ಬೌದ್ಧ ಸನ್ಯಾಸಿ ಕೊಲೆ ಪ್ರಕರಣ ಭೇದಿಸಿದ ಧಾರವಾಡ ಪೊಲೀಸರು
ಆತನೊಬ್ಬ ಬೌದ್ಧ ಸನ್ಯಾಸಿ. ತಾನಾಯಿತು ತನ್ನ ಧರ್ಮವಾಯಿತು ಎಂದು ಇದ್ದ. ಆದರೆ ಆತನ ಬಳಿ ಸಾಕಷ್ಟು ಹಣವಿದೆ ಅಂದುಕೊಂಡ ದುಷ್ಕರ್ಮಿಗಳು ಆತನ ಬೆನ್ನು ಬಿದ್ದಿದ್ದರು. ಆದರೆ ಆತನ ಬಳಿ ಹಣವೇ ಇಲ್ಲ ಅಂದಾಗ ಆತನನ್ನು ಕೊಂದು ಹಾಕಿ, ಬಳಿಕ ಬೇರೆ ಜಿಲ್ಲೆಯಲ್ಲಿ ಶವವನ್ನು ಎಸೆದು ಪಕ್ಕದ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದರು. ಆದ್ರೆ, ಯಾವುದೇ ಸಣ್ಣ ಸುಳಿವು ಇಲ್ಲದಿದ್ದರೂ ಸಹ ಧಾರವಾಡ ಪೊಲೀಸರು ಪ್ರರಕಣದ ಬೆನ್ನು ಬಿದ್ದ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡ, (ಮೇ 05): ಧಾರವಾಡ ಬೈಪಾಸ್ ಬಳಿ ಏಪ್ರಿಲ್ 28ರಂದು ಟಿಬೆಟಿಯನ್ ಮೂಲದ ಬೌದ್ಧ ಸನ್ಯಾಸಿ ತಾಶಿ ಧೊಂದೂಪ ನಿಗೂಢ ಸಾವು ಪ್ರಕರಣವನ್ನು (Tibetan buddhist monk Murder Case) ಪೊಲೀಸರು ಭೇದಿಸಿದ್ದಾರೆ. ಸಣ್ಣ ಮಾಹಿತಿಯೂ ಇಲ್ಲದಿದ್ದರೂ ಪ್ರರಕಣದ ಬೆನ್ನು ಬಿದ್ದ ಧಾರವಾಡ (Dharwad) ಗ್ರಾಮೀಣ ಪೊಲೀಸರು ಹಂತಕರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಹಣಕ್ಕಾಗಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆರಂಭದಲ್ಲಿ ಅಪಘಾತದಿಂದ ಈ ಸಾವಾಗಿರಬಹುದು ಎನ್ನಲಾಗಿತ್ತು. ಆದ್ರೆ, ಮುಖದ ಮೇಲಿನ ಗಾಯದಿಂದ ಅನುಮಾನ ಮೇಲೆ ತನಿಖೆ ನಡೆಸಿದಾಗ ಕೊಲೆ ಎನ್ನುವುದು ಗೊತ್ತಾಗಿದ್ದು, ಇದೀಗ ಮೂವರನ್ನು ಬಂಧಿಸಿದ್ದಾರೆ. ಯಾದವ್(24), ವೈಭವ್ ಚವ್ಹಾಣ(30) ಮತ್ತು ಸಿದ್ಧೇಶ ಭೋಸ್ಲೆ(18) ಬಂಧಿತರು.
- ಟಿಬೆಟಿಯನ್ ಮೂಲದ ಬೌದ್ಧ ಸನ್ಯಾಸಿ ತಾಶಿ ಧೊಂದೂಪ ನಿಗೂಢ ಸಾವು ಪ್ರಕರಣ
- ಕೊಲ್ಹಾಪುರದಲ್ಲಿ ಕೊಲೆ ಆರೋಪಿಗಳನ್ನ ಬಂಧಿಸಿದ ಧಾರವಾಡ ಪೊಲೀಸರು
- ವಾಕಿಂಗ್ ಮಾಡೋ ಸಂದರ್ಭದಲ್ಲಿ ಮುಂಡಗೋಡದಲ್ಲಿಯೇ ಕಿಡ್ನಾಪ್ ಮಾಡಿದ್ದ ಹಂತಕರು
- ಹಣವಿಲ್ಲದಿದ್ದಾಗ ಕಾರಿನಲ್ಲಿಯೇ ಸನ್ಯಾಸಿ ಮೇಲೆ ಹಲ್ಲೆ ಮಾಡಿ ಕೊಂದು ಬಳಿಕ ಶವ ಎಸೆದು ಪರಾರಿಯಾಗಿದ್ದರು.
ಮುಂಡಗೋಡದಿಂದ ಧಾರವಾಡದ ಮೂಲಕ ಕೊಲ್ಹಾಪುರದ ಕಡೆಗೆ ಕಾರೊಂದು ಹೋಗಿರೋದು ಗೊತ್ತಾಗಿದ್ದು, ಒಂದೆರಡು ಕಡೆ ಸಿಸಿಟಿವಿ ಪರಿಶೀಲಿಸಿದಾಗ ಕಾರಿನ ನಂಬರ್ ಸ್ಪಷ್ಟವಾಗಿ ಕಂಡಿಲ್ಲ. ಆದರೆ ಮುಂಡಗೋಡದ ಬಳಿ ಬಂಕ್ ನಲ್ಲಿ ಸಿಎನ್ ಜಿ ತುಂಬಿಸಿಕೊಳ್ಳಲು ಕಾರಿನಿಂದ ಇಳಿದಾಗ ಹಂತಕರು ಸಿಸಿಟಿವಿಯಲ್ಲಿ ಸೆರೆಯಾಗಿದ್ದಾರೆ. ಇದರ ಜಾಡು ಹಿಡಿದು ಹೊರಟ ಪೊಲೀಸರು, ಹಂತಕರನ್ನು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬಂಧಿಸಿದ್ದಾರೆ. ಕೊಲ್ಹಾಪುರ ಸಂಕೇತ ಯಾದವ್(24), ವೈಭವ್ ಚವ್ಹಾಣ(30) ಮತ್ತು ಸಿದ್ಧೇಶ ಭೋಸ್ಲೆ(18) ಅನ್ನೋ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಧಾರವಾಡದಲ್ಲಿ ಬೌದ್ಧ ಸನ್ಯಾಸಿಯ ನಿಗೂಢ ಸಾವು: ಮೃತದೇಹ ಪತ್ತೆ
ಹಣಕ್ಕಾಗಿ ಅಪಹರಿಸಿ ಕೊಲೆ
ಅಷ್ಟಕ್ಕೂ ಈ ಕೊಲೆಗೆ ಕಾರಣ ಹಣ. ಬೌದ್ಧ ಸನ್ಯಾಸಿಗಳ ಬಳಿ ಸಾಕಷ್ಟು ಹಣವಿರುತ್ತೆ ಅಂದುಕೊಂಡಿದ್ದ ಹಂತಕರು ತಾಶಿ ಧೊಂದೂಪರನ್ನು ಅವರು ವಾಕಿಂಗ್ ಮಾಡೋ ಸಂದರ್ಭದಲ್ಲಿ ಮುಂಡಗೋಡದಲ್ಲಿಯೇ ಕಿಡ್ನಾಪ್ ಮಾಡಿದ್ದರು. ಬಳಿಕ ಅವರಿಗೆ ಸಾಕಷ್ಟು ಹಿಂಸೆ ಕೊಟ್ಟು ಹಣ ಕೊಡುವಂತೆ ಪೀಡಿಸಿದ್ದರು. ಆದ್ರೆ, ಹಣವಿಲ್ಲದಿದ್ದಾಗ ಕಾರಿನಲ್ಲಿಯೇ ಸನ್ಯಾಸಿ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಸನ್ಯಾಸಿ ಕಾರಿನಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಶವವನ್ನು ಕಾರಿನಲ್ಲಿ ಇಟ್ಟುಕೊಂಡು ಕೊಲ್ಹಾಪುರದತ್ತ ತೆರಳಿದ್ದಾರೆ. ಆದ್ರೆ, ಅದೇನು ತಿಳಿತೋ ಏನೋ ಮಾರ್ಗ ಮಧ್ಯೆ ಧಾರವಾಡ ಬಳಿ ಶವವನ್ನು ಎಸೆದು ಪರಾರಿಯಾಗಿದ್ದರು.
ಮುಂಡಗೋಡದಿಂದ ಕೊಲ್ಹಾಪುರದವರೆಗೆ ವಾರದವರೆಗೆ ಓಡಾಡಿದ ಪೊಲೀಸರು ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಕೊನೆಗೂ ಹಂತಕರನ್ನು ಲಾಕ್ ಮಾಡಿದ್ದಾರೆ. ತ್ವರಿತಗತಿಯಲ್ಲಿ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದು, ಇದೀಗ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Tue, 5 May 26




