ಪ್ರಜ್ವಲ್ ಬಗ್ಗೆ ಸಹಾನುಭೂತಿಯ ಪ್ರಶ್ನೆಯೇ ಇಲ್ಲ: ಪ್ರಲ್ಹಾದ್ ಜೋಶಿ
ಪ್ರಜ್ವಲ್ ರೇವಣ್ಣ ವಿಚಾರ ಗೊತ್ತಿದ್ದೂ ಅವರನ್ನು ಮೊದಲು ಸಂಸದರನ್ನಾಗಿಸಿದ್ದು ಕಾಂಗ್ರೆಸ್ ಅಲ್ಲವೇ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದು, ಪ್ರಜ್ವಲ್ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು. ಅಲ್ಲದೆ, ಪ್ರಜ್ವಲ್ ಬಗ್ಗೆ ಸಹಾನುಭೂತಿ ಹೊಂದುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಹುಬ್ಬಳ್ಳಿ, ಮೇ 7: ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪರ ಸಹಾನುಭೂತಿಯ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು. ಹುಬ್ಬಳ್ಳಿಯ ವಿವೇಕಾನಂದ ಕಾಲೋನಿಯಲ್ಲಿರುವ ಚಿನ್ಮಯ ವಿದ್ಯಾಲಯದಲ್ಲಿ ಸ್ಥಾಪಿಸಲಾಗಿದ್ದ ಮತದಾನ ಕೇಂದ್ರದಲ್ಲಿ ಮತದಾನ ಮಾಡಿದ ನಂತರ ಮಾತನಾಡಿದ ಅವರು, ನಮಗೆ ಮಹಿಳೆಯರ ಬಗ್ಗೆ ಹೆಚ್ಚು ಕಾಳಜಿ ಇದೆ. ಮಹಿಳೆಯರಿಗೆ ಆಗಿರುವ ಅನ್ಯಾಯದ ಬಗ್ಗೆ ತನಿಖೆ ನಡೆಸಬೇಕು. ಪ್ರಜ್ವಲ್ ಬಗ್ಗೆ ಸಹಾನುಭೂತಿ ಹೊಂದುವ ಪ್ರಶ್ನೆಯೇ ಇಲ್ಲ ಎಂದರು.
ಹಾಸನದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ದೇವರಾಜೇಗೌಡ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಜೋಶಿ, ಅವರ (ಡಿಕೆ ಶಿವಕುಮಾರ್) ಪಾತ್ರದ ಮೇಲಿನ ಆರೋಪವನ್ನು ಎಸ್‌ಐಟಿ ತನಿಖೆ ಮಾಡಬೇಕು ಎಂದರು.
ಸಮಗ್ರ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಉತ್ತಮ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಸಿಬಿಐಗೆ ವಹಿಸಲು ಹೆದರುತ್ತಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರ ಈ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದೆ. ಮತದಾನ ಮುಗಿಯುವವರೆಗೆ ಕಾಯುವ ಬದಲು ಸ್ವಯಂ ಪ್ರೇರಿತ ಎಫ್‌ಐಆರ್ ಮೊದಲೇ ಏಕೆ ದಾಖಲಿಸಲಿಲ್ಲ? ಈ ಸರ್ಕಾರ ಪ್ರಜ್ವಲ್ ಅವರನ್ನು ಬಂಧಿಸುವ ಬದಲು ವಿದೇಶಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿತು. ಹಲವು ವೀಡಿಯೊಗಳು ಹಳೆಯವು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮೂಲಕ ಪ್ರಜ್ವಲ್ರನ್ನು ಸಂಸದರನ್ನಾಗಿಸಿದಾಗ ಮತ್ತು ರೇವಣ್ಣರನ್ನು ಸಚಿವರನ್ನಾಗಿಸಿದಾಗ ಕಾಂಗ್ರೆಸ್‌ಗೆ ಇದರ ಅರಿವಿರಲಿಲ್ಲವೇ ಎಂದು ಜೋಶಿ ಪ್ರಶ್ನಿಸಿದರು.
ಸತತ ಐದನೇ ಗೆಲುವು ದಾಖಲಿಸುವ ಭರವಸೆ
ಸತತ ಐದನೇ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇನೆ ಎಂದು ಪ್ರಲ್ಹಾದ್ ಜೋಶಿ ಭವಿಷ್ಯ ನುಡಿದರು. ಮೂರನೇ ಬಾರಿಗೆ ಮೋದಿ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಎನ್‌ಡಿಎಗೆ 400 ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಲು ಜನರು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.
ಮುಂಜಾನೆಯೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ ಎಂದು ಜೋಶಿ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಮೊದಲ ಬಾರಿ ಮಾತನಾಡಿದ ಮೋದಿ, ಹೇಳಿದ್ದೇನು?
ಸಾರ್ವಜನಿಕ ಜೀವನದಲ್ಲಿ ನನಗೆ ಯಾವುದೇ ಕಪ್ಪುಚುಕ್ಕೆ ಇಲ್ಲ. ನಾನು ಜನರಿಗೆ ಸದಾ ಲಬ್ಯವಿರುತ್ತೇನೆ ಮತ್ತು ಕೆಲಸ ಮಾಡಿದ್ದೇನೆ. ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ನನ್ನ ವಿರುದ್ಧ ಆರೋಪಗಳು ಕೇಳಿಬರುತ್ತವೆ. ಆದರೆ ಜನರು ಸತ್ಯವನ್ನು ತಿಳಿದಿದ್ದಾರೆ ಮತ್ತು ಅವರು ನನ್ನನ್ನು ಆಶೀರ್ವದಿಸುತ್ತಾರೆ ಎಂದು ಜೋಶಿ ಭರವಸೆ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ