ಧಾರವಾಡ, ಜನವರಿ 7: ಧಾರವಾಡ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮೊದಲು ದೂರುದಾರರಾಗಿದ್ದು ಅವರ ಪತ್ನಿ ಮಲ್ಲಮ್ಮ. ಪೊಲೀಸರು ನಡೆಸಿದ್ದ ತನಿಖೆ ವೇಳೆಯಲ್ಲಿ ಅವರು ವ್ಯತಿರಿಕ್ತ ಹೇಳಿಕೆ ನೀಡಿದ್ದರು. ಬಳಿಕ ತನಿಖೆಯನ್ನು ರಾಜ್ಯ ಸರಕಾರ ಸಿಬಿಐಗೆ ವಹಿಸಿದ ಬಳಿಕ ಪ್ರಕರಣ ಬೇರೆ ತಿರುವು ಪಡೆದು, ಮಾಜಿ ಸಚಿವ ವಿನಯ ಕುಲಕರ್ಣಿ 9 ತಿಂಗಳು ಜೈಲು ಕಂಡುಬಂದಿದ್ದು ಕೂಡ ಇತಿಹಾಸ. ಆದರೆ ಇದೀಗ ಪ್ರಕರಣದ ವಿಚಾರಣೆ ಅಂತಿಮ ಹಂತಕ್ಕೆ ಬಂದಿದ್ದು, ಪ್ರಕರಣದ ಮೊದಲನೇ ಆರೋಪಿ ಬಸವರಾಜ ಮುತ್ತಗಿ ಮಾಫಿ ಸಾಕ್ಷಿಯಾಗಿ ಕೋರ್ಟ್ ಮುಂದೆ ತನ್ನ ಹೇಳಿಕೆಯನ್ನೂ ದಾಖಲಿಸಿದ್ದಾನೆ. ಇನ್ನು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಮಲ್ಲಮ್ಮ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಿತ್ತು. ಆದರೆ, ಮಲ್ಲಮ್ಮ ಅವರು ತನಿಖೆಗೆ ಸರಿಯಾಗಿ ಸ್ಪಂದಿಸಿರಲಿಲ್ಲ. ಈ ಮಧ್ಯೆ ಕೆಲ ಅನಿರೀಕ್ಷಿತ ಬೆಳವಣಿಗಳೂ ನಡೆದಿದ್ದವು. ಈ ನಿಟ್ಟಿನಲ್ಲಿ ಸಾಕ್ಷಿ ಪಟ್ಟಿಯಿಂದ ಮಲ್ಲಮ್ಮ ಅವರನ್ನು ಕೈಬಿಡಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಈ ಮುಂಚೆ, ಅಂದರೆ ಪೊಲೀಸರ ತನಿಖೆ ವೇಳೆಯೂ ಅನೇಕ ಅನಿರೀಕ್ಷಿತ ಬೆಳವಣಿಗೆ ನಡೆದಿದ್ದವು. ಇದರಿಂದಾಗಿ ಯೋಗೀಶ್ ಅಣ್ಣ ಗುರುನಾಥಗೌಡ ಒಟ್ಟಾರೆ ಪ್ರಕರಣದಿಂದ ಮಲ್ಲಮ್ಮ ಅವರನ್ನು ದೂರವೇ ಇಟ್ಟಿದ್ದರು. ಆದರೆ ಸಿಬಿಐ ತನ್ನ ತನಿಖೆ ವೇಳೆ, ಮಲ್ಲಮ್ಮ ಅವರನ್ನು ಸಾಕ್ಷಿಯಾಗಿ ಪರಿಗಣಿಸಿತ್ತು. ಆದರೆ ಇದೀಗ ಸಿಬಿಐ ಮಲ್ಲಮ್ಮ ಅವರನ್ನು ಸಾಕ್ಷಿ ಪಟ್ಟಿಯಿಂದ ಕೈಬಿಟ್ಟಿದೆ. ಸಾಕ್ಷಿ ಹೇಳುವ ಸಂದರ್ಭದಲ್ಲಿ ಮಲ್ಲಮ್ಮ ಪ್ರತಿಕೂಲವಾಗಿ ಹೇಳಿಕೆ ನೀಡಿದರೆ ಅದು ಒಟ್ಟಾರೆ ಪ್ರಕರಣದ ಮೇಲೆ ಹಾಗೂ ವಿಚಾರಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬುದೇ ಸಿಬಿಐ ಲೆಕ್ಕಾಚಾರವಾಗಿದೆ.
ಇನ್ನು ಪ್ರಾಸಿಕ್ಯೂಶನ್‌ಗೆ ಸಾಕ್ಷಿ ಪಟ್ಟಿಯಿಂದ ತಮಗೆ ಬೇಡ ಎನಿಸಿದವರನ್ನು ಕೈಬಿಡುವ ಅಧಿಕಾರವಿದ್ದು, ಸಿಬಿಐ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿ ಇದ್ದು, ಅವರೇ ಮೊದಲ ಸಾಕ್ಷಿಯಾಗಿದ್ದಾರೆ. ದೂರುದಾರರನ್ನು ಸಾಕ್ಷಿಯನ್ನಾಗಿ ಪರಿಗಣಿಸಲಾಗಿದೆ. ಈ ನಿಟ್ಟಿನಲ್ಲಿ ಮಲ್ಲಮ್ಮ ಅವರ ಸಾಕ್ಷ್ಯ ಹೇಳಿಕೆ ದಾಖಲಿಸುತ್ತಿಲ್ಲ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಮೌಖಿಕವಾಗಿ ತಿಳಿಸಿದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: ಯೋಗೀಶ್ ಗೌಡರನ್ನು ಕೊಲೆ ಮಾಡಸಿದ್ದೇ ವಿನಯ್ ಕುಲಕರ್ಣಿ: ಕೇಸ್ನ ಪ್ರಮುಖ ಆರೋಪಿ ಮುತ್ತಗಿ ಹೇಳಿಕೆ
ಈ ಮಧ್ಯೆ ಆರೋಪಿ ವಿನಯ ಕುಲಕರ್ಣಿ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿರುವ ಸಿಬಿಐ, ಜಾಮೀನು ರದ್ದು ಕೋರಿ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ವೇಳೆ ವಿನಯ ತಮ್ಮ ವಕೀಲರೊಂದಿಗೆ ಖುದ್ದು ಹಾಜರಾಗಿ, ಸಿಬಿಐ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಿದ್ದರು. ಒಟ್ಟಿನಲ್ಲಿ ವಿಚಾರಣೆ ಕೊನೆಯ ಹಂತದಲ್ಲಿರುವ ಹೊತ್ತಿನಲ್ಲಿ ಅನೇಕ ವಿಚಿತ್ರ ಬೆಳವಣಿಗೆಗಳು ನಡೆಯುತ್ತಿರುವುದು ಮಾತ್ರ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ