ಬೆಂಗಳೂರು, (ಜನವರಿ 12): ದಿನಕ್ಕೊಂದು ಬೆಳವಣಿಗೆ. ದಿನಕ್ಕೊಂದು ಅಸ್ತ್ರ. ದಿನಕ್ಕೊಂದು ಗೇಮ್ ಪ್ಲ್ಯಾನ್. ಕರ್ನಾಟಕ ಕಾಂಗ್ರೆಸ್ ಮನೆಯಲ್ಲಿ ದಿನಕ್ಕೊಂದು ದಾಳಗಳು ಉರುಳುತ್ತಿವೆ. ಒಂದ್ಕಡೆ ಡಿನ್ನರ್ ಮೀಟಿಂಗ್ ನಡೆಯುತ್ತಿದ್ದರೆ, ಮತ್ತೊಂದ್ಕಡೆ ದೇವರ ದರ್ಶನವೂ ಆಆಗುತ್ತಿದೆ. ಈ ಮಧ್ಯೆ ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡುವವರು ಅಖಾಡಕ್ಕಿಳಿಯುತ್ತಿದ್ದಾರೆ. ನಿನ್ನೆ ಚಿಕ್ಕಮಗಳೂರಿನ ಶೃಂಗೇರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ ನೀಡಿದ್ರು. ಈ ವೇಳೆ ಮುಂದಿನ ಸಿಎಂ ಡಿಕೆ ಅಂತಾ ಕಾರ್ಯಕರ್ತರು ಘೋಷಣೆ ಮೊಳಗಿಸಿದ್ದರು. ಇಂದು ಡಿಕೆ ಆಪ್ತ ಚನ್ನಗಿರಿಯ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜು ಮಾತನಾಡಿ, ಡಿಕೆ ಮುಂದಿನ ಸಿಎಂ ಕೂಗಿಗೆ ಧ್ವನಿಗೂಡಿಸಿದ್ದಾರೆ. ಡಿ.ಕೆ ಶಿವಕುಮಾರ್ ಸಿಎಂ ಆಗೇ ಆಗುತ್ತಾರೆ. ಒಳ್ಳೇ ದಿನ ಬಂದೇ ಬರುತ್ತೆ. ನಾವು ಅವರ ಪರ ಇರುತ್ತೇವೆ ಎಂದು ಕಿಚ್ಚು ಹೊತ್ತಿಸಿದ್ದಾರೆ.
ಡಿಕೆ ಶಿವಕುಮಾರ್ ಸಿಎಂ ಆಗೇ ಆಗುತ್ತಾರೆ ಎಂದ ಶಿವಗಂಗಾ ಬಸವರಾಜು, ಕುರ್ಚಿ ಖಾಲಿಯಾದಾಗ ಕ್ಲೈಮ್ ಮಾಡೇ ಮಾಡುತ್ತೇವೆ ಎಂದಿದ್ದಾರೆ. ಸಚಿವರು ಅಧಿಕಾರಕ್ಕಾಗಿ ಮಾತನಾಡ್ತಿದ್ದಾರೆ. ಮಾತನಾಡುತ್ತಿರುವರು ಆಪರೇಷನ್ ಮಾಡಿ ನಾಲ್ಕು ಜನರನ್ನ ಕರೆದುಕೊಂಡು ಬರಲಿ ಎಂದು ಸವಾಲ್ ಹಾಕಿದ್ದಾರೆ. ಮತ್ತೊಂದೆಡೆ ಮಾತನಾಡಿರೋ ಸಚಿವ ಕೆ.ಎನ್ ರಾಜಣ್ಣ, ಪವರ್ ಶೇರಿಂಗ್ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು ಎಂದಿದ್ದಾರೆ. ಹಾಗೆಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಅರ್ಜಿ ಹಾಕಿಲ್ಲ ಅಂತಾ ಕೊಟ್ರೆ ನಿಭಾಯಿಸ್ತೀನಿ ಎಂದು ಹೇಳಿದ್ದಾರೆ.
ಡಿನ್ನರ್ ಕಾಳಗದಿಂದ ಹಿರಿಯ ನಾಯಕರು ಗರಂ ಆಗಿದ್ದಾರೆ. ಸಿಎಂ ಆಪ್ತರು, ಡಿಸಿಎಂ ಬಣದ ಜಟಾಪಟಿಗೆ ಬೇಸರಗೊಂಡಿದ್ದಾರೆ. ಬಣ ಕಾಳಗ ಜಾತಿ ಸ್ವರೂಪಕ್ಕೆ ತಿರುಗಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರತಿಪಕ್ಷಗಳಿಗೆ ನಾವೇ ಅಸ್ತ್ರ ಕೊಟ್ಟಂಗೆ ಆಗಲಿದೆ ಇದಕ್ಕೆ ಬ್ರೇಕ್ ಹಾಕುವಂತೆ ಒತ್ತಾಯಿಸಿದ್ದಾರೆ.
ಸಿಎಂ-ಡಿಸಿಎಂ ಬಣ ಕಾದಾಟದಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಈ ಬಗ್ಗೆ ಮೊದಲೇ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಇದೆ. ಮತ್ತೆ ಗೊಂದಲ ಸೃಷ್ಟಿಸಿದ್ರೆ ಪಕ್ಷಕ್ಕೆ ಹಿನ್ನಡೆ ಆಗುತ್ತೆ ಅಂತಾ ಹಿರಿಯ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ. ಮೊನ್ನೆ ಡಿಸಿಎಂ ಜತೆ ನಡೆದ ಸಭೆಯಲ್ಲೂ ಈ ಬಗ್ಗೆ ಅಭಿಪ್ರಾಯವ್ಯಕ್ತಪಡಿಸಿರೋ ಹಿರಿಯ ನಾಯಕರು, ಇಂತಹ ವಿಚಾರಗಳಿಗೆ ಕಡಿವಾಣ ಹಾಕಲು ಡಿಕೆಗೆ ಆಗ್ರಹಿಸಿದ್ದಾರೆ. ಹಾಗೆಯೇ ಜನವರಿ 16ಕ್ಕೆ ಸಿಎಂರನ್ನ ಭೇಟಿಯಾಗಲಿರುವ ‘ಕೈ’ ಹಿರಿಯರ ಬಣ, ಸಿಎಂ ಬಳಿಯೂ ಪ್ರಸ್ತಾಪಿಸಲು ತೀರ್ಮಾನಿಸಿದ್ದಾರೆ. ಹೀಗೆ ಮುಂದುವರೆದರೆ ಹೈಕಮಾಂಡ್ ಗೆ ಮನವರಿಕೆ ಮಾಡಲು ತೀರ್ಮಾನಿಸಿದ್ದಾರೆ.) ಈ ನಡುವೆ ಕಾಂಗ್ರೆಸ್‌ನಲ್ಲೂ ಬಣ ಇದೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದು ಎಂದಿದ್ದಾರೆ.
ಇನ್ನೂ ಡಿನ್ನರ್ ಮೀಟಿಂಗ್‌ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಈ ಮಧ್ಯೆ ಪಕ್ಷ ಉಂಟು ನಾನುಂಟು ಎಂಬ ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್, ಪಕ್ಷದ ತೀರ್ಮಾನವನ್ನ ನಾವೆಲ್ಲ ಒಪ್ಪಿಕೊಳ್ತೀವಿ, ಶಿವಕುಮಾರ್ ಕೂಡಾ ಅದೇ ಮಾತಾಡಿದ್ದಾರೆ, ಸಂತೋಷ ಎಂದಿದ್ದಾರೆ.
ಹೀಗೆ ಕಾಂಗ್ರೆಸ್‌ನಲ್ಲಿ ದಿನದಿಂದ ದಿನಕ್ಕೆ ರಾಜಕೀಯ ಗರಿಗೆದರುತ್ತಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರಾತ್ರಿ ಬೆಂಗಳೂರಿಗೆ ಆಗಮಿಸ್ತಿದ್ದಾರೆ. ನಾಳೆ ಇಡೀ ದಿನ ಕಾಂಗ್ರೆಸ್ ನಾಯಕರ ಜತೆ ಸರಣಿ ಸಭೆ ನಡೆಸಲಿದ್ದಾರೆ. ನಾಳೆ ಸಂಜೆ 6ಕ್ಕೆ ಖಾಸಗಿ ಹೊಟೇಲ್ನಲ್ಲಿ CLP ಸಭೆ ನಡೆಯಲಿದೆ. ಈ ಸಭೆ ಭಾರೀ ಕುತೂಹಲ ಮೂಡಿಸಿದೆ. ಇದೇ ವೇಳೆ ಡಿನ್ನರ್ ಮೀಟಿಂಗ್‌ಗೆ ಬ್ರೇಕ್ ಹಾಕಿದ ವಿಷಯ ಕೂಡ ಚರ್ಚೆಯಾಗುವ ಸಾಧ್ಯತೆ ಇದೆ.
ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ