ಹುಬ್ಬಳ್ಳಿ, (ಏಪ್ರಿಲ್ 30): ಹಾಸನ (Hassan) ಸಂಸದ ಜೆಡಿಎಸ್ ಮುಖಂಡ ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೋ ಎನ್ನಲಾದ ಪೆನ್‌ಡ್ರೈವ್ ಪ್ರಕರಣ ದಿನದಿಂದ ದಿನಕ್ಕೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇನ್ನು ಈ ಪ್ರಕರಣ ಸಂಬಂಧ ಕಾಂಗ್ರೆಸ್ ಕಾರ್ಯಕರ್ತರು, ಜೆಡಿಎಸ್ ವಿರುದ್ಧ ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ಕೆರಳಿ ಕೆಂಡವಾಗಿದ್ದು, ಅವರ ಮನೆಯಲ್ಲಿ ನಡೆದಿದ್ದ ವಿಚಾರವನ್ನು ಹೊರಗಡೆ ತರುತ್ತೇನೆ ಎಂದು ರಾಕೇಶ್ ಸಿದ್ದರಾಮಯ್ಯ (Rakesh Siddaramaiah) ಸಾವಿನ ಸಂದರ್ಭದಲ್ಲಿ ನಡೆದ ವಿಚಾರವನ್ನು ಎಳೆದು ತಂದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಏಪ್ರಿಲ್ 30) ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದಲ್ಲಿ ನಡೆದಿದ್ದ ಘಟನೆಗೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವ ರೀತಿ ಸಹಾಯ ಮಾಡಿದ್ದಾರೆ ಎಂಬುದನ್ನು ಮರೆತಿದ್ದೀರಿ. ಎಲ್ಲ ದಾಖಲೆಗಳನ್ನು ನಾವು ಹೊರಗಡೆ ತರುತ್ತೇವೆ. ನಿಮ್ಮ ಕುಟುಂಬದಲ್ಲಿ ನಡೆದ ಘಟನೆ ಏನೇನಾಯಿತು ಎಲ್ಲವೂ ಹೊರಗೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಜೆಡಿಎಸ್ನಿಂದ ಪ್ರಜ್ವಲ್ ಅಮಾನತು
ನಮ್ಮ ಮನೆಯ ಎದುರು ಏಕೆ ಪ್ರತಿಭಟನೆ ಮಾಡುತ್ತೀರಿ. ಇದನ್ನು ಇಷ್ಟಕ್ಕೆ ಬಿಡಲ್ಲ. ಎಲ್ಲ ವಿಷಯವೂ ತನಿಖೆಯಾಗಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿಕಾರಿದ ಎಚ್.ಡಿ. ಕುಮಾರಸ್ವಾಮಿ, ಇದರ ಹಿಂದೆ ಮಹಾನ್ ನಾಯಕರ ಕೈವಾಡವಿದೆ. 2012 ರಲ್ಲಿ ನಡೆದ ಪ್ರಕರಣಕ್ಕೆ ಜೀವ ಕೊಟ್ಟವರು ಮಹಾನ್ ನಾಯಕ. ಮಹಿಳೆಯರ ಬಗ್ಗೆ ಮಾತಾಡೋ ಮಹಾನ್ ನಾಯಕನಿಂದ ಮಾನ ಹರಾಜು ಆಗಿದೆ . ಕಾಂಗ್ರೆಸ್‌ನವರು ನಮ್ಮ ಮನೆ ಬಳಿ ಬಂದು ಪ್ರತಿಭಟಿಸುತ್ತಿದ್ದಾರೆ. ಮಹಾನುಭಾವನ ಡಿಸಿಎಂ ಡಿ.ಕೆ. ಶಿವಕುಮಾರ್ ಮನೆ ಬಳಿ ಹೋಗಿ ಪ್ರತಿಭಟನೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಚ್.ಡಿ. ರೇವಣ್ಣ ಕುಟುಂಬದ ವಿಷಯ ಕೆದಕಿದರೆ ನಾನು ಚರ್ಚೆ ಮಾಡಲು ಸಿದ್ಧ. ಪಲಾಯಾನ ಮಾಡುವುದಿಲ್ಲ. ಕಾಂಗ್ರೆಸ್ ನಾಯಕ ಮಹಾಪರಾಧ ಮಾಡಿದ್ದಾನೆ. ಎಷ್ಟು ತಿಂಗಳ ಹಿಂದೆ ಆ ಮಹಾನ್ ನಾಯಕನಿಗೆ ಗೊತ್ತಿತ್ತು. ಪೆನ್‌ಡ್ರೈವ್ ಯಾರು ಸರಬರಾಜು ಮಾಡಿದರು ಎಲ್ಲವೂ ಗೊತ್ತಿದೆ. ಈ ಮಹಾನ್ ನಾಯಕನ ನಡವಳಿಕೆಯ ಬಗ್ಗೆಯೂ ಚರ್ಚಿಸೋಣ. ನಿನ್ನೆ ಹಾಸನ ಜಿಲ್ಲಾಧಿಕಾರಿ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸರ್ಕಾರದ ಹುನ್ನಾರ ಅಡಗಿದೆ ಎಂದು ಕಿಡಿಕಾರಿದರು.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ