ಅಭ್ಯರ್ಥಿಗಳು ನಿಗಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಿಗಮದಿಂದ ನಮಗೆ ಅನ್ಯಾಯವಾಗುತ್ತಿದ್ದು, ನ್ಯಾಯಬೇಕು ಅಂತ ಆಗ್ರಹಿಸಿದರು. ಅಷ್ಟಕ್ಕೂ ಇವರ ಆಕ್ರೋಶಕ್ಕೆ ಕಾರಣ, ದಿಢೀರನೆ ಹುದ್ದೆಗಳನ್ನು ಕಡಿತ ಮಾಡಿದ್ದು.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿರುವ ಖಾಲಿಯಿದ್ದ 2814 ಚಾಲಕ, ನಿರ್ವಾಹಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ 2019 ರಲ್ಲಿ ನಿಗಮ ಅರ್ಜಿ ಆಹ್ವಾನಿಸಿತ್ತು. ಅಂದು ಬರೋಬ್ಬರಿ 57 ಸಾವಿರ ಅಭ್ಯರ್ಥಿಗಳು ತಲಾ ಆರು ನೂರು ರೂಪಾಯಿ ನೀಡಿ ಅರ್ಜಿ ಹಾಕಿದ್ದರು. ನಂತರ ಕೊರೊನಾ ವಕ್ಕರಿಸಿದ್ದರಿಂದ, ಎರಡು ವರ್ಷ ನೇಮಕಾತಿ ಪ್ರಕ್ರಿಯೇ ನಡೆದಿರಲಿಲ್ಲ. ನಂತರ ಅಭ್ಯರ್ಥಿಗಳ ದೈಹಿಕ ಪರೀಕ್ಷೆ, ದಾಖಲಾತಿಗಳ ಪರಿಶೀಲನೆ ನಡೆದಿತ್ತು. ನಂತರ ಚಾಲನಾ ಪರೀಕ್ಷೆಯನ್ನು ಕೂಡಾ ನಡೆಸಲಾಗಿತ್ತು. ಎಲ್ಲ ಹಂತದಲ್ಲಿ ಅರ್ಹತೆ ಹೊಂದಿದ್ದ ಸರಿ ಸುಮಾರು 20 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ತಮಗೆ ಚಾಲಕ, ನಿರ್ವಾಹಕ ಆಗುತ್ತೇವೆ ಅಂತ ಕನಸು ಕಂಡಿದ್ದರು. ಆದರೆ, ಇದೀಗ ನಿಗಮದ ಚೆಲ್ಲಾಟದಿಂದ ಸಾವಿರಾರು ಅಭ್ಯರ್ಥಿಗಳ ಕನಸು ನುಚ್ಚು ನೂರಾಗುತ್ತಿದೆ. ಏಕೆಂದರೆ ನಿಗಮ, 2814 ಹುದ್ದೆಗಳನ್ನು ಕಡಿತ ಮಾಡಿ, ಕೇವಲ 1000 ಹುದ್ದೆಗಳಿಗೆ ಮಾತ್ರ ಇದೀಗ ಭರ್ತಿ ಮಾಡಲು ಮುಂದಾಗಿದೆ.

ಕೊರೊನಾ ನಂತರ ಆರ್ಥಿಕ ಕಾರಣ ನೀಡಿ ಇಲಾಖೆ, ಕೇವಲ ಸಾವಿರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲು ನಿಗಮಕ್ಕೆ ಅವಕಾಶ ನೀಡಿದೆಯಂತೆ. ಹೀಗಾಗಿ ಬ್ಯಾಕಲಾಗ್​ನಲ್ಲಿರುವ ಚಾಲಕ ಕಂ ನಿರ್ವಾಹಕ ಮತ್ತು ನೇರ ನೇಮಕಾತಿ ಮೂಲಕ ಚಾಲಕ ಸೇರಿದಂತೆ ಸಾವಿರ ಹುದ್ದೆಗಳಿಗೆ ಮಾತ್ರ ನೇಮಕಾತಿ ಮಾಡಿಕೊಳ್ಳಲು ನಿಗಮ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಇದು ಅಭ್ಯರ್ಥಿಗಳ ಸಿಟ್ಟಿಗೆ ಕಾರಣವಾಗಿದೆ.

ಇದನ್ನೂ ಓದಿ
ವಿನಯ್​ ಮತ್ತೆ ಜೈಲಿಗೆ: ಯೋಗೀಶ್‌ ಗೌಡ ಕೊಲೆ ಕೇಸ್​​ನ ಸಂಪೂರ್ಣ ಮಾಹಿತಿ
ಯೋಗೀಶ್ ಗೌಡರ್ ಕೊಲೆ ಕೇಸ್: ವಿನಯ್ ಕುಲಕರ್ಣಿ ಜಾಮೀನು ರದ್ದು!
ನಾಯಿ ಕೊಡೆಗಳಂತೆ ಹುಟ್ಟುತ್ತಿರುವ ಪಿಜಿಗಳಿಗೆ ಜಿಲ್ಲಾಡಳಿತ ಲಗಾಮು
ಆಧಾರವಿಲ್ಲದೇ ಬೆಂಕಿ ಹಚ್ಚುವ ಮಾತುಗಳನ್ನಾಡಬಾರದು: ಪ್ರಲ್ಹಾದ್​ ಜೋಶಿ ಕಿಡಿ

“ಈಗಾಗಲೇ ನಾವು ಅರ್ಜಿ ಹಾಕಿ ಆರು ವರ್ಷವಾಗಿದೆ. ನಾವು ಎಲ್ಲ ರೀತಿಯಿಂದಲೂ ಅರ್ಹತೆ ಹೊಂದಿದ್ದೇವೆ. ಇದೀಗ ಬರೋಬ್ಬರಿ 1814 ಹುದ್ದೆಗಳನ್ನು ಕಡಿತ ಮಾಡಿರುವುದರಿಂದ, 1814 ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ನಮ್ಮಲ್ಲಿ ಯಾರಿಗಾದರೂ ನೌಕರಿ ಸಿಗುತ್ತಿತ್ತು. ಆದರೆ, ಇದೀಗ ನೌಕರಿ ಇಲ್ಲದಂತಾಗಿದೆ. ನಿಗಮ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿಯಾಗುತ್ತಿದೆ. ಅವರು ನಮ್ಮ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಮೊದಲೇ ನೋಟಿಪಿಕೇಷನ್ ಹೊರಡಿಸಿದಂತೆ ಎಲ್ಲ ಹುದ್ದೆಗಳಿಗೆ ನೇಮಕಾತಿ ಮಾಡಬೇಕು” ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ರಜೆ ದಿನ ಸಮಾಜ ಸೇವೆಗೆ ಮೀಸಲಿಟ್ಟ ವಿದ್ಯಾರ್ಥಿಗಳು: ಸ್ವಂತ ಹಣದಲ್ಲಿ ರಸ್ತೆ ದುರಸ್ಥಿ, ರಾಜಕಾರಣಿಗಳಿಗೆ ಮಾದರಿ

ಈ ಬಗ್ಗೆ ಪ್ರತಿಕ್ರಿಯೇ ನೀಡಿದ ನಿಗಮದ ಎಂಡಿ, ಪ್ರಿಯಾಂಗಾ ಎಂ, “ಸರ್ಕಾರದ ನಿರ್ದೇಶನದಂತೆ ಇದೀಗ ಸಾವಿರ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ. ಉಳಿದವರಿಗೆ ಅನ್ಯಾಯವಾದರೆ ಅದನ್ನು ಸಚಿವರು ಮತ್ತು ಇಲಾಖೆ ಗಮನಕ್ಕೆ ತಂದು, ಅವರ ಅನ್ಯಾಯವನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ” ಅಂತ ಹೇಳಿದ್ದಾರೆ.
ಸದ್ಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿಯಿವೆ. ಆದರೆ, ಇದೀಗ ಆರ್ಥಿಕ ನೆಪಹೇಳಿ, ಹುದ್ದೆಗಳನ್ನು ಕಡಿತ ಮಾಡಲಾಗಿದೆ. ಆದರೆ, ನೌಕರಿ ಆಸೆಯಲ್ಲಿದ್ದವರಿಗೆ ಇದು ದೊಡ್ಡ ನಿರಾಸೆಯಾಗಿದೆ. ಅನೇಕರ ವಯಸ್ಸು ಮೀರುತ್ತಿರುವದರಿಂದ ಮುಂದೆ ಅರ್ಜಿ ಕರೆದರೂ ಕೂಡಾ ಅರ್ಹತೆ ಹೊಂದಲಾರದ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ನಿಗಮ ಮತ್ತು ಸಾರಿಗೆ ಇಲಾಖೆ ಮತ್ತೊಮ್ಮೆ ಪರಿಶೀಲನೆ ನಡೆಸಿ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊಕರಿಸಿಕೊಡುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ