ಪ್ರಜ್ವಲ್ ಪ್ರಕರಣ ಸಿಬಿಐಗೆ ಕೊಡಲಿ, ಇಲ್ಲವೇ ಡಿಕೆಶಿ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ: ಪ್ರಲ್ಹಾದ್ ಜೋಶಿ

| Updated By: ಗಣಪತಿ ಶರ್ಮ

Updated on: May 10, 2024 | 2:32 PM

ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮಧ್ಯೆ ವಾಕ್ಸಮರ ಮುಂದುವರಿದಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಜೆಡಿಎಸ್ ಪಟ್ಟು ಹಿಡಿದಿದೆ. ಈ ಮಧ್ಯೆ ಬಿಜೆಪಿ ನಾಯಕರು ಕೂಡ ಜೆಡಿಎಸ್ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಏನಂದರು ಎಂಬ ಮಾಹಿತಿ ಇಲ್ಲಿದೆ.

ಪ್ರಜ್ವಲ್ ಪ್ರಕರಣ ಸಿಬಿಐಗೆ ಕೊಡಲಿ, ಇಲ್ಲವೇ ಡಿಕೆಶಿ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ: ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ
Follow us on

ಹುಬ್ಬಳ್ಳಿ, ಮೇ 10: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಪ್ರಕರಣವನ್ನು ಕೆಲವರನ್ನು ರಾಜಕೀಯವಾಗಿ ಮುಗಿಸಲು ಬಳಸಲಾಗುತ್ತಿದೆ. ಈ ಪ್ರಕರಣದಲ್ಲಿ ಸಂಪೂರ್ಣ ಗೊಂದಲ ಇದೆ. ಹೀಗಾಗಿ ಇದರ ತನಿಕೆಯನ್ನು ಸಿಬಿಐಗೆ (CBI) ವಹಿಸಬೇಕು. ಇಲ್ಲವೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ರಾಜೀನಾಮೆ ಕೊಟ್ಟು ತನಿಖೆಯನ್ನು ಎದುರಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪ್ರಕರಣ ಸಂಬಂಧ ಎಸ್ಐಟಿ ತನಿಖೆ ಸಮರ್ಪಕವಾಗಿ ಸಾಗುತ್ತಿಲ್ಲ ಎಂದು ಆರೋಪಿಸಿದರು.

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ತಪ್ಪಿಸಸ್ಥರಿಗೆ ಶಿಕ್ಷೆ ಆಗಲೇಬೇಕು. ಆದರೆ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು. ಏಪ್ರಿಲ್ 21ರಂದು ವಿಡಿಯೋಗಳು ಬಹಿರಂಗವಾಗಿದ್ದವು. ವಿಡಿಯೋಗಳು ಹಾಸನ ಮಾತ್ರವಲ್ಲದೆ ಹುಬ್ಬಳ್ಳಿಯಲ್ಲೂ ಬಹಿರಂಗವಾಗಿದ್ದವು. ಆದರೆ ರಾಜ್ಯ ಸರ್ಕಾರ ಆಗ ಏಕೆ ಎಫ್ಐಆರ್ ದಾಖಲಿಸಲಿಲ್ಲ ಎಂದು ಜೋಶಿ ಪ್ರಶ್ನೆಸಿದ್ದಾರೆ. ರಾಜ್ಯ ಸರ್ಕಾರ ಆಗಲೇ ಕ್ರಮ ಕೈಗೊಳ್ಳಬೇಕಿತ್ತಲ್ಲವೇ? ಪ್ರಜ್ವಲ್ ವಿದೇಶಕ್ಕೆ ಹೋಗುವುದನ್ನು ರಾಜ್ಯ ಸರ್ಕಾರ ಯಾಕೆ ತಡೆಯಲಿಲ್ಲ? ಈ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಯಾಕೆ ಉತ್ತರ ನೀಡುತ್ತಿಲ್ಲ ಎಂದು ಜೋಶಿ ಪ್ರಶ್ನಿಸಿದ್ದಾರೆ.

ಇನ್ನು ಮಾಜಿ ಸಚಿವ ಹೆಚ್​​ಡಿ ರೇವಣ್ಣ ವಿರುದ್ಧದ ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಜೋಶಿ, ಮಹಿಳೆಯ ಅಪಹರಣಕ್ಕೆ ಸೂಕ್ತ ದಾಖಲೆಗಳೇ ಇಲ್ಲ. ಅತಿ ದೊಡ್ಡ ಹಗರಣ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ. ಹಾಗಾದರೆ ಜಗತ್ತಿನ ಅತಿ ದೊಡ್ಡದಾದ ಈ ಪ್ರಕರಣವನ್ನು ಯಾಕೆ ಸಿಬಿಐ ತನಿಖೆಗೆ ವಹಿಸಲಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೆ, ಕೆಲವರನ್ನು ರಾಜಕೀಯವಾಗಿ ಮುಗಿಸುವುದಕ್ಕೆ ಈ ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಇನ್ನಷ್ಟು ಸಂಕಷ್ಟ: ವಿರುದ್ಧ ಮತ್ತೊಂದು ಅತ್ಯಾಚಾರ ಕೇಸ್ ದಾಖಲು

ಈ ಮಧ್ಯೆ, ಪ್ರಜ್ವಲ್ ರೇವಣ್ಣ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ಹೆಚ್​ಡಿ ರೇವಣ್ಣ ವಿರುದ್ಧ ದಾಖಲಾಗಿರುವ ಅಪಹರಣ ಪ್ರಕರಣದಲ್ಲಿ ಇದೀಗ ಪ್ರಜ್ವಲ್ ವಿರುದ್ಧ ಅತ್ಯಾಚಾರ ಆರೋಪವನ್ನೂ ಮಾಡಲಾಗಿದೆ. ಹೀಗಾಗಿ ಪ್ರಜ್ವಲ್​​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಸಂತ್ರಸ್ತೆಯನ್ನು ಕರೆದುಕೊಂಡು ಹೋಗಿ ಮಹಜರು ಕೂಡ ಮಾಡಲಾಗಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ