ಡಿಕೆಶಿಯ ತ್ಯಾಗ, ತಂತ್ರ, ದಾಳ ಲೆಕ್ಕಾಚಾರ! ಅರಸು ಕಾರ್ಯಕ್ರಮದಲ್ಲಿ ಹೊಸ ಮೆಸೇಜ್ ನೀಡಿದರಾ ಡಿಸಿಎಂ?

DK Shivakumar's style of politics: ರಾಜಕೀಯ ಎಂದರೆ ನಾನಾ ರೀತಿಯ ತಂತ್ರಗಾರಿಕೆಗಳು ಕಂಡು ಬರುತ್ತವೆ. ಅದರಲ್ಲಿ ತ್ಯಾಗದ ತಂತ್ರವೂ ಒಂದು. ಒಂದನ್ನು ತ್ಯಾಗ ಮಾಡಿ ಮತ್ತೊಂದನ್ನು ಪಡೆಯುವ ತಂತ್ರಗಾರಿಕೆ ಇದ್ದೇ ಇರುತ್ತದೆ. ಡಿಸಿಎಂ ಡಿಕೆ ಶಿವಕುಮಾರ್ ಕೂಡ ಇಂಥ ತಂತ್ರಗಾರಿಕೆ ಮಾಡುತ್ತಿರುವಂತೆ ತೋರುತ್ತಿದೆ. ಅರಸು ಕಾರ್ಯಕ್ರಮವೊಂದರಲ್ಲಿ ಅವರು ಆಡಿದ ಕೆಲ ಮಾತುಗಳು ಬೇರೇನೋ ಸೂಚಿಸುತ್ತಿವೆ.

ಡಿಕೆಶಿಯ ತ್ಯಾಗ, ತಂತ್ರ, ದಾಳ ಲೆಕ್ಕಾಚಾರ! ಅರಸು ಕಾರ್ಯಕ್ರಮದಲ್ಲಿ ಹೊಸ ಮೆಸೇಜ್ ನೀಡಿದರಾ ಡಿಸಿಎಂ?
ಡಿಕೆ ಶಿವಕುಮಾರ್
Edited By:

Updated on: Aug 31, 2025 | 6:44 PM

ಬೆಂಗಳೂರು, ಆಗಸ್ಟ್ 31: ತ್ಯಾಗ, ತಂತ್ರ, ದಾಳ… ರಾಜಕೀಯದ ಮೆಟ್ಟಿಲುಗಳಲ್ಲಿ ಇವುಗಳಿಗೆ ಭಾರೀ ಬೆಲೆ ಇದೆ. ತ್ಯಾಗ ಕೂಡ ಒಂದು ತಂತ್ರ, ತ್ಯಾಗ ಕೂಡ ರಾಜಕೀಯದ ದಾಳವೇ. ರಾಜ್ಯ ಕಾಂಗ್ರೆಸ್​​ನಲ್ಲಿ ತಕ್ಕಡಿ ತೂಗುವ ಆಟ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ತಕ್ಕಡಿಯ ಒಂದು ಭಾಗಕ್ಕೆ ಸಿದ್ದರಾಮಯ್ಯನವರ ತೂಕವಿದ್ರೆ ಮತ್ತೊಂದು ಭಾಗಕ್ಕೆ ಡಿಕೆಶಿ ತೂಕ ಹಾಕತೊಡಗಿದ್ದಾರೆ. ಖುರ್ಚಿಯ ಕಾಳಗ ತೆರೆ ಮರೆಯಲ್ಲಿ ಜೀವಂತವಾಗಿದೆ. ಇದೇ ವೇಳೆ, ಡಿ.ಕೆ. ಶಿವಕುಮಾರ್ (DK Shivakumar) ಆಡಿರುವ ಮಾರ್ಮಿಕ ಮಾತೊಂದು ಭಾರೀ ಗಮನ ಸೆಳೆಯುತ್ತಿದೆ.‌

ಅರಸುಗೆ ಸಮಾಜ, ಜಾತಿ ಇತ್ತಾ?: ಡಿಕೆಶಿ

ದೇವರಾಜ ಅರಸು ಅವರ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಡಿಕೆ ಶಿವಕುಮಾರ್, ರಾಜಕೀಯದಲ್ಲಿ ಒಂದು ಸಮಾಜ, ಜಾತಿ ನೋಡದೆ ಎಲ್ಲರನ್ನೂ ಬೆಳೆಸುವ ವರ್ಚಸ್ಸು ಹೊಂದಿರಬೇಕು ಎಂದು ದೇವರಾಜು ಅರಸುರವರ ವ್ಯಕ್ತಿತ್ವದ ಉಲ್ಲೇಖ ಮಾಡಿದರು.

‘ದೇವರಾಜು ಅರಸುಗೆ ಸಮಾಜ, ಜಾತಿ ಇತ್ತಾ? ದೇವರಾಜ ಅರಸುರವರಿಗೆ ಇದ್ದಿದ್ದು ನಾಯಕತ್ವದ ಗುಣ. ರಾಜ್ಯ ಆಳಿದಾಗ ಹಿಂದುಳಿದವನು ಅಂತ ಅವರು ಭಾವಿಸಿರಲಿಲ್ಲ. ಅವರು ಎಲ್ಲರನ್ನೂ ಬೆಳೆಸಿ ಅಡಿಪಾಯ ಹಾಕಿಕೊಟ್ಟರು. ಆ ವರ್ಚಸ್ಸು ಎಲ್ಲರಿಗೂ ಇರಬೇಕು ಎಂದು ಡಿ.ಕೆ. ಶಿವಕುಮಾರ್ ಮಾರ್ಮಿಕವಾಗಿ ಮಾತನಾಡಿದ್ದಾರೆ.

ಕಾಂಗ್ರೆಸಿಗರ ಪಾಲಿಗೆ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಬೆಟ್ಟದ ಹೂವು ಇದ್ದ ಹಾಗೆ. ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಕಾಂಗ್ರೆಸಿಗರ ಆದರ್ಶಪ್ರಾಯ. ಇಂಥ ದೇವರಾಜ ಅರಸು ಅವರನ್ನು ಹಾಡಿ ಹೊಗಳುತ್ತಲೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ತಮ್ಮ ಎದುರಾಳಿಗಳಿಗೆ ಮಾತಿನ ಬಾಣ ಬಿಟ್ಟಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಒಂದು ಕಾಲು ಬಿಜೆಪಿಯಲ್ಲಿಟ್ಟಿದ್ದಾರೆ ಎಂದ ಬಸನಗೌಡ ಪಾಟೀಲ್ ಯತ್ನಾಳ್: ಸೆಗಣಿಗೆ ಕಲ್ಲು ಹಾಕಲ್ಲವೆಂದು ಡಿಕೆಶಿ ತಿರುಗೇಟು

ಕೆಲ ತಿಂಗಳ ಹಿಂದೆ ಕಾಂಗ್ರೆಸ್​ನಲ್ಲಿ ಕುರ್ಚಿ ಕಾಳಗ ತಾರಕಕ್ಕೆ ಏರಿತ್ತು. ಅವತ್ತು ಗೊಂದಲಗಳಿಗೆ ಬ್ರೇಕ್ ಹಾಕಲು ಹೊರಟಿದ್ದ ಸಿದ್ದರಾಮಯ್ಯ ದೆಹಲಿಯ ಅಂಗಳದಲ್ಲಿ ಕೂತು ಐದು ವರ್ಷಗಳ ಕಾಲ ತಾನೇ ಮುಖ್ಯಮಂತ್ರಿ ಅಂತ ಗುಟುರು ಹಾಕಿದ್ದರು. ಸಿದ್ದರಾಮಯ್ಯ ಹೀಗೆ ಘಂಟಾಘೋಷವಾಗಿ ಅಧಿಕಾರದಲ್ಲಿ ಮುಂದುವರಿಯುವ ಬಗ್ಗೆ ಘೋಷಿಸಿದ ಬಳಿಕ ಡಿಕೆಶಿ ತ್ಯಾಗದ ಮಾತನಾಡಿದರು. ರಾಜಕೀಯ ನಾಯಕರಿಗೆ ಸೋನಿಯಾ ಗಾಂಧಿ ರೀತಿ ತ್ಯಾಗದ ಮನೋಭಾವ ಇರಬೇಕು. ಆ ತಾಯಿ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದರು. ಆ ಮನೋಭಾವನ ಇದೀಗ ಎಲ್ಲರಲ್ಲೂ ಇಲ್ಲ ಅಂತಾ ಪರೋಕ್ಷವಾಗಿ ಸಂದೇಶ ರವಾನೆ ಮಾಡೋ ಕೆಲಸ ಮಾಡಿದರು.

ಇದೀಗ ದೇವರಾಜು ಅರಸು ಅವರ ಕಾರ್ಯಗಳನ್ನ ಹೊಗಳುತ್ತಲೇ,ಅವರ ನಾಯಕತ್ವ ಗುಣ ಬೇರೆ ಯಾರಿಗೂ ಬರೋದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳುವ ಮೂಲಕ ಡಿಕೆಶಿ ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಚಿಗುಟಿದಂತೆ ಕಾಣುತ್ತಿದೆ.

ಅರಸು ಬಿಟ್ಟರೆ ದೀರ್ಘಾವಧಿ ಸಿಎಂ ಆಗಿರುವುದು ಸಿದ್ದರಾಮಯ್ಯರೇ

ದೇವರಾಜ್ ಅರಸು ಬಳಿಕ ಇದೀಗ ಕಾಂಗ್ರೆಸ್​ನಲ್ಲಿ ಸುದೀರ್ಘವಾಗಿ ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸಿದವರು ಸಿದ್ದರಾಮಯ್ಯ ಮಾತ್ರವೇ. ಮಾಜಿ ಸಿಎಂ ದಿವಂಗತ ದೇವರಾಜ್ ಅರಸ್ ಅವರು 7 ವರ್ಷ 7 ತಿಂಗಳು ಸುದೀರ್ಘ ಅವಧಿಯವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸಿದ್ದರು. ಇವರಷ್ಟು ಸುದೀರ್ಘ ಅವಧಿಯವರೆಗೆ ಸಿಎಂ ಆಗಿದ್ದವರು ಯಾರೂ ಇಲ್ಲ. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಮೇ ತಿಂಗಳನ್ನು ಪೂರೈಸಿ 7 ವರ್ಷ ಸಿಎಂ ಆಗಿ ಅಧಿಕಾರವಧಿ ಪೂರ್ಣಗೊಳಿಸಿದ್ದಾರೆ. ಇನ್ನೂ ಐದಾರು ತಿಂಗಳು ಅಥವಾ ಮೂರು ವರ್ಷ ಪೂರ್ಣಗೊಳಿಸಿದರೆ ರಾಜ್ಯದ ಸುದೀರ್ಘ ಅವಧಿಯ ಸಿಎಂ ಆಗಿ ಸಿದ್ದರಾಮಯ್ಯನವರೇ ಹೊಸ ದಾಖಲೆ ನಿರ್ಮಾಣ ಮಾಡುತ್ತಾರೆ.

ಇದನ್ನೂ ಓದಿ: ವಿಧಾನಸಭೆಯಲ್ಲಿ ಆರ್​ಎಸ್​ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆಯಾಚಿಸಿದ ಡಿಕೆ ಶಿವಕುಮಾರ್

ಅರಸು ದಾಖಲೆಯನ್ನು ಮುರಿದ ಮೇಲು ಕೂಡ ಸಿದ್ದರಾಮಯ್ಯ ಕುರ್ಚಿ ಬಿಟ್ಟುಕೊಡುವ ಯಾವ ಲಕ್ಷಣಗಳು ಸದ್ಯಕ್ಕೆ ಕಂಡು ಬರುತ್ತಿಲ್ಲ. ಇದನ್ನೇ ಪರೋಕ್ಷವಾಗಿ ನೆನಪಿಸಿಕೊಟ್ಟಿರೋ ಡಿಕೆ ಶಿವಕುಮಾರ್, ದೇವರಾಜ್ ಅರಸು ಮಾರ್ಗದಲ್ಲಿಯೇ ನಾಯಕತ್ವವನ್ನು ಬೆಳೆಸುವ ಗುಣ ನಮ್ಮಲ್ಲೂ ಇರಬೇಕು ಎಂದಿದ್ದಾರೆ. ಆ ಮೂಲಕ ಹೊಸ ನಾಯಕತ್ವಕ್ಕೆ ಹಾಲಿ ನಾಯಕರು ಅವಕಾಶ ಮಾಡಿಕೊಡಬೇಕು ಎಂಬ ಪರೋಕ್ಷ ಸಂದೇಶ ಡಿಕೆ ಮಾತಿನಲ್ಲಿ ಇದ್ದಂತಿದೆ.

ಮಾಜಿ ಸಚಿವ ಕೆ ಎನ್ ರಾಜಣ್ಣ ಹೇಳಿದ ಸೆಪ್ಟೆಂಬರ್ ತಿಂಗಳು ನಾಳೆಯಿಂದ ಶುರುವಾಗತ್ತೆ. ಸೆಪ್ಟೆಂಬರ್ ಕ್ರಾಂತಿಗೆ ವೇದಿಕೆ ಈ ಮೂಲಕ ಸಜ್ಜಾಗುತ್ತಿದೆಯಾ ಎಂಬುದು ಸದ್ಯಕ್ಕಂತೂ ಗೊತ್ತಿಲ್ಲ, ಕಾಲವೇ ಉತ್ತರಿಸಬೇಕು.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ