ಕೊರೊನಾ ಎರಡನೇ ಅಲೆ ಬಳಿಕ ಆರ್ಥಿಕ ಚೇತರಿಕೆಯತ್ತ ಅವಳಿ ನಗರದ ರಿಯಲ್ ಎಸ್ಟೇಟ್ ಉದ್ಯಮ

ಕೊರೊನಾ ಎರಡನೇ ಅಲೆ ಬಳಿಕ ಆರ್ಥಿಕ ಚೇತರಿಕೆಯತ್ತ ಅವಳಿ ನಗರದ ರಿಯಲ್ ಎಸ್ಟೇಟ್ ಉದ್ಯಮ
ಪ್ರಾತಿನಿಧಿಕ ಚಿತ್ರ

ದೀಪಾವಳಿ ಹಿನ್ನೆಲೆಯಲ್ಲಿ ನಗರದ ಹಲವು ಬಿಲ್ಡರ್‌ಗಳು ಹಾಗೂ ಡೆವಲಪರ್‌ಗಳು ಹಲವು ವಸತಿ ಪ್ರಾಜೆಕ್ಟ್‌ಗಳನ್ನು ಪ್ರಕಟಿಸಿದ್ದಾರೆ. ರಿಯಾಯಿತಿಗಳನ್ನು ಘೋಷಣೆ ಮಾಡಿದ್ದಾರೆ. ನಗರದ ಕೇಂದ್ರ ಸ್ಥಳದಿಂದ ದೂರವಿದ್ದು ಕಡಿಮೆ ಬಜೆಟ್‌ನದಾಗಿದ್ದರೂ ತೊಂದರೆಯಿಲ್ಲ, ನಗರದ ಮಧ್ಯಭಾಗದಲ್ಲಿ ಚಿಕ್ಕ ಮನೆಯಾದರೂ ಅಡ್ಡಿಯಿಲ್ಲ ಸ್ವಂತ ಮನೆ ಹೊಂದಬೇಕೆಂಬುದು ಪ್ರತಿಯೊಬ್ಬರ ಆಶಯವಾಗಿದೆ.

TV9kannada Web Team

| Edited By: preethi shettigar

Nov 05, 2021 | 8:12 AM

ಧಾರವಾಡ: ಕೊರೊನಾ ಹಾವಳಿಯಿಂದಾಗಿ ದೇಶದಲ್ಲಿ ಎಲ್ಲ ಕ್ಷೇತ್ರಗಳು ಸಂಪೂರ್ಣವಾಗಿ ಜರ್ಝರಿತಗೊಂಡಿವೆ. ಇದಕ್ಕೆ ರಿಯಲ್ ಎಸ್ಟೇಟ್ ಉದ್ಯಮ ಹೊರತಾಗಿಲ್ಲ. ಕಳೆದ ಒಂದೂವರೆ ವರ್ಷದಿಂದ ಈ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಾಗಿವೆ. ಒಂದು ಕಡೆ ಮನೆಗಳನ್ನು ಖರೀದಿಸುವವರಿಲ್ಲದೇ ರಿಯಲ್ ಎಸ್ಟೇಟ್ ಉದ್ಯಮ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದರೆ, ಖರೀದಿಸಬೇಕಾಗಿದ್ದ ಗ್ರಾಹಕರು ಕೊರೊನಾ ಹೊಡೆತದಿಂದಾಗಿ ಆರ್ಥಿಕ ಸಮಸ್ಯೆಗಳಿಗೆ ಸಿಲುಕಿ, ಇಂದಿನ ಖರ್ಚು ನಡೆದರೆ ಸಾಕು ಎನ್ನುವ ಸ್ಥಿತಿಗೆ ಬಂದಿದ್ದರು. ಆದರೆ ಇದೀಗ ಎಲ್ಲವೂ ಮತ್ತೆ ನಿಧಾನವಾಗಿ ತಹಬದಿಗೆ ಬರುತ್ತಿದೆ. ದೇಶದ ಆರ್ಥಿಕ ಬೆಳವಣಿಗೆ ಹಾಗೂ ಅಭಿವೃದ್ಧಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮದ ಕೊಡುಗೆ ಅಪಾರ. ಒಂದು ಹಾಗೂ ಎರಡನೇ ಅಲೆಯ ಬಳಿಕ ಇದೀಗ ಈ ಕ್ಷೇತ್ರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಅದರಲ್ಲೂ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಇದೀಗ ಈ ಉದ್ಯಮ ಚೇತರಿಸಿಕೊಂಡಿರುವುದು ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಸ್ವಂತ ಮನೆ ಹೊಂದಲು ಜನರ ಆಸಕ್ತಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ವಿವಿಧೆಡೆ ವಸತಿ ಸಮುಚ್ಚಯಗಳು ತಲೆ ಎತ್ತುತ್ತಿವೆ. ಜನರು ಸ್ವಂತ ಮನೆ ಹೊಂದಲು ಇದೀಗ ಮತ್ತೆ ಆಸಕ್ತಿ ತೋರಿಸುತ್ತಿದ್ದಾರೆ. ಕೊರೊನಾ ಮಹಾಮಾರಿಯ ಒಂದು ಹಾಗೂ ಎರಡನೇ ಅಲೆಯ ಪರಿಣಾಮವಾಗಿ ಜನರ ಖರೀದಿ ಸಾಮರ್ಥ್ಯದ ಮೇಲೆ ಕರಿನೆರಳು ಬಿದ್ದಿತ್ತು. ಆದರೆ ಸ್ವಂತ ಮನೆ ಹೊಂದಲೇಬೇಕೆಂಬ ಕನಸು ಜನರಲ್ಲಿ ಜೀವಂತವಿರುವುದು ಈ ಉದ್ಯಮಕ್ಕೆ ಆಸರೆಯಾಗಿದೆ. ಕೊರೊನಾ ಸಮಸ್ಯೆಯಿಂದಾಗಿ ಹೊಸ ಮನೆ ಖರೀದಿಯನ್ನು ಜನರು ಕೈ ಬಿಟ್ಟಿರಲಿಲ್ಲ. ಆದರೆ ಕೊಂಚ ಕಾಲ ಮುಂದಕ್ಕೆ ಹಾಕಿದ್ದರು. ಇದೀಗ ಅವಳಿ ನಗರದ ಜನರು ಮನೆ, ಕೊಳ್ಳುವತ್ತ ಆಸಕ್ತಿ ತೋರಿಸುತ್ತಿದ್ದಾರೆ. ಇದರಿಂದಾಗಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಶುಕ್ರದೆಸೆ ಬಂದಂತಾಗಿದೆ.

ರಾಜ್ಯ ಸರ್ಕಾರ ಕಳೆದ ವರ್ಷ ಹುಬ್ಬಳ್ಳಿಯಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶ ನಡೆಸಿದ ಬಳಿಕ ಸಾಕಷ್ಟು ಉದ್ಯಮಗಳು ಅವಳಿ ನಗರದಲ್ಲಿ ಬಂಡವಾಳ ಹೂಡಲು ಮುಂದೆ ಬಂದಿವೆ. ಏಕಸ್ ಸಂಸ್ಥೆ ಕಂಜೂಮರ್‌ ಗೂಡ್ಸ್ ಘಟಕ ನಿರ್ಮಾಣ ಆರಂಭಿಸಿದ್ದು, ಮುಂದಿನ ಹತ್ತು ವರ್ಷಗಳಲ್ಲಿ 7 ಸಾವಿರ ಕೋಟಿ ರೂಪಾಯಿ ಬಂಡವಾಳ ತೊಡಗಿಸುವುದಾಗಿ ಹೇಳಿದೆ. ಸಾಫ್ಟವೇರ್ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುವ ಕಾಲ ಸನ್ನಿಹಿತವಾಗಿದೆ.

ಮೂಲಭೂತ ಸೌಕರ್ಯಕ್ಕೆ ಮುಂದಾದ ಪಾಲಿಕೆ ದಿನದಿಂದ ದಿನಕ್ಕೆ ರಿಯಲ್ ಎಸ್ಟೇಟ್ ಉದ್ಯಮ ಚೇತರಿಕೆ ಕಾಣುತ್ತಿದ್ದರೆ, ಅತ್ತ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅವಳಿ ನಗರದ ಜನರಿಗೆ ಹಾಗೂ ನಿವೇಶನಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಹೊಸ ಹೊಸ ಯೋಜನೆ ಹಾಕಿಕೊಳ್ಳುತ್ತಿದೆ. ಕೆಲವು ಕಡೆಗಳಲ್ಲಿ ಈಗಾಗಲೇ ಸೌಲಭ್ಯ ಕಲ್ಪಿಸುವ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಎಲ್ಲ ವಾರ್ಡ್‌ಗಳಿಗೂ ನಿರಂತರ ನೀರು ಯೋಜನೆ ವಿಸ್ತರಿಸುವ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸಲ್ಪಟ್ಟಿದೆ. ದೆಹಲಿ, ಮುಂಬೈ, ತಿರುಪತಿ, ಕೊಚ್ಚಿ, ಹೈದರಾಬಾದ್ ಸೇರಿದಂತೆ ದೇಶದ ಪ್ರಮುಖ ನಗರಗಳಿಗೆ ವಿಮಾನ ಸಂಚಾರ ಸೌಲಭ್ಯವಿದೆ.

ಮುಂದಿನ ಒಂದರಿಂದ ಎರಡು ವರ್ಷಗಳಲ್ಲಿ ಸ್ಮಾರ್ಟ್‌ ಸಿಟಿ ಅನುದಾನದಲ್ಲಿ ನಗರದ ಚಿತ್ರಣವೇ ಬದಲಾಗಲಿದೆ. ಇವೆಲ್ಲ ಕಾರಣಗಳಿಗೆ ಹುಬ್ಬಳ್ಳಿಯಲ್ಲಿ ಸ್ವಂತ ಮನೆ ಹೊಂದುವುದು ಸೂಕ್ತ ಆಯ್ಕೆಯಾಗಿರಲಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಇದಕ್ಕೆ ಪೂರಕವಾಗಿ ಹೊಸ ಹೊಸ ಪ್ರಾಜೆಕ್ಟ್‌ಗಳಿಗೆ ಚಾಲನೆ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರದ ಅನುದಾನದಡಿ ವಿವಿಧೆಡೆ ಸಿಮೆಂಟ್ ರಸ್ತೆ ನಿರ್ಮಾಣಗೊಂಡಿದ್ದು, ಇನ್ನು ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿವೆ. ಇವೆಲ್ಲ ಅವಳಿ ನಗರವನ್ನು ಪ್ರಗತಿ ಪಥದತ್ತ ಕೊಂಡೊಯ್ಯುತ್ತಿವೆ ಹಾಗೂ ರಿಯಲ್ ಎಸ್ಟೇಟ್ ಉದ್ಯಮ ಮರು ಜೀವ ಪಡೆಯಲು ಸಹಕಾರಿಯಾಗಿವೆ.

ದೀಪಾವಳಿ ಹಿನ್ನೆಲೆಯಲ್ಲಿ ಬಿಲ್ಡರ್​ಗಳಿಂದ ಭರ್ಜರಿ ಆಫರ್ ದೀಪಾವಳಿ ಹಿನ್ನೆಲೆಯಲ್ಲಿ ನಗರದ ಹಲವು ಬಿಲ್ಡರ್‌ಗಳು ಹಾಗೂ ಡೆವಲಪರ್‌ಗಳು ಹಲವು ವಸತಿ ಪ್ರಾಜೆಕ್ಟ್‌ಗಳನ್ನು ಪ್ರಕಟಿಸಿದ್ದಾರೆ. ರಿಯಾಯಿತಿಗಳನ್ನು ಘೋಷಣೆ ಮಾಡಿದ್ದಾರೆ. ನಗರದ ಕೇಂದ್ರ ಸ್ಥಳದಿಂದ ದೂರವಿದ್ದು ಕಡಿಮೆ ಬಜೆಟ್‌ನದಾಗಿದ್ದರೂ ತೊಂದರೆಯಿಲ್ಲ, ನಗರದ ಮಧ್ಯಭಾಗದಲ್ಲಿ ಚಿಕ್ಕ ಮನೆಯಾದರೂ ಅಡ್ಡಿಯಿಲ್ಲ ಸ್ವಂತ ಮನೆ ಹೊಂದಬೇಕೆಂಬುದು ಪ್ರತಿಯೊಬ್ಬರ ಆಶಯವಾಗಿದೆ. ಇದಕ್ಕೆ ತಕ್ಕಂತೆ ಅವಳಿ ನಗರದ ಬಿಲ್ಡರ್‌ಗಳು ಯೋಜನೆ ರೂಪಿಸುತ್ತಿದ್ದಾರೆ. ಇಲ್ಲಿಯ ಮಾರುಕಟ್ಟೆಯು ಕೊಳ್ಳುವವರಿಗೆ ಮತ್ತು ಮಾರಾಟಗಾರರಿಗೆ ಸಮಾನ ಅವಕಾಶ ಕಲ್ಪಿಸಿದೆ. ಹುಬ್ಬಳ್ಳಿಯಲ್ಲಿ ಗೋಕುಲ ರಸ್ತೆ, ವಿದ್ಯಾನಗರ, ದೇಶಪಾಂಡೆ ನಗರದಲ್ಲಿ ಎಲ್ಲೆಂದರಲ್ಲಿ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್​ಗಳು ಗೋಚರಿಸುತ್ತವೆ. ಗೋಪನಕೊಪ್ಪ, ರೇವಡಿಹಾಳ, ಹೊಸ ಕೋರ್ಟ್ ಬಳಿ ನಿರ್ಮಾಣ ಕಾಮಗಾರಿ ವೇಗ ಪಡೆದುಕೊಂಡಿದೆ. ಹಳೆಯ ಮನೆಗಳನ್ನು ಕೆಡವಿ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆ ಶುರುವಾಗಿದೆ. ಎಷ್ಟೋ ವರ್ಷಗಳಿಂದ ಪಾಳು ಬಿದ್ದಿದ್ದ ಜಾಗಗಳಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿವೆ.

ಹು-ಧಾ ನಗರ ಅಭಿವೃದ್ಧಿ ಯೋಜನೆ ವಿಸ್ತರಣೆ ಹುಬ್ಬಳ್ಳಿ-ಧಾರವಾಡ ನಗರ ಅಭಿವೃದ್ಧಿ ಯೋಜನೆ (ಸಿಡಿಪಿ) ವಿಸ್ತರಣೆಯಾಗಿದೆ. ಇದರಿಂದ ನಗರದ ವ್ಯಾಪ್ತಿ ನಾಲ್ಕು ದಿಕ್ಕುಗಳಲ್ಲಿ ವಿಸ್ತಾರಗೊಂಡು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಇನ್ನಷ್ಟು ಅವಕಾಶಗಳನ್ನು ಸೃಷ್ಟಿಸಿವೆ. ಈಗ ಹಣ ಕೂಡಿಟ್ಟು ಮುಂದೆ ಮನೆ ಕಟ್ಟುವುದಕ್ಕಿಂತ ಈಗಲೇ ಸಾಲ ಮಾಡಿ ಸ್ವಂತ ಮನೆ ಹೊಂದುವುದೇ ಲೇಸು ಎಂಬುವುದು ಬಹುತೇಕರ ಅಭಿಪ್ರಾಯ. ಹಾಗಾಗಿ ಗಟ್ಟಿ ನಿರ್ಧಾರ ಮಾಡಿ ನಿವೇಶನ ಖರೀದಿಗೆ ಮುಂದಾಗಿದ್ದಾರೆ. ಕಳೆದ ಒಂದು ದಶಕದ ಅವಧಿಯಲ್ಲಿ ದೇಶದ ಮಹಾನಗರಗಳಲ್ಲಿ ಅಪಾರ್ಟಮೆಂಟ್ ನಿರ್ಮಾಣವು ಅತಿ ಹೆಚ್ಚಾಗಿ ನಡೆದಿದೆ. ಇದಕ್ಕೆ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹೊರತಾಗಿಲ್ಲ. ಇಲ್ಲಿಯ ಜನ ಅಪಾರ್ಟಮೆಂಟ್ ಸಂಸ್ಕೃತಿಯನ್ನು ಇತ್ತೀಚಿಗೆ ಒಪ್ಪಿಕೊಂಡಿದ್ದಾರೆ. ಹಾಗಾಗಿ ಅವಳಿ ನಗರದಲ್ಲಿ ಎಲ್ಲೆಂದರಲ್ಲಿ ಅಪಾರ್ಟಮೆಂಟ್‌ಗಳು ತಲೆ ಎತ್ತುತ್ತಿರುವುದನ್ನು ಕಾಣಬಹುದು .

ಈ ಬಗ್ಗೆ ಟಿವಿ9 ಡಿಜಿಟಲ್ ಜೊತೆಗೆ ಮಾತನಾಡಿದ ಹುಬ್ಬಳ್ಳಿಯ ಬಿಲ್ಡರ್ ನಂದನ್ ಕಾರ್ಕೂನ್, ಬ್ಯಾಂಕ್‌ಗಳು ಶೇ. 6.7 ಬಡ್ಡಿ ದರದಲ್ಲಿ ಗೃಹ ಸಾಲ ನೀಡುತ್ತಿವೆ. ಗೃಹ ಸಾಲಕ್ಕೆ ಇಷ್ಟು ಕಡಿಮೆ ಬಡ್ಡಿ ದರ ಹಿಂದೆಂದೂ ಇರಲಿಲ್ಲ. ಇದರ ಜತೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಬಡ್ಡಿ ಸಬ್ಸಿಡಿ (ಗರಿಷ್ಠ ಮೊತ್ತ 2.67 ಲಕ್ಷ ರೂಪಾಯಿ) ಸೇರಿದರೆ ಗೃಹ ಸಾಲದ ಮೇಲಿನ ಬಡ್ಡಿ ದರ ಶೇ. 5.5 ರಿಂದ 5.2 ಕ್ಕೆ ಇಳಿಕೆಯಾಗುತ್ತದೆ. ಹೀಗಾಗಿ ಮನೆ ಕೊಳ್ಳಲು ಇದಕ್ಕಿಂತ ಒಳ್ಳೆಯ ಕಾಲ ಮುಂದೆ ಬರುವುದಿಲ್ಲ ಎನ್ನುವ ವಿಚಾರ ಜನರಲ್ಲಿ ಬರುತ್ತಿದೆ. ಇದರಿಂದಾಗಿ ಜನರು ನಿತ್ಯವೂ ನಮಗೆ ಫೋನ್ ಮಾಡಿ ವಿಚಾರಿಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಾವು ಸಾಕಷ್ಟು ಸಮಸ್ಯೆಗೆ ಸಿಲುಕಿದ್ದೆವು. ಆದರೆ ಇದೀಗ ನಿಧಾನವಾಗಿ ಎಲ್ಲವೂ ತಿಳಿಯಾಗುತ್ತಿದೆ. ನಮ್ಮ ಉದ್ಯಮ ಕೂಡ ಆರ್ಥಿಕವಾಗಿ ಚೇತರಿಕೆ ಕಾಣುತ್ತಿದೆ. ಜನರು ಮತ್ತೆ ಸ್ವಂತ ಮನೆ ಹೊಂದಲು ಆಸಕ್ತಿ ತೋರಿಸುತ್ತಿದ್ದು, ನಿತ್ಯವೂ ಸಾಕಷ್ಟು ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಯಲ್ ಎಸ್ಟೇಟ್ ಉದ್ಯಮಿ ಸಂಜೀವ್ ನಾಡಿಗೇರ್, ಈ ಮುಂಚೆ ನೋಂದಣಿ ಶುಲ್ಕ ಶೇ. 6.8 ಇತ್ತು. ಇದೀಗ ರಾಜ್ಯ ಸರಕಾರ ಅದನ್ನು ಸಾಕಷ್ಟು ಕಡಿಮೆ ಮಾಡಿದೆ. ಹೀಗಾಗಿ ಜನರಿಗೆ ಆರ್ಥಿಕ ಹೊರೆ ಕೂಡ ಕಡಿಮೆಯಾಗಲಿದೆ. ಇದರಿಂದಾಗಿ ಜನರು ಫ್ಲ್ಯಾಟ್ ಕೊಳ್ಳಲು ಮುಂದೆ ಬರುತ್ತಿದ್ದಾರೆ. ಇನ್ನು ಕಳೆದ ಒಂದೂವರೆ ವರ್ಷದಿಂದ ಜನರು ರಿಯಲ್ ಎಸ್ಟೇಟ್ ಕಡೆಗೆ ಹೊರಳಿ ನೋಡಿರಲೇ ಇಲ್ಲ. ಆದರೆ ಇದೀಗ ಮತ್ತೆ ಇತ್ತ ಕಣ್ಣು ಹಾಯಿಸುತ್ತಿದ್ದಾರೆ. ಇದರಿಂದಾಗಿ ನಮಗೂ ಜೀವ ಬಂದಂತಾಗಿದೆ ಎಂದು ತಿಳಿಸಿದ್ದಾರೆ.

ಸ್ವಂತ ಮನೆ ಹೊಂದಲು ಜನರು ಇದೀಗ ಮತ್ತೆ ಆಸಕ್ತಿ ತೋರಿಸುತ್ತಿದ್ದಾರೆ. ಇದು ರಿಯಲ್ ಎಸ್ಟೇಟ್ ಉದ್ಯಮದ ಬೆಳವಣಿಗೆಗೆ ಸಹಕಾರಿಯಾಗಿದೆ. ಸಿಮೆಂಟ್ ಮತ್ತು ಉಕ್ಕಿನ ಬೆಲೆ ನಿಯಂತ್ರಿಸುವಂತೆ ಕೇಂದ್ರ ಸರ್ಕಾರಕ್ಕೆ ಕ್ರೆಡೈ (The Confederation of Reak Estate Developers’Association of India) ವತಿಯಿಂದ ಮನವಿ ಮಾಡಿದ್ದೇವೆ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು  ಟಿವಿ9 ಡಿಜಿಟಲ್ ಜತೆಗೆ ಮಾತನಾಡಿದ ಕ್ರೆಡೈ ಕರ್ನಾಕದ ನಿಯೋಜಿತ ಅಧ್ಯಕ್ಷ ಪ್ರದೀಪ ರಾಯ್ಕರ್ ಹೇಳಿದ್ದಾರೆ.

ವರದಿ: ನರಸಿಂಹಮೂರ್ತಿ ಪ್ಯಾಟಿ

ಇದನ್ನೂ ಓದಿ: Indian Economy: ಚೇತರಿಕೆಯ ಹಾದಿಯಲ್ಲಿ ಭಾರತದ ಆರ್ಥಿಕತೆ; 5 ಪ್ರಮುಖ ಅಂಶಗಳು ಇಲ್ಲಿವೆ

Raghuram Rajan: ಭಾರತದ ಆರ್ಥಿಕ ಭವಿಷ್ಯದ ಬಗ್ಗೆ ಜನರ ವಿಶ್ವಾಸ ಕುಸಿದಿದೆ ಎಂದ ರಘುರಾಮ್ ರಾಜನ್

Follow us on

Related Stories

Most Read Stories

Click on your DTH Provider to Add TV9 Kannada