ಬೆಂಗಳೂರು, (ಜುಲೈ 12): ಕರ್ನಾಟಕ: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ನಾಗೇಂದ್ರನನ್ನು ಇಡಿ ಅಧಿಕಾರಿಗಳು ಅಧಿಕೃತವಾಗಿ ಬಂಧಿಸಿದ್ದಾರೆ. ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕರಾದ ನಾಗೇಂದ್ರ ಅವರ ನಿವಾಸಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲನೆ ಮಾಡಿದ್ದರು. ದಾಳಿ ವೇಳೆ ಸಿಕ್ಕ ಕೆಲ ಮಹತ್ವದ ದಾಖಲೆಗಳ ಬಗ್ಗೆ ಮಾಹಿತಿ ಪಡೆಯಲು ಇಡಿ, ಇಂದು (ಜುಲೈ 11) ಬೆಳಗ್ಗೆ ನಾಗೇಂದ್ರನನ್ನು ವಶಕ್ಕೆ ಪಡೆದುಕೊಂಡಿದ್ದು, ಸಂಜೆವರೆಗೂ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಇದೀಗ ಅಂತಿಮವಾಗಿ ಇಡಿ ಅಧಿಕಾರಿಗಳು ನಾಗೇಂದ್ರ ಅವರನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ನಾಗೇಂದ್ರ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮುನ್ನ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕಿದೆ. ಹೀಗಾಗಿ ಇಡಿ ಅಧಿಕಾರಿಗಳು ಈಗಾಗಲೇ ನಾಗೇಂದ್ರನನ್ನು ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ನೇರವಾಗಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.
ಇದನ್ನೂ ಓದಿ: ಇಡಿ ಬಿಟ್ಟರು ತಪ್ಪದ ಎಸ್ಐಟಿ ಕಾಟ: ಪತ್ತೆ ವಿಚಾರಣೆಗೆ ಹಾಜರಾಗುವಂತೆ ದದ್ದಲ್ಗೆ ನೋಟಿಸ್
ಕೋರ್ಟ್ ಸಮಯದ ಅವಧಿ ಮುಗಿದಿದ್ದರಿಂದ ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಕರೆದುಕೊಂಡು ಹೋಗಲಿದ್ದಾರೆ. ಈ ವೇಳೆ ಇನ್ನಷ್ಟು ವಿಚಾರಣೆ ಮಾಡಬೇಕಿರುವುದರಿಂದ ಆರೋಪಿಯನ್ನು ಕಸ್ಟಡಿಗೆ ನೀಡುವಂತೆ ಇಡಿ ಅಧಿಕಾರಿಗಳು ಮನವಿ ಮಾಡುವ ಸಾಧ್ಯತೆಗಳಿವೆ.
ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಿಗಮದ (Valmiki Scheduled Tribes Development Corporation) 187 ಕೋಟಿ ರೂ. ಬಹುಕೋಟಿ ಹಗರಣ ಪ್ರಕರಣಕ್ಕೆ ಮೊನ್ನೆ ನಾಗೇಂದ್ರ ನಿವಾಸದ ಮೇಲೆ ಇಡಿ ದಾಳಿ ಮಾಡಿತ್ತು. ಸುಮಾರು 38 ಗಂಟೆಗಳ ಕಾಲ ಬೆಂಗಳೂರು ಮತ್ತು ಬಳ್ಳಾರಿ ನಿವಾಸದಲ್ಲಿ ದಾಖಲೆ ಪರಿಶೀನಲೆ ನಡೆಸಿತ್ತು. ಬಳಿಕ ಕಾಂಗ್ರೆಸ್ ಶಾಸಕ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ಇಂದು(ಶುಕ್ರವಾರ) ಬೆಳಗ್ಗೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದರು. ನಂತರ ಶಾಂತಿನಗರದಲ್ಲಿರುವ ಕಚೇರಿಗೆ ಕರೆದುಕೊಂಡು ಹೋಗಿ ತೀವ್ರ ವಿಚಾರಣೆಗೊಳಪಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:07 pm, Fri, 12 July 24