ಬೆಂಗಳೂರು, (ಜನವರಿ 13): ರಾಜ್ಯ ಕಾಂಗ್ರೆಸ್ನಲ್ಲಿ ಡಿನ್ನರ್ ಮೀಟಿಂಗ್ ಪಾಲಿಟಿಕ್ಸ್ ಹಾಗೂ ಸಿಎಂ ಕುರ್ಚಿ ಕಾಳಗ ದಿನಕ್ಕೊಂದು ರೀತಿಯ ವ್ಯಾಖ್ಯಾನ ಬರೆಯುತ್ತಿದೆ. ಸಿಎಂ, ಡಿಸಿಎಂ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳುತ್ತಿದದರೂ ಕೆಲ ಶಾಸಕರ ಹೇಳಿಕೆ, ಸಚಿವರ ನಡೆ ನೂರೆಂಟು ಚರ್ಚೆಗಳನ್ನೇ ಹುಟ್ಟು ಹಾಕುತ್ತಿದೆ. ಇನ್ನು ಕಾಂಗ್ರೆಸ್ನಲ್ಲಿನ ಈ ಬೆಳವಣಿಗೆ ಬಿಜೆಪಿ ನಾಯಕರಿಗೆ ಅಸ್ತ್ರವಾಗಿದೆ. ಹೀಗಾಗಿಯೇ ಈ ಗೊಂದಲಗಳಿಗೆ ಬ್ರೇಕ್ ಹಾಕಲೇಬೇಕು ಎಂದು ಹೈಕಮಾಂಡ್ ನಾಯಕರೇ ಖುದ್ದು ಅಖಾಡಕ್ಕೆ ಇಳಿದಿದ್ದು, ಬೆಂಗಳೂರಿನಲ್ಲಿ ಸುರ್ಜೇವಾಲ ನೇತೃತ್ವದಲ್ಲಿ ಸರಣಿ ಸಭೆಗಳೇ ಫಿಕ್ಸ್ ಆಗಿವೆ. ಮೊದಲಿಗೆ ಕೆಪಿಸಿಸಿ ಕಚೇರಿಯಲ್ಲಿ ಸರ್ವ ಸದಸ್ಯರ ಸಭೆ ನಡೆದಿದ್ದು, ಸಭೆಯಲ್ಲಿ ನಾಯಕರುಗಳಿಗೆ ಶಿಸ್ತಿನ ಪಾಠ ಮಾಡಿದ್ದಾರೆ.
ಸಭೆಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಸೇರಿದಂತೆ ಘಟಾನುಘಟಿ ನಾಯಕರುಗಳೇ ಭಾಗಿಯಾಗಿದ್ದರು. ಈ ವೇಳೆ ನಾಯಕರಿಗೆ ಶಿಸ್ತಿನ ಪಾಠ ಮಾಡಿದ್ದಾರೆ. ಸಭೆ ಆರಂಭದಲ್ಲೇ ಸಿಎಂ ಹಾಗೂ ಡಿಸಿಎಂ ಬಳಿ ರಣದೀಪ್ ಸಿಂಗ್ ಸುರ್ಜೇವಾಲ ಸಚಿವರ ಕಾರ್ಯವೈಖರಿ ಬಗ್ಗೆ ವರದಿ ಕೇಳಿದ್ದು, ಸಿಎಂ, ಡಿಸಿಎಂ, ಮುಚ್ಚಿದ ಲಕೋಟೆಯಲ್ಲಿ ಸಚಿವರ ರಿಪೋರ್ಟ್ ಕಾರ್ಡ್ ನೀಡಿದರು. ಹಾಗಾದ್ರೆ ವರಿಷ್ಠರು ಕೇಳಿದ ಆ 5 ಪ್ರಶ್ನೆಗಳು ಯಾವ್ಯಾವು ಎನ್ನುವುದು ಈ ಕೆಳಗಿನಂತಿವೆ ನೋಡಿ.
ಹೀಗೆ ಹೈಕಮಾಂಡ್ ಐದು ಪ್ರಶ್ನೆಗಳನ್ನ ಕೇಳೋ ಮೂಲಕ ಸಚಿವರ ಕಾರ್ಯ ವೈಖರಿ ವರದಿ ಪಡೆದುಕೊಂಡಿದೆ.. ವರದಿ ಆಧಾರದ ಮೇಲೆ ಸಚಿವರ ಮೌಲ್ಯಮಾಪನಕ್ಕೂ ಪ್ಲ್ಯಾನ್ಗಳು ನಡೆದಿದ್ದು, ಮಂತ್ರಿಗಳಿಗೆ 60 ದಿನಗಳ ಟಾರ್ಗೆಟ್ ನೀಡಲಾಗಿದೆ. 60 ದಿನಗಳ ಬಳಿಕ ಸಚಿವರ ಜತೆ ಒನ್ ಟು ಒನ್ ಚರ್ಚೆ ಮಾಡಲಿದ್ದಾರೆ.
ಸಚಿವರ ವರದಿ ಪಡೆದು ವರಿಷ್ಠರು ಇಷ್ಟಕ್ಕೆ ಸುಮ್ಮನಾಗಲಿಲ್ಲ. ಬದಲಾಗಿ ತಮ್ಮದೇ ನಾಯಕರಿಗೆ ಸುರ್ಜೇವಾಲ ಶಿಸ್ತಿನ ಪಾಠ ಹೇಳಿದ್ದಾರೆ. ನಮ್ಮ ಪಕ್ಷದ ಒಂದಿಷ್ಟು ನಾಯಕರಲ್ಲಿ ಶಿಸ್ತು ಇಲ್ಲ. ಸಚಿವರು, ಶಾಸಕರು ಯಾರು ಶಿಸ್ತು ಮೀರಬಾರದು. ಪಕ್ಷ ತಾಯಿ ಇದ್ದಂಗೆ, ಸರ್ಕಾರ ಮಗು ಇದ್ದ ಹಾಗೇ. ಯಾರು ಕೂಡ ಪಾರ್ಟಿ ಬುಲ್ಡೋಜ್ ಮಾಡಬಾರದು. ಪಕ್ಷಕ್ಕಿಂತ ನಾವು ದೊಡ್ಡವರು ಅಂತ ಭಾವಿಸಬೇಡಿ. ಪಕ್ಷವನ್ನ ಬುಲ್ಡೋಜ್ ಮಾಡೋರನ್ನ ಸಹಿಸುವುದಿಲ್ಲ ಎನ್ನುವ ಮೂಲಕ ಜಡತ್ವ ಬಿಟ್ಟು ಕೆಲಸ ಮಾಡುವಂತೆ ಸುರ್ಜೇವಾಲ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಕಾಂಗ್ರೆಸ್ನಲ್ಲಿ ಯಾವುದೇ ಭಿನ್ನಮತದ ಬಿರುಗಾಳಿ ಬಿಸಬಾರದು ಅಂತಾನೇ ನಾಯಕರ ನಡುವೆ ಬೆಸುಗೆ ಹಾಕೋಕೆ ಸುರ್ಜೇವಾಲ ಮೀಟಿಂಗ್ ಮೇಲೆ ಮೀಟಿಂಗ್ ಮಾಡುತ್ತಿದ್ದಾರೆ. ಆದ್ರೆ ಇಂದಿನ ಮೊದಲ ಸಭೆಗೆ ಗೃಹ ಸಚಿವ ಪರಮೇಶ್ವರ್, ಕೆ.ಎನ್ ರಾಜಣ್ಣ ಗೈರಾಗಿದ್ದಾರೆ. ಮೂಲಗಳ ಪ್ರಕಾರ ದಲಿತ ಸಚಿವರ ಸಭೆ ಮಾಡುವುದಕ್ಕೆ ಅವಕಾಶ ನೀಡಿಲ್ಲ ಎಂದು ಇಬ್ಬರು ನಾಯಕರು ಗೈರಾಗಿದ್ದಾರೆ ಎನ್ನಲಾಗುತ್ತಿದೆ. ಈ ಚರ್ಚೆಗೆ ಕಿಚ್ಚು ಹಚ್ಚುವಂತೆ ದಲಿತ ಸಭೆ ಬಗ್ಗೆ ಪರಮೇಶ್ವರ್ ಮಾತನಾಡಿದ್ದು, ನಾವು ಮೀಟಿಂಗ್ ಮಾಡೇ ಮಾಡುತ್ತೇವೆ ಎಂದಿದ್ದಾರೆ.
ಜಾತಿ ಗಣತಿ ಯಾರ ವಿರುದ್ಧ ಅಲ್ಲ ಎಂದು ರಾಜ್ಯ ನಾಯಕರಿಗೆ ತಿಳಿ ಹೇಳಿದ ಸುರ್ಜೇವಾಲ, ಜಾತಿಗಣತಿ ಎಂಬುದು ಎಲ್ಲರಿಗೂ ಅವರ ಹಕ್ಕುಗಳಿಗಾಗಿ ಇರುವುದು. ಸಣ್ಣ ಸಮುದಾಯಗಳಿಗೂ ಹಕ್ಕುಗಳು ಸಿಗಬೇಕು. ಇದು ಎಚ್.ಕೆ ಪಾಟೀಲ್ ವಿರುದ್ಧವೋ ಡಿಕೆ ಶಿವಕುಮಾರ್ ವಿರುದ್ದವೋ ಅಲ್ಲ ಎಂದಿದ್ದಾರೆ. ಈ ಮೂಲಕ ಜಾತಿಗಣತಿ ಪರವಾಗಿ ಇರುವಂತೆ ನಾಯಕರುಗಳಿಗೆ ತಿಳಿಸಿದ್ದಾರೆ.
ಇನ್ನು ಕಾಂಗ್ರೆಸ್ನಲ್ಲಿನ ಈ ಬೆಳವಣಿಗೆಯೇ ಬಿಜೆಪಿಯವರನ್ನ ಮುಸಿ ಮುಸಿ ನಗುವಂತೆ ಮಾಡಿದೆ. ವಿಪಕ್ಷ ನಾಯಕ ಅಶೋಕ್ ಮಾತನಾಡಿ, ಪವರ್ ಶೇರಿಂಗ್ ಬಗ್ಗೆ ಹೇಳಬೇಕಾಗಿರುವುದು ಡಿಕೆ ಶಿವಕುಮಾರ್. ಸುರ್ಜೇವಾಲ ಬಂದು ಹೋದ್ರೂ ಏನು ಆಗಲ್ಲ ಎಂದು ಕಿಚಾಯಿಸಿದರು.
ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Mon, 13 January 25