AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನಾಂಬಾ ಸನ್ನಿಧಿಯಲ್ಲಿ ಡಿಕೆಶಿ ಖಡ್ಗಮಾಲಾ ಸ್ತ್ರೋತ್ರ ಪಠಣೆ, ಪೂಜೆ: ಸಿಎಂ ಗದ್ದುಗೆಗೇರುವ ಪ್ರಶ್ನೆಗೆ ಮಾರ್ಮಿಕ ಉತ್ತರ

ಕರ್ನಾಟಕ ರಾಜಕೀಯದಲ್ಲಿ ನವೆಂಬರ್ ಕ್ರಾಂತಿಯ ಮಾತುಗಳು ಕಂಪನ ಎಬ್ಬಿಸಿವೆ. ಕಾಂಗ್ರೆಸ್ ಪಾಳಯದಲ್ಲಿ ನಾಯಕತ್ವ ಬದಲಾವಣೆ ಆಗಬಹುದು, ಆಗಲ್ಲ ಎಂಬ ಚರ್ಚೆಗಳು ಹೆಚ್ಚಾಗಿವೆ. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ನಡೆ ಮತ್ತೊಂದು ಸಂಚಲನಕ್ಕೆ ಕಾರಣವಾಗಿದೆ. ಹಾಸನಾಂಬ ದರ್ಶನ ಪಡೆದ ಡಿಕೆಶಿ, ಸಿಎಂ ಆಗುತ್ತೀರಾ ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ಹಾಸನಾಂಬಾ ಸನ್ನಿಧಿಯಲ್ಲಿ ಡಿಕೆಶಿ ಖಡ್ಗಮಾಲಾ ಸ್ತ್ರೋತ್ರ ಪಠಣೆ, ಪೂಜೆ: ಸಿಎಂ ಗದ್ದುಗೆಗೇರುವ ಪ್ರಶ್ನೆಗೆ ಮಾರ್ಮಿಕ ಉತ್ತರ
ಹಾಸನಾಂಬಾ ಸನ್ನಿಧಿಯಲ್ಲಿ ಡಿಕೆಶಿ
ಮಂಜುನಾಥ ಕೆಬಿ
| Updated By: Ganapathi Sharma|

Updated on: Oct 15, 2025 | 6:56 AM

Share

ಹಾಸನ, ಅಕ್ಟೋಬರ್ 15: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮಂಗಳವಾರ ರಾತ್ರಿ, ವರ್ಷಕ್ಕೊಮ್ಮೆ ದರ್ಶನ ನೀಡುವ ದುರ್ಗೆಯ ಸ್ವರೂಪಿ, ಶಾರದೆ ಸ್ವರೂಪಿಯಾದ ತಾಯಿ ಹಾಸನಾಂಬೆಯ (Hasanamba) ದರ್ಶನ ಪಡೆದುಕೊಂಡರು. ಇದು ಸಾಮಾನ್ಯ ಪೂಜೆ, ದರ್ಶನಕ್ಕೆ ಮಾತ್ರ ಸೀಮಿತವಾಗಿದ್ದರೆ ದೊಡ್ಡ ವಿಚಾರ ಆಗುತ್ತಿರಲಿಲ್ಲ. ಅಧಿಕಾರ ಹಂಚಿಕೆ ಚರ್ಚೆ ಬಿರುಸುಪಡೆದುಕೊಂಡಿರುವ ಹೊತ್ತಲ್ಲೇ, ಹಾಸನಾಂಬೆ ಸನ್ನಿಧಿಯಲ್ಲಿ ಡಿಕೆಶಿ ಕೈಗೊಂಡ ಪೂಜೆ ಹೊಸ ಚರ್ಚೆಗೆ ಎಡೆಮಾಡಿಕೊಂಡಿದೆ.

ಖಡ್ಗಮಾಲಾ ಸ್ತೋತ್ರ ಪಠಣೆ: ಇಷ್ಟಾರ್ಥ ಸಿದ್ಧಿಗಾಗಿ ನಾರಾಯಣಿ ಮಂತ್ರದೊಂದಿಗೆ ಪೂಜೆ

ಸಿಎಂ ರೇಸ್‌ನಲ್ಲಿರುವ ಡಿಕೆ ಶಿವಕುಮಾರ್ ಪತ್ನಿ ಉಷಾ ಅವರ ಜೊತೆ ಹಾಸನಾಂಬೆ ದೇವಿಯ ಗರ್ಭಗುಡಿಯಲ್ಲಿ ಸುಮಾರು 15 ನಿಮಿಷ ಆಸೀನರಾಗಿ ವಿಶೇಷ ಪೂಜೆಸಲ್ಲಿಸಿದರು. ಶಕ್ತಿಯುತವಾದ ನಾರಾಯಣಿ ನಮಸ್ಕಾರ ಮಂತ್ರ ಮತ್ತು ಖಡ್ಗಮಾಲಾ ಸ್ತ್ರೋತ್ರ ಪಠಿಸಿದರು. ನಾರಾಯಣಿ ನಮಸ್ಕಾರ ಮಂತ್ರ ದುರ್ಗಾ ಸಪ್ತಸತಿಯ 11ನೇ ಅಧ್ಯಾಯದಲ್ಲಿ ಬರುವ ಮಂತ್ರವಾಗಿದೆ. ಇದು ಅತ್ಯಂತ ಪ್ರಬಲ ಪೂಜೆಯಾಗಿದ್ದು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಚಂಡಿಕಾ ಹೋಮ ಮಾಡುವ ವೇಳೆ ಪಠಿಸುವ ಮಂತ್ರವಾಗಿದೆ. ಸುಮಾರು 5 ನಿಮಿಷಗಳ ಕಾಲ ಡಿಕೆಶಿ ಖಡ್ಗಮಾಲಾ ಸ್ತ್ರೋತ್ರವನ್ನು ಪಠಿಸಿದ್ದಾರೆ.

ಅಷ್ಟೇ ಅಲ್ಲದೆ, ಶತ್ರುವಿನ ಮೇಲೆ ವಿಜಯದ ಸಂಕೇತವಾಗಿ ಮಾಡಿಸುವ ಪೂಜೆ ಕೂಡ ಇದಾಗಿದೆ. ಶತ್ರುವಿನ ಮೇಲೆ ವಿಜಯ ಸಾಧಿಸಲೆಂದು ಮಾಡಲೆಂದು ಈ ಶಕ್ತಿಯುತ ಖಡ್ಗಮಾಲಾ ಸ್ತ್ರೋತ್ರವನ್ನು ಪಠಿಸಲಾಗುತ್ತದೆ. ಡಿಕೆಶಿ ಅವರ ಸೂಚನೆಯಂತೆಯೇ ಅರ್ಚಕರು ಸಂಕಲ್ಪ ವೇಳೆ ಅರ್ಚನೆ ಮಾಡಿ ಈ ಸ್ತ್ರೋತ್ರದ ಮೂಲಕ ಪೂಜೆ ಮಾಡಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಅಧಿಕಾರಕ್ಕೆ ಬೇಡಿಕೊಂಡಿರಾ ಎಂಬ ಪ್ರಶ್ನೆಗೆ ಅಚ್ಚರಿಯ ಉತ್ತರ

ಹಾಸನಾಂಬೆ ದರ್ಶನ ಪಡೆದ ಬಳಿಕ ಡಿಕೆಶಿ ಸುದ್ದಿಗೋಷ್ಠಿಯಲ್ಲಿ ನೀಡಿರುವ ಹೇಳಿಕೆ ಬೇರೆ ರೀತಿಯ ವಿಶ್ಲೇಷಣೆಗೆ ಕಾರಣವಾಗಿದೆ. ಹೆಚ್ಚಿನ ಅಧಿಕಾರಕ್ಕಾಗಿ ಬೇಡಿಕೊಂಡಿರಾ ಎಂಬ ಪ್ರಶ್ನೆಗೆ ಮೊದಲಿಗೆ, ನಿಮಗೆ-ನಮಗೆ ಎಲ್ಲರಿಗೂ ಕೂಡ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇನೆ ಎಂದರು. ಬಳಿಕ ಭಕ್ತನಿಗೂ ಭಗವಂತನಿಗೂ ವ್ಯವಹಾರ ನಡೆಯುವಂತಹ ಸ್ಥಳ ದೇವಾಲಯ. ನಾನುಂಟು ಆ ತಾಯಿ ಉಂಟು. ನಾನುಂಟು ಭಕ್ತರುಂಟು ಎಂದು ಉತ್ತರಿಸಿದರು. ಇದು ಅಧಿಕಾರ ಹಂಚಿಕೆ ಚರ್ಚೆಯ ನಡುವೆ ಬಹಳ ಮಹತ್ವದ ಪಡೆದುಕೊಂಡಿದೆ.

ಕಳೆದ ವರ್ಷ ಖಡ್ಗಮಾಲಾ ಸ್ತ್ರೋತ್ರ ಪಠಿಸಿದ್ದ ಸಿಎಂ ಸಿದ್ದರಾಮಯ್ಯ!

ವಿಶೇಷವೆಂದರೆ ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ಕೂಡ ಹಾಸನಾಂಬೆ ದೇವಿ ದರ್ಶನ ಪಡೆದು ಇದೇ ಖಡ್ಗಮಾಲಾ ಸ್ತ್ರೋಸ್ತ್ರವನ್ನು ಪಠಿಸಿದ್ದರು. ಮುಡಾ ಹಗರಣದ ಸುಳಿಯಲ್ಲಿ ಸಿಲುಕಿದ್ದ ವೇಳೇಯೇ ಈ ಪೂಜೆ ಸಲ್ಲಿಸಿದ್ದರು. ನಂತರ ಮುಡಾ ಆರೋಪದಿಂದ ಮುಕ್ತರಾಗಿದ್ದು, ತನಿಖೆಯಲ್ಲಿ ಕ್ಲೀನ್‌ಚಿಟ್ ಸಿಕ್ಕಿದ್ದು ಎಲ್ಲರ ಕಣ್ಣಮುಂದೆಯೇ ಇದೆ. ಹೀಗಿರುವಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಖಡ್ಗಮಾಲಾ ಸ್ತ್ರೋಸ್ತ್ರದೊಂದಿಗೆ ಪೂಜೆ ಮಾಡಿಸಿರುವುದು ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಪತ್ನಿ ಸಮೇತ ಹಾಸನಾಂಬೆ ದರ್ಶನ ಪಡೆದ ಡಿಸಿಎಂ ಡಿಕೆ ಶಿವಕುಮಾರ್

ಇನ್ನೊಂದೆಡೆ, ಇವತ್ತು ಸಿಎಂ ಸಿದ್ದರಾಮಯ್ಯ ಹಾಸನಾಂಬೆ ದರ್ಶನ ಪಡೆಯಲಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆದಾಗಿನಿಂದಲೂ ಅಧಿಕಾರ ಹಂಚಿಕೆಯ ಚರ್ಚೆ ನಡೆಯುತ್ತಿದ್ದು, ಇದೀಗ ನವೆಂಬರ್ ಕ್ರಾಂತಿಯ ಸದ್ದು ಜೋರಾಗಿರುವ ಹೊತ್ತಲ್ಲೇ ಡಿಕೆಶಿ ಅವರ ವಿಶೇಷ ಪೂಜೆ ನಾನಾ ರೀತಿಯ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ