
ಬೆಂಗಳೂರು, ನವೆಂಬರ್ 06: ‘ಪೆಟ್ರೋಲ್ ಕಂಪನಿಗಳು ಅಕ್ರಮವಾಗಿ ಶೇ 30ರಷ್ಟು ಎಥೆನಾಲ್ ಅನ್ನು ಪೆಟ್ರೋಲ್‌ನಲ್ಲಿ ಬೆರೆಸುತ್ತಿವೆ. ಕೇಂದ್ರ ಸರ್ಕಾರ ಪ್ರಕಟಿಸಿರುವ ಎಥೆನಾಲ್ ನೀತಿ ಅನ್ವಯ ಪೆಟ್ರೋಲ್‌ನಲ್ಲಿ ಶೇ 20ರಷ್ಟು ಮಾತ್ರ ಎಥೆನಾಲ್ ಬೆರೆಸಬೇಕು. ಆದರೆ ತೈಲ ಕಂಪನಿಗಳು ಅಕ್ರಮವಾಗಿ ಶೇ 31ರವರೆಗೆ ಎಥೆನಾಲ್ ಬೆರೆಸುವ ಮೂಲಕ ವಾಹನ ಮಾಲೀಕರಿಗೆ ಹಾಗೂ ಜನರಿಗೆ ಮೋಸ ಮಾಡುತ್ತಿವೆ’ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಖಾತೆ ಸಚಿವ ರಿಜ್ವಾನ್ ಅರ್ಷದ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ರಿಜ್ವಾನ್ ಅರ್ಷದ್, ಅಕ್ರಮದ ಬಗ್ಗೆ ದಾಖಲೆಗಳನ್ನು ಬಹಿರಂಗಪಡಿಸಿದರು. ‘ರಾಜ್ಯ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ರಾಜ್ಯದ ವಿವಿಧ ಕಡೆಗಳಿಂದ ಸಂಗ್ರಹಿಸಿದ ವಿವಿಧ ತೈಲ ಕಂಪನಿಗಳ 63 ಪೆಟ್ರೋಲ್ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ಆತಂಕಕಾರಿ ವಿಷಯ ಬಹಿರಂಗವಾಗಿದ್ದು, ಇದುವರೆಗೆ ಲಭ್ಯವಾಗಿರುವ 14 ಮಾದರಿಗಳ ಪರೀಕ್ಷಾ ವರದಿಯಲ್ಲಿ 11 ಮಾದರಿಗಳಲ್ಲಿ ಶೇ 20ಕ್ಕಿಂತ ಹೆಚ್ಚು ಎಥೆನಾಲ್ ಪತ್ತೆಯಾಗಿದೆ. ಅವುಗಳಲ್ಲಿ ಎರಡು ಮಾದರಿಗಳಲ್ಲಿ ಶೇ 31.2 ಹಾಗೂ ಶೇ 30.5 ಎಥೆನಾಲ್ ಮಿಶ್ರಣ ಪತ್ತೆಯಾಗಿದೆ. ನಾಲ್ಕು ಮಾದರಿಗಳಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣ ಶೇ 25 ಕ್ಕೂ ಹೆಚ್ಚಿರುವುದು ಕಂಡು ಬಂದಿದೆ’ ಎಂದು ಅವರು ತಿಳಿಸಿದರು.
‘ಈಗಾಗಲೇ ದೇಶಾದ್ಯಂತ ಜನರು E20 ಪೆಟ್ರೋಲ್ನಿಂದಾಗಿ ತಮ್ಮ ವಾಹನಗಳ ಇಂಜಿನ್ ಪದೇ ಪದೇ ರಿಪೇರಿಗೆ ಬರುತ್ತಿದ್ದು, ಮೈಲೇಜ್ನಲ್ಲಿ ತೀವ್ರಗತಿಯ ಇಳಿಕೆಯಾಗುತ್ತಿದೆ ಎಂದು ದೂರುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ವರ್ಷಕ್ಕೆ ಜನರು ತಮ್ಮ ವಾಹನಗಳ ರಿಪೇರಿ ಹಾಗೂ ಮೈಲೇಜ್ ಇಳಿಕೆಯಿಂದಾಗಿ ಸುಮಾರು ಒಂದು ಲಕ್ಷ ಕೋಟಿ ರೂ. ಕಳೆದುಕೊಳ್ಳುತ್ತಿದ್ದಾರೆ. ಹೀಗಿರುವಾದ ಶೇ 20ಕ್ಕೂ ಹೆಚ್ಚಿನ ಎಥೆನಾಲ್ ಪೂರೈಸುವುದರಿಂದ ಅವರು ಮತ್ತಷ್ಟು ತೊಂದರೆಗೆ ಒಳಗಾಗುವುದರಲ್ಲಿ ಸಂಶಯವೇ ಇಲ್ಲ’ ಎಂದಿದ್ದಾರೆ.
‘ಇದಕ್ಕೆಲ್ಲಾ ಹೊಣೆ ಯಾರು? ಶೇ 20ಕ್ಕಿಂತ ಹೆಚ್ಚಿನ ಎಥೆನಾಲ್ ಅನ್ನು ಪೆಟ್ರೋಲ್‌ನಲ್ಲಿ ಬಳಸಲು ತೈಲ ಕಂಪನಿಗಳಿಗೆ ಅಧಿಕಾರ ಕೊಟ್ಟವರು ಯಾರು? ಈ ಕುರಿತಂತೆ ಕೇಂದ್ರ ಸರಕಾರ ಅದರಲ್ಲೂ ಪ್ರಮುಖವಾಗಿ ಕೇಂದ್ರ ಪೆಟ್ರೋಲಿಯಂ ಮಂತ್ರಿ ಹರದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಬೇಕು’ ಎಂದು ರಿಜ್ವಾನ್ ಅರ್ಷದ್ ಆಗ್ರಹಿಸಿದ್ದಾರೆ.
‘ಇನ್ನು ಜನರಿಗಾಗುತ್ತಿರುವ ಆರ್ಥಿಕ ಹೊರೆ ಹಾಗೂ ಹಾಗೂ ವಾಹನಗಳ ಮೇಲಾಗುತ್ತಿರುವ ದುಷ್ಪಾರಿಣಾಮಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಎಥೆನಾಲ್ ಬ್ಲೆಂಡಿಂಗ್ ನೀತಿ ಕುರಿತು ಮರು ಪರಿಶೀಲನೆ ಮಾಡಬೇಕು. ಪ್ರಮುಖವಾಗಿ ಎಲ್ಲಾ ಪೆಟ್ರೋಲ್ ಪಂಪನಲ್ಲೂ ಎಷ್ಟು ಪ್ರಮಾಣದ ಎಥೆನಾಲ್ ಬೆರೆಸಲಾಗಿದೆ ಎಂಬ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಹಾಗೂ ಗ್ರಾಹಕರಿಗೆ ತಮ್ಮ ವಾಹನಕ್ಕೆ ಸೂಕ್ತವಾದ ಇಂಧನವನ್ನು ಆರಿಸಿಕೊಳ್ಳುವ ಆಯ್ಕೆ ಒದಗಿಸಿಕೊಡಬೇಕು’ ಎಂದು ಸಚಿವರು ಒತ್ತಾಯಿಸಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಡಿಕೆ ಶಿವಕುಮಾರ್, ‘ಇ20 ಎಥೆನಾಲ್ ಸುಳ್ಳು. ಇ20 ಹೆಸರಿನಲ್ಲಿ ಎಥೆನಾಲ್ ಜಾಸ್ತಿ ಮಾಡಿ ಗ್ರಾಹಕರ ಜೇಬಿಗೆ ಕತ್ತರಿ ಖಾತ್ರಿ ಹಾಕಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡುವುದರಿಂದ ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ. ಇದರಿಂದ ವಾಹನಗಳ ಮೈಲೇಜ್ ಕಡಿಮೆಯಾಗುವುದು, ವಾಹನಗಳಿಗೆ ಹಾನಿಯಾಗುವ ಸಾಧ್ಯತೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗುವ ಆತಂಕಗಳಿವೆ. ತೈಲ ಕಂಪನಿಗಳು ಭಾರೀ ಲಾಭ ಗಳಿಸುತ್ತಿರುವಾಗ ಅದರ ವೆಚ್ಚವನ್ನು ಗ್ರಾಹಕರೇ ಭರಿಸುವಂತಾಗುವುದು ಸ್ವೀಕಾರಾರ್ಹವಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ಮೋದಿ ಸರ್ಕಾರ ರೈತರ ಪರ, ಎಥೆನಾಲ್ ಖರೀದಿಯಲ್ಲಿ ಹೊಸ ದಾಖಲೆ: ಪ್ರಲ್ಹಾದ್ ಜೋಶಿ
‘ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ರಾಜ್ಯ ಸರ್ಕಾರ ತನ್ನ ತಪಾಸಣಾ ಕಾರ್ಯಾಚರಣೆಯನ್ನು ಮುಂದುವರಿಸಲಿದೆ. ಪ್ರತಿಯೊಂದು ಪೆಟ್ರೋಲ್ ಬಂಕ್‌ನಲ್ಲಿಯೂ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಗುಣಮಟ್ಟದ ಇಂಧನ ಲಭ್ಯತೆಯನ್ನು ಖಚಿತಪಡಿಸಲು ಸರ್ಕಾರ ಬದ್ಧವಾಗಿದೆ. ಗ್ರಾಹಕರ ಹಕ್ಕುಗಳ ರಕ್ಷಣೆಗೆ ಸರ್ಕಾರ ದೃಢವಾಗಿ ನಿಲ್ಲಲಿದೆ’ ಎಂದು ಸಿಎಂ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.