ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ ಬಂಧನ; ನಕಲಿ ಚಿನ್ನದ ಕೇಸ್ನಲ್ಲಿ ವಶಕ್ಕೆ ಪಡೆದ ED
Shivamogga DCC Bank Scam: ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ ವಂಚನೆ ಮಾಡಿದ್ದ ಪ್ರಕರಣದಲ್ಲಿ ಇಡಿ ಎಂಟ್ರಿಯಾಗಿದ್ದು, ತನಿಖೆ ಚುರುಕುಗೊಳಿಸಿದೆ. ನಿನ್ನೆ(ಏಪ್ರಿಲ್ 08) ಬ್ಯಾಂಕ್ ಅಧ್ಯಕ್ಷ ಸೇರಿದಂತೆ ಇತರೆ ಸಿಬ್ಬಂದಿ ಮನೆಗಳ ಮೇಲೆ ಇಡಿ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು. ಆದ್ರೆ, ಇದೀಗ ಇಡಿ ಅಧಿಕಾರಿಗಳು, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ ಅವರನ್ನು ಬಂಧಿಸಿದೆ.

ಬೆಂಗಳೂರು, (ಏಪ್ರಿಲ್ 09): ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (Shivamogga DCC Bank ) ಹಗರಣ ಪ್ರಕರಣದಲ್ಲಿ ಬ್ಯಾಂಕ್‍ನ ಅಧ್ಯಕ್ಷ ಮಂಜುನಾಥ್ ಗೌಡ (Manjunath Gowda) ಅವರನ್ನು ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ಬಂಧಿಸಿದ್ದಾರೆ. ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ನಿನ್ನೆ(ಏಪ್ರಿಲ್ 08) ಡಿಸಿಸಿ ಅಧ್ಯಕ್ಷ ಮಂಜುನಾಥ್ ಗೌಡ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದರು. ಅಲ್ಲದೇ ಮಂಜುನಾಥ್ ಅವರನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿನ ಚಾಮರಾಜಪೇಟೆಯ ಅಪೆಕ್ಸ್ ಬ್ಯಾಂಕ್ ಅತಿಥಿಗೃಹದಲ್ಲಿ ವಿಚಾರಣೆ ಸಹ ನಡೆಸಿದ್ದರು. ಬಳಿಕ ಇಡಿ, ಶಿವಮೊಗ್ಗ ಡಿಸಿಸಿ ಅಧ್ಯಕ್ಷ ಮಂಜುನಾಥ್ ಗೌಡ ಅವರನ್ನು ಅಧಿಕೃತವಾಗಿ ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದು, ಇದೀಗ ಕೋರ್ಟ್, ಮಂಜುನಾಥ ಗೌಡ ಅವರನ್ನು 14 ದಿನ ಇಡಿ ಕಸ್ಟಡಿಗೆ ನೀಡಿದೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡಗೆ ಆರೋಗ್ಯ ಸಮಸ್ಯೆ ಹಿನ್ನೆಲೆ ಅಗತ್ಯ ವೈದ್ಯಕೀಯ ಸವಲತ್ತು ನೀಡುವಂತೆ ನ್ಯಾಯಾಲಯ ಸೂಚನೆ ನೀಡಿದೆ. ಅಲ್ಲದೇ ದಿನದಲ್ಲಿ 30 ನಿಮಿಷ ವಕೀಲರಿಂದ ಮಂಜುನಾಥ್ ಗೌಡ ಭೇಟಿಗೆ ಕೋರ್ಟ್ ಅವಕಾಶ ನೀಡಿದೆ.
ಇದನ್ನೂ ಓದಿ: ED Raid: ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ. ಸಾಲ ಕೊಟ್ಟಿದ್ದ ಪ್ರಕರಣ, ಶೋಭಾ ಸೇರಿ ಮೂವರ ಮೇಲೆ ಇಡಿ ದಾಳಿ
ನಕಲಿ ಚಿನ್ನ ಅಡವಿಟ್ಟು ವಂಚನೆ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ, ಮ್ಯಾನೇಜರ್ ಸೇರಿದಂತೆ ಇತರರ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಆದ್ರೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದರು. ಬಳಿಕ ಬೆಂಗಳೂರಿನ 1ನೇ ಸಿಸಿಹೆಚ್ ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದು, ಇದೀಗ ಕೋರ್ಟ್ ಮಂಜುನಾಥ್ ಅವರನ್ನು 14 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ:
ಶಿವಮೊಗ್ಗ ನಗರದ ಗಾಂಧಿ ಬಜಾರ್‌ನಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ನಕಲಿ ಚಿನ್ನ ಅಡವಿಟ್ಟು ಕೋಟ್ಯಾಂತರ ರೂ ವಂಚನೆ ನಡೆದಿತ್ತು. 2014ರಲ್ಲಿ ಈ ಹಗರಣ ನಡೆದಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು 2014ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಬಳಿಕ ಇಡಿ ಸಹ ಇಸಿಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡು ಮಂಜುನಾಥ್ ಗೌಡಗೆ ಸಮನ್ಸ್ ಜಾರಿಗೊಳಿಸಿತ್ತು. ಇಡಿ ಸಮನ್ಸ್ ಪ್ರಶ್ನಿಸಿ ಮಂಜುನಾಥ್ ಗೌಡ ಸಲ್ಲಿಸಿದ್ದ ಮೇಲ್ಮನವಿಯನ್ನ ಇತ್ತೀಚೆಗೆ ಹೈಕೋರ್ಟ್ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಇಡಿ ಮಂಜುನಾಥ್ ಗೌಡ ಅವರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು. ಬಳಿಕ ನಿನ್ನೆ(ಏಪ್ರಿಲ್ 08) ಬೆಂಗಳೂರಿನಲ್ಲಿ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಸಿದ್ದರು. ಆದ್ರೆ, ಇದೀಗ ಮಂಜುನಾಥ್ ಅವರನ್ನು ಇಡಿ ಬಂಧಿಸಿ ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದು, ತನಿಖೆಯಲ್ಲಿ ಯಾವೆಲ್ಲಾ ಅಂಶ ಆಚೆ ಬರಲಿವೆ ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:50 pm, Wed, 9 April 25