ಯೋಗೀಶ್ ಗೌಡರನ್ನು ಕೊಲೆ ಮಾಡಸಿದ್ದೇ ವಿನಯ್ ಕುಲಕರ್ಣಿ: ಕೇಸ್ನ ಪ್ರಮುಖ ಆರೋಪಿ ಮುತ್ತಗಿ ಹೇಳಿಕೆ
ಧಾರವಾಡದ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ತಪ್ಪೊಪ್ಪಿಗೆ ನೀಡಿದ್ದು, ಶಾಸಕ ವಿನಯ್ ಕುಲಕರ್ಣಿ ಅವರ ಪಾತ್ರವನ್ನು ಬಹಿರಂಗಪಡಿಸಿದೆ. ಮುತ್ತಗಿ ತನ್ನ ಹೇಳಿಕೆಯಲ್ಲಿ, ಕೊಲೆಗೆ ಬೆಂಗಳೂರಿನ ಹುಡುಗರನ್ನು ಬಳಸಿಕೊಳ್ಳಲಾಗಿದೆ. ಧಾರವಾಡದ ಹುಡುಗರು ಹತ್ಯೆಗೆ ನಿರಾಕರಿಸಿದ್ದರಿಂದ ಬೆಂಗಳೂರಿನಿಂದ ಹುಡುಗರನ್ನು ಕರೆಸಲಾಗಿದೆ ಎಂದೂ ಹೇಳಿದ್ದಾರೆ. 20 ಲಕ್ಷ ರೂಪಾಯಿ ಸುಪಾರಿ ನೀಡಲಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಧಾರವಾಡ, ಜನವರಿ 04: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ, ಬಿಜೆಪಿ ಮುಖಂಡ ಯೋಗೀಶ್ ಗೌಡ (Yogesh Gowda) ಕೊಲೆ ಕರ್ನಾಟಕದಲ್ಲಿ ತೀವ್ರ ಸಂಚಲನ ಉಂಟು ಮಾಡಿತ್ತು. ಯೋಗೀಶ್ ಗೌಡನನ್ನು ಕೊಲೆ ಮಾಡಿಸಿದ್ದೇ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಎಂದು ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಆಪ್ತನೂ ಆಗಿರುವ ಬಸವರಾಜ ಮುತ್ತಗಿ ತಪ್ಪೊಪ್ಪಿಗೆ ಹೇಳಿಕೆಯಿಂದ ಶಾಸಕ ವಿನಯ್ ಕುಲಕರ್ಣಿ ಮೇಲಿನ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಿದೆ.
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ವಿನಯ್ ಕುಲಕರ್ಣಿ ಪಾತ್ರದ ಕುರಿತು ಬಸವರಾಜ ಮುತ್ತಗಿ ವಿಸ್ತ್ರತವಾಗಿ ಮಾಹಿತಿ ನೀಡಿದ್ದಾರೆ. ಯೋಗೇಶ್ ಗೌಡ ಹತ್ಯೆಗೆ ಧಾರವಾಡದ ಯುವಕರು ಒಪ್ಪಿಗೆ ಸೂಚಿಸಲಿಲ್ಲ. ಹೀಗಾಗಿ, ಶಾಸಕ ವಿನಯ್ ಕುಲಕರ್ಣಿ ಸೂಚನೆ ಮೇರೆಗೆ ಬೆಂಗಳೂರಿನಿಂದ ಕರೆಸಿ ಸಂಚು ರೂಪಿಸಿ ಯೋಗೀಶ್ ಗೌಡನನ್ನು ಕೊಲೆ ಮಾಡಲಾಗಿದೆ ಎಂದು ಮುತ್ತಿಗೆ ಹೇಳಿಕೆ ನೀಡಿದ್ದಾರೆ.
ಯೋಗೇಶ್ ಗೌಡ ಹತ್ಯೆಗೆ ಮೊದಲು ಧಾರವಾಡದ ವಿಕಾಸ್ ಕಲಬುರಗಿ, ಕೀರ್ತಿ ಕುಮಾರ್ ಕುರಹಟ್ಟಿ, ವಿಕ್ರಂ ಬಳ್ಳಾರಿ, ಸಂದೀಪ್ ಸವದತ್ತಿ, ಮಹಾಬಲೇಶ್ವರ ಅವರಿಗೆ ಸುಪಾರಿ ನೀಡಲು ವಿನಯ್ ಕುಲಕರ್ಣಿ ನಿರ್ಧರಿಸಿದ್ದರು. ಅದರಂತೆ, ಈ ಹುಡುಗರು ಮುಂದೆ ವಿನಯ್ ಕುಲಕರ್ಣಿ ವಿಚಾರ ಪ್ರಸ್ತಾಪಿಸಲಾಯಿತು. ಆದರೆ, ಅವರು ತಿರಸ್ಕರಿಸಿದರು ಎಂದು ಮುತ್ತಗಿ ತಪ್ಪೊಪ್ಪಿಗೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಕಾರ್ಯಕರ್ತೆಗೆ ಲೈಂಗಿಕ ದೌರ್ಜನ್ಯ: ವಿನಯ್ ಕುಲಕರ್ಣಿ ವಿರುದ್ಧ ಎಫ್ಐಆರ್
ಅದನ್ನು ಶಾಸಕ ವಿನಯ್ ಕುಲಕರ್ಣಿ ಅವರಿಗೆ ತಿಳಿಸಲಾಯಿತು. ಆಗ, ವಿನಯ್ ಕುಲಕರ್ಣಿ ಬೆಂಗಳೂರಿನಿಂದ ಕೆಲವರನ್ನು ಕರೆಸಿ ಕೆಲಸ ಮಾಡಿಕೊಡುವಂತೆ ವಿನಯ ಕುಲಕರ್ಣಿ ಒತ್ತಾಯ ಮಾಡಿದ್ದರು. ಬಳಿಕ, ಬೆಂಗಳೂರಿನಲ್ಲಿ ಪ್ರಕರಣದ 8ನೇ ಆರೋಪಿ ದಿನೇಶ್ನನ್ನು ಭೇಟಿಯಾಗಿ, ವಿನಯ್ ಕುಲಕರ್ಣಿ ಪ್ರಸ್ತಾಪ ಮುಂದಿಡಲಾಯಿತು. ಇದಕ್ಕೆ ದಿನೇಶ್ ಎರಡು ದಿನಗಳ ಕಾಲಾವಕಾಶ ಕೋರಿದನು ಎಂದು ಮುತ್ತಗಿ ಹೇಳಿದರು.
ಬಳಿಕ, ಮುತ್ತಗಿಯನ್ನು ಭೇಟಿಯಾದ ದಿನೇಶ್ ಹತ್ಯೆಗೆ ಒಪ್ಪಿಗೆ ಸೂಚಿಸಿ, 20 ಲಕ್ಷ ರೂ. ಬೇಡಿಕೆಯಿಟ್ಟನು. ಪ್ರಕರಣದಲ್ಲಿ ತನ್ನ ಹೆಸರು ಬರಬಾರದು, ಬಂಧನವಾಗದಂತೆ ನೋಡಿಕೊಳ್ಳಬೇಕು, ಜತಗೆ ಶರಣಾಗುವುದಿಲ್ಲ ಎಂಬ ಷರತ್ತು ವಿಧಿಸಿದ. ಈ ಮಾಹಿತಿಯನ್ನು ವಿನಯ್ ಕುಲಕರ್ಣಿಗೆ ತಲುಪಿಸಲಾಯಿತು ಎಂಬ ಅಂಶ ತಪ್ಪೊಪ್ಪಿಗೆಯಲ್ಲಿದೆ.
ಬೆಂಗಳೂರು ಹುಡುಗುರ ಷರತ್ತಿಗೆ ಒಪ್ಪಿದ ವಿನಯ್ ಕುಲರ್ಣಿ, ಹತ್ಯೆ ಬಳಿಕ ಧಾರವಾಡದ ಹುಡುಗರನ್ನು ಶರಣಾಗಿಸುವ ಯೋಚನೆ ಹೇಳಿದನು. ಜೂನ್ ಮೊದಲ ವಾರ ಬೆಂಗಳೂರಿನಿಂದ ದಿನೇಶ್, ಅಶ್ವತ್ಥ್, ಸುನೀಲ್, ನಜೀರ್ ಸೇರಿ ಇತರರ ಗ್ಯಾಂಗ್ ಧಾರವಾಡಕ್ಕೆ ಬಂದಿತ್ತು. ಇದೇ ವೇಳೆ ವಿನಯ್ ಕುಲಕರ್ಣಿ ಮುತ್ತಗಿಗೆ ಮೂರು ಕಂಟ್ರಿ ಪಿಸ್ತೂಲು ನೀಡಿದ್ದರು. ಅವಶ್ಯಕತೆ ಬಿದ್ದರಷ್ಟೇ ಬಳಸಲು ಸೂಚನೆ ನೀಡಿದ್ದರು. ಯೋಗೀಶ್ ಗೌಡನನ್ನು ಕೊಲ್ಲೊವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ, ಅವಶ್ಯಕತೆ ಎನ್ನಿಸಿದರಷ್ಟೇ ಪಿಸ್ತೂಲು ಬಳಸಲು ಸೂಚನೆ ನೀಡಿದರು ಎಂದು ಹೇಳಲಾಗಿದೆ.
ವಿನಯ್ ಕುಲಕರ್ಣಿ ಸೋದರ ಮಾವ ವಿಜಯಪುರ ಮೂಲದ ಚಂದ್ರಶೇಖರ್ ಇಂಡಿ ಪಿಸ್ತೂಲು ತಂದುಕೊಟ್ಟನು. ಪಿಸ್ತೂಲುಗಳನ್ನು ಮುತ್ತಗಿ ಕೈಗೆ ಕೊಡುವಾಗ ವಿನಯ್ ಕುಲಕರ್ಣಿ ಇದ್ದರು. ಬಳಿಕ, ಮೇ ಮತ್ತು ಜೂನ್ ತಿಂಗಳಲ್ಲಿ ಎರಡು ಬಾರಿ ಕೊಲೆಗೆ ಯತ್ನಿಸಲಾಯಿತಾದರೂ ವಿಫಲವಾಯಿತು. ಕೊನೆಗೆ, 2016ರ ಜೂನ್ 15ರಂದು ಜಿಮ್ನಲ್ಲಿ ಯೋಗೀಶ್ ಗೌಡನನ್ನು ಹತ್ಯೆ ಮಾಡಲಾಯಿತು ಎಂಬ ಅಂಶ ತಪ್ಪೊಪ್ಪಿಗೆಯಲ್ಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:53 am, Sat, 4 January 25