ಜೈಲಿನಲ್ಲಿ ಮೊಬೈಲ್ ಮಾರಾಟ ಮಾಡಿ 70 ಲಕ್ಷ ರೂ. ಗಳಿಸಿದ್ದ ವೈದ್ಯ ನಾಗರಾಜ್! ಎನ್​ಐಎ ತನಿಖೆಯಲ್ಲಿ ಬಹಿರಂಗ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ ಟಿ. ನಾಸೀರ್‌ಗೆ ನೆರವು ನೀಡಿದ ಪ್ರಕರಣದ ತನಿಖೆಯಲ್ಲಿ ಎನ್ಐಎ ಮಹತ್ವದ ವಿಚಾರಗಳನ್ನು ಪತ್ತೆಹಚ್ಚಿದೆ. ಡಾ. ನಾಗರಾಜ್ ಮತ್ತು ಎಎಸ್ಐ ಚಾಂದ್ ಪಾಷ ಅವರ ಖಾತೆಗಳಿಗೆ ಅನುಮಾನಾಸ್ಪದ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಜೈಲಿನಲ್ಲಿ ಕೈದಿಗಳಿಗೆ ಮೊಬೈಲ್ ಮಾರಾಟ ಮಾಡಿಯೇ ವೈದ್ಯ ನಾಗರಾಜ್ 70 ಲಕ್ಷ ರೂ. ಸಂಗ್ರಹಿಸಿರುವುದು ಗೊತ್ತಾಗಿದೆ.

ಜೈಲಿನಲ್ಲಿ ಮೊಬೈಲ್ ಮಾರಾಟ ಮಾಡಿ 70 ಲಕ್ಷ ರೂ. ಗಳಿಸಿದ್ದ ವೈದ್ಯ ನಾಗರಾಜ್! ಎನ್​ಐಎ ತನಿಖೆಯಲ್ಲಿ ಬಹಿರಂಗ
ಚಾಂದ್ ಪಾಷಾ ಹಾಗೂ ಡಾ. ನಾಗರಾಜ್

Updated on: Jul 11, 2025 | 9:57 AM

ಬೆಂಗಳೂರು, ಜುಲೈ 11: ಎಲ್​ಇಟಿ ಉಗ್ರ ಟಿ ನಾಸೀರ್​​ಗೆ ಬೆಂಗಳೂರಿನ (Bengaluru) ಪರಪ್ಪನ ಅಗ್ರಹಾರ (Parappana Agrahara Jail) ಜೈಲಿನಲ್ಲಿ ನೆರವು ನೀಡಿದ್ದ ಪ್ರಕರಣ ಸಂಬಂಧ ಬಂಧಿತರ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳ (NIA) ತೀವ್ರಗೊಳಿಸಿದೆ. ಈ ವೇಳೆ, ಬಂಧಿತ ಮನೋವೈದ್ಯ ಡಾ. ನಾಗರಾಜ್ ಹಾಗೂ ಎಎಸ್ಐ ಚಾಂದ್ ಪಾಷ ಬ್ಯಾಂಕ್ ಖಾತೆಗಳಿಗೆ ಬೇರೆಬೇರೆ ಮೂಲಗಳಿಂದ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಆರೋಪಿಗಳ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮೂಲಕ ವಿವಿಧ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗಿದೆ.

ವೈದ್ಯ ಡಾ ನಾಗರಾಜ್ ಆಪ್ತ ಸಹಾಯಕಿ ಪಲ್ಲವಿ ಖಾತೆಯಲ್ಲಿ 70 ಲಕ್ಷ ರೂಪಾಯಿ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ಚಾಂದ್ ಪಾಷ ಮಗನ ಬ್ಯಾಂಕ್ ಖಾತೆಗೆ ಕೂಡ ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಇಷ್ಟೇ ಅಲ್ಲದೆ ಗಿಫ್ಟ್ ರೂಪದಲ್ಲಿ ಬೆಲೆಬಾಳುವ ವಸ್ತುಗಳು ಸಂಗ್ರಹವಾಗಿದ್ದು ಕೂಡ ತಿಳಿದುಬಂದಿದೆ.

ಚಿಕಿತ್ಸೆಗೆ ಬರುತ್ತಿದ್ದ ಕೈದಿಗಳಿಗೆ ಬಾಡಿಗೆಗೆ ಮೊಬೈಲ್!

ಡಾ. ನಾಗರಾಜ್ ಚಿಕಿತ್ಸೆಗೆ ಬರುತ್ತಿದ್ದ ಕೈದಿಗಳಿಗೆ ಅವರ ಕುಟುಂಬದವರ ಜೊತೆ ಮಾತನಾಡಲು ವ್ಯವಸ್ಥೆ ಮಾಡುತ್ತಿದ್ದ. ಪ್ರತ್ಯೇಕ ಮೊಬೈಲ್ ಇಟ್ಟುಕೊಂಡು ಅದಕ್ಕೆ ಪ್ರತಿ ನಿಮಿಷದ ಲೆಕ್ಕದಲ್ಲಿ ಬಾಡಿಗೆ ನಿಗದಿಪಡಿಸಿದ್ದ ಎಂಬುದು ಎನ್​ಐಎ ತನಿಖೆಯಲ್ಲಿ ತಿಳಿದು ಬಂದಿದೆ. ಹೀಗಾಗಿ ಇದೀಗ ಬಂಧಿತ ಆರೋಪಿಗಳ ಇಂಟರ್ನೆಟ್ ಪ್ರೋಟೋಕಾಲ್ ಡೀಟೇಲ್ ಪಡೆಯಲು ಎನ್​ಐಎ ಸಿದ್ಧತೆ ಮಾಡಿಕೊಂಡಿದೆ.

ಇದನ್ನೂ ಓದಿ
ಮೈಸೂರು: ನಡು ರಸ್ತೆಯಲ್ಲೇ ಮಹಿಳೆಯರು, ಯುವಕನ ಮೇಲೆ ಮಾರಣಾಂತಿಕ ದಾಳಿ
ಕರ್ನಾಟಕದ ಮೂವರು ಶಂಕಿತ ಉಗ್ರರನ್ನ NIA ಕಸ್ಟಡಿಗೆ ನೀಡಿ ಕೋರ್ಟ್ ಆದೇಶ
ಹಲವು ಸ್ಫೋಟಗಳ ಮಾಸ್ಟರ್ ಮೈಂಡ್ ನಾಸೀರ್ ಜತೆ ಬಂಧಿತರಿಗೆ ಪ್ರಬಲ ನಂಟು
ಬೆಂಗಳೂರು, ಕೋಲಾರದಲ್ಲಿ NIA ದಾಳಿ: ಮೂವರು ಶಂಕಿತ ಉಗ್ರರ ಬಂಧನ

14 ವರ್ಷಗಳಿಂದ ಕೈದಿಗಳಿಗೆ ಮೊಬೈಲ್ ಪೂರೈಕೆ!

ಮನೋವೈದ್ಯ ಡಾ ನಾಗರಾಜ್ 14 ವರ್ಷಗಳಿಂದ ಜೈಲಿನಲ್ಲಿ ಕೈದಿಗಳಿಗೆ 300ಕ್ಕೂ ಹೆಚ್ಚು ಮೊಬೈಲ್ ಮಾರಾಟ ಮಾಡಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿರುವುದಾಗಿ ಮೂಲಗಳು ತಿಳಿಸಿವೆ. 10,000 ರೂ. ಬೆಲೆಯ ಮೊಬೈಲ್ ಅನ್ನು ಆತ 35000 ರೂಪಾಯಿಗೆ ಮಾರಾಟ ಮಾಡಿದ್ದ ಎಂಬುದು ಕೂಡ ಗೊತ್ತಾಗಿದೆ. ಹೀಗೆ ಮಾಡಿಯೇ 70 ಲಕ್ಷ ರೂಪಾಯಿ ಗಳಿಸಿದ್ದ ಎಂದು ಎನ್​ಐಎ ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಮೂಲಗಳು ಹೇಳಿವೆ.

ಇದನ್ನೂ ಓದಿ: ಉಗ್ರ ನಾಸೀರ್ ಜೈಲಿನಿಂದ ತಪ್ಪಿಸಿಕೊಳ್ಳಲು ನಡೆದಿತ್ತು ಸಿನಿಮೀಯ ರೀತಿ ಸಂಚು! ಎನ್​ಐಎ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲು

ಉಗ್ರ ಟಿ. ನಾಸೀರ್ ಜೈಲಿನಿಂದ ತಪ್ಪಿಸಿಕೊಳ್ಳಲು ಸಂಚು ಹೂಡಿದ್ದ ಪ್ರಕರಣದಲ್ಲಿ ನಾಗರಾಜ್, ಚಾಂದ್ ಪಾಷಾ ಹಾಗೂ ಉಗ್ರ ಜುನೈದ್ ಅಹ್ಮದ್ ತಾಯಿ ಫಾತಿಮಾರನ್ನು 2 ದಿನಗಳ ಹಿಂದೆ ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ. ನಾಸೀರ್​​​ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಗ್ರೆನೇಡ್ ಸ್ಫೋಟಿಸಿ ಪರಾರಿಯಾಗಲು ರೋಪಿಸಿದ್ದ ಸಂಚಿನಲ್ಲಿ ಚಾಂದ್ ಪಾಷಾ ಶಾಮೀಲಾಗಿದ್ದ ಎನ್ನಲಾಗಿದೆ. ಅದೃಷ್ಟವಶಾತ್, ಸಿಸಿಬಿ ಪೊಲೀಸರ ಕಾರ್ಯಾಚರಣೆಯಿಂದ ಆ ಸಂಚು ವಿಫಲವಾಗಿತ್ತು.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ