
ಬೆಂಗಳೂರು, (ಅಕ್ಟೋಬರ್ 15): ಕರ್ನಾಟಕದ ನೂತನ ರಾಜ್ಯಪಾಲರಾಗಿ ಬಿಜೆಪಿಯ ಹಿರಿಯ ನಾಯಕಿ ಡಾ. ಸುಧಾ ಯಾದವ್ ನೇಮಕಗೊಂಡಿದ್ದಾರೆ. ಕಾರ್ಗಿಲ್ ಹುತಾತ್ಮ ಯೋಧನ ಪತ್ನಿಯಾಗಿರುವ ಸುಧಾ ಯಾದವ್ ರಸಾಯನಶಾಸ್ತ್ರದಲ್ಲಿ ಪಿಎಚ್ಡಿ ಪಡೆದಿದುಕೊಂಡಿದ್ದು, ಮಾಜಿ ಲೋಕಸಭಾ ಸಂಸದೆಯಾಗಿದ್ದು, ಪ್ರಸ್ತುತ ಬಿಜೆಪಿ ಸಂಸದೀಯ ಮಂಡಳಿಯ ಪ್ರಮುಖ ಸದಸ್ಯೆಯಾಗಿದ್ದಾರೆ. ಇದೀಗ ಥಾವರ್ಚಂದ್ ಗೆಹ್ಲೋಟ್ ಅವರ ಸ್ಥಾನಕ್ಕೆ ನಿಯೋಜನೆಗೊಂಡಿದ್ದಾರೆ. ಇನ್ನು ನೂತನ ರಾಜ್ಯಪಾಲ ಸುಧಾ ಯಾದವ್ ಅವರು ಇಂದು (ಅಕ್ಟೋಬರ್ 15) ಸಂಜೆ ಬೆಂಗಳೂರಿಗೆ ಆಗಮಿಸಲಿದ್ದು, ನಾಳೆ (ಅ.16) ಬೆಳಗ್ಗೆ ಕರ್ನಾಟಕದ ನೂತನ ರಾಜ್ಯಪಾಲರಾಗಿ ಪ್ರಮಾಣವಚ ಸ್ವೀಕರಿಸಲಿದ್ದಾರೆ.
ಕರ್ನಾಟಕದ ನೂತನ ರಾಜ್ಯಪಾಲ ಡಾ.ಸುಧಾ ಯಾದವ್ ಅವರು ಇಂದು (ಅಕ್ಟೋಬರ್ 15) ಸಂಜೆ 6.45ಕ್ಕೆ ಬೆಂಗಳೂರಿನ ಹೆಚ್ಎಎಲ್ ಏರ್ಪೋರ್ಟ್ಗೆ ಆಗಮಿಸಲಿದ್ದು, ಇವರನ್ನು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಡಿಜಿ ಮತ್ತು ಐಜಿಪಿ ಡಾ.ಎಂ.ಎ.ಸಲೀಂ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಸ್ವಾಗತ ಮಾಡಿಕೊಳ್ಳಲಿದ್ದಾರೆ. ಇನ್ನು ನಾಳೆ ಸಂಜೆ 7.30ಕ್ಕೆ ಲೋಕಭವನದಲ್ಲಿ ವಿಶೇಷಾಧಿಕಾರಿಗಳು ಸ್ವಾಗತಕೋರಲಿದ್ದಾರೆ.
ಬಿಜೆಪಿ ಹಿರಿಯ ನಾಯಕಿ ಹಾಗೂ ಪಕ್ಷದ ಸಂಸದೀಯ ಮಂಡಳಿ ಸದಸ್ಯೆ ಡಾ. ಸುಧಾ ಯಾದವ್ ಅವರು ಅಕ್ಟೋಬರ್ 16ರಂದು ಕರ್ನಾಟಕದ ನೂತನ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಲೋಕಭವನದ ಗಾಜಿನಮನೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು, ಸುಧಾ ಯಾದವ್ ಅವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.
ನೂತನ ರಾಜ್ಯಪಾಲರ ಪದಗ್ರಹಣ ಸಮಾರಂಭಕ್ಕೆ ರಾಜಭವನದಲ್ಲಿ ಈಗಾಗಲೇ ಸಕಲ ಸಿದ್ಧತೆಗಳು ನಡೆದಿವೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವರು ಸೇರಿದಂತೆ ಬಿಜೆಪಿಯ ಹಲವು ನಾಯಕರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ಬರೋಬ್ಬರಿ ಐದು ವರ್ಷಗಳ ಕಾಲ ಕರ್ನಾಟಕದ ರಾಜ್ಯಪಾಲರಾಗಿದ್ದ ಥಾವರ್ ಚಂದ್ ಗೆಹ್ಲೋಟ್ ಅವರ ಅಧಿಕಾರವಧಿ ಪೂರ್ಣಗೊಂಡಿದ್ದು, ನಿನ್ನೆ ಅವರಿಗೆ ಲೋಕಭವನದ ವತಿಯಿಂದ ಆತ್ಮೀಯವಾಗಿ ಬೀಳ್ಕೊಡಿಗೆ ನೀಡಲಾಯ್ತು. ಬೆಂಗಳೂರಿನ ಲೋಕಭವನದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಲೋಕಭವನದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಗೆಹ್ಲೋಟ್ ಅವರಿಗೆ ಬೀಳ್ಕೊಡಿಗೆ ನೀಡಿ ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ.
ಈ ವೇಳೆ ಮಾತನಾಡಿದ ಗೆಹ್ಲೋಟ್, ಕರ್ನಾಟಕ ರಾಜ್ಯದ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದು ನನ್ನ ಭಾಗ್ಯ. ಕರ್ನಾಟಕದ ನೆಲ ಮತ್ತು ಇಲ್ಲಿನ ಪ್ರೀತಿಯ ಜನರಿಂದ ನಾನು ಬಹಳಷ್ಟು ಕಲಿತಿದ್ದೇನೆ. ರಾಜ್ಯದ ಜನರಿಗಾಗಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದೇನೆ ಎಂದರು. ಇನ್ನು ಇದೇ ವೇಳೆ ತಮ್ಮ ಕಾರ್ಯಾವಧಿಯಲ್ಲಿ ಸಹಕಾರ ನೀಡಿದ ಲೋಕಭವನದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಹೋದ್ಯೋಗಿಗಳಿಗೆ ಕೃತಜ್ಞತೆ ತಿಳಿಸಿದರು.
Published On - 4:41 pm, Thu, 15 October 26