ಮಂಡ್ಯ, ಮೇ 23: ಸಕ್ಕರಿನಗರಿ ಮಂಡ್ಯ. ಹಲವು ವೈಶಿಷ್ಟತೆಗಳನ್ನ ಹೊಂದಿರುವ ಜಿಲ್ಲೆ. ಅದರಲ್ಲೂ ಜಿಲ್ಲೆಯಲ್ಲಿರೋ ಕೊಕ್ಕರೆ ಬೆಳ್ಳೂರಿನ ಪಕ್ಷಿಧಾಮ (Kokkarebellur Bird Sanctuary), ಉದ್ದ ಕೊಕ್ಕಿನ ವಿಶೇಷವಾದ ಕೊಕ್ಕರೆಗಳ ಆವಾಸ ಸ್ಥಾನ. ಆದರೆ ಭೀಕರ ಬರ (drought), ಆಹಾರ ಸಿಗದ ಹಿನ್ನೆಲೆಯಲ್ಲಿ ಈ ಬಾರಿ ಪಕ್ಷಿಧಾಮದತ್ತ ಕೊಕ್ಕರೆಗಳು ಮುಖ ಮಾಡಿಲ್ಲ. ಇದು ಪಕ್ಷಿ ಪ್ರಿಯರ ಆತಂಕಕ್ಕೂ ಕೂಡ ಕಾರಣವಾಗಿದೆ. ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಕೊಕ್ಕರೆ ಬೆಳ್ಳೂರು ಪಕ್ಷಿಧಾಮವಿದೆ.
ಈ ಬಾರಿ ಭೀಕರ ಬರದಿಂದಾಗಿ ಪಕ್ಷಿಧಾಮದತ್ತ ವಿಶೇಷವಾದ ಕೊಕ್ಕರೆಗಳು ಮುಖ ಮಾಡಿಲ್ಲ. ಅಂದಹಾಗೆ ಹೆಜ್ಜಾರ್ಲೆ, ಬಣ್ಣದ ಕೊಕ್ಕರೆ ಸೇರಿ ವಿವಿಧ ತಳಿಯ ಸಾವಿರಾರು ಪಕ್ಷಿಗಳು ಇಲ್ಲಿಗೆ ಬಂದು ಕೆಲ ತಿಂಗಳಗಳ ಕಾಲ ಇದ್ದು, ಮರಿಮಾಡಿ ವಾಪಾಸ್ ತೆರಳುತ್ತವೆ. ಅದರಲ್ಲೂ ಹೆಜ್ಜಾರ್ಲೆ ಕೊಕ್ಕರೆಗಳು ಅಕ್ಟೋಬರ್ ತಿಂಗಳಲ್ಲಿ ಬಂದು ಮುಂದಿನ ವರ್ಷ ಜೂನ್ ವೇಳೆಗೆ ವಾಪಾಸ್ ಹೋಗುತ್ತವೆ.
ಅದೇ ರೀತಿ ಬಣ್ಣದ ಕೊಕ್ಕರೆಗಳು ಜನವರಿ ತಿಂಗಳಲ್ಲಿ ಬಂದು ಜೂನ್ ತಿಂಗಳಲ್ಲಿ ವಾಪಸ್ ಹೋಗುತ್ತವೆ. ಆದರೆ ಈ ಬಾರಿ ಭೀಕರ ಬರ ಹಿನ್ನೆಲೆಯಲ್ಲಿ ಜಲಾಶಯ, ನದಿ, ಕೆರೆಗಳು ಬರಿದಾಗಿವೆ. ಕೊಕ್ಕರೆಗಳಿಗೆ ಬೇಕಾಗಿರುವ ಆಹಾರ (ಮೀನು) ಸಿಗುತ್ತಿಲ್ಲ. ಹೀಗಾಗಿ ಈ ಬಾರಿ ಅಷ್ಟಾಗಿ ಪಕ್ಷಿಗಳು ಕೊಕ್ಕರೆ ಬೆಳ್ಳೂರು ಪಕ್ಷಿಧಾಮದತ್ತ ಮುಖ ಮಾಡಿಲ್ಲ. ಇದು ಪಕ್ಷಿ ಪ್ರಿಯರ ಆತಂಕಕ್ಕೂ ಕೂಡ ಕಾರಣವಾಗಿದೆ.
ಇದನ್ನೂ ಓದಿ: ಬೆಳೆ ಇಲ್ಲದಿದ್ರೂ ಉತ್ತಮ ಬೆಲೆ: ಮಂಡ್ಯದಲ್ಲಿ ಎಳನೀರಿಗೆ ಫುಲ್ ಡಿಮ್ಯಾಂಡ್
ಅಂದಹಾಗೆ ಕೊಕ್ಕರೆಬೆಳ್ಳೂರು ಪಕ್ಷಿಧಾಮ 772 ಎಕರೆ ವ್ಯಾಪ್ತಿಗೆ ಬರುತ್ತವೆ. ವಿದೇಶ ಸೇರಿದಂತೆ ವಿವಿಧ ಕಡೆಗಳಿಂದ ಬರುವ ಕೊಕ್ಕರೆಗಳು ಗ್ರಾಮದ ಸುತ್ತಮುತ್ತ ಇರುವ ಮರಗಳಲ್ಲಿ ವಾಸ ಮಾಡಿ, ಮರಿ ಮಾಡಿ, ಮರಿಗಳೊಂದಿಗೆ ವಾಪಾಸ್ ತೆರಳುತ್ತವೆ. ಆದರೆ ಇತ್ತೀಚಿಗೆ ಆ ವ್ಯಾಪ್ತಿಯಲ್ಲಿ ಮರಗಳ ಸಂಖ್ಯೆ ಕೂಡ ಗಣನೀಯವಾಗಿ ಕಡಿಮೆ ಆಗುತ್ತಿವೆ.
ಅಲ್ಲದೆ ಪಕ್ಷಿಧಾಮ ವ್ಯಾಪ್ತಿಗೆ ಬರುವ ನದಿಯಲ್ಲಿ ಆಕ್ರಮವಾಗಿ ಮರಳುಗಾರಿಕೆ ಕೂಡ ನಡೆಯುತ್ತಿವೆ. ಇದರಿಂದ ಪ್ರಮುಖವಾಗಿ ಕೊಕ್ಕರೆಗಳ ಆಹಾರವಾಗಿರೋ ಮೀನುಗಳು ಕೂಡ ಸಿಗುತ್ತಿಲ್ಲ ಜೊತೆಗೆ ಪಕ್ಷಿಧಾಮ
ವ್ಯಾಪ್ತಿಯಲ್ಲಿ ಆಕ್ರಮವಾಗಿ ಮೀನುಗಾರಿಕೆ ಕೂಡ ನಡೆಯುತ್ತಿದೆ. ಇದರಿಂದ ಪಕ್ಷಿಗಳಿಗೆ ಆಹಾರವೇ ಸಿಗುತ್ತಿಲ್ಲ.
ಇದನ್ನೂ ಓದಿ: ಮಂಡ್ಯ: ಆಧುನೀಕರಣ ಹೆಸರಲ್ಲಿ ನಾಲೆಗಳಿಗೆ ಹರಿಯದ ನೀರು; ಕಾಮಗಾರಿ ವಿಳಂಬಕ್ಕೆ ರೈತರ ಆಕ್ರೋಶ
ಈ ಬಗ್ಗೆ ಗಮನಹರಿಸಬೇಕಾದ ಸರ್ಕಾರ, ಜಿಲ್ಲಾಡಳಿತ, ಅರಣ್ಯ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಇದರಿಂದಾಗಿ ವಲಸೆ ಬರುವ ಪಕ್ಷಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. ಹೀಗಾಗಿ ಈ ಬಗ್ಗೆ ಸರ್ಕಾರ ಗಮನಹರಿಸಬೇಕೆಂದು ಸ್ಥಳೀಯರು ಕೂಡ ಒತ್ತಾಯ ಮಾಡುತ್ತಿದ್ದಾರೆ. ಭೀಕರ ಬರ, ಆಹಾರ ಸಿಗದ ಹಿನ್ನೆಲೆಯಲ್ಲಿ ಕೊಕ್ಕರೆ ಬೆಳ್ಳೂರು ಪಕ್ಷಿಧಾಮದತ್ತ ಕೊಕ್ಕರೆಗಳು ಮುಖಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮವಹಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.